ಕರೋನಾ ಸಾಂಕ್ರಾಮಿಕ ಸೋಂಕಿನಿಂದಾಗಿ ಕುಸಿದಿರುವ ಆರ್ಥಿಕತೆಗೆ ಚೇತರಿಕೆ ನೀಡುವ ಸಲುವಾಗಿ ಕೇಂದ್ರ ಸರ್ಕಾರವು ಮತ್ತೊಂದು ಸುತ್ತಿನ ಪರಿಹಾರ ಕ್ರಮಗಳನ್ನು ಘೋಷಿಸುವ ಮುನ್ನವೇ ಭಾರತೀಯ ರಿಸರ್ವ್ ಬ್ಯಾಂಕ್ (RBI) ಎರಡನೇ ಹಂತದ ಪರಿಹಾರ ಕ್ರಮಗಳನ್ನು ಪ್ರಕಟಿಸಿದೆ. ಬ್ಯಾಂಕುಗಳು ಹೆಚ್ಚಿನ ಸಾಲ ವಿತರಿಸಲು ನೆರವಾಗಲು ರಿವರ್ಸ್ ರೆಪೋದರವನ್ನು 25 ಅಂಶಗಳಷ್ಟು ಅಂದರೆ ಶೇ.0.25ರಷ್ಟು ಕಡಿತ ಮಾಡಿದ್ದು ಶೇ.3.75ಕ್ಕೆ ತಗ್ಗಿಸಿದೆ. ಇದರಿಂದಾಗಿ ಬ್ಯಾಂಕುಗಳು ಹೆಚ್ಚುವರಿಯಾಗಿ 6.90 ಲಕ್ಷ ರುಪಾಯಿಗಳಷ್ಟು ಸಾಲ ನೀಡಲು ಸಾಧ್ಯವಾಗಲಿದೆ.
ರಾಜ್ಯ ಸರ್ಕಾರಗಳು ಮಾರುಕಟ್ಟೆಯಲ್ಲಿ ವ್ಯವಸ್ಥಿತವಾಗಿ ಸಾಲ ಎತ್ತಲು ಅವಕಾಶ ಮಾಡಿಕೊಡಲು RBI ನೀಡುವ ಅಪತ್ಕಾಲೀನ ಸಾಲದ(ಡಬ್ಲ್ಯುಎಂಎ) ಪ್ರಮಾಣವನ್ನು ಶೇ.60ಕ್ಕೆ ಏರಿಸಿದೆ. ರಾಜ್ಯ ಸರ್ಕಾರಗಳು ಆದಾಯ ಕೊರತೆಯಿಂದಾಗಿ ದಿನನಿತ್ಯದ ಖರ್ಚುಗಳನ್ನು ನಿರ್ವಹಿಸಲು ಸಾಧ್ಯವಾಗದ ಸ್ಥಿತಿಗೆ ತಲುಪಿದಾಗ ಆರ್‌ಬಿಐ ನಿಂದ ಆಪತ್ಕಾಲೀನ ಸಾಲವನ್ನು ಪಡೆಯಬಹುದು. ಈ ಸಾಲಗಳ ಮೇಲಿನ ಬಡ್ಡಿ ಸಾಮಾನ್ಯ ಸಾಲಗಳಿಗಿಂತ ಹೆಚ್ಚಿರುತ್ತದೆ. ಒಂದು ರಾಜ್ಯ ಸರ್ಕಾರ ಅಪತ್ಕಾಲೀನ ಸಾಲ ಪಡೆಯುವ ಸ್ಥಿತಿ ಬಂದಿದ್ದರೆ, ಅದರ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂದೇ ಅರ್ಥ. ಪ್ರಸ್ತುತ ಅಪತ್ಕಾಲೀನ ಸಾಲದ ಪ್ರಮಾಣವನ್ನು ಶೇ.60ರಷ್ಟು ಬಳಸಿಕೊಳ್ಳಲು ಅವಕಾಶ ನೀಡಿರುವುದರಿಂದ ರಾಜ್ಯ ಸರ್ಕಾರಗಳು ತಕ್ಷಣದ ಖರ್ಚು ವೆಚ್ಚಗಳಿಗಾಗಿ ತ್ವರಿತವಾಗಿ ನಗದು ಹೊಂದಿಸಲು ಸಾಧ್ಯವಾಗಲಿದೆ.
ರಿಯಲ್ ಎಸ್ಟೇಟ್, ಸಣ್ಣ ಮತ್ತು ಮಧ್ಯಮ ಉದ್ಯಮವಲಯ, ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಿರುವ RBI ಆದಷ್ಟು ತ್ವರಿತವಾಗಿ ಆರ್ಥಿಕತೆ ಚೇತರಿಸಿಕೊಳ್ಳಲು ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದೆ. ನಗದು ಕೊರತೆ ನೀಗಿಸಲು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ(NBFC) ಪುನರ್ಧನ ಒದಗಿಸಲು ಸಿಡ್ಬಿ, NABARD ಮತ್ತು ನ್ಯಾಷನಲ್ ಹೌನಿಂಗ್ ಬ್ಯಾಂಕ್ ಗೆ 50,000 ಕೋಟಿ ರುಪಾಯಿ ನಗದು ನೀಡಲಿದೆ. ಇದರಿಂದಾಗಿ ನಿರ್ಮಾಣ ವಲಯದಲ್ಲಿ ಉದ್ಯೋಗ ಕಳೆದುಕೊಂಡಿರುವ ಕೊಟ್ಯಂತರ ಜನರಿಗೆ ನೆರವು ಒದಗಿಸುವ ಉದ್ದೇಶ RBIನದ್ದಾಗಿದೆ.
NBFCಗೆ ನೀಡಿರುವ ನಗದು ಪೈಕಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಸಂಸ್ಥೆಗಳಿಗೆ ಶೇ.50ರಷ್ಟು ನೀಡಲು ನಿರ್ಧರಿಸಿದೆ. ಮೊದಲ ಬಾರಿ ಪರಿಹಾರ ಪ್ರಕಟಿಸಿದಾಗ ದೊಡ್ಡ ಪ್ರಮಾಣದ NBFC ಗಳಿಗಷ್ಟೇ ನೀಡಲಾಗಿತ್ತು. ನಬಾರ್ಡ್, ಸಿಡ್ಬಿ ಮೂಲಕ ಮೂಲಕ ಸಣ್ಣ, ಮಧ್ಯ ವಲಯದ ಉದ್ಯಮಗಳಿಗೆ ಸಾಲ ಒದಗಿಸಲಾಗುತ್ತದೆ. ದೇಶದಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮ ವಲಯದಲ್ಲಿ ಸುಮಾರು 11 ಕೋಟಿ ಜನರು ಉದ್ಯೋಗ ಪಡೆದಿದ್ದಾರೆ. ಈ ಉದ್ಯಮಗಳು ಸಾಮಾನ್ಯವಾಗಿ ತಿಂಗಳಿಂದ ತಿಂಗಳಿಗೆ ನಗದು ಹೊಂದಾಣಿಕೆ ಮಾಡಿಕೊಂಡು ಕಾರ್ಯನಿರ್ವಹಿಸುತ್ತವೆ. ಈಗ ದೇಶವ್ಯಾಪಿ ಲಾಕ್ ಡೌನ್ ಘೋಷಿಸಿರುವುದರಿಂದ ನಗದು ಒದಗಿಸಲು ಈ ಉದ್ಯಮಗಳಿಗೆ ಕಷ್ಟವಾಗಲಿದ್ದು, ಏಪ್ರಿಲ್ ತಿಂಗಳ ವೇತನ ಪಾವತಿಗೂ ಕಷ್ಟವಾಗಲಿದೆ. ಹೀಗಾಗಿ ಸಿಡ್ಬಿ ಮೂಲಕ ಸಾಲ ಒದಗಿಸಲು RBI ಮುಂದಾಗಿದೆ.

ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಮೂಲಕ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸಾಲ ಒದಗಿಸಲಾಗುತ್ತಿದೆ. ಇದರಿಂದಾಗಿ ಸ್ಥಗಿತಗೊಂಡಿರುವ ಯೋಜನೆಗಳ ಪುನರಾರಂಭಕ್ಕೆ ಉತ್ತೇಜನ ನೀಡುವುದು ಮತ್ತು ಈ ಉದ್ಯಮದಲ್ಲಿರುವ ಕಾರ್ಮಿಕರಿಗೆ ವೇತನ ಪಾವತಿಯಾಗುವಂತೆ ನೋಡಿಕೊಳ್ಳುವುದು RBI ನ ಮುಖ್ಯ ಉದ್ದೇಶವಾಗಿದೆ.
ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ RBI ಗವರ್ನರ್ ಶಕ್ತಿಕಾಂತದಾಸ್, RBI ನ ಎರಡನೇ ಹಂತದ ಪರಿಹಾರ ಕ್ರಮಗಳನ್ನು ಪ್ರಕಟಿಸಿದರು. ರಿವರ್ಸ್ ರೆಪೊದರ ಕಡಿತ ಮಾಡಿರುವುದರಿಂದಾಗಿ ಬ್ಯಾಂಕುಗಳು ಹೆಚ್ಚಿನ ಪ್ರಮಾಣದಲ್ಲಿ ಸಾಲ ವಿತರಿಸಲು ನೆರವಾಗಲಿದೆ. ಆ ಮೂಲಕ ನಗದು ಹರಿವು ಸಲೀಸಾಗಲಿದೆ. ಮಾರುಕಟ್ಟೆಯಲ್ಲಿ ವಹಿವಾಟು ಚೆನ್ನಾಗಿರಬೇಕು, ನಗದು ಹರಿವು ನಿರಂತರವಾಗಿರಲು RBI ಎಲ್ಲಾ ಕ್ರಮ ಕೈಗೊಳ್ಳಲಿದೆ ಎಂದು ಶಕ್ತಿಕಾಂತದಾಸ್ ಹೇಳಿದ್ದಾರೆ. ಹಣದುಬ್ಬರವು ಇಳಿಜಾರಿನಲ್ಲಿ ಸಾಗಲಿದೆ ಎಂಬ ಮುನ್ಸೂಚನೆ ಸಿಕ್ಕಿದೆ. ಬರುವ ದಿನಗಳಲ್ಲಿ ಮತ್ತಷ್ಟು ತಗ್ಗುವ ನಿರೀಕ್ಷೆ ಇದೆ. ಇದರಿಂದಾಗಿ ಮತ್ತಷ್ಟು ಬಡ್ಡಿದರ ತಗ್ಗಿಸುವ ಅವಕಾಶವು ಮುಕ್ತವಾಗಿರುತ್ತದೆ ಎಂದು ಹೇಳಿದ್ದಾರೆ.
ಈ ಹಿಂದೆ LTRO(ದೀರ್ಘಾವಧಿ ಪುನರ್ಧನ ಕಾರ್ಯಾಚರಣೆ) ಮೂಲಕ 1 ಲಕ್ಷ ಕೋಟಿ ನಗದು ಒದಗಿಸಿದ್ದ RBI ಈಗ ಮತ್ತೆ LTRO ಮೂಲಕ 50,000 ಕೋಟಿ ರುಪಾಯಿ ಒದಗಿಸಲಿದೆ. LTRO ಎಂದರೆ RBI ಚಾಲ್ತಿಯಲ್ಲಿರುವ ರೆಪೊ ದರದಲ್ಲಿ 1 ರಿಂದ 3 ವರ್ಷಗಳವರೆಗೆ ಬ್ಯಾಂಕುಗಳಿಗೆ ಸಾಲವನ್ನು ಒದಗಿಸುತ್ತದೆ. ರೆಪೊದರ ಬದಲಾದರೂ ಈ ಸಾಲದ ಮೇಲಿನ ಬಡ್ಡಿದರವು ಘೋಷಿತ ಅವಧಿಯಲ್ಲಿ ಬದಲಾಗುವುದಿಲ್ಲ. ಈಗ ರೆಪೊದರ ಅತ್ಯಂತ ಕಡಿಮೆ ಇರುವುದರಿಂದ ಬ್ಯಾಂಕುಗಳಿಗೆ, ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಅತ್ಯಂತ ಕಡಿಮೆ ಬಡ್ಡಿದರಕ್ಕೆ ಸಾಲ ದೊರೆತಂತಾಗುತ್ತದೆ.
ಕರೋನಾ ಸೋಂಕಿನಿಂದಾಗಿ ಉದ್ಭವಿಸಿರುವ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು RBI ನಿರಂತರವಾಗಿ ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದೆ. ಅಗತ್ಯಬಿದ್ದಾಗ ಮತ್ತಷ್ಟು ಪರಿಹಾರ ಕ್ರಮಗಳನ್ನು ಮುಂಬರುವ ದಿನಗಳಲ್ಲಿ ಪ್ರಕಟಿಸಲಿದೆ, ಇದೇ ಕೊನೆಯ ಪರಿಹಾರ ಕ್ರಮವಲ್ಲ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ವಾಣಿಜ್ಯ ಬ್ಯಾಂಕುಗಳು ಪ್ರಸಕ್ತ 2020ನೇ ಸಾಲಿನಲ್ಲಿ ತಮ್ಮ ಲಾಭಾಂಶದಲ್ಲಿ ಡಿವಿಡೆಂಡ್ ನೀಡಬೇಕಿಲ್ಲ. ಅಲ್ಲದೇ ಸಾಲ ಮರುಪಾವತಿಗೆ ನೀಡಿರುವ ರಿಯಾಯ್ತಿ ಅವಧಿ 90 ದಿನಗಳನ್ನು ನಿಷ್ಕ್ರಿಯ ಸಾಲಗಳ ವರ್ಗೀಕರಣದಿಂದ ಹೊರಗಿಡಲಾಗುತ್ತದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಸಹ ಸಾಲ ಮರುಪಾವತಿಗೆ ನೀಡಿರುವ ರಿಯಾಯ್ತಿ ಅವಧಿಯ 90 ದಿನಗಳನ್ನು ನಿಷ್ಕ್ರಿಯ ಸಾಲಗಳ ವರ್ಗೀಕರಣದಿಂದ ಹೊರಗಿಡುವ ಸೌಲಭ್ಯವನ್ನು ತಮ್ಮ ಸಾಲಗಾರರಿಗೆ ಒದಗಿಸಬಹುದಾಗಿದೆ. ಆರ್ಥಿಕತೆಯು ತ್ವರಿತವಾಗಿ ಚೇತರಿಸಿಕೊಳ್ಳುವ ವಿಶ್ವಾಸ ನಮಗೆ ಇದೆ ಎಂದೂ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಬ್ಯಾಂಕುಗಳ ಆರ್ಥಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಶೇ.10ರಷ್ಟು ಹೆಚ್ಚಿನ ಮೀಸಲು ನಿಧಿ ಒದಗಿಸುವಂತೆ ಎಲ್ಲಾ ಬ್ಯಾಂಕುಗಳಿಗೆ ಸೂಚಿಸಲಾಗಿದೆ. ಒತ್ತಡದ ಸಾಲಗಳು ನಿಷ್ಕ್ರಿಯ ಸಾಲಗಳಾಗಿ ಪರಿವರ್ತನೆಗೊಂಡಾಗ ಮತ್ತು ಅದನ್ನು ವಸೂಲು ಮಾಡಲು ಸಾಧ್ಯವೇ ಇಲ್ಲವೆಂದಾದಾಗ ಈ ಮೀಸಲು ನಿಧಿಯನ್ನು ಬಳಸಿಕೊಂಡು ನಿಷ್ಕ್ರಿಯ ಸಾಲವನ್ನು ಲಾಭನಷ್ಟ ಖಾತೆಯಿಂದ ತೆಗೆದುಹಾಕಲಾಗುತ್ತದೆ.
ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಭಾರತದ ಅಬಿವೃದ್ಧಿಯು ಧನಾತ್ಮಕವಾಗಿದ್ದು ತ್ವರಿತ ಚೇತರಿಸಿಕೊಳ್ಳಲಿದೆ. RBI ಕೈಗೊಂಡಿರುವ ಕ್ರಮಗಳಿಂದಾಗಿ ಹಣಕಾಸು ಪರಿಸ್ಥಿತಿಯು ತ್ವರಿತ ಸುಧಾರಿಸಲಿದೆ ಎಂಬ ವಿಶ್ವಾಸವನ್ನು ಶಕ್ತಿಕಾಂತ ದಾಸ್ ವ್ಯಕ್ತಪಡಿಸಿದ್ದಾರೆ.