ರೈತರ ಸಬಲೀಕರಣ ಮತ್ತು ಸಂರಕ್ಷಣೆ, ರೈತರ ವ್ಯಾಪರ ಮತ್ತು ವಾಣಿಜ್ಯ ಕುರಿತು ಕೃಷಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಂಡಿಸಿದ್ದಾರೆ. ಈ ವೇಳೆ ಕೇಂದ್ರ ಸರ್ಕಾರದ 2 ಪ್ರಮುಖ ಮಸೂದೆಗಳನ್ನು ಪ್ರತಿ ಪಕ್ಷಗಳು ತೀವ್ರವಾಗಿ ವಿರೋಧಿಸಿದ್ದು, ಹೆಚ್ಚಿನ ಚರ್ಚೆಗಾಗಿ ಮಸೂದೆಯನ್ನು ಆಯ್ಕೆ ಸಮಿತಿಗೆ ನೀಡಬೇಕು ಎಂದು ಒತ್ತಾಯಿಸಿವೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮಸೂದೆಯ ವಿರುದ್ಧ ಪ್ರತಿಪಕ್ಷಗಳ ಆಕ್ರೋಶದ ನಡುವೆ ಉಪಸಭಾಪತಿ ಹರಿವಂಶ್ ಮಸೂದೆ ಅಂಗೀಕರಿಸಲು ಸೂಚಿಸಿದ್ದಾರೆ. ಈ ವೇಳೆ ಆಕ್ರೋಶಗೊಂಡ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಡರೆಕ್ ಒಬ್ರಿಯನ್ ಉಪಸಭಾಪತಿ ಕುಳಿತಿದ್ದಲ್ಲಿಗೆ ಆಗಮಿಸಿ ರೂಲ್ ಪುಸ್ತಕ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಹಿಂದೆಂದೂ ಕಂಡಿರದಂತಹ ಗೊಂದಲದ ಸನ್ನಿವೇಶಕ್ಕೆ ಕಾರಣವಾಗಿದೆ. ನೂತನವಾಗಿ ಅಂಗೀಕಾರಗೊಂಡಿರುವ ಕೃಷಿ ಮಸೂದೆಯ ಕುರಿತಂತೆ ವಿರೋಧಿಸುವ ಭರದಲ್ಲಿ ʼಅನುಚಿತ ವರ್ತನೆʼ ತೋರಿದ್ದಾರೆಂಬ ಆರೋಪದಲ್ಲಿ ಎಂಟು ಮಂದಿ ಸಂಸದರನ್ನು ರಾಜ್ಯ ಸಭಾ ಸಭಾಪತಿ ಒಂದು ವಾರಗಳ ಕಾಲ ಅಮಾನತ್ತು ಮಾಡಿದ್ದಾರೆ.
ಅಮಾನತ್ತಿಗೊಳಗಾದ ಸಂಸದರು ಹೊರಹೋಗಲು ಒಪ್ಪದೆ ಮತ್ತೆ ಪ್ರತಿಭಟಿಸಿದ್ದರಿಂದ ಪುನಃ ಗೊಂದಲದ ಸನ್ನಿವೇಶ ಸೃಷ್ಟಿಯಾಗಿತ್ತು.
245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಎನ್ಡಿಎ, ಯುಪಿಎ ಎರಡು ಮೈತ್ರಿಕೂಟಗಳಿಗೂ ಸ್ಪಷ್ಟ ಬಹುಮತ ಇಲ್ಲ. ತಟಸ್ಥ ಪಕ್ಷಗಳೇ ನಿರ್ಣಾಯಕ. ಈ ಆಧಾರದಲ್ಲಿಯೇ ಬಿಜೆಪಿ ಗೆಲುವಿನ ನಿರೀಕ್ಷೆಯಲ್ಲಿದ್ದರೆ, ಕಾಂಗ್ರೆಸ್ ವಿಧೇಯಕಗಳನ್ನು ಸೋಲಿಸುವ ಆಶಾಭಾವವನ್ನು ಹೊಂದಿದೆ.
ಕೇಂದ್ರ ಪರಿಚಯಿಸಿರುವ ನೂತನ ಕೃಷಿ ಕಾಯ್ದೆ ʼಪ್ರಜಾಪ್ರಭುತ್ವದ ಕಗ್ಗೊಲೆʼ ಎಂದು ಪ್ರತಿಪಕ್ಷಗಳು ಹೇಳಿದರೆ, ಅಂಗೀಕಾರದ ಸಂಧರ್ಭದಲ್ಲಿ ಪ್ರತಿಪಕ್ಷಗಳು ನಡೆಸಿದ ದಾಳಿ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.