ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶಾದ್ಯಂತ ಕಳೆದೊಂದು ವಾರದಿಂದ ರೈತ ಸಂಘಟನೆಗಳು ಮುಷ್ಕರ ಹೂಡಿವೆ. ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯದಿದ್ದಲ್ಲಿ ಮುಂದಿನ ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸಲಾಗುವುದು ಎಂದು ಪ್ರತಿಭಟನಾನಿರತ ಹೋರಾಟಗಾರರು ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಹೀಗಿರುವಾಗಲೇ ರೈತರ ಹೋರಾಟವೂ ಬಿಜೆಪಿಯ ಅಲೆಯನ್ನು ಕೊಂಚವೂ ತಗ್ಗಿಸಲಾಗಲಿಲ್ಲ ಎಂದು ಹೇಳಬಹುದು. ಏಕೆಂದರೆ, ಇದಕ್ಕೆ ಉದಾಹರಣೆಯೇ ಇತ್ತೀಚೆಗೆ ನಡೆದ ರಾಜಸ್ಥಾನ ಮತ್ತು ಅರುಣಾಚಲ ಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿರುವುದು.
ಹೌದು, ರಾಜಸ್ಥಾನ ಮತ್ತು ಅರುಣಾಚಲ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಎರಡು ರಾಜ್ಯಗಳಲ್ಲೂ ಬಿಜೆಪಿ ಭಾರೀ ಗೆಲುವು ದಾಖಲಿಸಿದೆ. ಕೇಂದ್ರ ಸರ್ಕಾರದ ಹೊಸ ಕೃಷಿ ನೀತಿಗಳನ್ನು ವಿರೋಧಿಸಿ ದೇಶದ ವಿವಿಧ ಭಾಗಗಳಲ್ಲಿ ರೈತರು ಪ್ರತಿಭಟನೆ ಮುಂದುವರಿಸಿರುವಾಗಲೇ ಬಿಜೆಪಿಗೆ ಅಭೂತಪೂರ್ವ ಗೆಲುವು ತಂದಿರುವುದು ಆಶ್ಚರ್ಯದ ಸಂಗತಿ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕಾಂಗ್ರೆಸ್ ಆಡಳಿತರೂಢ ರಾಜಸ್ಥಾನದಲ್ಲಿ ಬಿಜೆಪಿ ಗೆದ್ದು ಬೀಗಿದೆ. ಇಲ್ಲಿನ 33 ಜಿಲ್ಲೆಗಳ ಪೈಕಿ 21 ಜಿಲ್ಲೆಗಳ 222 ಪಂಚಾಯಿ ಸಮಿತಿ ಹಾಗೂ 21 ಜಿಲ್ಲಾ ಪರಿಷತ್ಗಳಿಗೆ ಚುನಾವಣೆ ನಡೆದಿತ್ತು. 222 ಪಂಚಾಯಿತಿ ಸಮಿತಿಗಳ 4371 ಸ್ಥಾನಗಳ ಪೈಕಿ ಬಿಜೆಪಿ 1,989 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ 1,852ರಲ್ಲಿ ಗೆಲುವು ಸಾಧಿಸಿ ಎರಡನೇ ಸ್ಥಾನದಲ್ಲಿದೆ. ಹಾಗೆಯೇ 439 ಸ್ಥಾನಗಳು ಪಕ್ಷೇತರರ ಪಾಲಾಗಿವೆ. ಆರ್ಎಲ್ಪಿ 60, ಸಿಪಿಐ(ಎಂ) 26, ಬಿಎಸ್ಪಿ 5 ಸ್ಥಾನಗಳನ್ನು ಗೆದ್ದುಕೊಂಡಿವೆ. ಜತೆಗೆ 635 ಜಿಲ್ಲಾ ಪರಿಷತ್ ಸ್ಥಾನಗಳ ಪೈಕಿ ಬಿಜೆಪಿ 353, ಕಾಂಗ್ರೆಸ್ 252 ಸೀಟುಗಳನ್ನು ಗೆದ್ದುಕೊಂಡಿವೆ. ಇನ್ನುಳಿದ 30 ಸ್ಥಾನಗಳ ಫಲಿತಾಂಶ ಇನ್ನೇನು ಹೊರಬರಬೇಕಿದೆ.
ಇನ್ನೊಂದೆಡೆ ಅರುಣಾಚಲ ಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಬಿಜೆಪಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇಟಾನಗರ ಪಾಲಿಕೆ ಚುನಾವಣೆಯಲ್ಲಿ 20 ವಾರ್ಡ್ಗಳ ಪೈಕಿ ಬಿಜೆಪಿ 5 ವಾರ್ಡ್ಗಳಲ್ಲಿ ಅವಿರೋಧ ಜಯ ದಾಖಲಿಸಿದೆ.
ಅರುಣಾಚಲ ಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆ ಡಿಸೆಂಬರ್ 22ರಂದು ಚುನಾವಣೆ ಆಗಿತ್ತು. ಹಾಗೆಯೇ ರಾಜಸ್ಥಾನದ 21 ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಗೆ ನ. 23, 27, ಡಿ.1 ಮತ್ತು 5 ಹೀಗೆ ನಾಲ್ಕು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಈ ಚುನಾವಣೆ ನಡೆಯುತ್ತಿರುವಾಗಲೇ ದೇಶಾದ್ಯಂತ ರೈತರ ಪ್ರತಿಭಟನೆ ಭುಗಿಲೆದ್ದಿತ್ತು. ಹಾಗಾಗಿ ಈ ಎರಡು ರಾಜ್ಯಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ರೈತರು ಬಿಜೆಪಿಯನ್ನು ಸೋಲಿಸಲಿದ್ದಾರೆ ಎಂದು ಬಣ್ಣಿಸಲಾಗಿತ್ತು. ಆದರೀಗ, ಬಿಜೆಪಿಯೇ ಭರ್ಜರಿ ಗೆಲುವು ಸಾಧಿಸಿದೆ.
ಇತ್ತೀಚೆಗೆ ನಡೆದ ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಿಸಿತ್ತು. ಕಳೆದ ಬಾರಿ 4 ವಾರ್ಡ್ಗಳನ್ನು ಗೆದ್ದಿದ್ದ ಬಿಜೆಪಿ ಈ ಸಲ 48 ವಾರ್ಡ್ ಗೆದ್ದು ಟಿಆರ್ಎಸ್ಗೆ ಬಿಸಿ ಮುಟ್ಟಿಸಿತ್ತು. ಈ ಎಲ್ಲದರ ನಡುವೆ ಮುಂದೆ ಪಶ್ಚಿಮ ಬಂಗಾಳ ಮತ್ತು ತಮಿಳು ನಾಡು ವಿಧಾನಸಭೆ ಚುನಾವಣೆಗೂ ಅಣಿಯಾಗುತ್ತಿದೆ. ಇಷ್ಟೆಲ್ಲಾ ಆಡಳಿತ ವಿರೋಧದ ನಡುವೆಯೂ ಬಿಜೆಪಿ ಗೆಲ್ಲುತ್ತಿರುವುದರ ಹಿಂದೆ ಇವಿಎಂ ಹ್ಯಾಕಿಂಗ್ ಇದೆಯೋ? ನಿಜವಾಗಲೂ ಜನರೇ ವೋಟ್ ಹಾಕಿ ಗೆಲ್ಲಿಸುತ್ತಿದ್ದಾರೋ? ಎನ್ನುವುದೇ ಸದ್ಯದ ಪ್ರಶ್ನೆ.