ಇತ್ತೀಚಿಗೆ ನಡೆದ ಪಾಲಕ್ಕಾಡ್ ಪುರಸಭೆ ಚುನಾವಣೆಯಲ್ಲಿ ಬಿಜೆಪಿಯೂ ಭರ್ಜರಿ ಗೆಲುವು ಸಾಧಿಸಿತ್ತು. ಇದಾದ ಬಳಿಕ ಪುರಸಭೆ ಕಚೇರಿ ಮೇಲೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಫೋಟೋ ಇರುವ ಜೈ ಶ್ರೀ ರಾಮ್’ ಮತ್ತು ‘ವಂದೇ ಮಾತರಂ’ ಎಂಬ ಘೋಷಣೆಯಿರುವ ಬ್ಯಾನರ್ಸ್ ಹಾಕಲಾಗಿತ್ತು. ಪುರಸಭೆ ಕಚೇರಿಯಲ್ಲಿ ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಬ್ಯಾನರ್ಸ್ ಹಾಕಲಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದರು. ಈ ಬೆನ್ನಲ್ಲೀಗ ಪಾಲಕ್ಕಾಡ್ ಪುರಸಭೆ ಕಟ್ಟಡದಲ್ಲಿ ಬಿಜೆಪಿ ಕಾರ್ಯಕರ್ತರು ಹಾಕಿದ್ದ ಬ್ಯಾನರ್ಸ್ ಕಿತ್ತೆಸೆದು ಡಿವೈಎಫ್ಐ ಕಾರ್ಯಕರ್ತರು ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ.
ಬುಧವಾರ ಸಂಜೆ ಪುರಸಭೆ ಎದುರು ಬಿಜೆಪಿ ಕಾರ್ಯಕರ್ತರು ತಮ್ಮ ಗೆಲುವನ್ನು ಸಂಭ್ರಮಿಸಿದರು. ವಿಜಯೋತ್ಸವದ ಸಂದರ್ಭದಲ್ಲಿ, ಪುರಸಭೆ ಕಟ್ಟಡ ಮೇಲೆ ‘ಜೈ ಶ್ರೀ ರಾಮ್’ ಎಂಬ ಘೋಷಣೆಯಿರುವ ಬ್ಯಾನರ್ಸ್ ಹಾಕಿದ್ದರು. ಜತೆಗೆ ಕಟ್ಟಡದ ಮೇಲ್ಬಾಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರ ಬೃಹತ್ ಚಿತ್ರವೊಂದನ್ನು ಹಾಕಿದ್ದರು. ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಇರುವ ಮತ್ತೊಂದು ಬ್ಯಾನರ್ ಕೂಡ ಕಟ್ಟಿದ್ದರು. ಸರ್ಕಾರಿ ಕಚೇರಿಯಲ್ಲಿ ಹೀಗೆ ಧಾರ್ಮಿಕ ಚಿಹ್ನೆಗಳನ್ನು ಪ್ರದರ್ಶಿಸಬಾರದು ಎಂದು ಹಲವರು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇನ್ನು, ಬಿಜೆಪಿ ಕಾರ್ಯಕರ್ತರ ನಡೆಯನ್ನು ವಿರೋಧಿಸಿ ಡಿವೈಎಫ್ಐ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಬಳಿಕ ಪೊಲೀಸರ ಅನುಮತಿ ಪಡೆದು ರಾಷ್ಟ್ರಧ್ವಜವನ್ನು ಹಾರಿಸಿದರು. ಬಿಜೆಪಿಯೂ ಕೇರಳದಲ್ಲಿ ಕೋಮು ಸೌಹಾರ್ದತೆಯನ್ನು ಹಾಳು ಮಾಡಿ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಪುರಸಭೆ ಕಾರ್ಯದರ್ಶಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧ ವರದಿ ಸಲ್ಲಿಸುವಂತೆ ವಿಶೇಷ ವಿಭಾಗದ ಉಪ ಮಹಾನಿರ್ದೇಶಕರು ಸೂಚಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಜಿತ್ ದಾಸ್ ಎಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಡಳಿತಾರೂಢ ಎಲ್ಡಿಎಫ್ ಮೈತ್ರಿಕೂಟ ಮೇಲುಗೈ ಸಾಧಿಸಿತ್ತು. ಇಲ್ಲಿನ 1,199 ಸ್ಥಳೀಯ ಸಂಸ್ಥೆಗಳ ಪೈಕಿ 670ರಲ್ಲಿ ಗೆದ್ದು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಒಂದೆಡೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ತೀವ್ರ ಹಿನ್ನಡೆ ಅನುಭವಿಸಿದರೆ, ಇನ್ನೊಂದೆಡೆ ಕಳೆದ ಬಾರಿಗಿಂತಲೂ ಈ ಸಲ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಪ್ರಗತಿ ಸಾಧಿಸಿದೆ.
Also Read: ಕೇರಳ ಚುನಾವಣೆ; ಎಡ ಮೈತ್ರಿ ಗೆಲುವು, ಕಾಂಗ್ರೆಸ್ಗೆ ಭಾರೀ ಹಿನ್ನಡೆ, ಪ್ರಗತಿ ಸಾಧಿಸಿದ ಬಿಜೆಪಿ
ಶಬರಿಮಲೆ ವಿವಾದವನ್ನೇ ಹಿಡಿದುಕೊಂಡು ತಿರುವನಂತಪುರ ಪಾಲಿಕೆಯಲ್ಲಿ ಅಧಿಕಾರ ಹಿಡಿಯಬೇಕೆಂಬ ಬಿಜೆಪಿಯ ಕನಸು ಈ ಸಲ ನನಸಾಗಿಲ್ಲವಾದರೂ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮಹತ್ವದ ಸಾಧನೆ ಮಾಡಬೇಕು ಎಂದು ಮುಂದಾಗಿದೆ. ಬಿಜೆಪಿ ಹೈಕಮಾಂಡ್ ಕೂಡ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಕೈ ಹಿಡಿಯುವಂತೆ ಜನರಿಗೆ ಮನವಿ ಮಾಡಿದ್ದಾರೆ. ಇಲ್ಲಿನ ಪುರಸಭೆ ಚುನಾವಣೆಯಲ್ಲಿ 52 ವಾರ್ಡ್ಗಳ ಪೈಕಿಯಲ್ಲಿ 28 ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.