ನಕಲಿ ಗುರುತಿನ ಚೀಟಿ ಪ್ರಕರಣದಲ್ಲಿ ರಾಜರಾಜೇಶ್ವರಿ ನಗರದ ನೂತನ ಶಾಸಕ ಮುನಿರತ್ನರಿಗೆ ಹೈಕೋರ್ಟ್ ಆಘಾತ ನೀಡಿದೆ. 2018ರ ವಿಧಾನಸಭೆಯ ಚುನಾವಣೆಯ ವೇಳೆ ಪತ್ತೆಯಾದ ನಕಲಿ ಗುರುತಿನ ಚೀಟಿಗಳಿಗೆ ಸಂಬಂಧಿಸಿ ಪೋಲೀಸ್ ತನಿಖೆಯ ಪರಿಶೀಲನಾ ವರದಿ ಸಲ್ಲಿಸಲು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರನ್ನು ನೇಮಿಸಿಕೊಳ್ಳುವಂತೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.
ನಕಲಿ ಗುರುತಿನ ಚೀಟಿ ಪ್ರಕರಣವನ್ನು ಪೋಲೀಸರು ಸರಿಯಾದ ಕ್ರಮದಲ್ಲಿ ತನಿಖೆ ಮಾಡಿಲ್ಲ, ಹಾಗಾಗಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕೆಂದು ಎನ್ ಆನಂದ್ ಕುಮಾರ್ ಹಾಗೂ ಜಿ. ಸಂತೋಷ್ ಕುಮಾರ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅರ್ಜಿದಾರರ ಪರ ವಾದಿಸಿದ ಮಾಜಿ ಅಡ್ವಕೇಟ್ ಜನರಲ್ ಎ ಎಸ್ ಪೊನ್ನಣ್ಣ ಅವರು, ಆರ್ ಆರ್ ನಗರದಲ್ಲಿ ಪತ್ತೆಯಾಗಿದ್ದ ನಕಲಿ ಮತದಾರರ ಗುರುತಿನ ಚೀಟಿ ಪ್ರಕರಣವನ್ನು ಸ್ಥಳೀಯ ಪೊಲೀಸರು ಸರಿಯಾಗಿ ತನಿಖೆ ಮಾಡಿಲ್ಲ. ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಯನ್ನೂ ದಾಖಲಿಸಿಲ್ಲ. ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿಲ್ಲ. ದಕ್ಷವಾಗಿ ಹಾಗೂ ಪ್ರಾಮಾಣಿಕವಾಗಿ ತನಿಖೆ ನಡೆಸಿಲ್ಲ. ಹೀಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಅಗತ್ಯವಿದೆ ಎಂದು ವಾದ ಮಾಡಿದ್ದರು.
ಈ ಅರ್ಜಿಯನ್ನು ವಿಚಾರಣೆ ಮಾಡಿದ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ, ತನಿಖೆ ಸೂಕ್ತ ರೀತಿಯಲ್ಲಿ ನಡೆದಿದೆಯೇ, ಇಲ್ಲವೇ ಎಂಬುದನ್ನು ನಾವೇ ನಿರ್ಧರಿಸುವುದು ಕಷ್ಟ ಎಂದು ಅಭಿಪ್ರಾಯಪಟ್ಟಿದೆ. ತನಿಖೆ ಸೂಕ್ತ ರೀತಿಯಲ್ಲಿ ನಡೆದಿದೆಯೆ ಇಲ್ಲವೆ ಎನ್ನುವುದನ್ನು ಪರಿಶೀಲಿಸಲು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರು ನೇಮಕ ಮಾಡಬೇಕು. ಅವರು ಪರಿಶೀಲನೆ ನಡೆಸಿ ಡಿಸೆಂಬರ್ 15ರೊಳಗೆ ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಅದರ ವರದಿ ನೀಡಬೇಕು ಎಂದು ಆದೇಶಿಸಿ ವಿಚಾರಣೆಯನ್ನು ಡಿ.18ಕ್ಕೆ ಮುಂದೂಡಿತು.
Also Read: ಸೆಟ್ ಟಾಪ್ ಬಾಕ್ಸ್ ಹಂಚಿಕೆ: ಮುನಿರತ್ನ ವಿರುದ್ಧ ಸಾಕೇತ್ ಗೋಖಲೆ ದೂರು
ಮುನಿರತ್ನ ಅವರು ರಾಜರಾಜೇಶ್ವರಿ ವಿಧಾನಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಐವತ್ತು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
2018 ರಲ್ಲಿ ರಾಜರಾಜೇಶ್ವರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತುಳಸಿ ಮುನಿರಾಜು, ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿರತ್ನ ವಿರುದ್ಧ ಪರಾಜಯಗೊಂಡಿದ್ದರು. ಮುನಿರತ್ನ ಚುನಾವಣೆಯಲ್ಲಿ ಅಕ್ರಮ ನಡೆಸಿದ್ದಾರೆ ಎಂದು ತುಳಸಿ ಮುನಿರಾಜು ನ್ಯಾಯಾಲಯ ಮೊರೆ ಹೋಗಿದ್ದರು. ರಾಜರಾಜೇಶ್ವರಿ ಉಪಚುನಾವಣೆ ರದ್ದುಗೊಳಿಸಬೇಕೆಂದು ಕೋರಿ ತುಳಸಿ ಮುನಿರಾಜು ಸುಪ್ರೀಂ ಕೋರ್ಟ್ಗೆ ಹಾಕಿದ ಅರ್ಜಿಯನ್ನು ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠವು ವಜಾಗೊಳಿಸಿತ್ತು.
Also Read: ತುಳಸಿ ಮುನಿರಾಜು ಅರ್ಜಿ ವಜಾಗೊಳಿಸಿದ ಸುಪ್ರಿಂ: ಮುನಿರತ್ನ ನಿರಾಳ
ಪ್ರಕರಣದ ಹಿನ್ನೆಲೆ: 2018ರ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಆರ್ ಆರ್ ನಗರ ವಿಧಾನ ಸಭಾ ಕ್ಷೇತ್ರದಿಂದ ಮುನಿರತ್ನ ಸ್ಪರ್ಧಿಸಿದ್ದರು. ಚುನಾವಣೆಗೂ ಮುನ್ನ ಮುನಿರತ್ನ ಬೆಂಬಲಿಗರ ಆಪಾರ್ಟೆಂಟ್ನಲ್ಲಿ 9 ಸಾವಿರಕ್ಕೂ ಅಧಿಕ ವೋಟರ್ ಐಡಿಗಳು ಹಾಗೂ ಮುನಿರತ್ನ ಸ್ಪರ್ಧಿಸಿದ್ದ ಪಕ್ಷದ ಕರಪತ್ರಗಳು ಪತ್ತೆಯಾಗಿದ್ದವು. ಈ ಸಂಬಂಧ ಚುನಾವಣಾ ಆಯೋಗ ಹಾಗೂ ಸ್ಥಳೀಯ ನಿವಾಸಿ ರಾಕೇಶ್ ಪ್ರತ್ಯೇಕವಾಗಿ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ, ಜಾಲಹಳ್ಳಿ ಠಾಣೆ ಪೊಲೀಸರು ಪ್ರಕರಣದ ತನಿಖೆಯನ್ನು ಸರಿಯಾಗಿ ನಡೆಸುತ್ತಿಲ್ಲ ಎಂದು ಆರೋಪಿಸಿರುವ ಅರ್ಜಿದಾರರು ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಕೋರಿದ್ದಾರೆ.