ಭೂ ಸುಧಾರಣಾ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಐಕ್ಯ ಹೋರಾಟ ಸಮಿತಿಯು ರಾಜ್ಯಪಾಲರಿಗೆ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದೆ. ಈ ಹಕ್ಕೊತ್ತಾಯ ಪತ್ರದ ಸಂಪೂರ್ಣ ವಿವರ ಈ ಕೆಳಗಿನಂತಿದೆ.
ಅದರಣೀಯರೆ,
ನಮ್ಮ ಇಷ್ಟ-ನಷ್ಟಗಳನ್ನು ಪರಿಗಣನೆಗೂ ತೆಗೆದುಕೊಳ್ಳದೆ, ನಾಮ ಮಾತ್ರಕ್ಕೂ ನಮ್ಮ ಅಭಿಪ್ರಾಯಗಳನ್ನು ತೆಗೆದುಕೊಳ್ಳದೆ, ನಮ್ಮ ಬದುಕಿನ ಮೇಲೆ ಘೋರ ಪರಿಣಾಮ ಬೀರಲಿರುವ ಕಾಯ್ದೆಗಳನ್ನು ತರಾತುರಿಯಲ್ಲಿ, ಅಪ್ರಜಾತಾಂತ್ರಿಕ ರೀತಿಯಲ್ಲಿ ನಮ್ಮ ಮೇಲೆ ಹೇರುತ್ತಿರುವ ಕ್ರಮವನ್ನು ಕಂಡು ನಾವು ಅತಂಕಿತರಾಗಿದ್ದೇವೆ, ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದೇವೆ.
ಕೇಂದ್ರ ಸರ್ಕಾರವು ಹೇರಿರುವ Farmers Produce Trade and Commerce (promotion and Facilitation) Bill 2000, Farmers (Empowerment and Protection) Price Assurance and Farm Services Bill, Essential Commodities (amendment) ಸಕ್ಕರೆ ಲೇಪಿತ ವಿಷದ ಗುಳಿಗೆಗಳಲ್ಲದೆ ಮತ್ತೇನೂ ಅಲ್ಲ ಎಂಬುದು ನಮ್ಮ ಅರಿವಿಗೆ ಬಂದಿದೆ. ವಾಸ್ತವದಲ್ಲಿ ಈ ಮೂರು ಕಾಯ್ದೆಗಳು ಎಪಿಎಂಸಿಯನ್ನು ಇದ್ದೂ ಇಲ್ಲದಂತೆ ಮಾಡುತ್ತವೆ, ಕಾರ್ಪೋರೇಟ್ ಪರವಾದ ಕಾಂಟ್ರಾಕ್ಟ್ ಕೃಷಿಗೆ ಉತ್ತೇಜನ ನೀಡುತ್ತವೆ, ಹಾಗೂ ಕೃಷಿ ಕಂಪನಿಗಳಿಗೆ ಆಹಾರ ಬೆಳೆಯನ್ನು ಕಳ್ಳದಾಸ್ತಾನು ಮಾಡಿಕೊಳ್ಳಲು ಅನುವು ಮಾಡಿಕೊಡುತ್ತವೆ. ನಾವು ರೈತರು ಮುಗ್ಗರು ಹೌದಾದರೂ ಸರ್ಕಾರ ತಿಳಿದಿರುವಷ್ಟು ಮೂರ್ಖರಲ್ಲ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇವೆ. ಈ ಮೂರೂ ಕಾಯ್ದೆಗಳನ್ನು ನಾವು ಸಾರಾಸಗಟು ವಿರೋಧಿಸುತ್ತಿದ್ದೇವೆ. ಇವುಗಳ ರದ್ದತಿಗಾಗಿ ನಮ್ಮ ರೈತ ಬಂಧುಗಳು ದೆಹಲಿಯಲ್ಲಿ ನಡೆಸುತ್ತಿರುವ ಹೋರಾಟ ನಮ್ಮದೇ ಹೋರಾಟವಾಗಿದೆ. ಕೇಂದ್ರ ಸರ್ಕಾರ ಮೊದಲು ಈ ಮೂರೂ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವ ತನಕ ನಮ್ಮ ಈ ಹೋರಾಟ ನಿಲ್ಲುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತಿದ್ದೇವೆ.
ಕೇಂದ್ರ ಸರ್ಕಾರದ ಈ ಜನ ವಿರೋಧಿ ನೀತಿಗಳನ್ನು ಯಾವ ರೀತಿಯ ವಿವೇಚನೆಗೂ ಒಳಪಡಿಸದೆ, ಯಥಾವತ್ ಮಾತ್ರವಲ್ಲ ಮತ್ತಷ್ಟು ಹಸಿಹಸಿ ರೀತಿಯಲ್ಲಿ ರಾಜ್ಯ ಸರ್ಕಾರ ಕರ್ನಾಟಕದ ಜನರ ಮೇಲೆ ಹೇರಲು ಹೊರಟಿರುವುದನ್ನು ಈ ಸಂದರ್ಭದಲ್ಲಿ ವಿಶೇಷ ಒತ್ತಿನ ಜೊತ ತಮ್ಮ ಗಮನಕ್ಕೆ ತರಲು ನಾವು ಬಯಸುತ್ತಿದ್ದೇವೆ.
ದುಡಿವ ಜನರ ಪಾಲಿಗೆ ಮರಣ ಶಾಸನಗಳಾದ ಭೂಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಕಾರ್ಮಿಕ ಹಕ್ಕು ತಿದ್ದುಪಡಿ ಕಾಯ್ದೆ ಮತ್ತು ವಿದ್ಯುತ್ ಖಾಸಗೀಕರಣ ಕಾಯ್ದೆಗಳನ್ನು ಅಪ್ರಜಾತಾಂತ್ರಿಕ ರೀತಿಯಲ್ಲಿ ಸುಗ್ರೀವಾಜ್ಞೆಗಳ ಮೂಲಕ ರಾಜ್ಯ ಸರ್ಕಾರವು ನಮ್ಮ ಮೇಲೆ ಹೇರಿರುವುದು ತಮ್ಮ ಗಮನದಲ್ಲಿದೆ. ಏಕೆಂದರೆ ತಾವೇ ಅವುಗಳಿಗೆ ಅಂತಿಮ ಸಮ್ಮತಿಯ ಸಹಿ ಹಾಕಿದ್ದೀರಿ.
ಈ ಸುಗ್ರೀವಾಜ್ಞೆಗಳ ವಿರುದ್ಧ ಕರ್ನಾಟಕದ ಜನರಾದ ನಾವು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದೇವೆ; ಇದೇ ಸೆಪ್ಟೆಂಬರಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದ ಅವಧಿಯುದ್ದಕ್ಕೂ ಪ್ರತಿಭಟನೆ ನಡೆಸಿ ನಮ್ಮ ವಿರೋಧವನ್ನು ದಾಖಲಿಸಿದ್ದೇವೆ; ಸೆಪ್ಟೆಂಬರ್ 28ರಂದು ಸಂಪೂರ್ಣ ಕರ್ನಾಟಕ ಬಂದ್” ಆಚರಿಸುವ ಮೂಲಕ ಇವುಗಳಿಗೆ ನಮ್ಮ ಒಪ್ಪಿಗೆ ಇಲ್ಲ ಎಂಬ ಸಂದೇಶವನ್ನು ಆಳುವವರಿrt ರವಾನಿಸಿದ್ದೇವೆ. ಅಷ್ಟೇ ಅಲ್ಲದೆ ಸೆಪ್ಟೆಂಬರ್ ಅಧಿವೇಶನದಲ್ಲೂ ಈ ಮಸೂದೆಗಳು ತೀವ್ರ ಟೀಕೆಗೆ ಒಳಗಾಗಿವೆ ಹಾಗೂ ಅನುಮೋದನೆ ಪಡೆದುಕೊಳ್ಳುವುದರಲ್ಲಿ ವಿಫಲಗೊಂಡಿವೆ. ಆದರೆ ಸರ್ಕಾರ ಎರಡನೇ ಬಾರಿ ಮತ್ತೆ ಸುಗ್ರೀವಾಜ್ಞೆ ತರುವ ಮೂಲಕ ಅವನ್ನು ನಮ್ಮ ಮೇಲೆ ಹೇರಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ನಡುವೆ ದೆಹಲಿಯಲ್ಲಿ ರೈತಾಪಿಯ ಹೋರಾಟ ಭುಗಿಲೆದ್ದಿದೆ ಮತ್ತು ಕೇಂದ್ರ ಸರ್ಕಾರ ರೈತ ಸಂಘಟನೆಗಳ ಜೊತೆ ಮಾತುಕತೆ ಪ್ರಾರಂಭಿಸಿದೆ. ನಾವು ಚರ್ಚೆಗೆ ಮುಕ್ತವಾಗಿದ್ದೇವೆ, ಕೆಲವು ತಿದ್ದುಪಡಿಗೆ ಸಿದ್ಧವಿದ್ದೇವೆ ಎಂದು ಬಾಯಿ ಮಾತಿಗಾದರೂ ಹೇಳುತ್ತಿದೆ. ಆದರೆ ಈ ಯಾವ ವಿದ್ಯಮಾನಗಳನ್ನೂ ಪರಿಗಣನೆಗೆ ತೆಗೆದುಕೊಳ್ಳದೆ ಈಗ ನಡೆಯುತ್ತಿರುವ ರಾಜ್ಯ ವಿಧಾನ ಮಂಡಲ ಅಧಿವೇಶನದಲ್ಲಿ ಈ ಸುಗ್ರೀವಾಜ್ಞೆಗಳನ್ನು ತರಾತುರಿಯಲ್ಲಿ ಕಾಯ್ದೆಗಳನ್ನಾಗಿ ಮಾಡಲು ಸರ್ಕಾರ ಎಲ್ಲಾ ಕುತಂತ್ರ ಮತ್ತು ಕುತರ್ಕ ವಿಧಾನಗಳನ್ನು ಬಳಸುತ್ತಿದೆ. ಕರ್ನಾಟಕ ಭೂ ಸುಧಾರಣಾ ಕಾಯ್ದೆ-1961’ಕ್ಕೆ ಕೆಲವು ತಿದ್ದುಪಡಿಗಳನ್ನು ಮಾಡುವ ಮಸೂದೆಗೆ ಅಪ್ರಜಾತಾಂತ್ರಿಕ ವಿಧಾನದಲ್ಲಿ ಅನುಮೋದನೆ” ಎಂಬ ಶಾಸ್ತ್ರ ಮಾಡಿದೆ. ಈಗ ಅದು ತಮ್ಮ ಮುಂದೆ ಸಹಿಗೆ ಬರಲಿದೆ. ಈ ಸಂದರ್ಭದಲ್ಲಿ ನಮಗೆ ಗೊತ್ತಿರುವ ಮಣ್ಣಿನ ವಿವೇಕದಿಂದ ನಾವು ತಮ್ಮ ಮುಂದೆ ಈ ಕೆಳಗಿನ ಪ್ರಶ್ನೆಗಳನ್ನು ಇಡುತ್ತಾ, ಅವುಗಳನ್ನು ಸಮಗ್ರವಾಗಿ ವಿವೇಚಿಸದೆ ಮುಂದುವರಿಯಬಾರದೆಂದು ವಿನಂತಿಸುತ್ತಿದ್ದೇವೆ:
1. ಕೇಂದ್ರ ಸರ್ಕಾರದ ನೀತಿಗಳ ಪ್ರಶ್ನೆಗೊಳಗಾಗಿರುವಾಗ ಮತ್ತು ಖುದ್ದು ಕೇಂದ್ರ ಸರ್ಕಾರ ಅವನ್ನು ಬದಲಾವಣೆ ಮಾಡಲು ಸಿದ್ಧವಿರುವಾಗ ಆ ಪ್ರಕ್ರಿಯೆ ಮುಕ್ತಾಯಗೊಳ್ಳುವ ಮುನ್ನವೇ ಅಲ್ಲಿ ಅವನ್ನು ಹೇರುವ ತರಾತುರಿ ಸರಿಯೆ?
2. ಈ ಕಾಯ್ದೆಗಳು ಮುಂದಿಡುತ್ತಿರುವ ಯಾವುದೇ ತಿದ್ದುಪಡಿಗಳನ್ನು ತರಬೇಕೆಂದು ರೈತರೇ ಅಗಲೀ, ಯಾವುದೇ ಜನ ಸಮುದಾಯವಾಗಲೀ ಸರ್ಕಾರದ ಮುಂದೆ ಬೇಡಿಕೆ ಇಟ್ಟ ಒಂದೇ ಒಂದು ಉದಾಹರಣೆಯನ್ನು ಸರ್ಕಾರ ತೋರಿಸಬಲ್ಲದೆ?
3, “ಉತ್ಪಾದನಾ ಸಾಧನಗಳು ಕೆಲವರ ಕೈಯಲ್ಲಿ ಕೇಂದ್ರೀಕರಣಗೊಳ್ಳದೆ ಜನರ ಕೈಗೆ ವಿಕೇಂದ್ರೀಕರಣಗೊಳ್ಳಬೇಕು” ಎಂಬ ಸಂವಿಧಾನದ ಆಶಯದನ್ವಯ, “ಉಳುವವರಿಗೇ ಭೂಮಿ” ಎಂಬ ಬಡ ಏನಲೆ ನಿರಂತರ ಹಕ್ಕೊತ್ತಾಯಕ್ಕೆ ಸ್ಪಂದನೆಯಾಗಿ ಜಾರಿಗೆ ಬಂದ ಚಾರಿತ್ರಿಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಏನು ಸಾಮಾಜಿಕ ಪರಿಣಾಮ ಉಂಟಾಗಬಹುದು ಎಂಬ ಅಧ್ಯಯನವನ್ನು ಮಾಡದೆ, ವಿಧಾನ ಮಂಡಲದ ಇಲ್ಲವೇ ಸಾರ್ವಜನಿಕ ಚರ್ಚೆಗೂ ಒಳಪಡಿಸದೆ ಹಾಗೂ ಭೂಮಿಯ ಒಡೆಯರಾದ ರೈತರನ್ನೂ ಕೇಳದೆ, ಕಾಯ್ದೆ ತಿದ್ದುಪಡಿಗೆ ಹೊರಟಿರುವುದು ಸಾಂವಿಧಾನಿಕವೆ?
4, ಉಳುತ್ತಿರುವ ತುಂಡು ಭೂಮಿಗೆ ಹಕ್ಕು ಪತ್ರ ಕೊಡಿ, ಕಟ್ಟಿಕೊಂಡಿರುವ ಮುರುಕುಲು ಮನೆಯ ನಿವೇಶನ
ಮಂಜೂರು ಮಾಡಿ ಎಂದು 30 ಲಕ್ಷಕ್ಕೂ ಹೆಚ್ಚು ಬಡಜನರು ಮೂರು-ನಾಲ್ಕು ದಶಕಗಳಿಂದ ಅರ್ಜಿಗಳನ್ನು ಹಾಕಿಕೊಂಡು ಸರ್ಕಾರದ ಕಚೇರಿಗಳಿಗೆ, ಜನಪ್ರತಿನಿಧಿಗಳ ಬಳಿಗೆ ಅಲೆಯುತ್ತಿದ್ದರೂ, ಎಡಬಿಡದೆ ಲೆಕ್ಕವಿಲ್ಲದಷ್ಟು ಹೋರಾಟಗಳನ್ನು ಮಾಡುತ್ತಿದ್ದರೂ, ಬಡವರಿಗೆ ಭೂಮಿ, ನಿವೇಶನ ಮಂಜೂರು ಮಾಡಬೇಕು ಎಂಬ ಕಾನೂನೇ ಇದ್ದರೂ ಅದರ ಕಡೆ ತಿರುಗಿಯೂ ನೋಡದೆ, ಬಡವರಿಂದ ಇದ್ದಬದ್ದ ಭೂಮಿಯನ್ನೂ ಮಾರಾಟ ಮಾಡಿಸಲು – ಅಂದರೆ ಅಕ್ಷರಶಃ ಕಸಿದುಕೊಳ್ಳಲು – ಸರ್ಕಾರ ಹೊರಟಿರುವುದಾದರೂ ಏಕೆ?
5, ಈಗ ನಡೆಯುತ್ತಿರುವ ಡಿಸೆಂಬರ್ ಅಧಿವೇಶನ 15ನೇ ತಾರೀಖಿಗೆ ಮುಕ್ತಾಯವಾಗಬೇಕಿತ್ತು. ಗ್ರಾಮ ಪಂಚಾಯಿತಿ ಚುನಾವಣೆಗಳ ಕಾರಣ ನೀಡಿ 10ನೇ ತಾರೀಖಿಗೇ ಮೊಟಕುಗೊಳಿಸಲಾಗಿದೆ; ಸಂತೋಷ. ಪೂರ್ಣಾವಧಿಯ ಅಧಿವೇಶನವೇ ನಡೆಯದಿರುವಾಗ ನಮ್ಮ ಬದುಕನ್ನು, ಭವಿಷ್ಯವನ್ನು ತೀರ್ಮಾನಿಸುವ ತಿದ್ದುಪಡಿ ಕಾಯ್ದೆಯನ್ನು ಸರ್ಕಾರ ಹಡಾಹುಡಿ ಮಾಡಿ ಅನುಮೋದನೆ ಮಾಡಿಕೊಳ್ಳುತ್ತದೆ ಎಂದರೆ ಅಂತಹ ವಿಪತ್ತು ಸರ್ಕಾರಕ್ಕೆ ಒದಗಿ ಬಂದಿರುವುದಾದರೂ ಏನು?
6. ಕೊನೆಯದಾಗಿ, ಒಂದು ಪಕ್ಷದಿಂದ ಗೆದ್ದ ಶಾಸಕರು ರಾತ್ರೋರಾತ್ರಿ ಮತ್ತೊಂದು ಪಕ್ಷಕ್ಕೆ ಜಿಗಿದು ಸರ್ಕಾರವನ್ನೇ ಬದಲಾಯಿಸುತ್ತಾರೆ. ನಾವು ಗಲ್ಲಿಸುವುದೇ ಯಾರನ್ನೋ, ನಮ್ಮನ್ನು ಆಳುವವರೇ ಮತ್ಯಾರೋ! ಇದು ನಮ್ಮ ಕಣ್ಣೆದುರೇ ನಡೆಯುತ್ತಿದೆ. ಈಗ ಅದೇ ವರಸೆಯಲ್ಲಿ, ಸೆಪ್ಟೆಂಬರಿನಲ್ಲಿ ಈ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಜೆಡಿ(ಎಸ್) ಪಕ್ಷ, ಡಿಸೆಂಬರ್ ತಿಂಗಳಿನಲ್ಲಿ ಅನುಮೋದನೆ ನೀಡುತ್ತದೆ. ಈ ಮೂರು ತಿಂಗಳಲ್ಲಿ ಅವರಿಗಾದ ಜ್ಞಾನೋದಯವಾದರೂ ಏನು ಎಂಬುದನ್ನು ತಾವು ಅವರಿಗೆ ಕೇಳಬೇಕಲ್ಲವೆ?
ಸಾರಾಂಶದಲ್ಲಿ ನಾವು ತಮ್ಮ ಗಮನಕ್ಕೆ ತರಲು ಬಯಸುತ್ತಿರುವುದಿಷ್ಟು: ಈ ತಿದ್ದುಪಡಿಗಳನ್ನು ನಾವ್ಯಾರೂ ಕೇಳಿಲ್ಲ, ಅಷ್ಟೇ ಅಲ್ಲ, ಅವುಗಳಿಗೆ ಇಡೀ ದೇಶದ ಜನರ ವಿರೋಧವಿದೆ, ಕೇಂದ್ರ ಸರ್ಕಾರವೇ ಮರು ಚಿಂತನೆಗೆ ಸಿದ್ದವಾಗಿದೆ. ಪೂರ್ಣ ಅಧಿವೇಶನವೂ ನಡೆದಿಲ್ಲ, ಜೆಡಿಎಸ್ ಪಕ್ಷದ ನಿಲುವಿನಲ್ಲೇ ಸ್ಥಿರತೆ ಇಲ್ಲ, ಅದನ್ನು ಜಾರಿ ಮಾಡದಿದ್ದರೆ ದೇಶ ಮುಳುಗಿ ಹೋಗುತ್ತೆ ಎಂಬ ಯಾವ ಆತಂಕವೂ ಎದುರಾಗಿಲ್ಲ. ಹಾಗಿದ್ದರೂ ಇದನ್ನು ಮಾಡಲಾಗುತ್ತಿದೆ ಎಂದರೆ ಇದರ ಹಿಂದೆ ತೆರೆಮರೆಯ ಹಿತಾಸಕ್ತಿಗಳು ಕೆಲಸ ಮಾಡುತ್ತಿರುವುದು ಸ್ಪಷ್ಟವಾಗಿದೆ. ಈ ತಿದ್ದುಪಡಿಗಳನ್ನು ಕಾರ್ಪೋರೇಟ್ ಕಂಪನಿಗಳಿಗಾಗಿ, ಕಪ್ಪು ಹಣದ ಒಡೆಯರುಗಳಿಗಾಗಿ ಮತ್ತು ಭೂ ಮಾಫಿಯಾ-ಭೂಗಳ್ಳರಿಗಾಗಿ ತರಲಾಗುತ್ತಿದೆ. ಇದಕ್ಕೆ ತಾವು ಅವಕಾಶ ಮಾಡಿಕೊಡಬಾರದು. ಈ ತಿದ್ದುಪಡಿ ಕಾಯ್ದೆಗೆ ಯಾವುದೇ ಕಾರಣಕ್ಕೂ ಸಹಿ ಹಾಕಬಾರದು.
ತಮ್ಮ ಮೇಲೆ ಕೊನೆಯ ವಿಶ್ವಾಸವಿಟ್ಟು ಹಳ್ಳಿಗಳಿಂದ ಎದ್ದುಬಿದ್ದು ಓಡೋಡಿ ಬಂದಿದ್ದೇವೆ. ನಮ್ಮನ್ನು ನಿರಾಶೆಗೊಳಿಸಬೇಡಿ ಎಂದು ಕೋರುತ್ತೇವೆ. ಸಂವಿಧಾನದ ಅನುಷ್ಠಾನದ ಪವಿತ್ರ ಸ್ಥಾನದಲ್ಲಿ ಕೂತಿರುವ ತಾವು ಆ ಸ್ಥಾನಕ್ಕೆ ಕಳಂಕ ಬರುವಂತೆ ನಡೆದುಕೊಳ್ಳಬೇಡಿ ಎಂದು ಮನವಿ ಮಾಡಿಕೊಳ್ಳುತ್ತೇವೆ. ವಾಸ್ತವ ಇಷ್ಟು ನಿಚ್ಚಳವಾಗಿರುವಾಗಲೂ ರಾಜಭವನ ಇದಕ್ಕೆ ಸಹಿ ಹಾಕಿದರೆ ಅದು ತನ್ನ ಪಾವಿತ್ರ್ಯವನ್ನು ಕಳೆದುಕೊಳ್ಳುತ್ತದೆ ಮತ್ತು ನಮ್ಮ ದೃಷ್ಟಿಯಲ್ಲಿ ತನ್ನ ಸ್ಥಾನ ಕಳೆದುಕೊಳ್ಳುತ್ತದೆ ಎಂಬ ಕೊನೆಯ ಮಾತನ್ನು ಹೇಳಿ ನಮ್ಮ ಈ ಹಕ್ಕೊತ್ತಾಯ ಪತ್ರವನ್ನು ಮುಗಿಸುತ್ತಿದ್ದೇವೆ.
ಇಡೀ ಕರ್ನಾಟಕದ ಸಮಸ್ತ ದುಡಿಯುವ ಜನರ ಮತ್ತು ಈ ದೇಶದ ಸಂವಿಧಾನದ ಆಶಯಗಳ ಭವಿಷ್ಯ ತಮ್ಮ ಮುಂದಿದೆ. ನಮ್ಮನ್ನು, ದೇಶವನ್ನು ನಿರಾಶೆಗೊಳಿಸಬೇಡಿ ಎಂದು ವಿನಮ್ರವಾಗಿ ವಿನಂತಿಸುತ್ತೇವೆ.
ನಮಸ್ಕಾರ,
ಬಡಗಲಪುರ ನಾಗೇಂದ್ರ, ಪ್ರಕಾಶ್ ಕಮ್ಮರಡಿ, ಕುರುಬೂರು ಶಾಂತಕುಮಾರ್, ಗುರುಪ್ರಸಾದ್ ಕೆರಗೋಡು, ವಿ.ಗಾಯತ್ರಿ, ಕಾಳಪ್ಪ