ಕೃಷಿ ಕಾಯ್ದೆಗಳಿಗೆ ಕೇಂದ್ರ ಸರ್ಕಾರ ತಂದಂತಹ ತಿದ್ದುಪಡಿಗಳನ್ನು ವಿರೋಧಿಸಿ ರೈತರು ಕರೆ ನೀಡಿದ್ದ ಬಂದ್ಗೆ ಬೆಂಗಳೂರು ನಗರದಲ್ಲಿ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಇಂದು ಬೆಳಿಗ್ಗಿನಿಂದಲೇ, ನಗರದ ಟೌನ್ಹಾಲ್, ಮೈಸೂರು ಬ್ಯಾಂಕ್ ವೃತ್ತ ಹಾಗೂ ಮೌರ್ಯ ಸರ್ಕಲ್ ಬಳಿ ರೈತ ಪರ ಸಂಘಟನೆಗಳು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದವು.
ಟೌನ್ಹಾಲ್ ಬಳಿ ನೂರಾರು ಜನ ಜೊತೆ ಸೇರಿ ರೈತ ವಿರೋಧಿ ಕಾನೂನುಗಳನ್ನು ವಾಪಾಸ್ ಪಡೆಯುವಂತೆ ಒತ್ತಾಯಿಸಿದರು. ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಸರ್ಕಾರದ ರೈತ ವಿರೋಧಿಸಿದರು. ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಕಾಂಗ್ರೆಸ್ ಮುಖಂಡ ಉಗ್ರಪ್ಪ, ಸಿನಿಮಾ ನಟ ಮುಖ್ಯಮಂತ್ರಿ ಚಂದ್ರು ಸೇರಿದಂತೆ ಇತರ ನಾಯಕರು ಟೌನ್ಹಾಲ್ ಬಳಿ ರೈತರಿಗೆ ಬೆಂಬಲ ನೀಡಿದ್ದಾರೆ.
ಐಕ್ಯ ಹೋರಾಟ ವೇದಿಕೆ, ಕಮ್ಯುನಿಸ್ಟ್ ಪಾರ್ಟಿ, ಆಮ್ಆದ್ಮಿ ಪಾರ್ಟಿ, ಜೆಡಿಯು ಸೇರಿದಂತೆ ಇತರ ಸಂಘಟನೆಗಳು ಮೈಸೂರು ಬ್ಯಾಂಕ್ ವೃತ್ತದ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಧ್ವನಿಯೊಂದಿಗೆ ಮಾತನಾಡಿದ ರೈತ ಮುಖಂಡರು ಭಾರತ ಬಂದ್ಗೆ ಉತ್ತಮ ಬೆಂಬಲ ದೊರಕಿದ್ದು, ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ಖಾಲಿ ಬಸ್ಗಳನ್ನು ಓಡಿಸುತ್ತಿದೆ. ಹೋಟೆಲ್ ಮಾಲಿಕರ ಮೇಲೆ ಬಲವಂತ ಹೇರಿ ಹೋಟೆಲ್ಗಳನ್ನು ತೆರೆಯಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ರೈತರ ಪ್ರತಿಭಟನೆಗೆ ಕೈಜೋಡಿಸಿದ ಕನ್ನಡ ಪರ ಸಂಘಟನೆಗಳ ಮುಖಂಡರಾದ ವಾಟಾಳ್ ನಾಗಾರಾಜ್ ಅವರು, ಎತ್ತಿನ ಬಂಡಿಯಲ್ಲಿ ಬರುವ ಮೂಲಕ ವಿನೂತನವಾಗಿ ವಿರೋಧ ವ್ಯಕ್ತ ಪಡಿಸಿದ್ದಾರೆ.
ಇನ್ನು ಮೈಸೂರು ಬ್ಯಾಂಕ್ ವೃತ್ತದಿಂದ ಫ್ರೀಡಂ ಪಾರ್ಕ್ವರೆಗೆ ಮೆರವಣಿಗೆ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ರೈತರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ರೈತರ ಪ್ರತಿಭಟನೆ ಬೆಂಗಳೂರು ನಗರದಲ್ಲಿ ಬಹುತೇಕ ಯಶಸ್ವಿಯಾಗಿದ್ದು, ಹಲವಾರು ಕಡೆಗಳಲ್ಲಿ ಅಂಗಡಿ ಮುಗ್ಗಟ್ಟುಗಳು ಮುಚ್ಚಿಕೊಂಡಿದ್ದವು. ದೆಹಲಿ ಗಡಿಯಲ್ಲಿ ಕಳೆದ ಹದಿಮೂರು ದಿನಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲವನ್ನು ಸೂಚಿಸಿದ್ದವು.