ಭಾರತದಲ್ಲಿರುವ 41 ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಪಂಚದಲ್ಲೇ ಅತೀ ಹೆಚ್ಚು ಕಲ್ಲಿದ್ದಲು ಉತ್ಪಾದಿಸುವ ನಾಲ್ಕನೇ ರಾಷ್ಟ್ರ ಭಾರತ, ಹಾಗಾದರೆ, ನಾವು ಯಾಕೆ ಅತೀ ಹೆಚ್ಚು ಕಲ್ಲಿದ್ದಲು ರಫ್ತು ಮಾಡುವ ರಾಷ್ಟ್ರವಾಗಬಾರದು? ಎಂದು ಹೇಳಿದ್ದಾರೆ.
“ಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸಲು ಈ ಹರಾಜು ಪ್ರಕ್ರಿಯೆ ಸಹಕಾರಿ. ಈವರೆಗೆ ಆಮದು ಮಾಡುತ್ತಿದ್ದ ಸರಕುಗಳ ಅತೀ ದೊಡ್ಡ ರಫ್ತುದಾರರಾಗುವ ಸಂದರ್ಭ ಅತೀ ಶೀಘ್ರದಲ್ಲಿ ಒದಗಿ ಬರಲಿದೆ,” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕರೋನಾ ಸೋಂಕು ಭಾರತವು ಯಾವ ರೀತಿ ಸ್ವಾವಲಂಬಿಯಾಗಬೇಕು (ಆತ್ಮನಿರ್ಭರ್) ಎಂಬುದನ್ನು ತಿಳಿಸಿಕೊಟ್ಟಿದೆ. ಈ ಹರಾಜು ಪ್ರಕ್ರಿಯೆಯಿಂದ ನಾವು ಕಲ್ಲಿದ್ದಲಿನ ಗಣಿಗಾರಿಕೆ ಮಾಡಬಹುದು, ಆದರೆ, ಮುಂದೆ ನಮಗೆ ಇದೇ ವಜ್ರವಾಗಿ ಪರಿಣಮಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
“2030ರವೇಳೆ ಸುಮಾರು 100 ಮಿಲಿಯನ್ ಟನ್‌ನಷ್ಟು ಕಲ್ಲಿದ್ದನ್ನು ಹೊರತೆಗೆಯುವ ಗುರಿಯಿದೆ. ಭಾರತ ಸರ್ಕಾರವು ಸುಮಾರು 20,000 ಕೋಟಿ ರೂ.ಗಳಷ್ಟು ಬಂಡವಾಳವನ್ನುಗುರುತಿಸಲಾದ ನಾಲ್ಕು ಯೋಜನೆಗಳಲ್ಲಿ ಹೂಡಲಿದೆ,” ಎಂದು ತಮ್ಮ ಭಾಷಣದಲ್ಲಿ ನರೇಂದ್ರ ಮೋದಿಯವರು ತಿಳಿಸಿದ್ದಾರೆ.
ಕಲ್ಲಿದ್ದಲು ಯೋಜನೆಗಳು ರಾಜ್ಯ ಸರ್ಕಾರಗಳಿಗೂ ಆದಾಯವನ್ನು ತಂದುಕೊಡಲಿದ್ದು, ಇದು ಎಲ್ಲರಿಗೂ ಸಮನಾದ ಲಾಭವನ್ನು ತಂದುಕೊಡುವ ಯೋಜನೆ. ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 20,000 ಕೋಟಿ ಆದಾಯ ಹರಿದು ಬರಲಿದೆ ಎಂದು ಪ್ರಧಾನಿ ಹೇಳಿದ್ದಾರೆ.