ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರತಿಭಟನಾ ನಿರತ ರೈತರೊಂದಿಗೆ ನಡೆಸಿದ ಮೂರನೇ ಸುತ್ತಿನ ಸಭೆಯೀಗ ವಿಫಲವಾಗಿದೆ. ಹೀಗಾಗಿ ಸರ್ಕಾರದೊಂದಿಗೆ ಇನ್ನೂ ಮಾತುಕತೆ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಭಾವಿಸಿದ ರೈತ ಸಂಘಟನೆಗಳು ಈಗ ಕೇಂದ್ರದ ಕೃಷಿ ಕಾನೂನುಗಳ ಜಾರಿ ವಿರೋಧಿಸಿ, ಇದೇ ಡಿಸೆಂಬರ್ 8ನೇ ತಾರೀಕು ಅಂದರೆ ನಾಳೆ ಮಂಗಳವಾರ ಒಂದು ದಿನದ ಭಾರತ್ ಬಂದ್ಗೆ ಕರೆ ನೀಡಿವೆ. ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ಗೆ ಕಾಂಗ್ರೆಸ್, ಎಎಪಿ, ಡಿಎಂಕೆ, ಎಸ್ಪಿ, ಸಿಪಿಎಂ, ಸಿಪಿಐ, ಟಿಆರ್ಎಸ್, ಟಿಎಂಸಿ, ಆರ್ಜೆಡಿ, ಎಸ್ಎಡಿ ಸೇರಿದಂತೆ ಹಲವು ಪಕ್ಷಗಳು ಬೆಂಬಲ ಘೋಷಿಸಿವೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ಖಂಡಿಸಿ ರೈತ ಸಂಘಟನೆಗಳು ಭಾರತ್ ಬಂದ್ಗೆ ಕರೆ ನೀಡಿರುವುದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಪತ್ರಿಕಾಗೋಷ್ಠಿ ಕರೆದು ಐತಿಹಾಸಿಕ ನಿರ್ಧಾರ ಕೈಗೊಂಡಿವೆ.
ಕೇಂದ್ರ ಸರ್ಕಾರ ರೈತ ಕಾಯ್ದೆಗಳನ್ನು ಹಿಂಪಡೆಯಬೇಕು. ರೈತರ ಬಂದ್ಗೆ ನಾವು ಸಂಪೂರ್ಣ ಬೆಂಬಲ ನೀಡಲಿದ್ದೇವೆ. ರೈತರ ಪರವಾಗ ನಾವು ಧರಣಿ ಸತ್ಯಾಗ್ರಹ ನಡೆಸುತ್ತೇವೆ. ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ. ಎಲ್ಲಾ ರೀತಿಯಲ್ಲೂ ರೈತರಿಗೆ ಸಹಾಯ ಮಾಡಲು ಮುಂದಾಗುತ್ತೇವೆ ಎಂದು ಕಾಂಗ್ರೆಸ್, ಪ್ರಾದೇಶಿಕ ಪಕ್ಷಗಳು ಸೇರಿದಂತೆ ಲೆಫ್ಟ್ ಪಾರ್ಟಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿವೆ.
Also Read: ಬಗೆಹರಿಯದ ರೈತರ ಸಮಸ್ಯೆ; ಇಂದು ಪ್ರಶಸ್ತಿ ವಾಪಸ್, ನಾಳೆ ಭಾರತ್ ಬಂದ್, ನಾಳಿದ್ದು ಮತ್ತೊಂದು ಸಭೆ
ಇದುವರೆಗೂ ನಡೆದ ಮೂರು ಸಭೆಗಳಲ್ಲೂ ನಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ ಎಂಬ ಆಶಾವಾದ ಹೊಂದಿದ್ದೆವು. ಆದರೀಗ ಕೇಂದ್ರ ಸರ್ಕಾರ ರೈತರೊಂದಿಗೆ ನಡೆದುಕೊಂಡ ರೀತಿ ನೋಡಿದ ಮೇಲೆ ನಮಗಿದ್ದ ನಂಬಿಕೆ ಹೊರಟು ಹೋಗಿದೆ. ಹೀಗಾಗಿ ಕೇಂದ್ರದ ಮೇಲೆ ಮತ್ತಷ್ಟು ಒತ್ತಡ ಹೇರುವ ಉದ್ದೇಶದಿಂದ ಭಾರತ್ ಬಂದ್ಗೆ ಕರೆ ನೀಡಿದ್ದೇವೆ. ದೆಹಲಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡುತ್ತೇವೆ. ದೇಶದ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ವಾಹನಗಳಿಂದ ಹಣ ವಸೂಲಿ ಮಾಡುವುದನ್ನು ತಡೆದು ಪ್ರತಿಭಟಿಸುತ್ತೇವೆ ಎಂದು ದೆಹಲಿಯ ಹೋರಾಟದಲ್ಲಿ ಭಾಗಿಯಾಗಿರುವ ಕರ್ನಾಟಕ ರೈತ ಹೋರಾಟಗಾರ ಶಿವಕುಮಾರ್ ಗುಳಘಟ್ಟ ಎಂಬುವರು ಪ್ರತಿಧ್ವನಿಗೆ ಪ್ರತಿಕ್ರಿಯಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನಿರಂತರ ಮಾತುಕತೆ ನಡೆದರೂ ಕೇಂದ್ರ ಮತ್ತು ರೈತ ಸಂಘಟನೆಗಳ ನಡುವೆ ಯಾವುದೇ ಒಡಂಬಡಿಕೆ ಮೂಡಿ ಬಂದಿಲ್ಲ. ಆದ್ದರಿಂದಲೇ ರೈತ ಸಂಘಟನೆಗಳು ಭಾರತ್ ಬಂದ್ಗೆ ಕರೆ ನೀಡಿವೆ. ಇನ್ನೊಂದೆಡೆ ರೈತರು ಭಾರತ ಬಂದ್ ಕರೆಯನ್ನು ಹಿಂತೆಗೆದುಕೊಳ್ಳುವಂತೆ ಸರ್ಕಾರ ಮನವಿ ಮಾಡಿದೆ. ಆದರೆ ಸರ್ಕಾರದ ಮಾತು ಕೇಳದ ಆಕ್ರೋಶಿತ ರೈತರು, ಕೇಂದ್ರ ಆದಷ್ಟು ಬೇಗ ನಮ್ಮ ಸಮಸ್ಯೆಗಳಿಗೆ ಪರಿಹಾರ ನೀಡಲಿ ಎಂದು ಒತ್ತಾಯಿಸಿದ್ದಾರೆ.
Also Read: ಡಿಸೆಂಬರ್ 8ರಂದು ನಡೆಯುವ ಭಾರತ್ ಬಂದ್ ಗೆ ಕರ್ನಾಟಕದ ರೈತರ ಸಂಪೂರ್ಣ ಬೆಂಬಲ
ಕೇವಲ ರಾಜಕೀಯ ಪಕ್ಷಗಳು ಮಾತ್ರವಲ್ಲದೇ ಪಂಜಾಬ್ನ ಕ್ರೀಡಾ ಕ್ಷೇತ್ರದ ಕೆಲವು ಪ್ರಖ್ಯಾತರು ಮತ್ತು ಸಿನಮಾ ನಟರು ತಮ್ಮ ಸಾಧಕ ಪ್ರಶಸ್ತಿಗಳನ್ನು ಹಿಂತಿರುಗಿಸುವ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರ ರೈತ ಸಮಸ್ಯೆಗಳನ್ನು ಇತ್ಯರ್ಥಪಡಿಸಲೇಬೇಕು ಎಂದು ಆಗ್ರಹಿಸಿದ್ದಾರೆ.
ಎಂಎಸ್ಪಿ ಹಾಗೂ ಎಪಿಎಂಸಿ ವ್ಯವಸ್ಥೆಗಳನ್ನು ದುರ್ಬಲಗೊಳಿಸುವ ನಿರ್ಧಾರ ಸರ್ಕಾರ ಬದಲಿಸಬೇಕು. ಹಾಗೆಯೇ ಹೊಸ ಕೃಷಿ ಕಾನೂನನ್ನು ರದ್ದುಗೊಳಿಸಬೇಕು ಎನ್ನುವುದು ರೈತ ಸಂಘಟನೆಗಳ ಆಗ್ರಹ. ಒಟ್ಟಿನಲ್ಲಿ ಕೃಷಿ ಕಾನೂನುಗಳ ವಿರೋಧಿಸಿ ರೈತರು ನೀಡಿರುವ ಭಾರತ್ ಬಂದ್ ಯಶಸ್ವಿಯಾಗಿ ಕೇಂದ್ರ ಸರ್ಕಾರ ಆಶಾದಾಯಕ ನಿರ್ಣಯ ಘೋಷಣೆ ಮಾಡಲಿದೆಯಾ? ಎಂದು ಕಾದು ನೋಡಬೇಕಿದೆ.