ಭಾರತದಲ್ಲಿ ಕರೋನಾ ಸೋಂಕು ಸ್ತ್ರೀಯರಿಗಿಂತ ಪುರುಷರ ಬಲಿಯನ್ನು ಗಣನೀಯವಾಗಿ ಪಡೆದುಕೊಂಡಿದೆ. ಕೋವಿಡ್ ನಿಂದಾಗಿ ಮೃತಪಟ್ಟ ಸರಿಸುಮಾರು 1.47 ಲಕ್ಷ ಜನರಲ್ಲಿ ಒಟ್ಟು 70 ಶೇಕಡಾ ಮಂದಿ ಪುರುಷರೇ ಎಂಬ ಅಂಶವನ್ನು ಕೇಂದ್ರ ಆರೋಗ್ಯ ಸಚಿವಾಲಯ ನೀಡಿದೆ.
ಯುಕೆ ರೂಪಾಂತರಿ ಕರೋನಾ ಹಿನ್ನೆಲೆಯಲ್ಲಿ ಆರೋಗ್ಯ ಸಚಿವಾಲಯ ಮಂಗಳವಾರ ಹಂಚಿಕೊಂಡಿರುವ ದತ್ತಾಂಶಗಳಲ್ಲಿ ಈ ಅಂಶ ಬಹಿರಂಗಗೊಂಡಿದೆ.
ಒಟ್ಟು ಪ್ರಕರಣಗಳ ವಯಸ್ಸು ಹಾಗೂ ಲಿಂಗವಾರು ಮಾಹಿತಿ ಹಂಚಿಕೊಂಡ ಕೇಂದ್ರ ಆರೋಗ್ಯ ಕಾರ್ಯದರ್ಶು ರಾಜೇಶ್ ಭುವನ್ ಕೋವಿಡ್ ನಿಂದಾಗಿ ಮೃತಪಟ್ಟವರಲ್ಲಿ 70 ಶೇಕಡಾ ಮಂದಿ ಪುರುಷರು, ಹಾಗೂ 45% ಮಂದಿ 60 ವರ್ಷ ದಾಟದವರು ಎಂದು ತಿಳಿಸಿದ್ದಾರೆ.
ಒಟ್ಟು ಪ್ರಕರಣಗಳಲ್ಲಿ 63% ಪ್ರಕರಣಗಳು ಪುರುಷರಲ್ಲಿ ಕಂಡುಬಂದಿವೆ. 52% ಪ್ರಕರಣಗಳು 18-44 ವರ್ಷದವರಲ್ಲಿ ಕಂಡುಬಂದಿದ್ದು, ಈ ವರ್ಗದಲ್ಲಿ 11% ಮರಣ ಪ್ರಮಾಣ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ದೈನಂದಿನ ಸಾವುಗಳು 300 ರ ಆಸುಪಾಸು ಬಂದು ನಿಂತಿದೆ. ವಿಶ್ವದ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಸಾವಿನ ಪ್ರಮಾಣ ಕಡಿಮೆಯಾಗಿದೆ. ಸದ್ಯ 2.7 ಲಕ್ಷ ಸಕ್ರಿಯ ಪ್ರಕರಣಗಳಿವೆ.
ಹೊಸ ರೂಪಾಂತರಿ ಕರೋನಾ ಸೋಂಕು ಹಿಂದಿನ ಸೋಂಕಿಗಿಂತ 70% ಹೆಚ್ಚು ಸಾಂಕ್ರಾಮಿಕವೆಂದು ಸಚಿವಾಲಯ ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. ಭಾರತಕ್ಕೆ ಆಗಮಿಸಿದ ಕನಿಷ್ಟ ಆರು ಮಂದಿಯಲ್ಲಿ ರೂಪಾಂತರಿ ಕರೋನಾ ಸೋಂಕು ಕಾಣಿಸಿಕೊಂಡಿರುವುದು ವರದಿಯಾಗಿವೆ.
ರೂಪಾಂತರಿ ಸೋಂಕು ಸಾಂಕ್ರಾಮಿಕವಾಗಿ ಹಬ್ಬುವ ಆರಂಭದಲ್ಲೇ ಗುರುತಿಸುವುದರಿಂದ ಮಟ್ಟ ಹಾಕುವುದು ಸುಲಭ, ಹಾಗಾಗಿ ವಿದೇಶದಿಂದ ಮರಳುವವರಿಗೆ ವಿಮಾನ ನಿಲ್ದಾನಗಳಲ್ಲೇ ಕಡ್ಡಾಯ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ ಎಂದು ಸಚಿವಾಲಯ ಹೇಳಿದೆ.
ಕಳೆದ ಆರು ತಿಂಗಳಿನಲ್ಲಿಯೇ ಅತಿ ಕಡಿಮೆ ಸೋಂಕು ಪತ್ತೆಯಾಗಲು ಆರಂಭಿಸಿರುವ ಬೆನ್ನಲ್ಲೇ, ರೂಪಾಂತರಿ ಕರೋನಾ ಭಾರತದಲ್ಲಿ ಈಗಾಗಲೇ ಬಂದಿರುವುದು ಎರಡನೇ ಅಲೆಯ ಆರಂಭವೇ ಎನ್ನುವ ಭಯವನ್ನು ಹುಟ್ಟು ಹಾಕಿವೆ. ಮುಖ್ಯವಾಗಿ ಚಳಿಯ ಪ್ರತಿಕೂಲ ವಾತಾವರಣದ ಈ ಸಮಯದಲ್ಲಿ ರೂಪಾಂತರಿ ಕರೋನಾ ಹೇಗೆ ವರ್ತಿಸಬಹುದು ಎನ್ನುವ ಯಾವುದೇ ಅಂದಾಜು ಇಲ್ಲದ್ದರಿಂದ ಮತ್ತೆ ಲಾಕ್‌ಡೌನ್ ಮೊರೆ ಹೋಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಇದಕ್ಕೆ ಪೂರಕವೆನಿಸುವಂತೆ, ನೀತಿ ಆಯೋಗ ಸದಸ್ಯ ಡಾ. ವಿಕೆ ಪೌಲ್ ಅವರು ರಾತ್ರಿ ವೇಳೆಯ ಕರ್ಫ್ಯೂಗೆ ಸಲಹೆ ನೀಡಿದ್ದಾರೆ.