ಕಳೆದ ಕೆಲವು ತಿಂಗಳುಗಳಿಂದ ಪ್ರಧಾನಿ ಮೋದಿಯವರ ಸರ್ಕಾರ ದೇಶದಲ್ಲಿ 85 ಸಾವಿರ ಜನರನ್ನು ಬಲಿತೆಗೆದುಕೊಂಡಿರುವ ಕರೋನಾ ವಿರುದ್ಧದ ಸಮರಕ್ಕಿಂತಲೂ, ಹೆಚ್ಚು ತಲೆ ಕೆಡಿಸಿಕೊಂಡಿರುವುದು ಗಡಿ ತಂಟೆಕೋರ ಚೀನಾದ ವಿರುದ್ಧದ ಆನ್ ಲೈನ್ ಸಮರದ ವಿಷಯದಲ್ಲಿಯೇ. ಸುಮಾರು ಮೂರು ತಿಂಗಳ ಅವಧಿಯಲ್ಲಿ ಮೂರು ಕಂತುಗಳಲ್ಲಿ ಬಿಜೆಪಿ ಸರ್ಕಾರ ನಡೆಸಿದ ಡಿಜಿಟಲ್ ಸರ್ಜಿಕಲ್ ದಾಳಿಯಲ್ಲಿ ಚೀನಾದ ನೂರಾರು ಆ್ಯಪ್ ಮತ್ತು ವೆಬ್ ಸೈಟುಗಳ ದೇಶದಿಂದ ಕಾಲುಕಿತ್ತಿವೆ.
ಇದು ದೇಶದ ಇತಿಹಾಸದಲ್ಲೇ ಹಿಂದೆಂದೂ ಕಂಡಿರದ ಪ್ರಮಾಣದಲ್ಲಿ ಚೀನಾ ವಿರುದ್ಧದ ದಿಗ್ವಿಜಯ ಎಂದೇ ಬಣ್ಣಿಸಲಾಗಿದ್ದು, ಅದಕ್ಕಾಗಿ ಪ್ರಧಾನಿ ಮೋದಿ ಮತ್ತು ಅವರ ಸರ್ಕಾರವನ್ನು ಬಹುತೇಕ ಮುಖ್ಯವಾಹಿನಿ ಮಾಧ್ಯಮಗಳು ಹಾಡಿಹೊಗಳಿವೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಜೂ.15ರಂದು ಚೀನಾ ಯೋಧರೊಂದಿಗೆ ಗಡಿ ಸಂಘರ್ಷದ ವೇಳೆ 20 ಮಂದಿ ಭಾರತೀಯ ಯೋಧರ ಹತ್ಯೆಯಾಗಿದ್ದರು. ಅದಾಗಿ ಕೇವಲ ಹದಿಮೂರು ದಿನದಲ್ಲೇ ಚೀನಾದ ವಿರುದ್ಧ ಕಿಡಿಕಾರಿದ್ದ ಪ್ರಧಾನಿ ಮೋದಿಯವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ, ಚೀನಾ ಸರಕು ಬಹಿಷ್ಕರಿಸಲು ದೇಶದ ಜನತೆಗೆ ಬಹಿರಂಗ ಕರೆ ನೀಡಿದ್ದರು. “ಲಡಾಖ್ ನಲ್ಲಿ ತನ್ನ ಗಡಿ ಮೇಲೆ ಕಣ್ಣಿಟ್ಟಿದ್ದವರಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. ಹೇಗೆ ಪರಸ್ಪರ ಸ್ನೇಹ, ವಿಶ್ವಾಸದಿಂದ ಇರಬೇಕು ಎಂಬುದನ್ನು ಬಲ್ಲ ಭಾರತ, ಸಂದರ್ಭ ಬಂದರೆ ಎಂಥ ಪ್ರತ್ಯುತ್ತರ ನೀಡಬೇಕು ಎಂಬುದನ್ನು ಬಲ್ಲದು. ಚೀನಾದ ಸರಕುಗಳನ್ನು ಬಹಿಷ್ಕರಿಸಲು ಭಾರತೀಯರು ಶಪಥ ಮಾಡಿದ್ದಾರೆ. ಇದು ಆ ದೇಶಕ್ಕೆ ಭಾರತೀಯರು ನೀಡುತ್ತಿರುವ ತಿರುಗೇಟು. ಇದು ಆತ್ಮನಿರ್ಭರ ಭಾರತದ ಪ್ರತ್ಯುತ್ತರ” ಎಂದು ಹೇಳಿದ್ದರು. ತಮ್ಮ ಪ್ರಸಿದ್ಧ ‘ವೋಕಲ್ ಫಾರ್ ಲೋಕಲ್’ ಘೋಷಣೆಯನ್ನೂ ಪುನರುಚ್ಛರಿಸಿದ್ದ ಮೋದಿ, ಅದಾಗಲೇ ತಮ್ಮ ಪಕ್ಷದವರು ಮತ್ತು ಸಂಘಪರಿವಾರದ ಮಂದಿ ಚೀನಾ ವಸ್ತು ಬಹಿಷ್ಕಾರಕ್ಕೆ ನೀಡಿದ್ದ ಕರೆಯನ್ನು ಕೊಂಡಾಡಿದ್ದರು.
ಆ ಮುನ್ನ, ಕರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆರ್ಥಿಕ ದುಃಸ್ಥಿತಿಯನ್ನೇ ಬಂಡವಾಳ ಮಾಡಿಕೊಂಡು ಚೀನಾ ದೇಶದ ಕಂಪನಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಆರ್ಥಿಕತೆಯ ಮೇಲೆ ಹಿಡಿತ ಸಾಧಿಸಬಹುದು ಎಂಬ ಯುರೋಪ್ ಮತ್ತು ಅಮೆರಿಕದಂತೆಯೇ, ಭಾರತ ಕೂಡ ಚೀನಾ ಹೂಡಿಕೆಗೆ ನಿರ್ಬಂಧ ಹೇರಿತ್ತು. ಏ.17ರಂದು ತನ್ನ ವಿದೇಶ ನೇರ ಬಂಡವಾಳ ಹೂಡಿಕೆ ಕಾನೂನಿಗೆ ತಿದ್ದುಪಡಿ ತಂದು, ಭಾರತದೊಂದಿಗೆ ಗಡಿ ಹಂಚಿಕೊಳ್ಳುವ ಯಾವುದೇ ರಾಷ್ಟ್ರದ ಬಂಡವಾಳ ದೇಶದೊಳಗೆ ಬರಲು ಕೇಂದ್ರ ಸರ್ಕಾರದ ಪೂರ್ವಾನುಮತಿ ಕಡ್ಡಾಯ ಎಂದು ಹೇಳಲಾಗಿತ್ತು.
ಹಾಗಾಗಿ ಒಂದು ಕಡೆ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಬ್ರೇಕ್, ಮತ್ತೊಂದು ಕಡೆ ಚೀನಾ ವಸ್ತುಗಳ ಬಹಿಷ್ಕಾರದ ಮೂಲಕ ದೇಶ ಆರ್ಥಿಕವಾಗಿ ಚೀನಾಕ್ಕೆ ಭರ್ಜರಿ ಪೆಟ್ಟುಕೊಟ್ಟಿದೆ ಎಂದು ಬೀಗುತ್ತಿರುವ ಹೊತ್ತಿಗೇ, ಜುಲೈ 29ರಂದು ಟಿಕ್ ಟಾಕ್ ಸೇರಿದಂತೆ ಬರೋಬ್ಬರಿ 59 ಮೊಬೈಲ್ ಆ್ಯಪ್ ನಿಷೇಧಿಸುವ ಮೂಲಕ ಮೋದಿಯವರ ಸರ್ಕಾರ ಚೀನಾದ ವಿರುದ್ಧ ಡಿಜಿಟಲ್ ಸರ್ಜಿಕಲ್ ಸ್ಟ್ರೈಕ್ ಮಾಡಿತ್ತು. ಆ ಬಳಿಕ ಮತ್ತೆ ಸೆ.2ರಂದು ಪಬ್ಜೀ ಸೇರಿದಂತೆ ಸುಮಾರು 118 ಆ್ಯಪ್ ಗಳನ್ನು ನಿಷೇಧಿಸಲಾಗಿತ್ತು. ಮೋದಿಯವರ ಈ ಹೊಡೆತವನ್ನಂತೂ ಚೀನಾದ ಪಾಲಿಗೆ ಮರ್ಮಾಘಾತದ ಪೆಟ್ಟು ಎಂದೇ ಸಾಮಾಜಿಕ ಜಾಲತಾಣ ಮತ್ತು ಬಹುತೇಕ ಮಾಧ್ಯಮಗಳು ಬಣ್ಣಿಸಿದ್ದವು. ಟಿವಿ ವಾಹಿನಿಗಳಂತೂ ದಿನಗಟ್ಟಲೆ ಈ ಡಿಜಿಟಲ್ ಸರ್ಜಿಕಲ್ ದಾಳಿಯ ಗುರಿ, ಪರಿಣಾಮ ಮತ್ತು ಚೀನಾದ ಇಡೀ ಅರ್ಥವ್ಯವಸ್ಥೆಗೆ ಹೇಗೆ ಇದು ಸುಧಾರಿಸಿಕೊಳ್ಳಲಾಗದ ಪೆಟ್ಟು ನೀಡಲಿದೆ ಎಂದು ಬಗೆಬಗೆಯಲ್ಲಿ ಬಣ್ಣಿಸಿದ್ದವು.
ಅಲ್ಲಿಗೆ ಚೀನಾದ ವಿರುದ್ಧ ಭಾರತ ಸಂಪೂರ್ಣ ದಿಗ್ವಿಜಯ ಸಾಧಿಸಿಯೇ ಬಿಟ್ಟಿತು. ಜಾಗತಿಕ ಮಟ್ಟದಲ್ಲಿ ಕೂಡ ಭಾರತದ ಈ ತಂತ್ರಗಾರಿಕೆಯಿಂದಾಗಿ ಚೀನಾಕ್ಕೆ ದೊಡ್ಡ ಹಿನ್ನೆಡೆಯಾಗಿದೆ ಎಂದೇ ಬಿಜೆಪಿ ಮತ್ತು ಸಂಘಪರಿವಾರ ದೇಶದ ಮನೆಮನೆಗೆ ಈ ಸಂಭ್ರಮದ ಸುದ್ದಿ ದಾಟಿಸಿದ್ದವು. ಸಂಭ್ರಮಿಸಿದ್ದವು.
ಆದರೆ,..ಈಗ ಬುಧವಾರ ತಾನೆ ಸಂಸತ್ತಿನಲ್ಲಿ ಅದೇ ಮೋದಿವರ ಸರ್ಕಾರ ಬಹಿರಂಗಪಡಿಸಿರುವ ಗುಟ್ಟೊಂದು ಹಾಗೆ ಸಂಭ್ರಮಿಸಿದವರು ಎದೆಯೊಡೆದುಕೊಳ್ಳುವಂತೆ ಮಾಡಿದೆ!
ಹೌದು, ಅತ್ತ ಗಡಿಯಲ್ಲಿ ಏಪ್ರಿಲ್ ನಿಂದಲೇ ಚೀನಾ ಗಡಿ ಉಲ್ಲಂಘನೆ, ಸೇನಾ ಜಮಾವಣೆ ನಡೆಸುತ್ತಿದ್ದರೆ, ಮೇ 8ರಂದು ಭಾರತ ಕರೋನಾ ನಿರ್ವಹಣೆಗಾಗಿ ಕಾಸಿಗಾಗಿ ಒಪ್ಪಂದಕ್ಕೆ ಸಹಿ ಹಾಕಿತ್ತು! ಇದು ಕರೋನಾ ಲಾಕ್ ಡೌನ್ ಅವಧಿಯಲ್ಲಿ ಚೀನಾದಿಂದ ಭಾರತ ಪಡೆದ ಮೊದಲ ಸಾಲದ ವಿಷಯ. ಇನ್ನೂ ಅಚ್ಚರಿಯ ಸಂಗತಿ ಎಂದರೆ, ಲಡಾಖ್ ಗಡಿಯಲ್ಲಿ ಚೀನಾ ತಂಟೆ ತೆಗೆದು, ನಮ್ಮ ಗಡಿಯೊಳಗೆ ನುಗ್ಗಿ, ನಮ್ಮ 20 ಮಂದಿ ಯೋಧರು ಆ ಸಂಘರ್ಷದಲ್ಲಿ ಸಾವು ಕಂಡಿದ್ದರೆ, ಆ ಬಗ್ಗೆ ಅಧಿಕೃತ ಹೇಳಿಕೆ ದಾಖಲಿಸುವ ಮುಂಚೆ ಭಾರತ ಚೀನಾದೊಂದಿಗೆ ಮತ್ತೊಂದು ಸಾಲಕ್ಕಾಗಿ ಎರಡನೇ ಒಪ್ಪಂದಕ್ಕೆ ಸಹು ಹಾಕಿದೆ. ಹೌದು ಗಡಿಯಲ್ಲಿ ಜೂ.15ರಂದು 20 ಮಂದಿ ಯೋಧರ ಹತರಾದರೆ, ಭಾರತ ಸರ್ಕಾರ ಜೂನ್ 19ರಂದು ಎರಡನೇ ಸಾಲಕ್ಕೆ ಸಹಿ ಹಾಕಿದೆ!
ಈ ವಿಷಯವನ್ನು ಬುಧವಾರ ಸಂಸತ್ತಿನಲ್ಲಿ ಸ್ವತಃ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರೇ ಬಹಿರಂಗಪಡಿಸಿದ್ದಾರೆ. ಚೀನಾದ ಏಷ್ಯನ್ ಇನ್ ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕಿನಿಂದ ಪಡೆದ ಈ ಸಾಲದ ಜೊತೆಗೆ, ಕೋವಿಡ್ ನಿರ್ವಹಣೆಗಾಗಿ ಭಾರತ, ವಿಶ್ವಬ್ಯಾಂಕಿನಿಂದಲೂ ಒಟ್ಟು 18,386 ಕೋಟಿ ರೂ. ಮೊತ್ತದ ಮೂರು ಸಾಲಗಳನ್ನು ಪಡೆದಿದೆ ಎಂದು ಸಚಿವರು ವಿವರಿಸಿದ್ದಾರೆ.
ಅಂದರೆ; ಕ್ರಮವಾಗಿ ಮೇ 8 ಮತ್ತು ಜೂನ್ 19ರಂದು ಎರಡು ಸಾಲಗಳಿಗೆ ಸಹಿ ಮಾಡಿ, ಚೀನಾದಿಂದ ಒಟ್ಟು 9000 ಕೋಟಿ ರೂ. ಸಾಲ(3,676 ಕೋಟಿ ಮೊದಲ ಸಾಲ ಮತ್ತು 5,514 ಕೋಟಿ ರೂ. ಎರಡನೇ ಸಾಲ) ಪಡೆದ ಬಳಿಕ, ಜೂನ್ 28ರಂದು ಪ್ರಧಾನಿ ಮೋದಿಯವರು ಚೀನಾದ ವಿರುದ್ಧ ಗುಡುಗಿದ್ದರು! ಚೀನಾದ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ಭಾರತೀಯರು ಚೀನಾಕ್ಕೆ ಬೆಚ್ಚಿಬೀಳಿಸುವ ತಿರುಗೇಟು ನೀಡಿದ್ದಾರೆ ಎಂದು ಹೇಳಿದ್ದರು!
“ಹೇಳುವುದು ಒಂದು ಮಾಡುವುದು ಮತ್ತೊಂದು ನಂಬುವುದು ಹೇಗೋ ಕಾಣೆ…” ಎಂಬ ಸಾಲುಗಳನ್ನು ನೆನಪಿಸುವ ಮೋದಿ ಮತ್ತು ಅವರ ಸರ್ಕಾರದ ಸಾಂಪ್ರದಾಯಿಕ ವರಸೆಗೆ ಈ ಚೀನಾ ಸಾಲ ಪ್ರಕರಣ ಮತ್ತೊಂದು ಸೇರ್ಪಡೆಯಷ್ಟೇ. ಈ ಮೊದಲು ಪಾಕಿಸ್ತಾನದ ವಿಷಯದಲ್ಲಿ ಕೂಡ ಹಿಂದಿನ ಸರ್ಕಾರಗಳು ಮೃದುಧೋರಣೆ ಹೊಂದಿವೆ, ಶತ್ರುರಾಷ್ಟ್ರದೊಂದಿಗೆ ಕೈಕುಲುಕುತ್ತಿವೆ ಎಂದು ಹೇಳುತ್ತಲೆ ಚುನಾವಣೆಗಳನ್ನು ನಡೆಸಿದ್ದ ಮೋದಿಯವರು, ಸ್ವತಃ ತಾವೇ ಪ್ರಧಾನಿಯಾದ ಬಳಿಕ ಸದ್ದಿಲ್ಲದೆ ಪಾಕಿಸ್ತಾನಕ್ಕೆ ಹೋಗಿ(ಅದೂ ಅಧಿಕೃತ ಆಹ್ವಾನ ಕೂಡ ಇಲ್ಲದೆ) ಅಲ್ಲಿನ ಪ್ರಧಾನಿ ಕೈಕುಲುಕಿ ಭೋಜನ ಸವಿದು ಬಂದಿದ್ದರು. ಇನ್ನು ಭ್ರಷ್ಟಾಚಾರ, ಸ್ವಜನಪಕ್ಷಪಾತ, ಕುಟುಂಬ ರಾಜಕಾರಣ, ಪರಿಸರ ಕಾಯ್ದೆಗಳು, ಕಪ್ಪುಹಣ, ಬ್ಯಾಂಕಿಂಗ್ ವಂಚನೆ, ಖಾಸಗೀಕರಣ, ಜಿಡಿಪಿ ಬೆಳವಣಿಗೆ, ಆರ್ಥಿಕತೆ, ನಿರುದ್ಯೋಗ, .. ಸೇರಿದಂತೆ ಪ್ರತಿ ವಿಷಯದಲ್ಲಿಯೂ ಪ್ರಧಾನಿಯಾಗುವ ಮುಂಚೆ ಮತ್ತು ಆ ಬಳಿಕದ ಮೋದಿ ಅವರ ನಡೆ ಮತ್ತು ನುಡಿಗಳ ನಡುವೆ ತಾಳಮೇಳವೇ ಇಲ್ಲದ್ದನ್ನು ದೇಶ ಕಂಡಿದೆ.
ದೇಶವನ್ನು ಬಲಿಷ್ಟ ರಾಷ್ಟ್ರವನ್ನಾಗಿ ಕಟ್ಟುತ್ತೇನೆ ಎನ್ನುತ್ತಲೇ ನೋಟು ರದ್ದತಿ, ಜಿಎಸ್ ಟಿಯಂತಹ ಅಪ್ರಾಯೋಗಿಕ ನೀತಿಗಳ ಮೂಲಕ ದೇಶದ ಅರ್ಥವ್ಯವಸ್ಥೆಯನ್ನು ಬುಡಮೇಲು ಮಾಡಲಾಗಿದೆ. ಇದೀಗ ಚೀನಾದ ವಿಷಯದಲ್ಲಿ ಕೂಡ ಮೋದಿ ಮತ್ತು ಅವರ ಸರ್ಕಾರದ ಡಬ್ಬಲ್ ಸ್ಟ್ಯಾಂಡರ್ಡ್ ಬೀದಿಗೆ ಬಿದ್ದಿದೆ. ಅದೂ ಅವರದೇ ಸಂಪುಟದ ಸದಸ್ಯರೇ ಅಧಿಕೃತವಾಗಿ ಸಂಸತ್ತಿನ ಒಳಗೇ ಆ ಗುಟ್ಟನ್ನು ರಟ್ಟುಮಾಡಿದ್ದಾರೆ!