ಅತ್ತ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು ಇಳಿಜಾರಿನಲ್ಲಿ ಸಾಗಿದ್ದರೆ, ಇತ್ತ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರವು ಆಕಾಶದತ್ತ ಜಿಗಿಯುತ್ತಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸತತ ಐದನೇ ದಿನವೂ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ಏರಿಕೆ ಮಾಡಿದೆ.
ಜೂನ್ 7ರಿಂದ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಆರಂಭಿಸಿರುವ ನರೇಂದ್ರ ಮೋದಿ ಸರ್ಕಾರವು, ಐದೂ ದಿನಗಳ ಕಾಲವೂ ಸರಾಸರಿ 57 ಪೈಸೆಗಳಷ್ಟು ಏರಿಕೆ ಮಾಡಿದೆ. ಐದುದಿನಗಳ ಒಟ್ಟು ಏರಿಕೆ 2.84 ರುಪಾಯಿ. ನಿಖರ ಲೆಕ್ಕದಲ್ಲಿ ಹೇಳುವುದಾದರೆ, ಪೆಟ್ರೋಲ್ ದರವು ಜೂನ್ 7 ರಂದು 63 ಪೈ, 8, 9 ರಂದು ತಲಾ 61 ಪೈ, 10 ರಂದು 37 ಪೈ ಮತ್ತು ಜೂನ್ 11 ರಂದು 62 ಪೈ ಏರಿಕೆಯಾಗಿದೆ. ಡಿಸೇಲ್ ದರವು ಐದು ದಿನಗಳಲ್ಲಿ 2.70 ರುಪಾಯಿ ಏರಿಕೆಯಾಗಿದೆ. ಸರಾಸರಿ 54 ಪೈಸೆಗಳಷ್ಟು ಏರಿಕೆ ಮಾಡಲಾಗಿದೆ.
ವಾಸ್ತವವಾಗಿ ಈ ಹೊತ್ತಿನಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಆಗುವಂತಿಲ್ಲ. ಏರಿಕೆ ಆದರೆ, ಅದು ನ್ಯಾಯಸಮ್ಮತವೂ ಅಲ್ಲ. ಆದರೆ, ನರೇಂದ್ರ ಮೋದಿ ಸರ್ಕಾರವು ತನ್ನ ಅಧಿಕಾರವನ್ನು ಬಳಸಿಕೊಂಡು ಮನಸೋಇಚ್ಛೆ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಮಾಡುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುರುವಾರ ಡಬ್ಲ್ಯೂಟಿಐ ಕಚ್ಚಾ ತೈಲ ದರವು ಶೇ.3.56ರಷ್ಟು ಕುಸಿದಿದ್ದರೆ, ಬ್ರೆಂಟ್ ಕಚ್ಚಾ ತೈಲ ದರವು ಶೇ.3.40 ರಷ್ಟು ಕುಸಿದಿದೆ. ಆದರೆ, ದೇಶೀಯ ಮಾರುಕಟ್ಟೆಯಲ್ಲಿ ಮಾತ್ರ ಪೆಟ್ರೋಲ್ ಮತ್ತು ಡಿಸೇಲ್ ದರವು ಶೇ.0.90ರಷ್ಟು ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಲಾಕ್‌ಡೌನ್ ತೆರವಿಗೂ ಮುಂಚೆ 73.55 ರುಪಾಯಿ ಇದ್ದ ಪೆಟ್ರೋಲ್ ದರವು ಸತತ ಐದುದಿನಗಳ ಐರಿಕೆಯಿಂದಾಗಿ ಗುರುವಾರ ಅಂದರೆ ಜೂನ್ 11ರಂದು 76.39 ರುಪಾಯಿಗೆ ಜಿಗಿದಿದೆ. ಲಾಕ್‌ಡೌನ್ ತೆರವಿಗೂ ಮುಂಚೆ 65.96 ರುಪಾಯಿಇದ್ದ ಡಿಸೇಲ್ ದರವು 68.66 ರುಪಾಯಿಗೆ ಏರಿದೆ.
ಎಷ್ಟು ತ್ವರಿತವಾಗಿ ದರ ಏರಿಕೆಯಾಗುತ್ತಿದೆ ಎಂದರೆ, ಇನ್ನೆರಡು ವಾರದೊಳಗೆ ಪೆಟ್ರೋಲ್ ಮತ್ತು ಡಿಸೇಲ್ ದರವು ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟುವುದು ಗ್ಯಾರಂಟಿ. ಇದುವರೆಗಿನ ದಾಖಲೆ ಪ್ರಕಾರ, 2018 ಸೆಪ್ಟೆಂಬರ್ 10 ರಂದು ಪೆಟ್ರೋಲ್ 83.84 ರುಪಾಯಿಗೆ ಏರಿದ್ದು, 2018 ಅಕ್ಟೋಬರ್ 15 ರಂದು ಡಿಸೇಲ್ 75.88 ರುಪಾಯಿಗೆ ಏರಿದ್ದು ಇದುವರೆಗಿನ ಸರ್ವಕಾಲಿಕ ಗರಿಷ್ಠದರದ ದಾಖಲೆಯಾಗಿದೆ. ಒಂದು ವೇಳೆ ಕಳೆದ ಐದು ದಿನಗಳ ದರ ಏರಿಕೆಯನ್ನೇ ಮಾನದಂಡವಾಗಿಟ್ಟುಕೊಂಡು ಅಳೆದು ನೋಡಿದರೆ ಪೆಟ್ರೋಲ್ ಮತ್ತು ಡಿಸೇಲ್ ದರವು ಮುಂದಿನ ಹತ್ತು ದಿನಗಳಲ್ಲಿ ಸರ್ವಕಾಲಿಕ ಗರಿಷ್ಠದ ಹೊಸ ದಾಖಲೆ ಮಾಡಬಹುದು.
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿನ ದರಕ್ಕೂ ದೇಶೀಯ ಮಾರುಕಟ್ಟೆ ದರಕ್ಕೂ ತಾಳೆಯೇ ಆಗುತ್ತಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಯುತ್ತಲೇ ಇದೆ. ಅಥವಾ ಏರಿಳಿತ ಇದ್ದರೂ ಅದು ಪ್ರತಿ ಬ್ಯಾರೆಲ್ ಗೆ 40 ಡಾಲರ್ ಮಟ್ಟವನ್ನು ದಾಟಿ ಹೋಗಿಲ್ಲ. ಕಳೆದ ಮೂರು ತಿಂಗಳಲ್ಲಿ ಡಬ್ಲ್ಯೂಟಿಐ ಮತ್ತು ಬ್ರೆಂಟ್ ಬಹುತೇಕ ಪ್ರತಿ ಬ್ಯಾರೆಲ್ ಗೆ 10-15 ಡಾಲರ್ ಆಜುಬಾಜಿನಲ್ಲಿ ವಹಿವಾಟಾಗಿವೆ. ಕಳೆದ ವಾರದಿಂದಷ್ಟೇ ತ್ವರಿತ ಏರಿಕೆಯಾಗಿದೆ. ಆದರೆ, ದೇಶಿಯ ಮಾರುಕಟ್ಟೆಯಲ್ಲಿ ನರೇಂದ್ರ ಮೋದಿ ಸರ್ಕಾರವು ಗ್ರಾಹಕರಿಂದ ವಸೂಲು ಮಾಡುತ್ತಿರುವ ದರವು, ಪ್ರತಿ ಬ್ಯಾರೆಲ್ ಗೆ 120 ಡಾಲರ್ ಇದ್ದಾಗಿನ ದರವಾಗಿದೆ. ಅಂದರೆ, 120 ಡಾಲರ್ ಇದ್ದಾಗ ಏರಬೇಕಾದ ಪೆಟ್ರೋಲ್ ಮತ್ತು ಡಿಸೇಲ್ ದರವು ಪ್ರತಿ ಬ್ಯಾರೆಲ್ ಗೆ 40 ಡಾಲರ್ ಇದ್ದಾಗಲೇ ಏರಿ ಬಿಟ್ಟಿದೆ. ಹೀಗಾಗಿ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರವು ಮೂರಂಕಿ ಮುಟ್ಟಿದರೆ- ಅಂದರೆ ನೂರು ರುಪಾಯಿ ದಾಟಿದರೆ ಅಚ್ಚರಿ ಏನೂ ಇಲ್ಲ.
ಪ್ರಧಾನಿ ನರೇಂದ್ರ ಮೋದಿ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿಕೆ ಮಾಡುವಲ್ಲಿ ಅತ್ಯುತ್ಸಾಹ ತೋರಿಸುತ್ತಿರುವುದು ಇದೇ ಮೊದಲನೇನಲ್ಲಾ. 2020 ಮೇ 5 ರಂದು ಮಧ್ಯರಾತ್ರಿ ದೇಶದ ಜನತೆಗೆ ಅತಿ ದೊಡ್ಡ ಶಾಖ್ ನೀಡಿದ್ದರು. ಏನೆಂದರೆ- ಪೆಟ್ರೋಲ್ ಮೇಲೆ 10 ರುಪಾಯಿ ಮತ್ತು ಡಿಸೇಲ್ ಮೇಲೆ 13 ರುಪಾಯಿ ಹೆಚ್ಚುವರಿ ಸುಂಕ ಹೇರಲಾಗಿತ್ತು. ಭಾರತದ ಇತಿಹಾಸದಲ್ಲಿ ಹಿಂದೆಂದೂ ಈ ಬೃಹತ್ ಪ್ರಮಾಣದಲ್ಲಿ ಸುಂಕ ಹೇರಿದ ಉದಾಹರಣೆಗಳಿಲ್ಲ. ಮೇ 5ರಂದು ಮಧ್ಯರಾತ್ರಿ ಜಾರಿಯಾಗಿರುವ ಹೆಚ್ಚುವರಿ ಸುಂಕವು ಆಗ ತಕ್ಷಣಕ್ಕೆ ಪ್ರಯಾಣಿಕರಿಗೆ ಹೊರೆ ಆಗಿರಲಿಲ್ಲ. ಆ ಹೊತ್ತಿಗೆ ಗ್ರಾಹಕರು ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಪ್ರತಿ ಲೀಟರ್ ಗೆ ಆಗ ಎಷ್ಟು ಪಾವತಿಸುತ್ತಿದ್ದಾರೋ ಅಷ್ಟೇ ಪಾವತಿಸುತ್ತಿದ್ದರು. ಅಂದರೆ, ಬೆಂಗಳೂರಿನ ಲೆಕ್ಕದಲ್ಲಿ ಪೆಟ್ರೋಲ್ 73.55 ರುಪಾಯಿಗೆ ಮತ್ತು ಡಿಸೇಲ್ ಅನ್ನು 65.96 ರುಪಾಯಿಗಳು. ಅದರೆ ಲಾಕ್‌ಡೌನ್ ತೆರವುಗೊಳಿಸುತ್ತಿದ್ದಂತೆ ದರ ಏರಿಕೆಯ ಹೊರೆ ಗ್ರಾಹಕರ ಮೇಲೆ ಬೀಳಲಾರಂಭಿಸಿದೆ.
ಲಾಕ್‌ಡೌನ್ ಅವಧಿಯಲ್ಲಿ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಆಗ ಕಚ್ಚಾ ತೈಲ ದರವು ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿದಿತ್ತು. ಕಚ್ಚಾ ತೈಲ ಪ್ರತಿ ಬ್ಯಾರೆಲ್ ಗೆ 10-12 ಡಾಲರ್ ಆಜುಬಾಜಿನಲ್ಲಿ ವಹಿವಾಟಾಗಿತ್ತು. ಹೀಗಾಗಿ ವಿಶೇಷ ಹೆಚ್ಚುವರಿ ಸುಂಕ ಹೇರದೇ ಇದ್ದರೆ ಜನರಿಗೆ ಅತ್ಯಂತ ಕಡಮೆ ದರದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದೊರೆಯುತ್ತಿತ್ತು. ವಾಸ್ತವವಾಗಿ ಈ ಹೊತ್ತಿನ ಅಂದರೆ ಜೂನ್ 11ರ ದರಕ್ಕೆ ಹೋಲಿಸಿದರೆ ಪೆಟ್ರೋಲ್ 19 ರುಪಾಯಿ ಮತ್ತು ಡಿಸೇಲ್ 22 ರುಪಾಯಿ ಇಳಿಯಬೇಕಿತ್ತು. ಲೆಕ್ಕಚಾರದ ಪ್ರಕಾರ, ಪೆಟ್ರೋಲ್ 58 ರುಪಾಯಿಗೂ ಮತ್ತು ಡಿಸೇಲ್ 46 ರುಪಾಯಿಗೂ ಗ್ರಾಹಕರಿಗೆ ದಕ್ಕಬೇಕಿತ್ತು.
ಮೇ 5ಕ್ಕೂ ಮುನ್ನ ಏಪ್ರಿಲ್ 1 ರಂದು ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ತಲಾ 3 ರುಪಾಯಿ ಹೆಚ್ಚುವರಿ ಸುಂಕ ಹೇರಿಕೆ ಮಾಡಲಾಗಿತ್ತು. ಪ್ರಧಾನಿ ಮೋದಿ ಮೂರ್ಖರ ದಿನದಂದೇ ಮೂರು ರುಪಾಯಿ ಏರಿಕೆ ಮಾಡಿ ಇಡೀ ದೇಶದ ಜನತೆಯನ್ನು ಮೂರ್ಖರನ್ನಾಗಿ ಮಾಡಿದ್ದರು. ಅದಕ್ಕೂ ಮೊದಲು ಮಾರ್ಚ್ 14ರಂದು ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ತಲಾ 3 ರುಪಾಯಿ ಸುಂಕ ಏರಿಸಿದ್ದರು.