ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ, ಬಿಜೆಪಿಯಿಂದ ಪಕ್ಷ ಸಂಘಟನೆಯ ಕಾರ್ಯ ಜೋರಾಗಿಯೇ ನಡೆಯುತ್ತಿದೆ. ಇತ್ತೀಚಿಗೆ ಆಯೋಜಿಸಿದ್ದ ಪೊಲೀಸ್ ಠಾಣೆ ಮುತ್ತಿಗೆ, ನಬನ್ನಾ ಚಲೋ ಕಾರ್ಯಕ್ರಮಗಳು ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚಿನ ಮಟ್ಟದಲ್ಲಿ ಪ್ರಚಾರವನ್ನು ತಂದುಕೊಟ್ಟಿದ್ದವು. ಈಗ ಮತ್ತೆ ಅಮಿತ್ ಶಾ ಅವರು ಪಶ್ಚಿಮ ಬಂಗಾಳದಲ್ಲಿ ಬಹಿರಂಗ ಸಭೆ ನಡೆಸುವ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಹುರುಪು ತುಂಬುವ ಕೆಲಸ ಮಾಡುತ್ತಿದ್ದಾರೆ.
ಅಮಿತ್ ಶಾ ಬಹಿರಂಗ ಸಭೆ ಆರಂಭಿಸುವ ಮುನ್ನಾ ದಿನ ಅಂದರೆ, ಬುಧವಾರದಂದು, ಬಿಜೆಪಿಯ ತಂತ್ರಕ್ಕೆ ಪ್ರತಿತಂತ್ರ ರಚಿಸಿರುವ ಸಿಎಂ ಮಮತಾ ಬ್ಯಾನರ್ಜಿ ಅವರು, ಸುಮಾರು 25,000 ನಿರಾಶ್ರಿತ ಕುಟುಂಬಗಳಿಗೆ ಭೂ ಸ್ವಾಮ್ಯದ ಹಕ್ಕು ಪತ್ರವನ್ನು ನೀಡುವ ಮೂಲಕ ಜನರ ಮನಸೆಳೆಯಲು ಪ್ರಯತ್ನಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಒಂದೆಡೆ ಬಿಜೆಪಿ ನಾಯಕರು ನೇರವಾಗಿ ದೀದಿ ಸರ್ಕಾರವನ್ನು ಟೀಕಿಸುತ್ತಾ ಬಂದಿದ್ದರೆ, ಇನ್ನೊಂದು ಕಡೆಯಲ್ಲಿ ಜನರ ಮತಗಳನ್ನು ಸೆಳೆಯುವ ಉದ್ದೇಶದಿಂದ ಒಂದರ ನಂತರ ಇನ್ನೊಂದರಂತೆ ಸರ್ಕಾರಿ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದ್ದಾರೆ.
Also Read: ಮೋದಿ vs ದೀದಿ; ಕೇಂದ್ರ ಸರಕಾರಕ್ಕೆ ಮಮತಾ ಬ್ಯಾನರ್ಜಿ ತಿರುಗೇಟು!
ಈಗ ಜಾರಿಗೆ ತಂದಿರುವ ಹೊಸ ಯೋಜನೆಯ ಪ್ರಕಾರ, ವಿವಿಧ ಸಮುದಾಯ, ಸಂಪ್ರದಾಯಗಳಿಗೆ ಸೇರಿದ ಕುಟುಂಬಗಳಿಗೆ ಭೂ ಒಡೆತನದ ಹಕ್ಕು ನೀಡಿದ್ದಾರೆ. ಇದರೊಂದಿಗೆ ಮಥುವಾ ಅಭಿವೃದ್ದಿ ಮಂಡಳಿ ಹಾಗೂ ನಮಶೂದ್ರ ಅಭಿವೃದ್ದಿ ಮಂಡಳಿಗೆ ಕ್ರಮವಾಗಿ ರೂ ಹತ್ತು ಕೋಟಿ ಹಾಗೂ ರೂ ಐದು ಕೋಟಿ ಅನುದಾನವನ್ನೂ ಬಿಡುಗಡೆ ಮಾಡಿದ್ದಾರೆ.
Also Read: ಗುಂಪು ಹತ್ಯೆ ನಿಷೇಧ ಕಾಯ್ದೆ, ಗೆಹ್ಲೂಟ್ ಹಾದಿ ಹಿಡಿದ ಮಮತಾ ನಡೆ ಮಾದರಿ
“ಮಥುವಾ ಮತ್ತು ಇತರ ಸಮುದಾಯದ ಜನರನ್ನು ರಾಜ್ಯದಲ್ಲಿ ಗುರುತಿಸಲಾಗಿಲ್ಲ ಎಂಬ ದೂರು ಹಿಂದಿನಿಂದಲೂ ಕೇಳಿ ಬರುತ್ತಿತ್ತು. ನಾವು ನIಡಿರುವ ಆಶ್ವಾಸನೆಯನ್ನು ನಾವು ಪೂರೈಸಿದ್ದೇವೆ. ಒಂದು ಲಕ್ಷ ಕುಟುಂಬಗಳಲ್ಲಿ, 25000 ಜನರಿಗೆ ಈಗಾಗಲೇ ಭೂ ಹಕ್ಕನ್ನು ನೀಡಿದ್ದೇವೆ,” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ದೀದಿ ವಿರುದ್ದ ವಾಗ್ದಾಳಿ ನಡೆಸಿದ ಅಮಿತ್ ಶಾ:
ಗುರುವಾರ ಪಶ್ಚಿಮ ಬಂಗಾಳದ ಬಂಕುರಾದಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ದೀದಿ ಸರ್ಕಾರದ ವಿರುದ್ದ ಅಬ್ಬರಿಸಿದ್ದಾರೆ. ಪಶ್ಚಿಮ ಬಂಗಾಳದ ಜನರಲ್ಲಿ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ಕಂಡು ಬರುತ್ತಿದೆ. ಈ ಆಕ್ರೋಶವು ದೀದಿ ಆಡಳಿತಕ್ಕೆ ತೀಲಾಂಜಲಿ ಇಡಲಿದೆ, ಎಂದು ಹೇಳಿದ್ದಾರೆ.
“ಪಶ್ಚಿಮ ಬಂಗಾಳದಲ್ಲಿ ಮುಂದಿನ ಸರ್ಕಾರವನ್ನು ನಾವು ರಚಿಸುತ್ತೇವೆ. ಪ್ರಧಾನಿ ಮೋದಿಯವರ ನಾಯಕತ್ವದಡಿಯಲ್ಲಿ ಉತ್ತಮ ಆಡಳಿತವನ್ನು ನೀಡುವ ಭರವಸೆಯನ್ನು ನಾವು ನೀಡುತ್ತೇವೆ. ಪ್ರಧಾನಿ ಮೋದಿಯವರ ಜನಪರ ಯೋಜನೆಗಳು ಜನರಿಗೆ ದಕ್ಕದ ಹಾಗೆ ಮಾಡಿ ಬಿಜೆಪಿಯನ್ನು ತಡೆಯಬಹುದು ಎಂದು ಮಮತಾ ಬ್ಯಾನರ್ಜಿ ಅಂದುಕೊಂಡಿದ್ದರೆ, ಅದು ಖಂಡಿತಾ ಸಾಧ್ಯವಿಲ್ಲ,” ಎಂದು ಅಮಿತ್ ಶಾ ಹೇಳಿದ್ದಾರೆ.