ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಈ ಹೊತ್ತಿನಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ತಮ್ಮ ತಮ್ಮ ಮತ ಬ್ಯಾಂಕ್ಗಳನ್ನು ಸೆಳೆಯುವ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿವೆ. ಪಶ್ಚಿಮ ಬಂಗಾಳ ಚುನಾವಣೆಗೆ ಹೈದರಾಬಾದ್ ಮೂಲದ ಪ್ರಾದೇಶಿಕ ಪಕ್ಷ AIMIM ಕಾಲಿಟ್ಟಿರುವುದು, TMC ಮತಬ್ಯಾಂಕ್ ಆಗಿರುವ ಮುಸ್ಲಿಂ ವರ್ಗದ ಮತಗಳನ್ನು ಸೆಳೆಯುವ ಸಾಧ್ಯತೆಗಳಿವೆ.
ಈ ಹಿನ್ನೆಲೆಯಲ್ಲಿ ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷವನ್ನು ಮತವಿಭಜಕ ಎಂದು ಜರೆದಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಿಜೆಪಿಯಿಂದ ಹಣ ಪಡೆದು ಹೈದರಾಬಾದ್ ಮೂಲದ ಪಕ್ಷವೊಂದು ಮತ ಪಡೆಯಲು ಸಂಚು ಹಾಕುತ್ತಿದೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ಬಿಹಾರ ಚುನಾವಣೆಯಲ್ಲಿ ಈ ವಿಚಾರವು ಸ್ಪಷ್ಟವಾಗಿ ತಿಳಿದಿದೆ ಎಂದು ದೀದಿ ಓವೈಸಿ ಮೇಲೆ ಕಿಡಿಕಾರಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದಕ್ಕೆ ಗರಂ ಆಗಿರುವ ಓವೈಸಿ, ಮುಸ್ಲಿಂ ಮತದಾರರು ನಿಮ್ಮ ಆಸ್ತಿಯಲ್ಲ ಎಂದು ತಿರುಗೇಟು ನೀಡಿದ್ದಾರೆ. ಇದರೊಂದಿಗೆ, ಬಿಜೆಪಿಯಿಂದ ಹಣ ಪಡೆದಿರುವ ಆರೋಪಕ್ಕೂ ಉತ್ತರಿಸಿರುವ ಓವೈಸಿ, ನನ್ನನ್ನು ಖರೀದಿಸುವ ವ್ಯಕ್ತಿ ಇನ್ನೂ ಹುಟ್ಟಿ ಬಂದಿಲ್ಲ ಎಂದಿದ್ದಾರೆ.
“ಮಮತಾ ಬ್ಯಾನರ್ಜಿ ಅವರ ಆರೋಪಗಳಲ್ಲಿ ಹುರುಳಿಲ್ಲ. ಅವರ ಸ್ವಂತ ಪಕ್ಷದ ಬಗ್ಗೆ ಮೊದಲು ಚಿಂತೆ ಮಾಡಲಿ. ಹಲವು ಜನರು ಬಿಜೆಪಿ ಸೇರುತ್ತಿದ್ದಾರೆ. ನಮಗೆ ಮತ ಹಾಕಿದ ಬಿಹಾರದ ಮತದಾರರನ್ನೂ ಅವರು ಅವಮಾನಿಸಿದ್ದಾರೆ,” ಎಂದು ಕಿಡಿಕಾರಿದ್ದಾರೆ.
ಇದರೊಂದಿಗೆ, ನೀವು ಇಲ್ಲಿಯವರೆಗೆ ನಿಮಗೆ ಪ್ರಾಮಾಣಿಕರಾಗಿದ್ದ ಮೀರ್ ಸಾದಿಕ್ರನ್ನು ಮಾತ್ರ ನೋಡಿದ್ದೀರಾ. ತಮ್ಮ ಸ್ವಂತ ಬುದ್ದಿಯನ್ನು ಉಪಯೋಗಿಸಿ ಮಾತನಾಡುವ ಮುಸ್ಲಿಮರು ನಿಮಗೆ ಇಷ್ಟವಿಲ್ಲ. ಬಿಹಾರದಲ್ಲಿ ನಮ್ಮನ್ನು ಮತವಿಭಜಕ ಎಂದು ಕರೆದ ಪಕ್ಷಗಳ ಗತಿ ಏನಾಗಿದೆ ಎಂಬುದನ್ನು ಒಮ್ಮೆ ನೋಡಿಕೊಳ್ಳಿ. ಮುಸ್ಲಿಂ ಮತದಾರರು ನಿಮ್ಮ ಸ್ವಂತ ಆಸ್ತಿಯಲ್ಲ, ಎಂದು ಹೇಳಿದ್ದಾರೆ.