ರಾಜ್ಯಗಳಿಗೆ ಜಿಎಸ್ ಟಿ (GST) ತೆರಿಗೆ ಪಾಲು ನೀಡುವ ಸ್ಥಿತಿಯಲ್ಲಿ ಕೇಂದ್ರ ಸರ್ಕಾರವಿಲ್ಲ. ಕರೋನಾ ವೈರಸ್ ಮಹಾಮಾರಿ ಆರ್ಥಿಕತೆಗೆ ನೀಡಿದ ಪೆಟ್ಟಿನಿಂದಾಗಿ ಜಿಎಸ್ ಟಿ ಸಂಗ್ರಹ ಭಾರೀ ಕುಸಿತವಾಗಿದ್ದು, ಅದೆಲ್ಲಾ ದೇವರ ಆಟ” ಎಂದಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹಾಸ್ಯಾಸ್ಪದ ಹೇಳಿಕೆಗೆ ವ್ಯಾಪಕ ಟೀಕೆ, ವ್ಯಂಗ್ಯದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಸ್ವತಃ ಆಡಳಿತರೂಢ ಬಿಜೆಪಿಯ ಹಿರಿಯ ನಾಯಕರೇ ಸಚಿವೆಯನ್ನು ಲೇವಡಿ ಮಾಡಿದ್ದಾರೆ.
ಇಡೀ ಜಗತ್ತು ಕೋವಿಡ್-19ರ ವಿರುದ್ಧ ಸಾಧ್ಯವಿರುವ ಎಲ್ಲಾ ವೈಜ್ಞಾನಿಕ, ವೈಚಾರಿಕ ವಿಧಾನಗಳ ಮೂಲಕ ಸೆಣೆಸುತ್ತಿರುವಾಗ, ಆಳುವ ಸರ್ಕಾರದ ನಾಯಕಿಯಾಗಿ, ಮಹತ್ವದ ಹಣಕಾಸು ಖಾತೆಯಂತಹ ಹೊಣೆಗಾರಿಕೆ ಹೊತ್ತ ಸಚಿವೆಯೊಬ್ಬರು ಹೀಗೆ ಸಾಂಕ್ರಾಮಿಕ ಮತ್ತು ಅದರ ಪರಿಣಾಮಗಳು ‘ದೇವರ ಆಟ’, ಆದ ನಷ್ಟಕ್ಕೆ, ಹಾನಿಗೆ, ಅನಾಹುತಕ್ಕೆ ಸರ್ಕಾರದ ಅವೈಜ್ಞಾನಿಕ, ವಿವೇಚನಾಹೀನ ಲಾಕ್ ಡೌನ್ ಕ್ರಮವಾಗಲೀ, ವಿದೇಶಿ ಪ್ರಯಾಣಿಕರನ್ನು ದೇಶದೊಳಕ್ಕೆ ಬಿಟ್ಟುಕೊಂಡ ನಡೆಯಾಗಲೀ ಕಾರಣವಲ್ಲ; ಬದಲಿಗೆ ಕಾಣದ ದೇವರೇ ಕಾರಣ ಎಂದು ತಮ್ಮ ಹೊಣೆಗಾರಿಕೆಯಿಂದ ಜಾರಿಕೊಳ್ಳುವ ಮತ್ತು ಅದೇ ಹೊತ್ತಿಗೆ ಮೌಢ್ಯಕ್ಕೆ ಪುಷ್ಟಿ ನೀಡುವಂತಹ ನಾಚಿಕೆಗೇಡಿನ ಹೇಳಿಕೆ ನೀಡುವುದು ತೀರಾ ಅವಿವೇಕ ಎಂಬ ವ್ಯಾಪಕ ಟೀಕೆ ಕೇಳಿಬಂದಿವೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸಾಮಾಜಿಕ ಜಾಲತಾಣಗಳಲ್ಲಿ ಸಚಿವೆಯ ಈ ಹೇಳಿಕೆ ಟ್ರೋಲ್ ಆಗುತ್ತಿರುವ ನಡುವೆಯೇ, ಸ್ವತಃ ಬಿಜೆಪಿಯ ಹಿರಿಯ ನಾಯಕ ಹಾಗೂ ಆರ್ಥಶಾಸ್ತ್ರಜ್ಞ ಸುಬ್ರಮಣಿಯನ್ ಸ್ವಾಮಿ ಕಟುವಾಗಿ ಪ್ರತಿಕ್ರಿಯಿಸಿದ್ದು, “ಹಣಕಾಸು ಸಚಿವೆ ನಿರ್ಮಲಾ ಅವರು ಕರೋನಾ ವೈರಾಣು ಸಾಂಕ್ರಾಮಿಕ ಮತ್ತು ಅದರ ಪರಿಣಾಮವಾಗಿ ಕುಸಿದ ಜಿಎಸ್ ಟಿ ಸಂಗ್ರಹಕ್ಕೆ ದೇವರ ಆಟ ಕಾರಣ ಎಂದು ಹೇಳಿದ್ದಾರೆ. ಆದರೆ, ಜಿಡಿಪಿ ವಾರ್ಷಿಕ ಬೆಳವಣಿಗೆ ದರದಲ್ಲಿ ಹಣಕಾಸು ವರ್ಷ 2015ರ ಶೇ.8ರಿಂದ ಕೋವಿಡ್ ಪೂರ್ವದಲ್ಲಿ, 2020ರ ಮೊದಲ ತ್ರೈಮಾಸಿಕದಲ್ಲಿ ಶೇ3.1ಕ್ಕೆ ಕುಸಿಯಲು ಕೂಡ ದೇವರ ಆಟವೇ ಕಾರಣವೆ?” ಎಂದು ಕುಟುಕಿದ್ದಾರೆ.
ಹಣಕಾಸು ಸಚಿವೆ ಗುರುವಾರ ಜಿಎಸ್‌ಟಿ ಕೌನ್ಸಿಲ್‌ನ 41ನೇ ಸಭೆಯ ಬಳಿಕ ಮಾಧ್ಯದವರನ್ನು ಉದ್ದೇಶಿಸಿ ಮಾತನಾಡುತ್ತಾ, ‘ದೇವರ ಆಟ’ವಾದ ಕೋವಿಡ್-19ರ ಪರಿಣಾಮದಿಂದಾಗಿ ದೇಶದ ಆರ್ಥಿಕತೆ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ಈಗಾಗಲೇ ಜಿಎಸ್ ಟಿ ತೆರಿಗೆ ಸಂಗ್ರಹದಲ್ಲಿ ದೊಡ್ಡ ಕುಸಿತವಾಗಿದ್ದು, ಮುಂದಿನ ದಿನಗಳಲ್ಲಿ ಆ ಕುಸಿತ ಇನ್ನಷ್ಟು ಹೆಚ್ಚಲಿದೆ. ಹಾಗಾಗಿ ರಾಜ್ಯಗಳಿಗೆ ಜಿಎಸ್ ಟಿ ತೆರಿಗೆ ಪಾಲು ಪಾವತಿ ಮಾಡುವ ಸ್ಥಿತಿಯಲ್ಲಿ ಸದ್ಯಕ್ಕೆ ಕೇಂದ್ರ ಸರ್ಕಾರ ಇಲ್ಲ. ಹಾಗಾಗಿ ರಾಜ್ಯಗಳಿಗೆ ಎರಡು ಆಯ್ಕೆಗಳನ್ನು ನೀಡುತ್ತಿದ್ದೇವೆ. ಒಂದು, ಆರ್ ಬಿಐ ನೆರವಿನೊಂದಿಗೆ ಕಡಿಮೆ ಬಡ್ಡಿ ದರದಲ್ಲಿ ಒಟ್ಟು 97 ಸಾವಿರ ಕೋಟಿಯಷ್ಟು ಸಾಲ ಪಡೆಯುವುದು. ಇಲ್ಲವೆ, ಈ ವರ್ಷದ ಕೇಂದ್ರದ ಜಿಎಸ್ ಟಿ ಬಾಕಿ 2.35 ಲಕ್ಷ ಕೋಟಿ ರೂ.ಗೆ ಪರ್ಯಾಯವಾಗಿ ಆರ್ ಬಿಐ ಸಲಹೆ ಮೇರೆಗೆ ನೇರ ಸಾಲ ಪಡೆಯುವುದು. ಈ ಎರಡು ಆಯ್ಕೆಗಳಲ್ಲಿ ತಾವು ಯಾವುದನ್ನು ಆಯ್ದುಕೊಳ್ಳುತ್ತೇವೆ ಎಂಬುದನ್ನು ರಾಜ್ಯಗಳು ಏಳು ದಿನಗಳ ಒಳಗಾಗಿ ತಿಳಿಸಬೇಕು ಎಂದೂ ಹೇಳಿದ್ದಾರೆ.
ಒಟ್ಟು ಈ ಹಣಕಾಸು ವರ್ಷದಲ್ಲಿ ರಾಜ್ಯ ಸರ್ಕಾರಗಳಿಗೆ ಕೇಂದ್ರ ನೀಡಬೇಕಾದ ಜಿಎಸ್ ಟಿ ಪರಿಹಾರ ಮೊತ್ತ ಸುಮಾರು 3 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಆ ಪೈಕಿ ಸೆಸ್ ಮೂಲಕ ಸುಮಾರು 65 ಸಾವಿರ ಕೋಟಿ ರೂ. ಸಂಗ್ರಹವಾಗುವ ನಿರೀಕ್ಷೆ ಇದೆ. ಇನ್ನುಳಿದ 2.35 ಲಕ್ಷ ಕೋಟಿ ರೂ. ಜಿಎಸ್ ಟಿ ಪಾಲು ಹೊಂದಿಸಲು ಕೇಂದ್ರ ಅಶಕ್ತವಾಗಿದ್ದು, ಆ ಕೊರತೆಯನ್ನು ರಾಜ್ಯಗಳು ಮೇಲೆ ಹೇಳಿದ ಎರಡು ಆಯ್ಕೆಗಳ ಮೂಲಕ ಹೊಂದಿಸಿಕೊಳ್ಳಬಹುದು ಎಂಬುದು ಸಚಿವೆಯ ಮಾತಿನ ಒಟ್ಟು ಸಾರ. ಅಂದರೆ; ರಾಜ್ಯಗಳು ಜಿಎಸ್ ಟಿ ತೆರಿಗೆಯನ್ನು ಕೇಂದ್ರಕ್ಕೆ ಇಡಿಯಾಗಿ ಸಲ್ಲಿಸಬೇಕು. ಆ ತೆರಿಗೆಯಲ್ಲಿ ನ್ಯಾಯಯುತವಾಗಿ ರಾಜ್ಯಗಳಿಗೆ ನೀಡಬೇಕಾದ ಪಾಲನ್ನು ನೀಡಲು ಮಾತ್ರ ಕೇಂದ್ರ ಸರ್ಕಾರಕ್ಕೆ ಕೋವಿಡ್-19 ಮತ್ತು ಆರ್ಥಿಕ ಕುಸಿತದ ‘ದೇವರ ಆಟ’ ಅಡ್ಡಿಯಾಗಿದೆ!
ಆದರೆ, ಈವರೆಗೆ 2024ರ ಹೊತ್ತಿಗೆ ಭಾರತ ಐದು ಟ್ರಿಲಿಯನ್ ಆರ್ಥಿಕ ಶಕ್ತಿಯಾಗಿ ವಿಶ್ವಗುರುವಾಗಲಿದೆ ಎಂದು ಪ್ರಧಾನಿ ಮೋದಿಯವರು ಹೇಳುತ್ತಲೇ ಇದ್ದರು. ತೀರಾ ಕೋವಿಡ್ ಲಾಕ್ ಡೌನ್ ನಡುವೆಯೂ ಅವರು ಭಾರತದ ವಿಶ್ವದ ಆರ್ಥಿಕ ಶಕ್ತಿಯಾಗುತ್ತಿದೆ. ಇಡೀ ಜಗತ್ತೇ ಕೋವಿಡ್ ಹೊಡೆತಕ್ಕೆ ಕುಸಿಯುತ್ತಿರುವಾಗ ಭಾರತದ ಆರ್ಥಿಕತೆ ಆಶಾದಾಯಕವಾಗಿಯೇ ಇದೆ. ಉದ್ಯಮ- ವಹಿವಾಟು ದೊಡ್ಡಮಟ್ಟದ ಕುಸಿತ ಕಂಡಿಲ್ಲ. ನಾವೀಗಲೂ ಪ್ರಬಲ ಶಕ್ತಿಯಾಗಿ ಬೆಳೆಯತ್ತಲೇ ಇದ್ದೇವೆ ಎಂದಿದ್ದರು. ಜೂನ್ ಮೊದಲ ವಾರದಲ್ಲಿ ಇಂಡಿಯನ್ ಇಂಡಸ್ಟ್ರಿ ಕಾನ್ಫೆಡರೇಷನ್ ವಾರ್ಷಿಕ ಸಭೆಯ ಸಂದರ್ಭದಲ್ಲಿ ನೀಡಿದ ಸಂದೇಶದಲ್ಲಿ ಕೂಡ ಮೋದಿಯವರು, ಕೋವಿಡ್ ನಮ್ಮ ಪ್ರಗತಿ ದರವನ್ನು ತುಸು ಕುಗ್ಗಿಸಿರಬಹುದು. ಆದರೆ, ಈಗ ಭಾರತ ಲಾಕ್ ಡೌನ್ ಹಂತ ಮೀರಿ ಮುಂದೆ ಸಾಗುತ್ತಿದೆ. ನಮ್ಮ ಅಭಿವೃದ್ಧಿಗೆ ಬ್ರೇಕ್ ಹಾಕಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಘಂಟಾಘೋಷವಾಗಿ ಹೇಳಿದ್ದರು.
Also Read: ಜಿಎಸ್‌ಟಿ ಅನ್ಯಾಯ; ಪ್ರಶ್ನೆ ಮಾಡುವ ತಾಕತ್ತು 25 ಬಿಜೆಪಿ ಸಂಸದರ ಪೈಕಿ ಒಬ್ಬರಿಗೂ ಇಲ್ಲವೇ?
ಅಂದರೆ, ಎರಡು ತಿಂಗಳ ಹಿಂದೆ, (ಕೋವಿಡ್ ಪರಿಣಾಮ ಆರಂಭವಾಗಿ ಮೂರು ತಿಂಗಳ ಬಳಿಕ) ಕಾಣಿಸದೇ ಇದ್ದ ‘ದೇವರ ಆಟ’ ಈಗ ಬಿಜೆಪಿ ಸರ್ಕಾರಕ್ಕೆ ದಿಢೀರನೇ ಕಾಣಿಸಿಕೊಂಡಿದ್ದು ಹೇಗೆ? ಯಾವ ಮಾಯಾವಿ ಶಕ್ತಿ ಈ ಅಗೋಚರ ಆಟದ ಸುಳಿವನ್ನು ಸಚಿವೆಗೆ ನೀಡಿರಬಹುದು ? ಈವರೆಗೆ ಪ್ರಧಾನಿ ಮೋದಿಯೇ ಸರ್ವಶಕ್ತ, ದೈವಾಂಶ ಸಂಭೂತ, ವಿಷ್ಣುವಿನ ಹನ್ನೊಂದನೇ ಅವತಾರ, ದೇಶವನ್ನು ರಕ್ಷಿಸಲೆಂದೇ ಜನ್ಮವೆತ್ತಿ ಬಂದವರು ಎನ್ನುತ್ತಿದ್ದ ಇದೇ ಸಚಿವರು ಮತ್ತು ಅವರ ಬೆಂಬಲಿಗರು ಇದೀಗ, ದಿಢೀರನೇ ದೇವರ ಆಟದ ಬಗ್ಗೆ ಮಾತನಾಡಲು ತೊಡಗಿರುವುದರ ಅರ್ಥವೇನು? ಅಂದರೆ; ಮುಂದಿನ ದಿನಗಳಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಹೀನಾಯ ಸ್ಥಿತಿಗೆ ಹೋಗಲಿದೆ. ಆ ಹಿನ್ನೆಲೆಯಲ್ಲಿ ಈಗಲೇ ತಮ್ಮ ಹೊಣೆಗಾರಿಕೆಯಿಂದ ಜಾರಿಕೊಂಡು ಎಲ್ಲವನ್ನೂ ಕಾಣದ ದೇವರ ಮೇಲೆ ಹಾಕಿ ಕೈತೊಳೆದುಕೊಳ್ಳುವ ಲೆಕ್ಕಾಚಾರ ಬಿಜೆಪಿಯದ್ದೇ ಎಂಬ ಪ್ರಶ್ನೆ ಕೂಡ ಎದ್ದಿದೆ.
ಈ ನಡುವೆ, ಕರ್ನಾಟಕಕ್ಕೆ ಬಿಡುಗಡೆಯಾಗಬೇಕಿರುವ ಜಿಎಸ್ ಟಿ ಪರಿಹಾರದ ಬರೋಬ್ಬರಿ 13,764 ಕೋಟಿ ರೂಪಾಯಿಗಳನ್ನು ಕೂಡಲೇ ಬಿಡುಗಡೆ ಮಾಡದೇ ಹೋದರೆ, ರಾಜ್ಯದ ಪ್ರಗತಿ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ದೊಡ್ಡ ಪೆಟ್ಟು ಬೀಳಲಿದೆ ಎಂದು ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಪಾಲ್ಗೊಂಡಿದ್ದ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ. ಕೋವಿಡ್ ಸಂಕಷ್ಟದ ನಡುವೆಯೂ ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯ ಶೇ.71.61ರಷ್ಟು ಜಿಎಸ್ ಟಿ ತೆರಿಗೆ ಸಂಗ್ರಹ ಮಾಡಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಇದು ಅತ್ಯಧಿಕ. ಜಿಎಸ್ ಟಿ ನಿಯಮಾನುಸಾರ ರಾಜ್ಯಗಳಿಗೆ ತೆರಿಗೆ ಕೊರತೆ ತುಂಬಿಕೊಡಬೇಕಾದುದು ಕೇಂದ್ರ ಸರ್ಕಾರದ ಹೊಣೆ ಎಂದು ಬೊಮ್ಮಾಯಿ ಹೇಳಿರುವುದಾಗಿ ವರದಿಯಾಗಿದೆ.
Also Read: ಕರ್ನಾಟಕದಲ್ಲಿ ಬಿಜೆಪಿ ಆಡಳಿತವಿದ್ದರೂ ಅನುದಾನ ಬಿಡುಗಡೆಯಲ್ಲಿ ಕೇಂದ್ರದಿಂದ ಮಲತಾಯಿ ಧೋರಣೆ
ಈ ನಡುವೆ, ರಾಜ್ಯಗಳಿಗೆ ನೀಡಬೇಕಾಗಿದ್ದ ಜಿಎಸ್ ಟಿಯೇತರ ಸೆಸ್ ಮತ್ತು ತೆರಿಗೆ ಪಾಲನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಏಪ್ರಿಲ್ ನಿಂದ ಜೂನ್ ಅವಧಿಯಲ್ಲಿ ಒಟ್ಟು 1.76 ಲಕ್ಷ ಕೋಟಿ ಸೆಸ್ ಸಂಗ್ರಹವಾಗಿದ್ದು, ಆ ಪೈಕಿ 41 ಸಾವಿರ ಕೋಟಿ ರೂ.ಗಳನ್ನು 28 ರಾಜ್ಯಗಳಿಗೆ ಬಿಡುಗಡೆ ಮಾಡಿದೆ. ಆ ಹಣ ಹಂಚಿಕೆಯಲ್ಲಿಯೂ ಮತ್ತೆ ರಾಜ್ಯಕ್ಕೆ ತಾರತಮ್ಯ ಎಸಗಲಾಗಿದ್ದು, ಸೆಸ್ ಸಂಗ್ರಹದ ಪ್ರಮಾಣಕ್ಕೆ ಅನುಗುಣವಾಗಿ ಅದರ ಪಾಲು ಹಂಚಿಕೆಯ ಬದಲಾಗಿ, ಬಿಜೆಪಿಯ ತಾರತಮ್ಯ ನೀತಿ ಮುಂದುವರಿದಿದೆ. ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ ಮುಂತಾದ ಉತ್ತರ ಭಾರತೀಯ ರಾಜ್ಯಗಳಿಗೆ, ಅವುಗಳ ಸೆಸ್, ತೆರಿಗೆ ಸಂಗ್ರಹ ಪ್ರಮಾಣದ ಹೊರತಾಗಿಯೂ ಅಧಿಕ ಮೊತ್ತವನ್ನು ನೀಡಲಾಗಿದೆ. ಕರ್ನಾಟಕಕ್ಕೆ ಕೇವಲ 1,530 ಕೋಟಿ ನೀಡಿದ್ದು, ಉತ್ತರಪ್ರದೇಶಕ್ಕೆ 7,500 ಕೋಟಿ ನೀಡಲಾಗಿದೆ ಎಂಬ ವರದಿಗಳೂ ಇವೆ.
ಆದರೆ, ಕೇಂದ್ರದಲ್ಲಿಯೂ ತಮ್ಮದೇ ಸರ್ಕಾರ ಇರುವುದರಿಂದ ಮತ್ತು ರಾಜ್ಯದ ಹಕ್ಕನ್ನು ಪ್ರತಿಪಾದಿಸುವುದು ತಮ್ಮ ಹೈಕಮಾಂಡ್ ವಿರುದ್ಧದ ದನಿ ಎತ್ತಿದಂತೆ ಎಂದು ರಾಜ್ಯ ನಾಯಕರು ಭಾವಿಸುವುದರಿಂದಾಗಿ, ರಾಜ್ಯಕ್ಕೆ ಪದೇ ಪದೆ ಆಗುತ್ತಿರುವ ಇಂತಹ ಅನ್ಯಾಯಗಳನ್ನು ಪ್ರಶ್ನಿಸುವ ನೈತಿಕತೆ ನಾಯಕರಲ್ಲಿ ಉಳಿದಿಲ್ಲ. ಇನ್ನು ಪ್ರತಿಪಕ್ಷ ನಾಯಕರು ಈ ಅನ್ಯಾಯವನ್ನು ಪ್ರಶ್ನಿಸಿದರೆ, ಎಂದಿನಂತೆ ಅವರನ್ನು ದೇಶದ್ರೋಹಿಗಳ ಪಟ್ಟಿಗೆ ಸೇರಿಸಲು ಬಿಜೆಪಿ ಮತ್ತು ಅದರ ಟ್ರೋಲ್ ಪಡೆಗಳು ಕಾದಿರುತ್ತವೆ.
ಈ ನಡುವೆ, ಇದೀಗ ಹಣಕಾಸು ಸಚಿವರ ‘ದೇವರ ಆಟ’ದ ನೆಪವೂ ಸಿಕ್ಕಿದೆ. ಹಾಗಾಗಿ ಇನ್ನು ಕೇಂದ್ರ ಸರ್ಕಾರದ ವೈಫಲ್ಯಗಳ ಬಗ್ಗೆ ಯಾರು ಏನೇ ಕೇಳಿದರು, ಅದು ದೇವರ ಆಟ ಎನ್ನುವ ಸಿದ್ಧ ಉತ್ತರ ಅಪ್ಪಳಿಸಲಿದೆ! ದೇವರ ಆಟದ ಮುಂದೆ ಇನ್ನು ಯಾರ ಆಟವೂ ನಡೆಯಲಾರದು ಎಂಬುದಕ್ಕೆ ಸಚಿವೆ ಅಧಿಕೃತವಾಗಿಯೇ ನಾಂದಿ ಹಾಡಿದ್ದಾರೆ! ಹಾಗಾಗಿ ಇನ್ನು ದೇವರ ಆಟ ಬಲ್ಲವರಾರು ಎಂದು ಸಮಾಧಾನಪಟ್ಟುಕೊಳ್ಳುವುದಷ್ಟೇ ಜನಸಾಮಾನ್ಯರ ಪಾಲಿಗೆ ಉಳಿದ ದಾರಿ!