ಕೋವಿಡ್, ಲಾಕ್ ಡೌನ್ ಸಂಕಷ್ಟದ ಮೇಲೆ ಸರ್ಕಾರಗಳ ಜನವಿರೋಧಿ ಕಾಯ್ದೆ- ಕಾನೂನುಗಳು ರೈತರು, ಕೂಲಿಕಾರ್ಮಿಕರು ಸೇರಿದಂತೆ ಜನಸಾಮಾನ್ಯರ ಬದುಕನ್ನು ಹೈರಾಣುಮಾಡಿರುವ ಹೊತ್ತಿನಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ಆರಂಭವಾಗಿದೆ.
ಸಹಜವಾಗೇ, ಇಂತಹ ಹೊತ್ತಲ್ಲಿ; ಕಳೆದ ಒಂದು ವರ್ಷದಿಂದ ತಲೆಮಾರುಗಳೇ ಕಂಡರಿಯದ ಸಮಸ್ಯೆಗಳ ನಡುವೆ ನಲುಗುತ್ತಿರುವ ಜನರ ಸಮಸ್ಯೆಗಳ ಬಗ್ಗೆ ತಾವು ಮತ ಹಾಕಿ ಆರಿಸಿಕಳಿಸಿದ ಜನಪ್ರತಿನಿಧಿಗಳು ಅಧಿವೇಶನದಲ್ಲಿ ಚರ್ಚಿಸಿ, ಪರಿಹಾರೋಪಾಯಗಳನ್ನು ಕಂಡುಕೊಳ್ಳಬಹುದು. ತಮ್ಮ ಸಂಕಷ್ಟ ದೂರ ಮಾಡುವ ಪ್ರಯತ್ನ ಮಾಡಬಹುದು ಎಂದು ನಿರೀಕ್ಷೆ ಇದ್ದವು. ಆದರೆ, ಸೋಮವಾರವಷ್ಟೇ ಆರಂಭವಾಗಿದ್ದ ವಿಧಾನಸಭಾ ಮತ್ತು ವಿಧಾನಪರಿಷತ್ ಚಳಿಗಾಲದ ಅಧಿವೇಶನ, ಒಂದೇ ದಿನದಲ್ಲೇ ಮೊಟಕುಗೊಂಡಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ಮೊದಲು ಡಿಸೆಂಬರ್ 7ರ ಸೋಮವಾರದಿಂದ ಡಿ.15ರವರೆಗೆ ಮಧ್ಯದ ರಜೆ ದಿನಗಳನ್ನು ಹೊರತುಪಡಿಸಿ ಒಟ್ಟು ಏಳು ದಿನ ಅಧಿವೇಶನ ನಡೆಸಲು ಸರ್ಕಾರ ತೀರ್ಮಾನಿಸಿತ್ತು. ಆದರೆ, ಅಧಿವೇಶನ ಆರಂಭದ ದಿನವೇ ಉಭಯ ಸದನಗಳಲ್ಲಿ ಖಾಲೀ ಕುರ್ಚಿಗಳೇ ರಾರಾಜಿಸಿದ್ದವು. ಆಡಳಿತಪಕ್ಷದ ಶಾಸಕರು, ಸಚಿವರಷ್ಟೇ ಅಲ್ಲ; ಸ್ವತಃ ಮುಖ್ಯಮಂತ್ರಿಗಳೇ ಮಹತ್ವದ ಅಧಿವೇಶನದ ಬದಲು ತಮ್ಮ ಸ್ವಕ್ಷೇತ್ರ ಶಿವಮೊಗ್ಗ ಜಿಲ್ಲೆಯ ಎರಡು ಖಾಸಗೀ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇನ್ನು ಪ್ರತಿಪಕ್ಷಗಳು ಕೂಡ ಇಂತಹ ಹೊಣೆಗೇಡಿ ವರಸೆಯಲ್ಲಿ ಹಿಂದೆ ಬಿದ್ದಿಲ್ಲ. ಪ್ರತಿಪಕ್ಷಗಳ ಸಾಲಿನಲ್ಲೂ ಬಹುತೇಕ ಶಾಸಕರು ಸದನದ ಕಡೆ ಮುಖ ಹಾಕದೇ ಇರುವುದು ಕಂಡುಬಂದಿತ್ತು.
ಎರಡನೇ ದಿನ ಮಂಗಳವಾರ ಕೂಡ ಆಡಳಿತ ಮತ್ತು ಪ್ರತಿಪಕ್ಷಗಳ ಬಹುತೇಕರು ಉಭಯ ಸದನಗಳಿಗೆ ಗೈರಾಗಿದ್ದರು. ಅದರ ನಡುವೆಯೇ ಮಹತ್ವದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆಗೆ ವಿಧಾನಪರಿಷತ್ ಅಂಗೀಕಾರ ಪಡೆಯುವಲ್ಲಿ ಬಿಜೆಪಿ ಸರ್ಕಾರ ಯಶಸ್ವಿಯಾಗಿದೆ. ಒಂದು ಕಡೆ ಈ ಮಸೂದೆಯೂ ಸೇರಿದಂತೆ ಬಿಜೆಪಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಾರಿಗೆ ತರುತ್ತಿರುವ ರೈತ ವಿರೋಧಿ ಕೃಷಿ ಮಸೂದೆಗಳ ವಿರುದ್ಧ ಭಾರತ್ ಬಂದ್ ನಡೆಯುತ್ತಿದ್ದರೆ, ರಾಜ್ಯ ಮತ್ತು ದೇಶದ ಮೂಲೆಮೂಲೆಯಲ್ಲಿ ರೈತರು ಬೀದಿಗಿಳಿದ ಹೋರಾಟ ನಡೆಸುತ್ತಿದ್ದರೆ, ಅದೇ ದಿನ ಬಿಜೆಪಿ ಕಾರ್ಪೊರೇಟ್ ಕುಳಗಳ ಕೈಗೆ ಕೃಷಿ ಭೂಮಿ ಕೊಡುವ ಮಸೂದೆಗೆ ಅಂಗೀಕಾರ ಪಡೆದಿದೆ. ಇಂತಹ ನಿರ್ಣಾಯಕ ಹೊತ್ತಿನಲ್ಲಿ ಸದನದಲ್ಲಿ ಹಾಜರಿದ್ದು ಮಸೂದೆಯ ಸಾಧಕಬಾಧಕ ಚರ್ಚಿಸಿ ರೈತರ ಪರ ವಾದ ಮಂಡಿಸಬೇಕಿದ್ದ ಚುನಾಯಿತ ಪ್ರತಿನಿಧಿಗಳು ಗೈರು ಹಾಜರಾಗಿ ಅನ್ನದಾತರ ಬೆನ್ನಿಗೆ ಚೂರಿ ಹಾಕಿದ್ದಾರೆ. ಮತ್ತೊಂದು ಕಡೆ ‘ಮಣ್ಣಿನಮಕ್ಕಳ’ ಪಕ್ಷ ತಮ್ಮದು, ರೈತರ ಪಕ್ಷ ತಮ್ಮದು ಎಂದು ತೆನೆ ಹೊತ್ತ ಮಹಿಳೆ, ಹಸಿರು ಟವೆಲ್ ಕುಣಿಸುತ್ತಿದ್ದ ಜೆಡಿಎಸ್ ಕೂಡ ಮುಗ್ಗುಮ್ಮಾಗಿ ಮಸೂದೆಗೆ ಬೆಂಬಲ ನೀಡಿ ತನ್ನ ರೈತ ಪರ ಕಾಳಜಿಯ ಮುಖವಾಡದ ಹಿಂದಿನ ಅಸಲಿಯತ್ತು ಬಯಲುಮಾಡಿದೆ.
Also Read: ವಿಧಾನಸಭಾ ಅಧಿವೇಶನ: ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ನೆರೆ ಪರಿಹಾರ ವಿಚಾರ
ಈ ನಡುವೆ, ದಿಢೀರನೇ ಅಧಿವೇಶನವನ್ನು ನಾಲ್ಕೇ ದಿನಕ್ಕೆ ಮೊಟುಕುಗೊಳಿಸಲು ಸದನ ಸಲಹಾ ಸಮಿತಿ ನಿರ್ಧರಿಸಿದೆ. ಅಂದರೆ, ಈ ಮೊದಲೇ ಕೋವಿಡ್, ಗ್ರಾಮ ಪಂಚಾಯ್ತಿ ಚುನಾವಣೆ ಮತ್ತಿತರ ನೆಪವೊಡ್ಡಿ ಕೇವಲ 7 ದಿನಕ್ಕೆ ಮೊಟಕುಗೊಂಡಿದ್ದ ಅಧಿವೇಶನವನ್ನು ಈಗ ನಾಲ್ಕು ದಿನಕ್ಕೆ ಇಳಿಸಲಾಗಿದೆ. ಅಂದರೆ, ಡಿ.10ರ ಗುರುವಾರವೇ ಅಧಿವೇಶನ ಮುಕ್ತಾಯ ಕಾಣಲಿದೆ. ಸ್ವತಃ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೇ ಮಂಗಳವಾರ ಮಧ್ಯಾಹ್ನ ಈ ವಿಷಯದಲ್ಲಿ ಸದನಕ್ಕೆ ತಿಳಿಸಿದ್ದು, ಈ ಮೊದಲು ಡಿ.15ರವರೆಗೆ ಒಟ್ಟು ಏಳು ದಿನಗಳ ಕಾಲ ಕಲಾಪ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಈ ನಡುವೆ ಗ್ರಾಮ ಪಂಚಾಯ್ತಿ ಚುನಾವಣೆ ಘೋಷಣೆಯಾಗಿರುವುದರಿಂದ ತಮಗೆ ಕಲಾಪಕ್ಕೆ ಹಾಜರಾಗಲು ಕಷ್ಟ ಎಂದು ಬಹುತೇಕ ಶಾಸಕರು ಅಧಿವೇಶನ ಮೊಟಕುಗೊಳಿಸುವಂತೆ ಒತ್ತಾಯಸಿದ್ದಾರೆ. ಸಿಎಂ ಯಡಿಯೂರಪ್ಪ ಕೂಡ ಶಾಸಕರ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ್ದರು. ಆ ಹಿನ್ನೆಲೆಯಲ್ಲಿ ಸದನ ಸಲಹಾ ಸಮಿತಿ ಸಭೆಯಲ್ಲಿ ಅಧಿವೇಶನ ಮೊಟಕುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅಂದರೆ, ರಾಜ್ಯದ ರೈತರು, ಬಡವರು, ಜನಸಾಮಾನ್ಯ ಸಂಕಷ್ಟಗಳು ಬಗ್ಗೆಯಾಗಲೀ, ಹೊಸ ಮಸೂದೆ, ಕಾಯ್ದೆ, ಕಾನೂನುಗಳು ಜನರ ಬದುಕಿನ ಮೇಲೆ ಬೀರುವ ಪರಿಣಾಮಗಳ ಬಗ್ಗೆಯಾಗಲೀ, ಕಳೆದ ನೆರೆ, ಬರ ಸಂತ್ರಸ್ತರ ಗೋಳಿನ ಬಗ್ಗೆಯಾಗಲೀ, ಗಗನಮುಖಿಯಾಗಿರುವ ಇಂಧನ ದರದ ಬಗ್ಗೆಯಾಗಲೀ, ವಿದ್ಯುತ್ ಖಾಸಗೀಕರಣ ಮತ್ತು ಬೆಲೆ ಏರಿಕೆಯ ಬಗ್ಗೆಯಾಗಲೀ, ಕೋವಿಡ್ ಸಂಕಷ್ಟ, ಲಾಕ್ ಡೌನ್ ಹೇರಿಕೆಯ ನಷ್ಟ, ಚಿಕಿತ್ಸಾ ಲೂಟಿಯ ಬಗ್ಗೆಯಾಗಲೀ, ಕೋವಿಡ್ ರೋಗಿಗಳ ಗೋಳಿನ ಬಗ್ಗೆಯಾಗಲೀ ಚರ್ಚಿಸುವುದಕ್ಕಿಂತ, ಆ ಕುರಿತು ಜನರ ಆತಂಕ, ನೋವುಗಳನ್ನುಆಳುವವರ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳುವುದಕ್ಕಿಂತ ಗ್ರಾಮ ಪಂಚಾಯ್ತಿ ಚುನಾವಣೆ ನಡೆಸುವುದೇ ಶಾಸಕರು ಮುಖ್ಯವಾಗಿದೆ.
ರಾಜ್ಯದ ಜನತೆ ಚುನಾವಣೆಯಲ್ಲಿ ಈ ಶಾಸಕರುಗಳಿಗೆ ಮತ ಹಾಕಿ ಕಳಿಸಿರುವುದು ತಮ್ಮ ಸಮಸ್ಯೆ- ಸಂಕಷ್ಟಗಳನ್ನು ಪರಿಹರಿಸಲು, ಕಾಯ್ದೆ-ಕಾನೂನುಗಳ ಮೂಲಕ ತಮ್ಮ ಬದುಕನ್ನು ಇನ್ನಷ್ಟು ಸುಧಾರಿಸಲು, ತಮ್ಮ ಮತ್ತು ರಾಜ್ಯದ ಅಭಿವೃದ್ಧಿಯ ಕುರಿತು ಕೆಲಸ ಮಾಡಲು ಅಲ್ಲ; ಬದಲಾಗಿ ತಮ್ಮ ತಮ್ಮ ವೈಯಕ್ತಿಕ ಮತ್ತು ಪಕ್ಷದ ಬೇಳೆ ಬೇಯಿಸಿಕೊಳ್ಳಲು, ಚುನಾವಣೆಗಳನ್ನು ನಡೆಸಲು ಎಂಬುದು ಈ ಅಧಿವೇಶನ ಮೊಟಕು ಸಾರಿ ಹೇಳುತ್ತಿರುವ ಸಂಗತಿ.
ಒಂದು ಕಡೆ, ಈ ನಾಯಕರುಗಳಿಗೆ ಚುನಾವಣಾ ಪೂರ್ವತಯಾರಿ ಗ್ರಾಮ ಸ್ವರಾಜ್ಯ ಸಮಾವೇಶ ನಡೆಸಲು, ಚುನಾವಣಾ ಪ್ರಚಾರ ರ್ಯಾಲಿಗಳನ್ನು ನಡೆಸಲು, ಪಕ್ಷದ ಸಭೆ ಸಮಾರಂಭಗಳನ್ನು ನಡೆಸಲು ಯಾವ ಕರೋನಾದ ಆತಂಕ ಕಾಡುವುದಿಲ್ಲ. ಆದರೆ, ಸಾರ್ವಜನಿಕ ಹಣಕಾಸು ವೆಚ್ಚ ಮಾಡಿ ವ್ಯವಸ್ಥೆ ಮಾಡಿರುವ ಎಲ್ಲಾ ಸುರಕ್ಷಾ ಕ್ರಮಗಳ ನಡುವೆಯೂ ಸದನದಲ್ಲಿ ಕೂತು ಚರ್ಚಿಸಲು ಕರೋನಾದ ಆತಂಕ ಕಾಡುತ್ತದೆ! ಇದು ಶಾಸಕರ ಸೋಗಲಾಡಿತನಕ್ಕೆ ಒಂದು ತಾಜಾ ನಿದರ್ಶನ.
ಸಾಲುಸಾಲು ಸಂಕಷ್ಟದ ನಡುವೆ ಜನಸಾಮಾನ್ಯರು ಅಳಿವು ಉಳಿವಿನ ಪ್ರಶ್ನೆ ಎದುರಿಸುತ್ತಿರುವಾಗ, ರೈತರು ನೇಣಿಗೆ ಕೊರಳೊಡ್ಡುತ್ತಿರುವಾಗ ಈ ಶಾಸಕರು, ತಮ್ಮನ್ನು ಆರಿಸಿ ಕಳಿಸಿದ ಜನರ ನೋವಿಗೆ ಬೆನ್ನು ಮಾಡಿ ಪಂಚಾಯ್ತಿ ಚುನಾವಣೆಯ ಧಾವಂತದಲ್ಲಿದ್ದಾರೆ. ಇಂತಹ ಜನದ್ರೋಹಕ್ಕಿಂತ ಮತ್ತೊಂದು ಇದೆಯೇ? ಎಂಬುದು ಈಗ ಕೇಳಬೇಕಾದ ಪ್ರಶ್ನೆ.