ದೇಶದ ಆರ್ಥಿಕ ಪರಿಸ್ಥಿತಿಯು ಮತ್ತಷ್ಟು ಬಿಗಡಾಯಿಸುತ್ತಿದೆ ಎಂಬುದನ್ನು ಸರ್ಕಾರ ಬಿಡುಗಡೆ ಮಾಡಿರುವ ಎರಡು ಅಂಕಿಅಂಶಗಳು ಪುಷ್ಠೀಕರಿಸುತ್ತಿವೆ. ಒಂದು ಕಡೆ ಕೈಗಾರಿಕಾ ಉತ್ಪಾದನೆಯು ತೀವ್ರವಾಗಿ ಕುಸಿದಿದ್ದರೆ ಮತ್ತೊಂದೆಡೆ ಚಿಲ್ಲರೆ ಹಣದುಬ್ಬರ ಶೇ.5.5ರ ಗಡಿದಾಟಿ ಜಿಗಿದು ಮೂರುವರ್ಷಗಳ ಗರಿಷ್ಠ ಮಟ್ಟಕ್ಕೇರಿದೆ.
ಕೈಗಾರಿಕಾ ಉತ್ಪನ್ನವು ದೇಶದಲ್ಲಿನ ಒಟ್ಟು ಕೈಗಾರಿಕಾ ಚಟುವಟಿಕೆಗಳನ್ನು ಅಳೆಯುವ ಮಾನದಂಡ. ಪ್ರತಿ ತಿಂಗಳೂ ಆಯಾ ತಿಂಗಳ ಕೈಗಾರಿಕಾ ಉತ್ಪನ್ನ ಉತ್ಪನ್ನಗಳ ಏರಿಳಿತವನ್ನು ಅಳೆಯಲಾಗುತ್ತದೆ. ಅದು ಆರ್ಥಿಕ ಚಟುವಟಿಕೆಯ ಏರಿಳಿತವನ್ನು ಖಚಿತವಾಗಿ ಪ್ರತಿಬಿಂಬಿಸುತ್ತದೆ. ಅಕ್ಟೋಬರ್ ತಿಂಗಳ ಕೈಗಾರಿಕಾ ಉತ್ಪಾದನೆಯು ತ್ವರಿತವಾಗಿ ಕುಸಿದಿದೆ. ಸತತ ಕುಸಿತದ ಹಾದಿಯಲ್ಲಿ ಮತ್ತೊಂದು ಇಳಿಜಾರಿನ ಹೆಜ್ಜೆ ಹಾಕಿದೆ. ಇದು ಆರ್ಥಿಕ ಕುಸಿತ ತಡೆಗೆ ಸರ್ಕಾರ ಕೈಗೊಂಡಿರುವ ಯಾವ ಕ್ರಮಗಳೂ ಫಲದಾಯಕವಾಗಿಲ್ಲ ಅಥವಾ ಪರಿಣಾಮಕಾರಿಯಾಗಿಲ್ಲ ಎಂಬುದನ್ನು ಸೂಚಿಸುತ್ತವೆ.
ಅಕ್ಟೋಬರ್ ತಿಂಗಳ ಕೈಗಾರಿಕಾ ಉತ್ಪನ್ನವು ಶೇ.3.8ಕ್ಕೆ ಕುಸಿದಿದೆ. ಸೆಪ್ಟೆಂಬರ್ ತಿಂಗಳಲ್ಲಿ ಇದು ಶೇ.4.3ರಷ್ಟಿತ್ತು. ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಇದು ಶೇ.8.4ರಷ್ಟು ಇದ್ದದ್ದು ಈ ಪ್ರಮಾಣದಲ್ಲಿ ಕುಸಿದಿರುವುದು ಆಘಾತಕಾರಿ ಸಂಗತಿಯೇ. ನವೆಂಬರ್ ತಿಂಗಳಲ್ಲಿ ಜಿಎಸ್ಟಿ ಸಂಗ್ರಹವು 1 ಲಕ್ಷ ಕೋಟಿ ರುಪಾಯಿ ದಾಟಿತೆಂಬುದೇ ಸಮಾಧಾನದ ಸಂಗತಿಯಾಗಿದೆ. ಇದು ಆರ್ಥಿಕತೆಯು ಚೇತರಿಕೆಯ ಹಾದಿಯಲ್ಲಿ ಸಾಗಿರುವುದನ್ನು ಪ್ರತಿಬಿಂಬಿಸುತ್ತದೆಯೇ? ಖಂಡಿತಾ ಇಲ್ಲಾ ಎನ್ನುತ್ತಾರೆ ಆರ್ಥಿಕ ವಿಶ್ಲೇಷಕರು. ಮೂರನೇ ತ್ರೈಮಾಸಿಕದ ಮುಂಗಡ ತೆರಿಗೆ ಪಾವತಿಯು ವೃದ್ಧಿಸಿರುವ ಕಾರಣದಿಂದಾಗಿ ಒಂದು ನವೆಂಬರ್ ತಿಂಗಳಲ್ಲಿ 1 ಲಕ್ಷ ಕೋಟಿ ರುಪಾಯಿ ದಾಟಿದೆ.
ವಾಸ್ತವಿಕವಾಗಿ ಜಿಎಸ್ಟಿ ಜಾರಿಯಾದ ತಿಂಗಳಿಂದಲೇ ಮಾಸಿಕ 1 ಲಕ್ಷ ಕೋಟಿ ರುಪಾಯಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಜಿಎಸ್ಟಿ ಜಾರಿಗೆ ಬಂದ ಈ 29 ತಿಂಗಳ ಪೈಕಿ ಎರಡು-ಮೂರು ಬಾರಿ ಮಾತ್ರವೇ ಜಿಎಸ್ಟಿ ಸಂಗ್ರಹವು 1 ಲಕ್ಷ ಕೋಟಿ ರುಪಾಯಿ ದಾಟಿದೆ. ಅಂದರೆ, ನಿರೀಕ್ಷಿತ ಪ್ರಮಾಣದ ತೆರಿಗೆ ಸಂಗ್ರಹ ಸಾಧ್ಯವಾಗುತ್ತಿಲ್ಲ. ಜಿಎಸ್ಟಿ ಜಾರಿಯಾದಾಗ ಮಾಸಿಕ ಒಂದು ಲಕ್ಷ ಕೋಟಿ ತೆರಿಗೆ ಸಂಗ್ರಹದ ಜತೆಗೆ ವಾರ್ಷಿಕ ಶೇ.10ರಷ್ಟು ತೆರಿಗೆ ಹೆಚ್ಚಳದ ನಿರೀಕ್ಷೆ ಮಾಡಲಾಗಿತ್ತು. ಆ ಲೆಕ್ಕದಲ್ಲಿ ಈಗ ಮಾಸಿಕ ಜಿಎಸ್ಟಿ ತೆರಿಗೆ ಸಂಗ್ರಹದ ಪ್ರಮಾಣವು 1.20 ಲಕ್ಷ ಕೋಟಿ ರುಪಾಯಿಗಳಾಗಬೇಕಿತ್ತು. ಹೀಗಾಗಿ ವಾಸ್ತವಿಕ ನಿಗದಿತ ಗುರಿಗಿಂತ ತೆರಿಗೆ ಸಂಗ್ರಹವು ಬಹುದೂರದಲ್ಲಿದೆ. ಹೆಚ್ಚು ಕಮ್ಮಿ ಶೇ.20ರಷ್ಟು ತೆರಿಗೆ ಕಡಮೆ ಸಂಗ್ರಹವಾಗುತ್ತಿದೆ. ಬರುವ ತಿಂಗಳಲ್ಲಿ 1 ಲಕ್ಷ ಕೋಟಿ ದಾಟಿದರೂ ಅದು ವಾಸ್ತವಿಕ ನಿರೀಕ್ಷಿತ ಗುರಿಯನ್ನು ಮುಟ್ಟಿದಂತಾಗುವುದಿಲ್ಲ. 1.20 ಲಕ್ಷ ಕೋಟಿ ದಾಟಿದಾಗ ಮಾತ್ರ ಅದು ಗುರಿ ಮುಟ್ಟಿದಂತಾಗುತ್ತದೆ.
ತೆರಿಗೆ ಸಂಗ್ರಹ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಜಿಎಸ್ಟಿ ತೆರಿಗೆ ಸ್ವರೂಪ ಮಾರ್ಪಾಡು ಮಾಡಿ, ತೆರಿಗೆ ಪ್ರಮಾಣ ಹೆಚ್ಚಿಸುವ ಪ್ರಸ್ತಾಪವು ಕೇಂದ್ರ ಸರ್ಕಾರದ ಮುಂದಿದೆ. ತೆರಿಗೆ ಹೆಚ್ಚಳ ಆದ ನಂತರವಾದರೂ ಸರ್ಕಾರದ ನಿಗದಿತ ಗುರಿ ಸಾಧನೆ ಆಗಬಹುದು. ಆದರೆ, ಅದಕ್ಕಾಗಿ ಜನಸಾಮಾನ್ಯರು ‘ಕರಭಾರ’ದ ಮೂಲಕ ಭಾರಿ ಬೆಲೆ ತೆರೆಬೇಕಾಗುತ್ತದೆ.
ಚಿಲ್ಲರೆ ಹಣದುಬ್ಬರ ಜಿಗಿತ
ವಾಸ್ತವಿಕ ಹಣದುಬ್ಬರವನ್ನು ಪ್ರತಿನಿಧಿಸುವ ಚಿಲ್ಲರೆ ಹಣದುಬ್ಬರವು (ಗ್ರಾಹಕ ದರ ಸೂಚ್ಯಂಕ) ನವೆಂಬರ್ ತಿಂಗಳಲ್ಲಿ ಶೇ.5.54ಕ್ಕೆ ಜಿಗಿದಿದೆ. ಆತಂಕಕಾರಿ ಸಂಗತಿ ಎಂದರೆ ಇದು ಮೂರು ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿರುವುದು. ಸಾಮಾನ್ಯವಾಗಿ ಆರ್ಥಿಕತೆ ಕುಸಿತದ ಹಾದಿಯಲ್ಲಿದ್ದಾಗ ಜನರ ಖರೀದಿ ಶಕ್ತಿ ಕುಂದುವುದರಿಂದ ಚಿಲ್ಲರೆ ಹಣದುಬ್ಬರವು ಬಹುತೇಕ ನಿಯಂತ್ರಣದಲ್ಲೇ ಇರುತ್ತದೆ. ಆದರೆ, ಆಹಾರ ವಸ್ತುಗಳು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ದರವು ತೀವ್ರವಾಗಿ ಜಿಗಿದಾಗ ಚಿಲ್ಲರೆ ದರ ಹಣದುಬ್ಬರ ಏರುತ್ತದೆ. ಇದು ದೇಶದ ಆರ್ಥಿಕತೆಗಷ್ಟೇ ಅಲ್ಲ ಗ್ರಾಹಕರ ಪಾಲಿಗೂ ಮಾರಕ. ಚಿಲ್ಲರೆ ದರ ಹಣದುಬ್ಬರವು ಸಾಮಾನ್ಯವಾಗಿ ಆರ್ಥಿಕತೆಯ ಚೇತರಿಕೆಯ ಮುನ್ಸೂಚನೆ ಎಂದೂ ಕೆಲವು ಅರ್ಥಶಾಸ್ತ್ರಜ್ಞರು ವಿಶ್ಲೇಷಿಸುತ್ತಾರೆ. ಆದರೆ, ಪ್ರಸ್ತುತ ಚಿಲ್ಲರೆ ದರ ಹಣದುಬ್ಬರ ಏರಿಕೆ ಆಗಿರುವುದು ಆರ್ಥಿಕತೆಯ ಚೇತರಿಕೆಯಲ್ಲದ ಆದರೆ, ಗ್ರಾಹಕರಿಗೆ ಹೊರೆಯಾಗಿರುವ ಬೆಳವಣಿಗೆಗಳಿಂದ. ಅದು ಆಹಾರ ಉತ್ಪನ್ನ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ದರ ತೀವ್ರವಾಗಿ ಏರಿರುವುದರ ಪರಿಣಾಮ ಹಣದುಬ್ಬರ ಏರಿಕೆಯಾಗಿದೆ.
ಆಕ್ಟೋಬರ್ ತಿಂಗಳಲ್ಲಿ ಶೇ.4.62ರಷ್ಟಿದ್ದ ಚಿಲ್ಲರೆ ಹಣದುಬ್ಬರವು ಒಂದ ತಿಂಗಳಲ್ಲಿ 92ಅಂಶಗಳಷ್ಟು ಅಂದರೆ ಶೇ.0.92ರಷ್ಟು ಏರಿದೆ. ಇದು ಹಣದುಬ್ಬರ ನಿಯಂತ್ರಣದ ಜವಾಬ್ದಾರಿ ಹೊತ್ತಿರುವ ಭಾರತೀಯ ರಿಸರ್ವ್ ಬ್ಯಾಂಕ್ ಹಾಕಿಕೊಂಡಿರುವ ಮಧ್ಯಮಾವಧಿ ಗುರಿಯಾದ ಶೇ.4ರ ಗಡಿಯಿಂದ ಬಹುದೂರ ಸಾಗಿದಂತಾಗಿದೆ. ಕಳೆದ ಮೂರು ವರ್ಷಗಳಲ್ಲೇ ಗರಿಷ್ಠ ಮಟ್ಟ ಇದಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿನ ಆಹಾರ ಉತ್ಪನ್ನಗಳ ಹಣದುಬ್ಬರ ಶೇ.10ರಷ್ಟು ಜಿಗಿದಿದ್ದರೆ ತರಕಾರಿಗಳ ಹಣದುಬ್ಬರವು ಶೇ.35.99ರಷ್ಟು ಜಿಗಿದಿದೆ. ಇದು ಅಕ್ಟೋಬರ್ ನಲ್ಲಿ ಶೇ.26.10ರಷ್ಟಿತ್ತು. ಹಾಗೆಯೇ ಧಾನ್ಯಗಳ ದರ ಶೇ.3.71ರಷ್ಟು, ಮೊಟ್ಟೆ ದರ ಶೇ.6.2ರಷ್ಟು, ಮೀನು, ಮಾಂಸಗಳ ದರವು ಶೇ.9.38ರಷ್ಟು ಜಿಗಿದಿದೆ.
ಚಿಲ್ಲರೆ ಹಣದುಬ್ಬರ ಸೂಚ್ಯಂಕದಲ್ಲಿ ಆಹಾರ ಉತ್ಪನ್ನಗಳ ಪಾಲು ಶೇ.45.9ರಷ್ಟಿದೆ. ಚಿಲ್ಲರೆ ಹಣದುಬ್ಬರವು ಅಕ್ಟೋಬರ್ ತಿಂಗಳಲ್ಲಿ ಶೇ.4.62ರಷ್ಟಿತ್ತು. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಶೇ.2.33ರಷ್ಟಿತ್ತು. ಅದಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ. ಈರುಳ್ಳಿ ದರವು ಸೆಪ್ಟೆಂಬರ್ ನಲ್ಲಿ ಶೇ.45.3ರಷ್ಟು ಮತ್ತು ಅಕ್ಟೋಬರ್ ತಿಂಗಳಲ್ಲಿ ಶೇ.19.6ರಷ್ಟು ಜಿಗಿದಿದೆ. ಇದೂ ಕೂಡಾ ಚಿಲ್ಲರೆ ಹಣದುಬ್ಬರ ತ್ವರಿತ ಏರಿಕೆಗೆ ಕಾರಣವಾಗಿದೆ. ಅದು ಈರುಳ್ಳಿಯಂತಹ ಅತ್ಯಗತ್ಯವಸ್ತುಗಳ ದರ ಏರಿಕೆಯ ಮೇಲೆ ನಿಗಾ ಇಡುವಲ್ಲಿ ಸರ್ಕಾರದ ವೈಫಲ್ಯವನ್ನೂ ಸೂಚಿಸುತ್ತದೆ.
ಹಣದುಬ್ಬರ ಜಿಗಿತ ಮತ್ತು ಕೈಗಾರಿಕಾ ಉತ್ಪನ್ನಗಳ ಕುಸಿತವು ಕೇಂದ್ರ ಸರ್ಕಾರ ಕೈಗೊಂಡ ಕಾರ್ಪೊರೆಟ್ ತೆರಿಗೆಗಳ ಕಡಿತ, ದೇಶೀಯ ಕಂಪನಿಗಳ ತೆರಿಗೆ ಪಾವತಿಗೆ ಹೆಚ್ಚಿನ ಕಾಲಾವಕಾಶ, ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ನಗದು ಹರಿವು ಸೌಲಭ್ಯ ಸೇರಿದಂತೆ ಕೈಗೊಂಡಿರುವ ಕ್ರಮಗಳಾವೂ ಆರ್ಥಿಕತೆಯ ಚೇತರಿಕೆಗೆ ಪೂರಕವಾಗಿಲ್ಲ ಎಂಬುದನ್ನು ಸೂಚಿಸುತ್ತವೆ. ಆರ್ಥಿಕತೆ ಚೇತರಿಕೆಗೆ ಮತ್ತಷ್ಟು ಪರಿಣಾಮಕಾರಿ ಉತ್ತೇಜನ ಕ್ರಮಗಳ ಅಗತ್ಯವನ್ನು ಪ್ರಕಟಿತ ಎರಡೂ ಅಂಕಿ ಅಂಶಗಳು ಒತ್ತಿ ಹೇಳಿವೆ.