ಭಾರತ ನೇಪಾಳ ಗಡಿಯ ಸಮೀಪದಲ್ಲಿ ರಸ್ತೆ ನಿರ್ಮಿಸುವ ಕಾರ್ಯವನ್ನು ನೇಪಾಳ ಸರ್ಕಾರ ತ್ವರಿತಗೊಳಿಸಿದೆ. ನೇಪಾಳ ಪ್ರಜೆಗಳು ಭಾರತದ ರಸ್ತೆಗಳನ್ನು ಅವಲಂಬಿಸುವುದನ್ನು ಕಡಿಮೆ ಮಾಡಲು ರಸ್ತೆ ನಿರ್ಮಿಸುತ್ತಿರುವುದಾಗಿ ನೇಪಾಳ ಸರ್ಕಾರ ಮೂಲಗಳು ತಿಳಿಸಿವೆ. ಈ ಭಾಗದ ನೇಪಾಳಿ ನಿವಾಸಿಗಳು ತಮ್ಮ ಗ್ರಾಮಗಳಿಗೆ ತೆರಳಲು ಅನಿವಾರ್ಯವಾಗಿ ಭಾರತದ ರಸ್ತೆಗಳನ್ನು ಬಳಸುತ್ತಿದ್ದಾರೆ. ಈ ರಸ್ತೆಯ ನಿರ್ಮಾಣ ಕಾರ್ಯ ಪೂರ್ಣಗೊಂಡರೆ ಭಾರತದ ರಸ್ತೆಗಳನ್ನು ಮತ್ತೆ ಅವಲಂಬಿಸಬೇಕಿಲ್ಲ ಎಂದೂ ಹೇಳಿದೆ.
ಅಲ್ಲದೆ ನೇಪಾಳದ ಟೂರ್ ಆಪರೇಟರ್ಗಳಿಗೆ ಯಾತ್ರಿಕರನ್ನು ಈ ರಸ್ತೆಯ ಮೂಲಕ ಕೈಲಾಶ್ ಮಾನಸಸರೋವರಕ್ಕೆ ಕರೆದೊಯ್ಯಲು ಸಹಾಯಕಾರಿಯಾಗುತ್ತದೆ.
ಈ ಭಾಗದಲ್ಲಿ 134 ಕಿಮೀ ಉದ್ದದ ರಸ್ತೆಯನ್ನು ನಿರ್ಮಿಸಲು ಕಳೆದ ಕೆಲವು ತಿಂಗಳ ಹಿಂದೆಯೇ ತನ್ನ ಸೇನೆಯನ್ನು ನಿಯೋಜಿಸಿರುವುದಾಗಿ ನೇಪಾಳ ಹೇಳಿಕೊಂಡಿದೆ. ಕಳೆದ ದಶಕದಲ್ಲಿ ಕೇವಲ 43 ಕಿಮೀ ಉದ್ದದ ರಸ್ತೆಯನ್ನಷ್ಟೇ ಇಲ್ಲಿ ನಿರ್ಮಿಸಲಾಗಿತ್ತು. ರಸ್ತೆ ನಿರ್ಮಾಣಕ್ಕೆ ಸರಕು ಸಾಗಾಣಿಕೆಗೆ ಅನುಕೂಲವಾಗಲು ಘಾಟಿಯಬಗರ್ ನಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಭಾರತ ಮತ್ತು ನೇಪಾಳದ ನಡುವೆ ನಡೆಯುತ್ತಿರುವ ಶೀತಲ ಸಮರಕ್ಕೆ ಈ ರಸ್ತೆ ನಿರ್ಮಾಣ ಕಾರ್ಯ ಇನ್ನಷ್ಟು ತುಪ್ಪ ಸುರಿಯಲಿದೆ. ಉತ್ತರಖಾಂಡ್ನ ಕಾಲಪಾನಿ, ಲಿಪುಲೇಖ್, ಲಿಂಪಿಯಾಧುರ ಮುಂತಾದ ಪ್ರದೇಶಗಳನ್ನು ನೇಪಾಳ ತನ್ನ ನಕ್ಷೆಯಲ್ಲಿ ಒಳಪಡಿಸಿದಂದಿನಿಂದ ಭಾರತ ಹಾಗೂ ನೇಪಾಳದ ನಡುವೆ ಮನಸ್ತಾಪ ಶುರು ಆಗಿದೆ.