ರಾಜ್ಯದಲ್ಲಿ ಎಲ್ಲಿ ನೋಡಿದರೂ ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ ವಿಚಾರವೇ ಚರ್ಚೆ ಆಗುತ್ತಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಜಿಗಣೆಯಂತೆ ಸರ್ಕಾರವನ್ನು ಬಿಟ್ಟುಬಿಡದಂತೆ ಕಾಡುತ್ತಿದ್ದಾರೆ. ಕಾಂಗ್ರೆಸ್ ಆರೋಪಕ್ಕೆ ಬಿಜೆಪಿಯ ಹಲವು ಸಚಿವರು ಸುದ್ದಿಗೋಷ್ಟಿ ನಡೆಸಿ ಯಾವುದೇ ಹಗರಣ ಆಗಿಲ್ಲ. ಸಿದ್ದರಾಮಯ್ಯ ಹೇಳುತ್ತಿರುವ ಹೇಳಿಕೆ ಸತ್ಯಕ್ಕೆ ದೂರವಾದುದು. ತಪ್ಪು ಮಾಡಿಲ್ಲ ಎಂದ ಮೇಲೆ ತನಿಖೆ ಮಾಡುವ ಅವಶ್ಯಕತೆಯಾದರೂ ಏನು..? ಹಾಗಾಗಿ ಸರ್ಕಾರ ಯಾವ ತನಿಖೆಯನ್ನೂ ನಡೆಸುವುದಿಲ್ಲ ಎಂದು ಹೇಳಿದ್ದರು. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಶುಕ್ರವಾರ ಮತ್ತೆ ಗುಡುಗಿದ್ದಾರೆ.
ನಾವು ಬಿಡುಗಡೆ ಮಾಡಿದ ದಾಖಲೆ ಬಗ್ಗೆ ಸಚಿವರು ಮಾತನಾಡಿದ್ದಾರೆ. ನಾವು ಸಮರ್ಪಕ ದಾಖಲೆಯನ್ನೇ ಬಿಡುಗಡೆ ಮಾಡಿದ್ದೇವೆ. ಅವರು ಯಾಕೆ ಭಯಪಡ್ತಿರೋದು. ಯಾವುದೇ ತಪ್ಪು ಮಾಡದೆ ಪ್ರಾಮಾಣಿಕರಾಗಿದ್ದರೆ ನ್ಯಾಯಾಂಗ ತನಿಖೆ ಮಾಡಿಸಿ, ಹೈಕೋರ್ಟ್ನ ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಿ. ಆದರೆ ನಾವು ತಪ್ಪನ್ನೇ ಮಾಡಿಲ್ಲ, ತನಿಖೆಯನ್ನೇ ಮಾಡಿಸುವುದಿಲ್ಲ ಎಂದರೆ ಹೇಗೆ..? ಎಂದು ಪ್ರಶ್ನಿಸಿದ್ದಾರೆ. ನಮ್ಮ ಒತ್ತಾಯ ತುಂಬಾ ಪರಿಣಾಮಕಾರಿಯಾಗಿದೆ. ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಲಿ ಎಂದು ರಾಜ್ಯ ಸರ್ಕಾರವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.
ಕೇಂದ್ರ ಸರ್ಕಾರ ಖರೀದಿಸಿದ್ದು 4 ಲಕ್ಷ.. ಹಾಗಾದ್ರೆ ಅದು ಕಳಪೆಯೇ..?
ಆರೋಪ ಬಂದಾಗ ತನಿಖೆ ಮಾಡಿ ತಪ್ಪಿಲ್ಲ ಎನ್ನುವುದನ್ನು ತೋರಿಸಬೇಕು. ಆದರೆ ತನಿಖೆ ಮಾಡಲ್ಲ ಅಂದರೆ ಏನರ್ಥ..? ಅವರು ತಪ್ಪು ಮಾಡಿದ್ದಾರೆ ಅಂತಾನೇ ತಾನೇ ಅರ್ಥ..? ತಪ್ಪಿಲ್ಲ ಎಂದಾದ ಮೇಲೆ ತನಿಖೆಗೆ ಯಾಕೆ ಹೆದರಬೇಕು..? ನಾವು ಬಿಡುಗಡೆ ಮಾಡಿದ್ದು ಸರ್ಕಾರಿ ದಾಖಲೆಗಳಲ್ಲವೇ..? ನಾವೇನು ಸ್ವಂತ ಕ್ರಿಯೇಟ್ ಮಾಡಿಕೊಂಡಿರೋದಾ ಆ ಡಾಕ್ಯುಮೆಂಟ್..? ಪಿಎಂ ಆಫೀಸಿನಿಂದಲೇ ದಾಖಲೆ ಕೊಟ್ಟಿದ್ದಾರೆ. ನಾವು ತಲಾ ೪ ಲಕ್ಷ ರೂಪಾಯಿ ದರದಂತೆ ೫೦ ಸಾವಿರ ವೆಂಟಿಲೇಟರ್ ಖರೀದಿಸಿದ್ದೇವೆ. ರಾಜ್ಯಕ್ಕೂ ೧,೬೦೦ ವೆಂಟಿಲೇಟರ್ ಕೊಟ್ಟಿದ್ದಾರೆ. ಹಾಗಾದರೆ ಕೇಂದ್ರ ಖರೀದಿ ಮಾಡಿರೋದು ಕಳಪೆ ವೆಂಟಿಲೇಟರ್ಗಳಾ..? 4 ಲಕ್ಷಕ್ಕೆ ಕೇಂದ್ರ ಸರ್ಕಾರ ಖರೀದಿಸಿದ್ದು ಯಾಕೆ..? 4 ಲಕ್ಷಕ್ಕೆ ಪಡೆದು ಎಲ್ಲಾ ರಾಜ್ಯಗಳಿಗೆ ಕೊಟ್ಟಿದ್ದಾರೆ. ಹಾಗಿದ್ದರೆ ಕೇಂದ್ರ ಸರ್ಕಾರ ಕೊಟ್ಟಿರೋದು ಕಳಪೆ ವೆಂಟಿಲೇಟರ್ ಎಂದು ಹೇಳ್ತಾರಾ..? ಕೇಂದ್ರ ಸರ್ಕಾರದ ಮೇಲೆ ಅವರು ಆರೋಪ ಮಾಡ್ಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಮೊದಲು ಹಾಗೆ ಹೇಳಿದ್ರು.. ಆಮೇಲೆ ಬದಲಾದ್ರು..!
320 ಕೋಟಿ ಅಷ್ಟೇ ಖರ್ಚು ಮಾಡಿದ್ದು ಎಂದಿದ್ದಾರಲ್ಲಾ, ಕಾರ್ಮಿಕ ಇಲಾಖೆಯಿಂದ ಎಷ್ಟು ಖರೀದಿಸಿದ್ದಾರೆ, 324 ಕೋಟಿ ಅಷ್ಟೇ ಅಂತ ಸುಳ್ಳು ಹೇಳಿದ್ದು ಯಾಕೆ..? ಆ ಬಳಿಕ ಗುರುವಾರ 2018 ಕೋಟಿ ಅಂತ ಹೇಳಿದ್ದು ಯಾಕೆ..? ಹೀಗೆ ಅಂಕಿ ಸಂಖ್ಯೆ ಬದಲಾವಣೆ ಆಗುತ್ತಿದ್ದ ಮೇಲೆ ಅವರು ಸುಳ್ಳು ಹೇಳಿದಂತೆಯೇ ತಾನೇ..? ಎಂದು ಪ್ರಶ್ನಿಸಿದ್ದಾರೆ. ನಾವು ಸರ್ಕಾರ 4,123 ಕೋಟಿ ಎಂದು ಆರೋಪ ಮಾಡಿದ ಮೇಲೆ ಇದನ್ನು ಹೇಳಿದ್ದಾರೆ ಎಂದು ಕುಟುಕಿದ್ದಾರೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ನಾನು ಸಿದ್ದರಾಮಯ್ಯ ಅಷ್ಟೇ..
ಸರ್ಕಾರದ ದಾಖಲಾತಿಗಳು ಯಾರ ಬಳಿ ಇವೆ..? ನಾನೇನು ಮೈತ್ರಿ ಸರ್ಕಾರದಲ್ಲಿ ಮಿನಿಸ್ಟರ್ ಆಗಿದ್ದೇನಾ..? ಈಗ ಸರ್ಕಾರ ಇರೋದು ಯಾರದ್ದು..? ತನಿಖೆ ಮಾಡಲಿ. ಮೈತ್ರಿ ಸರ್ಕಾರದ ಅವಧಿಯಲ್ಲಿ ಹೆಚ್ಚು ಹಣಕ್ಕೆ ವೆಂಟಿಲೇಟರ್ ಖರೀದಿ ಎಂದಿದ್ದ ಬಿಜೆಪಿ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ. ಇನ್ನೂ ಆರ್ ಅಶೋಕ್ ಕಾಂಗ್ರೆಸ್ನವರು ಕೌರವರು ಎಂದಿದ್ದಕ್ಕೆ ತಿರುಗೇಟು ಕೊಟ್ಟಿರುವ ಸಿದ್ದರಾಮಯ್ಯ ಅವರು ಕೌರವರಾಗೋಕು ಲಾಯಕ್ಕಿಲ್ಲ. ನಾನು ಸಿದ್ದರಾಮಯ್ಯ, ಸಿದ್ದರಾಮಯ್ಯ ಅಷ್ಟೇ. ಪಾಂಡವರು, ಕೌರವರಿಗೆ ಹೋಲಿಕೆ ಮಾಡಿಕೊಳ್ಳಬಾರದು. ಅವರೆಲ್ಲ ಸಾವಿರಾರು ವರ್ಷಗಳ ಹಿಂದೆ ಇದ್ದವರು. ನೀತಿ, ನಿಯಮಗಳು ಇದ್ರೆ ಆಗಿನ ಕಾಲದವೇ ಇರೋದು. ನಾನು ನನ್ನನ್ನು ಯಾರಿಗೂ ಊಹಿಸಿಕೊಳ್ಳಲ್ಲ. ನಾನು ಆಧುನಿಕ ಅಂಬೇಡ್ಕರ್ ಅಂತಾ ಹೇಳೋಕೆ ಆಗುತ್ತಾ..? ಆಧುನಿಕ ಗಾಂಧಿ ಅಂತ ಹೇಳೋಕೆ ಆಗುತ್ತಾ..? ಅದೆಲ್ಲವನ್ನು ಕೆಲವರು ಮಾಡಿಕೊಳ್ತಾರೆ. ಆದರೆ ನಾನು ಸಿದ್ದರಾಮಯ್ಯ ಅಷ್ಟೇ ಎಂದಿದ್ದಾರೆ.
ನ್ಯಾಯಾಂಗ ತನಿಖೆ ಆಗಲೇ ಬೇಕು!
ಬಿಜೆಪಿ ಸಚಿವರು ಹೇಳಿದ್ದನ್ನು ಕೇಳಿದರೆ ಇವರು ಬಹಳ ಭಂಡರಿದ್ದಾರೆ. ನಾನು ನ್ಯಾಯಾಂಗ ತನಿಖೆಗೆ ಆಗ್ರಹ ಮಾಡಿದ್ದೇನೆ. ತನಿಖೆ ಮಾಡಲಿ, ಸತ್ಯ ಹೊರ ಬರಲಿ, ಜನರೇ ನಿರ್ಧಾರ ಮಾಡ್ತಾರೆ. ನ್ಯಾಯಾಂಗ ತನಿಖೆಗೆ ಯಾಕೆ ಹೆದರುತ್ತಿದ್ದೀರಿ..? ಕಾರ್ಮಿಕ ಇಲಾಖೆಯಲ್ಲಿ ಫುಡ್ ಪ್ಯಾಕೆಟ್ಗಳನ್ನು ಕೊಡುವಾಗ ಅವ್ಯವಹಾರ ಮಾಡಿದ್ದಾರೆ ಅಂತ ಹೇಳಿದ್ದೇನೆ. ಮೊನ್ನೆ ನೋಡಿದ್ರೆ ಕೋವಿಡ್ಗೆ ಬರೀ 324 ಕೋಟಿ ಖರ್ಚು ಮಾಡಿದ್ದೇವೆ ಎಂದು ಹೇಳಿದ್ದರು, ಅದೇ ಗುರುವಾಗ 2018 ಕೋಟಿ ಅಂತ ಹೇಳಿದ್ದಾರೆ. ಸರ್ಕಾರದಲ್ಲಿರುವ ಸಚಿವರೇ ನಿಖರ ಮಾಹಿತಿ ನೀಡಿಲ್ಲ ಅಂದ್ರೆ ಕಳ್ಳತನ ಆಗಿದೆ ಅಂತ ಅರ್ಥ ಅಲ್ವಾ ಎಂದಿದ್ದಾರೆ.
ಆರ್ಡರ್ ಮಾಡಬೇಡಿ, ಸಲಹೆ ಅಷ್ಟೇ ಕೊಡಿ..!
ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರು ಅನ್ನೋದು ನೆನಪಿರಲಿ. ಅವರು ಹೀಗೇ ಮಾಡಬೇಕು ಎಂದು ಸರ್ಕಾರಕ್ಕೆ ಆರ್ಡರ್ ಮಾಡುವಂತಿಲ್ಲ. ಸರ್ಕಾರಕ್ಕೆ ಅವರು ಸಲಹೆ ಕೊಡಬೇಕು ಅಷ್ಟೇ. ನಾವು ಈಗಾಗಲೇ ಅವರಿಗೆ ಸುದ್ದಿಗೋಷ್ಟಿ ಮಾಡಿ ಉತ್ತರ ಕೊಟ್ಟಿದ್ದೇವೆ. ನಮ್ಮ ಉತ್ತರಕ್ಕೆ ಅವರ ಪ್ರತಿ ಉತ್ತರವೇ ಇಲ್ಲ. ಕಾಂಗ್ರೆಸ್ನವರು ಹೆಚ್ಚು ಬೆಲೆಗೆ ವೆಂಟಿಲೇಟರ್ ಖರೀದಿ ಮಾಡಿದಾಗ ನೀವ್ಯಾಕೆ ಪ್ರಶ್ನಿಸಲಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅಶೋಕ್, ನಾವು ಯಾವಾಗ ಕೇಳಬೇಕು ಎಂದು ಗೊತ್ತಿದೆ. ಅವರು ಹೇಳಿದಾಗ ಕೇಳಬೇಕು ಅಂತೇನೂ ಇಲ್ಲ. ಕಾಂಗ್ರೆಸ್ ಈಗಾಗಲೇ ಮೂಲೆ ಗುಂಪು ಆಗಿದೆ. ಈ ಸಂದರ್ಭದಲ್ಲಿ ಹೇಗಾದರೂ ಬೆಳಕಿಗೆ ಬರೋಣ ಅಂತಾ ಪ್ರಯತ್ನ ಪಡ್ತಿದಾರೆ. ಇವರಿಗೆ ಕರೋನ ವಾರಿಯರ್ಸ್ ಬಗ್ಗೆ ಗೌರವ ಇಲ್ಲ. ಕರೋನ ವಿರುದ್ಧ ಹೋರಾಟ ಮಾಡ್ತಿರುವ ಅಧಿಕಾರಿಗಳ ಆತ್ಮ ಸ್ಥೈರ್ಯ ಕುಂದಿಸುವ ಕೆಲಸ ಮಾಡ್ತಿದಾರೆ. ಇವರು ಹೇಳಿದ್ದಕ್ಕೆಲ್ಲಾ ತನಿಖೆ ಮಾಡಿಸಲು ಆಗಲ್ಲ. ತನಿಖೆಗೆ ಆಗ್ರಹ ಮಾಡುವುದು ಇವರಿಗೆ ಚಟ ಆಗಿದೆ. ಯಾವುದನ್ನು ತನಿಖೆ ಮಾಡಿಸಬೇಕು, ಯಾವುದನ್ನು ಮಾಡಿಸಬಾರದು ಎಂಬುದು ನಮಗೂ ಗೊತ್ತಿದೆ ಎಂದಿದ್ದಾರೆ.
ತನಿಖೆ ಮಾಡಿಸಲು ಪೊಲೀಸರು ಸಾಲಲ್ಲ..!
ವಿಪಕ್ಷದ ಬುರುಡೆ ಆಪಾದನೆಗೆ ಉತ್ತರ ಕೊಟ್ಟಿದ್ದೇವೆ. ನಮ್ಮ ಉತ್ತರಕ್ಕೆ ಅವರ ಜವಾಬು ಇಲ್ಲ. ಅವರ ಸರ್ಕಾರದಲ್ಲಿ ವೆಂಟಿಲೇಟರ್ ಖರೀದಿ ವಿಚಾರದಲ್ಲಿ ಆಗ ಯಾಕೆ ಪ್ರಶ್ನೆ ಮಾಡಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಪ್ರಶ್ನೆ ಮಾಡಲು ನಾನು ಅವರ ಪಕ್ಷದಲ್ಲಿ ಇಲ್ಲ. ಯಾವಾಗ ಯಾವ ಬಾಣ ಬಿಡಬೇಕು ಅಂತಾ ನನಗೆ ಗೊತ್ತಿದೆ. ನಮಗೆ ಆದೇಶ ಮಾಡಲು ಸಿದ್ದರಾಮಯ್ಯ ಯಾರು..? ಅವರಿಗೆ ತನಿಖೆ ಮಾಡಿ ಅಂತಾ ಆದೇಶ ಮಾಡಲು ಅಧಿಕಾರ ಇಲ್ಲ. ಅಧಿಕಾರ ಇರೋದು ಯಡಿಯೂರಪ್ಪ ಅವರಿಗೆ ಮಾತ್ರ. ಹಾಗಾದರೆ ಹಿಂದೆ ನಾವು ಮಾಡಿದ ಆಪಾದನೆಗಳಿಗೆ ಯಾಕೆ ತನಿಖೆ ಮಾಡಿಸಲಿಲ್ಲ. ಯಾವುದಕ್ಕೆ ತನಿಖೆ ಮಾಡಬೇಕು ಅಂತಾ ಸರ್ಕಾರಕ್ಕೆ ಗೊತ್ತಿದೆ. ಇವರು ಹೇಳಿದಕ್ಕೆಲ್ಲಾ ತನಿಖೆ ಮಾಡಲು ಹೋದರೆ ರಾಜ್ಯದ ಪೊಲೀಸರು ಸಾಲಲ್ಲ ಎಂದಿದ್ದಾರೆ ಆರ್ ಅಶೋಕ್.
ʻನಾವು ಪಾಂಡವರುʼ ಹೇಳಿಕೆಗೆ ಸ್ಪಷ್ಟನೆ..!
ಬಿಜೆಪಿ ಸುದ್ದಿಗೋಷ್ಠಿಯಲ್ಲಿ ಪಂಚ ಪಾಂಡವರು ಎಂಬ ವಿಚಾರದಲ್ಲಿ ಬಿಜೆಪಿಯವರು ಕೌರವರಾಗಲು ಕೂಡಾ ಯೋಗ್ಯರಲ್ಲ ಎಂಬ ಸಿದ್ದರಾಮಯ್ಯ ಟೀಕೆಗೆ ಉತ್ತರಿಸಿರುವ ಆರ್ ಅಶೋಕ್, ನಾವು ಪಂಚ ಪಾಂಡವರು ಐವರು ಬಂದಿದ್ದೇವೆ. ಅವರು ಸುದ್ದಿಗೋಷ್ಠಿಗೆ ಇಬ್ಬರೇ ಇಬ್ಬರು ಬಂದಿದ್ದಾರೆ. ಕೌರವರು ಅಷ್ಟು ಜನ ಇದ್ದರೂ ಯಾವಗಲೂ ಇಬ್ಬರೇ ಬರುತ್ತಾರೆ. ಅವರು ಇಬ್ಬರು ಯಾರು ಅಂತಾ ಎಲ್ಲರಿಗೂ ಗೊತ್ತಿದೆ ಎಂದು ಸಿದ್ದರಾಮಯ್ಯ ಹೇಳಿಕೆಗೆ ಅಶೋಕ್ ತಿರುಗೇಟು ಕೊಟ್ಟಿದ್ದಾರೆ. ಆದರೆ ಆರ್ ಅಶೋಕ್, ಡಿಸಿಎಂ ಅಶ್ವತ್ಥ ನಾರಾಯಣ, ಡಾ ಸುಧಾಕರ್, ಬಸವರಾಜ ಬೊಮ್ಮಾಯಿ, ಶ್ರೀರಾಮುಲು, ಶಿವರಾಂ ಹೆಬ್ಬಾರ್ ಭಾಗಿಯಾಗಿದ್ದರು. ಅಂದರೆ ಆರು ಜನ ಭಾಗಿಯಾಗಿದ್ದರು ಎನ್ನುವುದನ್ನು ಮರೆತಂತಿತ್ತು.
ಪ್ರಜಾಪ್ರಭುತ್ವದಲ್ಲಿ ಬೇಡಿಕೆ ಇಡುವಂತೆಯೂ ಇಲ್ವಾ..?
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬೇಡಿಕೆ ಇಡುವ ಹಕ್ಕನ್ನೇ ಅಶೋಕ್ ಕಿತ್ಕೊಂಡು ಬಿಟ್ರಾ..? ಸತ್ಯ ಹೇಳುವವರು, ಪ್ರಾಮಾಣಿಕರಾದರೆ ತನಿಖೆ ಮಾಡಿಸಿ. ಇದನ್ನು ಹೇಳುವುದಕ್ಕೆ ಸಿಎಂ ಆಗಲೇಬೇಕಾ..? ಪ್ರತಿ ವ್ಯಕ್ತಿಗೂ ಸರ್ಕಾರದ ಖರ್ಚು ವೆಚ್ಚದ ಬಗ್ಗೆ ಪ್ರಶ್ನೆ ಮಾಡುವ ಹಕ್ಕಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಒಂದೊಂದು ಪೈಸೆ ಕೂಡ ಹೇಗೆ ಖರ್ಚಾಯ್ತು, ಹೇಗೆ ಬಂತು ಅಂತ ಲೆಕ್ಕ ಕೇಳುವ ಹಕ್ಕು ನಮಗಿದೆ. ರಾಜ್ಯ ಸರ್ಕಾರ ಇದೇ ರೀತಿ ಭಂಡತನ ಮುಂದುವರಿಸಿದರೆ ನಾವು ಇದಕ್ಕೆ ಬೇರೆ ದಾರಿ ಹುಡುಕ್ತೇವೆ. ನಾವು ಜನರ ಬಳಿಗೆ ಹೋಗ್ತೇವೆ. ಸೋಮವಾರ ಪಕ್ಷದ ಸಭೆ ಕರೆದಿದ್ದೇವೆ ಎಂದಿದ್ದಾರೆ.
ಅಶೋಕನಿಗೆ ಅಧಿಕಾರ ಕೊಟ್ಟಿದ್ದು ಯಾರು..?
ನಾನು ಅವರಿಗೆ ಎಲ್ಲಿ ಆದೇಶ ಮಾಡಿದ್ದೇನೆ..? ನಾನು ಮಾಡಿದ ಆದೇಶ ಯಾವುದು..? ನಾನು ಮಾಡಿದ್ದು ಆಗ್ರಹ, ಒತ್ತಾಯ, ಆದೇಶ ಅಲ್ಲ ಎಂದಿರುವ ಸಿದ್ದರಾಮಯ್ಯ, ಪಾಂಡವರೋ ಕೌರವರೋ ನನಗೆ ಗೊತ್ತಿಲ್ಲ, ನಾನು ದ್ವಾಪರ ಯುಗದಲ್ಲಿ ಇರಲಿಲ್ಲ, ಕಲಿಯುಗದಲ್ಲಿ ಇದ್ದೇನೆ. ಅವನು ಅಶೋಕ, ನಾನು ಸಿದ್ದರಾಮಯ್ಯ. ಮಾಧ್ಯಮದವರು ಪ್ರಶ್ನೆ ಮಾಡ್ತಿರೋದು ಹಾದಿ ಬೀದಿಯಲ್ಲಾ..? ಅಶೋಕನಿಗೆ ಇದನ್ನು ಹೇಳೋಕೆ ಅಧಿಕಾರ ಎಲ್ಲಿಂದ ಬಂತು..? ಅವರ ಸಚಿವರ ನಡುವೆಯೇ ಸಮನ್ವಯತೆ ಇಲ್ಲ. ಅವರಿಗೆ ಭಯ ಬಂದು ಬಿಟ್ಟಿದೆ. ಯಡಿಯೂರಪ್ಪನೇ ಪ್ರೆಸ್ ಮೀಟ್ ಕರೆದಿದ್ರು. ಆಮೇಲೆ ಆರು ಜನ ಸಚಿವರನ್ನು ಹೋಗಿ ಸುಳ್ಳು ಹೇಳಿ ಅಂತ ಯಡಿಯೂರಪ್ಪ ಕಳ್ಸಿದ್ದಾರೆ. ಶ್ರೀರಾಮುಲುಗೆ ಪಾಪ ಏನೇನೋ ನೋವಿದೆ, ಅದಕ್ಕಾಗಿ ಸುಮ್ನಿದ್ದಾರೆ ಎನ್ನುವ ಮೂಲಕ ಮೌನಕ್ಕೆ ಶರಣಾಗಿದ್ದ ರಾಮುಲು ಬಗ್ಗೆ ವ್ಯಂಗ್ಯ ಮಾಡಿದ್ದಾರೆ.
ಸಿದ್ದರಾಮಯ್ಯ ಆರೋಪ ಮಾಡಿದ ತಕ್ಷಣ ತನಿಖೆಯ ಅವಶ್ಯಕತೆ ಇಲ್ಲ. ಎಲ್ಲವೂ ಸರಿ ಇದ್ದಾಗ ತನಿಖೆ ಏಕೆ ಬೇಕು..? ಈ ವಿಚಾರದಲ್ಲಿ ತನಿಖೆಯ ಅಗತ್ಯತೆ ಇಲ್ಲ. ಯಾವ ಇಲಾಖೆಯಲ್ಲೂ ಅಕ್ರಮ ನಡೆದಿಲ್ಲ. ನನ್ನ ಇಲಾಖೆಯಲ್ಲಿ ೫೦೦ ಕೋಟಿ ಖರ್ಚಾಗಿದೆ ಎಂದು ಹೇಳಿದ್ರು. ಆದರೆ ೫ ಕೋಟಿಯೂ ಖರ್ಚಾಗಿಲ್ಲ. ಅವರು ಹೇಳಿದ್ದೆಲ್ಲಾ ಸುಳ್ಳು. ಅನುಭವಸ್ಥ ರಾಜಕಾರಣಿಗಳು ಹೀಗೆ ಮಾತನಾಡೋದು ಅದರಲ್ಲೂ ಸಂಕಷ್ಟದ ಸಮಯದಲ್ಲಿ ಹೀಗೆ ಮಾತನಾಡೋದು ಸರಿಯಲ್ಲ ಎಂದಿದ್ದಾರೆ ಡಿಸಿಎಂ ಗೋವಿಂದ ಕಾರಜೋಳ.
ಸತ್ಯವೆಂತರೆಂದು ಸಾಬೀತು ಮಾಡಲು ಅಡ್ಡಿಯೇನು..?
ಒಟ್ಟಾರೆ, ರಾಜ್ಯ ಸರ್ಕಾರದ ಸಚಿವರು ಮಾತ್ರ ನಾವು ತಪ್ಪನ್ನು ಮಾಡಿಲ್ಲ. ತಪ್ಪನ್ನೇ ಮಾಡಿಲ್ಲ ಎಂದ ಮೇಲೆ ತನಿಖೆ ಮಾಡಿಸುವ ಪ್ರಶ್ನೆಯೇ ಬರುವುದಿಲ್ಲ ಎಂದು ವಾದಿಸುತ್ತಲೇ ಇದ್ದಾರೆ. ಕಾಂಗ್ರೆಸ್ ಮಾತ್ರ ಕೋಟಿ ಕೋಟಿ ಹಣ ಸರ್ಕಾರದಲ್ಲಿ ಸಚಿವರಾಗಿರುವ ಮತ್ತು ಆಡಳಿತ ನಡೆಸುತ್ತಿರುವ ಅಧಿಕಾರಿಗಳ ಜೇಬು ಸೇರಿದೆ. ಭ್ರಷ್ಟಾಚಾರ ಆಗಿರುವುದು ಸತ್ಯ. ತನಿಖೆ ಆಗಲಿ ಎಂದು ಆಗ್ರಹ ಮಾಡುತ್ತಲೇ ಇದೆ. ಒಂದು ವೇಳೆ ಕಾಂಗ್ರೆಸ್ ಮಾಡುತ್ತಿರುವ ಆರೋಪ ಸತ್ಯವೇ ಆಗಿದ್ದರೆ, ಸಚಿವರು ಸೇರಿ ಬಿಜೆಪಿ ನಾಯಕರು ನೂರು ಬಾರಿ ನಾವು ತಪ್ಪು ಮಾಡಿಲ್ಲ ಎಂದು ಹೇಳಿದರೂ ಸುಳ್ಳು ಎಂದೂ ಸತ್ಯವಾಗಲಾರದು. ಸತ್ಯ ಬೆಂಕಿ ಇದ್ದಂತೆ ಎಂದು ಹಿರಿಯರು ಹೇಳುತ್ತಾರೆ. ಅದನ್ನು ಮಡಿಲಲ್ಲಿ ಹೆಚ್ಚು ಸಮಯ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅತೀ ಶೀಘ್ರವಾಗಿ ಹೊರಗೆ ಬರಲೇ ಬೇಕು. ಒಂದು ವೇಳೆ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರವೇ ನಡೆದಿಲ್ಲ ಎಂದರೂ ಸರಿಯೇ, ತನಿಖೆ ಮಾಡಿಸಿ ನಾವು ಕ್ಲೀನ್ ಎಂದು ಸಾಬೀತು ಮಾಡಬಹುದಲ್ಲವೇ..?