ದೇಶಾದ್ಯಂತ ಬಹಳಷ್ಟು ಚರ್ಚೆ ಹುಟ್ಟುಹಾಕಿದ ಕೇರಳದ ಗರ್ಭಿಣಿ ಆನೆಯ ಹತ್ಯೆ ಪ್ರಕರಣಕ್ಕೆ ತಿರುವು ಲಭಿಸಿದೆ. ಈ ಪ್ರಕರಣದಲ್ಲಿ ಆರೋಪಿಯಾಗಿರುವ ವಿಲ್ಸನ್ ಎಂಬುವವರನ್ನು ಬಂಧಿಸಿದ ನಂತರ ಈ ವಿಚಾರದಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗುತ್ತಿದೆ.
ಈವರೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಮಾಹಿತಿಯಂತೆ ಅನಾನಸು ಹಣ್ಣಿನಲ್ಲಿ ಸ್ಪೋಟಕವನ್ನು ಇಟ್ಟು ಆನೆಗೆ ತಿನ್ನಿಸಲಾಗಿದೆ ಎಂಬ ಮಾತು ಸುಳ್ಳು ಎಂದು ಈಗ ತಿಳಿದು ಬಂದಿದೆ. ಅದು ಅನಾನಸು ಹಣ್ಣಲ್ಲ ಬದಲಾಗಿ ತೆಂಗಿನಕಾಯಿ ಎಂಬ ಅಂಶ ಈಗ ತಿಳಿದು ಬಂದಿದೆ. ಪೊಲೀಸ್ ವಿಚಾರಣೆಯಲ್ಲಿ ವಿಲ್ಸನ್ ನೀಡಿದ ಮಾಹಿತಿಯಂತೆ ಉದ್ದೇಶಪೂರ್ವಕವಾಗಿ ಆನೆಗೆ ಸ್ಪೋಟಕವನ್ನು ತಿನ್ನಿಸಲಾಗಿಲ್ಲ. ಬದಲಾಗಿ, ರಬ್ಬರ್ ತೋಟವನ್ನು ಹಾಳುಗೆಡವಲು ಬರುತ್ತಿದ್ದ ಕಾಡು ಹಂದಿಗಳಿಗಾಗಿ ಇಟ್ಟಂತಹ ಸ್ಪೋಟಕವನ್ನು ಆನೆ ತಿಂದಿದೆ ಎಂದು ಹೇಳಿದ್ದಾರೆ.
ಪ್ರತಿಧ್ವನಿಯೊಂದಿಗೆ ಮಾತನಾಡಿ ಈ ಅಂಶವನ್ನು ಧೃಢೀಕರಿಸಿರುವ ಕೇರಳದ ಅರಣ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿರುವ ಸುರೇಂದ್ರ ಕುಮಾರ್ ಅವರು, ವಿಲ್ಸನ್ ನೀಡಿರುವ ಹೇಳಿಕೆಯ ಕುರಿತು ತನಿಖೆ ನಡೆಸಲಾಗುತ್ತಿದೆ. ತಲೆಮರೆಸಿಕೊಂಡಿರುವ ಇಬ್ಬರ ಪತ್ತೆಯ ಬಳಿಕ ಅವರ ಹೇಳಿಕೆಗಳನ್ನು ಆಧರಿಸಿ ವಿಲ್ಸನ್ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಈ ಸಂಬಂಧ ತಾವು ಸ್ಪೋಟಕ ತಯಾರಿಸಿದ ಪ್ರದೇಶವನ್ನು ಪೊಲೀಸರಿಗೆ ವಿಲ್ಸನ್ ತೋರಿಸಿದ್ದು, ಇವನ ಜೊತೆ ಇದ್ದಂತಹ ಅಬ್ದುಲ್ ಕರೀಮ್ ಹಾಗೂ ರಿಯಾಜು಼ದ್ದೀನ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಆನೆಯು ಸ್ಪೋಟಕಭರಿತ ತೆಂಗಿನಕಾಯಿಯನ್ನು ತಿಂದಿದ್ದು ಮೇ 12ರ ಆಸುಪಾಸಿನಲ್ಲಿ. ನಂತರದ ಎರಡು ವಾರಗಳು ಆ ಆನೆಯ ಪಾಲಿಗೆ ನಿಜವಾಗಿ ನರಕ ಸದೃಶವಾದಂತವು. ಬಾಯಿಯಲ್ಲಿ ಆದಂತಹ ಗಾಯದಿಂದಾಗಿ ಏನೂ ತಿನ್ನಲಾಗದೇ, ಮೇ 25ರಂದು ವೆಲ್ಲಿಯಾರ್ ನದಿಯ ಸಮೀಪ ತಲುಪಿತು. ಅಲ್ಲಿ ಎರಡು ದಿನಗಳ ಕಾಲ ಇದ್ದಂತಹ ಆನೆಯು ನೋವು, ಹಸಿವು ತಾಳಲಾರದೇ ಅಲ್ಲಿಯೇ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಈ ಘಟನೆಯು ದೇಶಾದ್ಯಂತ ಭಾರೀ ಸಂಚಲನ ಉಂಟು ಮಾಡಿತ್ತು. ಈ ಸಂಬಂಧ ಹಲವಾರು ಸುಳ್ಳು ಸುದ್ದಿಗಳು ಕೂಡಾ ಹಬ್ಬದ್ದವು. ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ಬಿಜೆಪಿ ಸಂಸದೆ ಮನೇಕಾ ಗಾಂಧೀ ಘಟನೆ ನಡೆದ ಸ್ಥಳ ಮಲಪ್ಪುರಂ ಎಂದು ತಪ್ಪಾಗಿ ಮಾಹಿತಿಯನ್ನೂ ನೀಡಿದ್ದರು.
Also Read: ಕೇರಳದ ಗರ್ಭಿಣಿ ಆನೆ ಸಾವಿಗೆ ನಿಜಕ್ಕೂ ಕಾರಣರಾರು?
ಇದೇ ರೀತಿಯ ಘಟನೆಯೊಂದು ಏಪ್ರಿಲ್ನಲ್ಲಿ ಕೂಡಾ ನಡೆದಿದ್ದು, ಕೊಲ್ಲಂ ಜಿಲ್ಲೆಯ ಪತ್ತನಾಪುರಂ ಎಂಬಲ್ಲಿ ಆನೆಯೊಂದು ತನ್ನ ಬಾಯಿಯಲ್ಲಿ ಉಂಟಾದ ಗಾಯದಿಂದಾಗಿ ಸಾವನ್ನಪ್ಪಿತ್ತು. ಆದರೆ, ಆ ವಿಚಾರವು ಬೆಳಕಿಗೆ ಬಾರದೇ, ಕತ್ತಲಲ್ಲಿಯೇ ಉಳಿದು ಹೋಯಿತು.