ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವರಾಗಿದ್ದ ರಾಜ್ಯದ ಭಾರತೀಯ ಜನತಾ ಪಕ್ಷದ ಪ್ರಭಾವಿ ನಾಯಕ ಸುರೇಶ್ ಅಂಗಡಿ ಅವರು ನಿಧನರಾಗಿದ್ದಾರೆ.
2004ರಿಂದ 2019ರವರೆಗೆ ಬೆಳಗಾಗಿ ಲೋಕಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಲೋಕಸಭೆಗೆ ಪ್ರವೇಶಿಸಿದ್ದ ಅವರು, ಸದ್ಯ ನರೇಂದ್ರ ಮೋದಿಯವರ ಸಂಪುಟದಲ್ಲಿ ರೈಲ್ವೆ ಖಾತೆಯ ಕಿರಿಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಕಳೆದ ವಾರ ಸಂಸತ್ ಅಧಿವೇಶನ ಆರಂಭಕ್ಕೆ ಮುನ್ನ ಎಲ್ಲಾ ಸಂಸದರಿಗೂ ಸಹಜವಾಗಿ ನಡೆಸಿದ ಸೋಂಕು ಪತ್ತೆ ಪರೀಕ್ಷೆ ವೇಳೆ ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿತ್ತು. ಯಾವುದೇ ಸೋಂಕು ಲಕ್ಷಣಗಳಿಲ್ಲದೇ ಇದ್ದರೂ ಅವರು ಮುಂಜಾಗ್ರತಾ ಕ್ರಮವಾಗಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇದೀಗ ಬುಧವಾರ ಸಂಜೆ ದಿಢೀರನೇ ಸಾವು ಕಂಡಿದ್ದು, 65 ವರ್ಷ ವಯೋಮಾನದ ಅವರ ನಿಧನದ ಈ ಸುದ್ದಿ ಅವರ ಮನೆಮಂದಿ ಮತ್ತು ಕ್ಷೇತ್ರದ ಜನತೆಗೆ ಆಘಾತ ತಂದಿದೆ.
ಗಡಿಭಾಗದ ಬೆಳಗಾವಿ ಜಿಲ್ಲೆಯ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷದ ಪ್ರಭಾವಿ ಮುಖಂಡರಾಗಿದ್ದ ಸುರೇಶ್ ಅಂಗಡಿ ಅವರು, ಕಳೆದ ಎರಡು ದಶಕದಿಂದ ಪಕ್ಷ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.