ಕೋವಿಡ್ -19 ವಿರುದ್ಧದ ಭಾರತದ ಲಾಕ್ ಡೌನ್ ಸಮರಕ್ಕೆ ತಿಂಗಳು ತುಂಬಿದೆ. ಮಾರ್ಚ್ 24ರಿಂದ ಜಾರಿಗೆ ಬಂದ ಲಾಕ್ ಡೌನ್, ಬರೋಬ್ಬರಿ 31 ದಿನ ಪೂರೈಸಿ ಇದೀಗ ಮೂವತ್ತೆರಡನೇ ದಿನಕ್ಕೆ ಕಾಲಿಟ್ಟಿದೆ.
ಈ ಒಂದು ತಿಂಗಳಲ್ಲಿ ಉದ್ದೇಶಿತ ಕರೋನಾ ಸೋಂಕು ಹರಡುವಿಕೆ ನಿಯಂತ್ರಣ ಗುರಿ ಸಾಧಿಸಲಾಗಿದೆಯೇ? ಆ ನಿಟ್ಟಿನಲ್ಲಿ ಲಾಕ್ ಡೌನ್ ಮತ್ತು ಸೀಲ್ ಡೌನ್ ಸೇರಿದಂತೆ ನಮ್ಮ ಸರ್ಕಾರದ ಕಾಯತಂತ್ರಗಳು ಎಷ್ಟರಮಟ್ಟಿಗೆ ಫಲ ಕೊಟ್ಟಿವೆ? ಸದ್ಯದ ಲಾಕ್ ಡೌನ್ ಗಡುವು ಮುಗಿದ ಬಳಿಕ, ಮೇ 3ರ ನಂತರದ ಪರಿಸ್ಥಿತಿ ಏನು? ಎಂಬ ಪ್ರಶ್ನೆಗಳು ಈಗ ಕೇಳಿಬರತೊಡಗಿವೆ.
ಈ ನಡುವೆ ಶನಿವಾರ ಬೆಳಗ್ಗೆ ನಡೆದ, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ ಅಧ್ಯಕ್ಷತೆಯ ಕೋವಿಡ್-19 ಕುರಿತ ಕೇಂದ್ರ ಸರ್ಕಾರದ ಉನ್ನತಾಧಿಕಾರಿ ಸಮಿತಿ ಸಭೆಯಲ್ಲಿ ಮಹತ್ವದ ಸಂಗತಿಯನ್ನು ಬಹಿರಂಗಪಡಿಸಿದ್ದು, ಶುಕ್ರವಾರ ಬೆಳಗ್ಗೆಯಿಂದ ಶನಿವಾರ ಬೆಳಗ್ಗೆವರೆಗಿನ 24 ಗಂಟೆ ಅವಧಿಯಲ್ಲಿ ದೇಶದಲ್ಲಿ ಕರೋನಾ ಸೋಂಕು ಪ್ರಕರಣದ ಹೆಚ್ಚಳ ದರ ಶೇ.5.8ಕ್ಕೆ ಕುಸಿದಿದ್ದು, ಇದು ಕಳೆದ ತಿಂಗಳು ದೇಶ 100 ಸೋಂಕು ಪ್ರಕರಣಗಳು ಕಾಣಿಸಿಕೊಂಡ ಬಳಿಕ ಕಂಡ ಅತ್ಯಂತ ಕಡಿಮೆ ಪ್ರಮಾಣ ಎಂದು ಹೇಳಲಾಗಿದೆ.
ಶುಕ್ರವಾರ ಬೆಳಗ್ಗೆ 8ರಿಂದ ಶನಿವಾರ ಬೆಳಗ್ಗೆ 8ರವರೆಗಿನ ಅವಧಿಯಲ್ಲಿ ದೇಶದಲ್ಲಿ ಅಧಿಕೃತವಾಗಿ ಧೃಢಪಟ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಕುಸಿತ ಕಂಡುಬಂದಿದೆ. ಆದರೆ, ಅದರ ಹಿಂದಿನ ದಿನ ಶುಕ್ರವಾರ ಸಂಜೆಯ ಹೊತ್ತಿಗೆ ಸೋಂಕು ಪ್ರಕರಣಗಳ ಹೆಚ್ಚಳ ದರ 7.48ರಷ್ಟಿತ್ತು. ಶುಕ್ರವಾರ ಸಂಜೆ ಹೊತ್ತಿಗೆ ದಿನದ ಒಟ್ಟು ಹೊಸ ಪ್ರಕರಣಗಳ ಪ್ರಮಾಣ 1752 ಆಗಿತ್ತು ಮತ್ತು ಅದು ದೇಶದ ಈವರೆಗಿನ ದಿನವೊಂದರ ಪ್ರಕರಣಗಳ ಅತ್ಯಧಿಕ ದಾಖಲೆಯಾಗಿತ್ತು. ಹಾಗಾಗಿ, ಶನಿವಾರ ಪ್ರಕರಣಗಳ ಹೆಚ್ಚಳ ದರದಲ್ಲಿ ಆಗಿರುವ ಕುಸಿತ ಆಶಾದಾಯಕ ಬೆಳವಣಿಗೆ, 30 ದಿನಗಳ ಲಾಕ್ ಡೌನ್ ಫಲಕೊಟ್ಟಿದೆ ಎಂಬುದಕ್ಕೆ ಸಾಕ್ಷಿ. ಪ್ರಕರಣಗಳ ಹೆಚ್ಚಳವನ್ನು ನಿಯಂತ್ರಿಸುವಲ್ಲಿ ಭಾರತ ಯಶಸ್ವಿಯಾಗಿದ್ದು, ಸೋಂಕು ಹರಡುವಿಕೆಯ ಏರುರೇಖೆಯನ್ನು ಸಮನಾಂತರಗೊಳಿಸುವತ್ತ ನಾವು ಸಾಗುತ್ತಿದ್ದೇವೆ ಎಂದು ಆರೋಗ್ಯ ಸಚಿವಾಲಯ ವಿಶ್ವಾಸ ವ್ಯಕ್ತಪಡಿಸಿದೆ.
ಅಲ್ಲದೆ, ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಉನ್ನತಾಧಿಕಾರ ಸಮಿತಿಯ ಸಿ ಕೆ ಮಿಶ್ರಾ ಅವರು ಕೂಡ, ಗುರುವಾರ, ವೈರಾಣು ಪ್ರಸರಣ ಪ್ರಮಾಣವನ್ನು ಕನಿಷ್ಟ ಮಟ್ಟಕ್ಕೆ ತಗ್ಗಿಸಲು ಮತ್ತು ಪ್ರಕರಣ ದುಪ್ಪಾಟ್ಟಾಗುವ ಅವಧಿಯನ್ನು ವಿಸ್ತರಿಸಲು ಕೂಡ ಸರ್ಕಾರದ ಕಾರ್ಯತಂತ್ರಗಳು ಯಶಸ್ವಿಯಾಗಿವೆ. ಇದು 30 ದಿನಗಳ ಲಾಕ್ ಡೌನ್ ಕ್ರಮದ ಪ್ರತಿಫಲ. ಜೊತೆಗೆ ಸೋಂಕು ದೇಶದಲ್ಲಿ ಸ್ಫೋಟಕ ಹಂತ ತಲುಪದಂತೆಯೂ ತಡೆದಿದ್ದೇವೆ. ಸೋಂಕು ಹರಡುವ ದರ ಸ್ಥಿರತೆಯತ್ತ ಸಾಗಿದೆ. ಇದೆಲ್ಲದರ ಪ್ರಯೋಜನ ಪಡೆದು, ವೈರಾಣು ಪರೀಕ್ಷೆ ಸಾಮರ್ಥ್ಯ ಹೆಚ್ಚಳ ಮತ್ತು ವೈದ್ಯಕೀಯ ಸೌಲಭ್ಯ ಸಜ್ಜುಗೊಳಿಸುವುದು ಸಾಧ್ಯವಾಗಿದೆ. ಹಾಗಾಗಿ ಮಾರ್ಚ್ 23ರ ಹೊತ್ತಿಗೆ 15 ಸಾವಿರದಷ್ಟಿದ್ದ ಒಟ್ಟು ವೈರಾಣು ಪರೀಕ್ಷಾ ಪ್ರಮಾಣ, ಏ.23ರ ಹೊತ್ತಿಗೆ 5 ಲಕ್ಷಕ್ಕೆ ತಲುಪಿದೆ. ಅಂದರೆ, ಈ ಒಂದು ತಿಂಗಳ ಅವಧಿಯಲ್ಲಿ ನಾವು ವೈರಾಣು ಪರೀಕ್ಷೆಯ ವಿಷಯದಲ್ಲಿ ಶೇ.33ರಷ್ಟು ಪ್ರಗತಿ ಸಾಧಿಸಿದ್ದೇವೆ ಎಂದಿದ್ದರು.
ಕಳೆದ 24 ಗಂಟೆಯಲ್ಲಿ ಹೊಸ ಪ್ರಕರಣಗಳಲ್ಲಿ ಇಳಿಕೆ, ಸೋಂಕು ಏರಿಕೆಯ ದರದಲ್ಲಿನ ಇಳಿಕೆ, ಸೋಂಕು ದೇಶದಲ್ಲಿ ಸ್ಫೋಟಕ ಹಂತಕ್ಕೆ ತಲುಪಿಲ್ಲ ಮುಂತಾದ ಬೆಳವಣಿಗೆಗಳು ಮತ್ತು ಹೇಳಿಕೆಗಳ ಹಿನ್ನೆಲೆಯಲ್ಲಿ ಬಹುಶಃ ಮೇ 3ರ ನಂತರ, ಮುಂದಿನ ಶನಿವಾರದ ಹೊತ್ತಿಗೆ ಕನಿಷ್ಠ ಹಸಿರು ವಲಯದಲ್ಲಿರುವ ಪ್ರದೇಶಗಳಲ್ಲಾದರೂ ಲಾಕ್ ಡೌನ್ ನಿಂದ ಜನರಿಗೆ ಮುಕ್ತಿ ಸಿಗಬಹುದು ಎಂಬ ಆಶಾವಾದ ಚಿಗುರಿದೆ. ಸರ್ಕಾರ ಮತ್ತು ಸಾಂಕ್ರಾಮಿಕ ರೋಗ ತಜ್ಞರು ಕೂಡ ಅಂತಹ ನಿರೀಕ್ಷೆಗಳಿಗೆ ಪೂರಕ ವರಸೆಯಲ್ಲಿ ಮಾತನಾಡುತ್ತಿದ್ದಾರೆ. ಹಾಗಾಗಿ ಜನ ಒಂದೂವರೆ ತಿಂಗಳ ಗೃಹಬಂಧನದಿಂದ ಬೀದಿಗೆ ಮುಕ್ತವಾಗಿ ಇಳಿಯಲು ಹಪಾಹಪಿಸುತ್ತಿದ್ದಾರೆ.
ಆದರೆ, ಈ ನಡುವೆ ದೇಶದ ಕೋವಿಡ್-19ರ ಈವರೆಗಿನ ಪರಿಸ್ಥಿತಿ, ಬೆಳವಣಿಗೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೋಂಕು ವ್ಯಾಪಿಸಿರುವ ರೀತಿ ಮತ್ತು ಅದರ ಬೆಳವಣಿಗೆ ಮಾದರಿಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ ವಿಜಯ್ ರಾಘವನ್ ಅವರು ರಚಿಸಿದ ವಿವಿಧ ಮುಂಚೂಣಿ ಸಂಸ್ಥೆಗಳ ವಿಜ್ಞಾನಿಗಳು ಸಿದ್ಧಪಡಿಸಿದ ‘ಕೋವಿಡ್- 19 ಮೆಡ್ ಇನ್ವೆಂಟರಿ’ ಎಂಬ ಸೋಂಕು ಅಂದಾಜು ಮಾದರಿ ಬೇರೆಯದೇ ಆಘಾತಕಾರಿ ಸಂಗತಿಯನ್ನು ಹೇಳಿದೆ.
ಆ ಮಾದರಿಯ ಪ್ರಕಾರ, ಮೇ ಮಧ್ಯಂತರದ ಹೊತ್ತಿಗೆ ದೇಶದ ಕೋವಿಡ್-19 ಗೆ ಬಲಿಯಾದವರ ಸಂಖ್ಯೆ ಬರೋಬ್ಬರಿ 38,220ಕ್ಕೆ ತಲುಪಲಿದೆ ಮತ್ತು ಒಟ್ಟಾರೆ ಸೋಂಕಿತರ ಪ್ರಮಾಣ 30 ಲಕ್ಷದಷ್ಟಾಗಲಿದೆ! ಹೌದು, ಈ ಅಂದಾಜು ಬೆಚ್ಚಿಬೀಳಿಸುವಂತಿದ್ದರೂ, ಈವರೆಗಿನ ಸೋಂಕಿನ ಏರಿಳಿಕೆ, ಪ್ರಸರಣದ ವೇಗ, ಸಾವಿನ ಪ್ರಮಾಣ ಮುಂತಾದ ಅಂಶಗಳನ್ನು ಆಧರಿಸಿ ಬೆಂಗಳೂರಿನ ಐಐಎಸ್ಸಿ, ಮುಂಬೈನ ಐಐಟಿ, ಜವಾಹರ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರೀಸರ್ಚ್(ಜೆಎನ್ ಸಿಎಎಸ್ ಆರ್), ಪುಣೆಯ ಆರ್ಮಡ್ ಫೋರ್ಸಸ್ ಮೆಡಿಕಲ್ ಕಾಲೇಜು ಸೇರಿದಂತೆ ದೇಶದ ಅತ್ಯುನ್ನತ ವೈಜ್ಞಾನಿ ಸಂಸ್ಥೆಗಳ ವಿಜ್ಞಾನಿಗಳು ಈ ಅಂದಾಜು ಸಿದ್ಧಪಡಿಸಿದ್ದಾರೆ. ಪರಿಸ್ಥಿತಿ ತೀರಾ ಕೈಮೀರಿ ಹೋದಲ್ಲಿ ಉಂಟಾಗಬಹುದಾದ ರೋಗದ ಹಾನಿಯ ಅಂದಾಜು ಇದಾಗಿದ್ದು, ವಾಸ್ತವವಾಗಿ ಇಷ್ಟು ವ್ಯಾಪಕ ಪ್ರಮಾಣದಲ್ಲಿ ಸಾವು- ನೋವು ಉಂಟಾಗದೆಯೂ ಇರಬಹುದು ಎಂದೂ ಹೇಳಲಾಗಿದೆ.
ಇದೇ ಮಾದರಿಯನ್ನು ಇಟಲಿ ಮತ್ತು ಅಮೆರಿಕದ ನ್ಯೂಯಾರ್ಕ್ ರಾಜ್ಯದ ಕರೋನಾ ಸೋಂಕಿನ ವಿಷಯದಲ್ಲಿ ಅನ್ವಯಿಸಿದಾಗ ವಾಸ್ತವವಾಗಿ ಅಲ್ಲಿ ಆಗಿರುವ ಸಾವು-ನೋವಿನ ಪ್ರಮಾಣಕ್ಕೆ ಸರಿಹೊಂದುವ ನಿಖರ ಫಲಿತಾಂಶವೇ ಸಿಕ್ಕಿದೆ ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಈ ಅಂದಾಜು ಮಾದರಿ ಹೊರಹಾಕಿರುವ ಈ ಅಂದಾಜು ಅಂಕಿಅಂಶಗಳು ನಿಜಕ್ಕೂ ಆತಂಕ ಹುಟ್ಟಿಸಿವೆ.
ಆ ಮಾದರಿ ಸದ್ಯಕ್ಕೆ ಮುಂದಿನ ನಾಲ್ಕು ವಾರಗಳ ಅವಧಿಗೆ ವಾರವಾರು ಸೋಂಕಿನ ಪರಿಣಾಮಗಳನ್ನು ಅಂದಾಜಿಲಾಗಿದೆ. ಆ ಪ್ರಕಾರ, ಏಪ್ರಿಲ್ 28ಕ್ಕೆ ಕೊನೆಯಾಗುವ ಮೊದಲ ವಾರದಲ್ಲಿ ಸಾವಿನ ಸಂಖ್ಯೆ 1,012ಕ್ಕೆ ತಲುಪಲಿದೆ(ಸದ್ಯ ಶನಿವಾರ ರಾತ್ರಿ ಹೊತ್ತಿಗೆ 780 ಸಾವು ದೇಶದಲ್ಲಿ ದಾಖಲಾಗಿವೆ!). ಮೇ 5ಕ್ಕೆ ಅಂತ್ಯವಾಗುವ ಎರಡನೇ ವಾರದ ಹೊತ್ತಿಗೆ ಸಾವಿನ ಪ್ರಮಾಣ 3258ಕ್ಕೆ ತಲುಪಲಿದೆ. ಮೇ 12ಕ್ಕೆ ಅಂತ್ಯವಾಗುವ ಮೂರನೇ ವಾರದ ಹೊತ್ತಿಗೆ ಆ ಪ್ರಮಾಣ 10,924ಕ್ಕೆ ಏರಿಕೆಯಾಗಲಿದ್ದು, ಮೇ 19ಕ್ಕೆ ಕೊನೆಯಾಗುವ ನಾಲ್ಕನೇ ವಾರದ ಹೊತ್ತಿಗೆ ದೇಶದಲ್ಲಿ ಕರೋನಾಕ್ಕೆ ಬಲಿಯಾಗುವವರ ಸಂಖ್ಯೆ ಬರೋಬ್ಬರಿ 38,220ಕ್ಕೆ ತಲುಪಲಿದೆ ಎಂದು ಅಂದಾಜಿಸಲಾಗಿದೆ.
ಇದು ಉತ್ಪ್ರೇಕ್ಷಿತ ಆಘಾತಕಾರಿ ಚಿತ್ರಣ ಎನಿಸಿದರೂ, ಇಟಲಿ ಮತ್ತು ಅಮೆರಿಕದ ನ್ಯೂಯಾರ್ಕ್ ರಾಜ್ಯಗಳಲ್ಲಿ ಕರೋನಾ ಸೋಂಕು ಹಬ್ಬಿದ ರೀತಿ ಮತ್ತು ಉಂಟುಮಾಡಿದ ಜೀವಹಾನಿಯ ಅಂದಾಜಿನ ಮೇಲೆ ನೋಡಿದರೆ, ತೀರಾ ಅವಾಸ್ತವಿಕ ಎನಿಸದು.
ಹಾಗೆಯೇ, ಅಂದಾಜಿನ ಪ್ರಕಾರ ಸೋಂಕು ಸ್ಫೋಟಕ ಪ್ರಮಾಣದಲ್ಲಿ ಹರಡಿದ್ದಲ್ಲಿ ಅದರ ನಿಯಂತ್ರಣ ಮತ್ತು ಚಿಕಿತ್ಸೆಗೆ ನಿರೀಕ್ಷಿತ ಪ್ರಮಾಣದಲ್ಲಿ ಸರ್ಕಾರ ತಯಾರಿಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಅಂದಾಜಿನ ಪ್ರಕಾರ ಮೇ 6 ಹೊತ್ತಿಗೆ ದೇಶಾದ್ಯಂತ ಗಂಭೀರ ಕರೋನಾ ರೋಗಿಗಳ ಚಿಕಿತ್ಸೆಗೆ ಬೇಕಾಗಬಹುದಾದ ಐಸಿಯು ಹಾಸಿಗೆಗಳ ಸಂಖ್ಯೆ 7928 ಆದರೆ, ಅದೇ ಮೇ 14ರ ಹೊತ್ತಿಗೆ 28,049 ಐಸಿಯು ಹಾಸಿಗೆಗಳು ಬೇಕಾಗಲಿವೆ. ಮೇ 19ರ ಹೊತ್ತಿಗೆ ಈ ಪ್ರಮಾಣ 76 ಸಾವಿರಕ್ಕೆ ತಲುಪಲಿದ್ದು, ಅಷ್ಟು ಪ್ರಮಾಣದ ಐಸಿಯು ಹಾಸಿಗೆಗಳನ್ನು ಸರ್ಕಾರ ಸಜ್ಜುಗೊಳಿಸಬೇಕಾಗಬಹುದು. ಜೊತೆಗೆ ಆ ವೇಳೆಗೆ(ಮೇ19) ದೇಶದ ಒಟ್ಟು ಕರೋನಾ ಸೋಂಕಿತರ ಪ್ರಮಾಣ ಬರೋಬ್ಬರಿ 30 ಲಕ್ಷಕ್ಕೆ ತಲುಪಲಿದೆ!
ಹಾಗೆಯೇ ಚಿಕಿತ್ಸೆಗೆ ಬೇಕಾಗುವ ವೈದ್ಯರು, ದಾದಿಯವರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ, ವೆಂಟಿಲೇಟರು, ಜೀವರಕ್ಷಕ ಸಾಧನಗಳಾದ ಪಿಪಿಇ ಕಿಟ್ ಗಳ ಪ್ರಮಾಣ ಕೂಡ ರೋಗಿಗಳ ಪ್ರಮಾಣದ ಹೆಚ್ಚಳಕ್ಕೆ ಅನುಗುಣವಾಗಿ ಭಾರೀ ಹೆಚ್ಚಾಗಲಿದೆ. ಅಂತಹ ಪರಿಸ್ಥಿತಿ ಎದುರಿಸಲು ಕೂಡ ಸರ್ಕಾರ ಸಜ್ಜಾಗಬೇಕು ಎಂದು ಈ ಮಾದರಿ ಸೂಚಿಸಿದೆ.
ಈ ನಡುವೆ, ಸರ್ಕಾರದ ಅಂಕಿಅಂಶಗಳ ಪ್ರಕಾರ ಈಗಾಗಲೇ ಸೋಂಕು ಹರಡುವ ವೇಗ ತಗ್ಗಿದೆ. ಏರಿಕೆಯ ದರದಲ್ಲಿ ನಿಯಂತ್ರಣ ಸಾಧಿಸಲಾಗಿದ್ದು, ಸೋಂಕು ರೇಖೆಯನ್ನು ಸಮಾನಾಂತರಗೊಳಿಸುವ ನಿಟ್ಟಿನಲ್ಲಿ ಯಶಸ್ಸು ಸಿಕ್ಕಿದೆ ಎನ್ನಲಾಗುತ್ತಿದೆ. ಆ ಅಂಶಗಳ ಆಧಾರದ ಮೇಲೆ, ಆರೋಗ್ಯ ತಜ್ಞರು ರೇಖಾ ಮಾದರಿಯನ್ನು ಸಿದ್ಧಪಡಿಸಿದ್ದು, ಅದರ ಪ್ರಕಾರ ಮೇ 16ರ ಹೊತ್ತಿಗೆ ಸೋಂಕು ರೇಖೆ ಶೂನ್ಯಕ್ಕೆ ತಲುಪಲಿದೆ ಎಂಬ ವರದಿಗಳೂ ಇವೆ. ಲಾಕ್ ಡೌನ್ ನಿಂದಾಗಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ನಿಯಂತ್ರಣ ದರ ಹೀಗೇ ಮುಂದುವರಿದಲ್ಲಿ ಮೇ 16ರ ಹೊತ್ತಿಗೆ ಸೋಂಕು ಹರಡುವ ಪ್ರಮಾಣ ಶೂನ್ಯಕ್ಕೆ ಇಳಿಯಲಿದೆ ಎಂಬುದು ಆ ಅಂದಾಜಿನ ವಾದ.
ಸದ್ಯದ ಸ್ಥಿತಿಯಲ್ಲಿ ಈ ಎರಡೂ ಅಂದಾಜುಗಳು ಎರಡು ವ್ಯತಿರಿಕ್ತ ತುದಿಯಲ್ಲಿದ್ದಂತೆ ತೋರುತ್ತಿವೆ. ಆದರೆ, ವೈಜ್ಞಾನಿಕ ವಿಶ್ಲೇಷಣೆಯ ಮೇಲೆ ನಿಂತಿರುವ ಈ ಅಂದಾಜುಗಳನ್ನು ಸಾರಾಸಗಟಾಗಿ ತಳ್ಳಿಹಾಕಲಾಗದು ಎಂಬುದನ್ನು ಮರೆಯಲಾಗದು. ಅದೇನೇ ಇರಲಿ, ಮೇ 3ರ ಲಾಕ್ ಡೌನ್ ಎರಡನೇ ಪರ್ವದ ಅಂತ್ಯದ ಹೊತ್ತಿಗೆ ಒಂದು ನಿಖರ ಚಿತ್ರಣ ಸಿಗಲಿದೆ ಎಂಬುದು ಮಾತ್ರ ದಿಟ.