ಇಡೀ ವಿಶ್ವದಲ್ಲೇ ಸತತ ಲಾಕ್‌ಡೌನ್ ನಡುವೆಯೂ ಕರೋನಾ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ವಿಫಲವಾದ ದೇಶ ಭಾರತ ಎನ್ನಲಾಗುತ್ತಿದೆ. ದೇಶದಲ್ಲಿ ಲಾಕ್‌ಡೌನ್ ಹೇರುವ ಸಂದರ್ಭದಲ್ಲಿ ದೇಶದ ಒಟ್ಟು ಕರೋನಾ ಸೋಂಕಿತರ ಸಂಖ್ಯೆ 550 ರಿಂದ 600ರ ಆಸುಪಾಸಿನಲ್ಲಿತ್ತು. ಆದರೆ, ಈ ಸಂಖ್ಯೆ ಇಂದು ಕನಿಷ್ಟ 4.5 ಲಕ್ಷಕ್ಕೆ ಏರಿಕೆಯಾಗಿದೆ. ಪ್ರತಿದಿನ ಸರಾಸರಿಯಾಗಿ 15,000 ಜನರ ವರದಿ ಪಾಸಿಟಿವ್ ಆಗುತ್ತಿದೆ. ಇನ್ನೂ ದೇಶದ ಎಲ್ಲಾ ಜನರನ್ನೂ ಸಾಮೂಹಿಕ ಪರೀಕ್ಷೆಗೆ ಒಳಪಡಿಸಿದರೆ ಈ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹಾಗಾದರೆ ಭಾರತ ಎಡವಿದ್ದೆಲ್ಲಿ? ಇದಕ್ಕೆ ಯಾರನ್ನು ಧೂಷಿಸಬೇಕು? ಎಂದು ಪ್ರಸ್ತುತ ಇಡೀ ಭಾರತೀಯರು ಅವಲೋಕಿಸಬೇಕಿದೆ.
ಅದು ಮಾರ್ಚ್ 24ರ ರಾತ್ರಿ 9 ಗಂಟೆ. ಟಿವಿ ಪರದೆಯಲ್ಲಿ ಕಾಣಿಸಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ತಮ್ಮ ಎಂದಿನ ದಾಟಿಯಲ್ಲಿ ಕರೋನಾ ನಿಯಂತ್ರಣದ ಬಗ್ಗೆ ಮಾತನಾಡಿದ್ದರು. “ಮಹಾಭಾರತ ಯುದ್ಧದಲ್ಲಿ ಪಾಂಡವರು ಗೆಲುವು ಸಾಧಿಸಲು 18 ದಿನಗಳಾಗಿತ್ತು. ಆದರೆ, ಈ ಕರೋನಾ ಸೋಂಕಿನ ವಿರುದ್ಧ ನಾವು ಹೋರಾಡಿ ಗೆಲುವು ಸಾಧಿಸಲು ನಮಗೆ 21 ದಿನಗಳು ಬೇಕಾಗುತ್ತದೆ. ಹೀಗಾಗಿ ಮಾರ್ಚ್.25 ರಿಂದ ಇಡೀ ದೇಶ ಲಾಕ್‌ಡೌನ್ ಆಗಲಿದೆ. ಯಾರೂ ಅನವಶ್ಯಕವಾಗಿ ಮನೆಯಿಂದ ಹೊರಬರಬೇಡಿ”ಎಂದು ಮನವಿ ಮಾಡಿದ್ದರು.
ಭಾರತದ ಮಟ್ಟಿಗೆ 21 ದಿನಗಳ ಲಾಕ್‌ಡೌನ್ ಎಂಬುದು ಜನರಿಗೂ ಹೊಸದು, ಸರ್ಕಾರಕ್ಕೂ ಹೊಸದು. ಆದರೂ, ಜನ ಪ್ರಧಾನಿ ಮೋದಿಯ ನಿಲುವಿಗೆ ಒಮ್ಮತ ಸೂಚಿಸಿದ್ದರು. ಇಡೀ ಮಾಧ್ಯಮ ಜಗತ್ತು ಮೋದಿಯ ತೀರ್ಮಾನವನ್ನು ಕೊಂಡಾಡಿತ್ತು. ಆದರೆ, ಆ 21 ದಿನಗಳ ಲಾಕ್‌ಡೌನ್ ಈಗ 90 ದಿನಗಳನ್ನೂ ದಾಟಿ ಮುನ್ನಡೆಯುತ್ತಿದೆ. ಆದರೆ, ಸೋಂಕಿತರ ಮತ್ತು ಮೃತರ ಸಂಖ್ಯೆ ಮಾತ್ರ ಇಳಿಯುವಂತೆ ಕಾಣುತ್ತಿಲ್ಲ.
ಇನ್ನೂ ಲಾಕ್‌ಡೌನ್‌ನಿಂದಾಗಿ ಇಡೀ ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ನಿರುದ್ಯೋಗ ತಾಂಡವವಾಡುತ್ತಿದೆ. ಉದ್ಯೋಗದಲ್ಲಿದ್ದವರೂ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಈಗಾಗಲೇ ಜಿಎಸ್ಟಿಯಿಂದ ಏದುಸಿರು ಬಿಡುತ್ತಿದ್ದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ಲಾಕ್‌ಡೌನ್‌ನಿಂದಾಗಿ ಸಂಪೂರ್ಣ ಉಸಿರು ನಿಲ್ಲಿಸಿವೆ. ವಲಸೆ ಕಾರ್ಮಿಕರು ತುತ್ತು ಅನ್ನಕ್ಕೂ ಪರಿತಪಿಸುವಂತಾಗಿದೆ. ಬಡ-ಮಧ್ಯಮ ವರ್ಗದ ಜನರ ಬದುಕು ಅಕ್ಷರಶಃ ನರಕಯಾತನೆಯಾಗಿದೆ. ಹಾಗಾದರೆ, ಭಾರತದ ಎಡವಿದ್ದೆಲ್ಲಿ? ವಿಶ್ವದ ಯಾವ ಯಾವ ರಾಷ್ಟ್ರ ಲಾಕ್‌ಡೌನ್‌ನಲ್ಲಿ ಯಶಸ್ವಿಯಾಗಿದೆ? ಲಾಕ್‌ಡೌನ್‌ನ ಸಂಬಂಧಿಸಿದಂತೆ ಭಾರತ ಯಾವ ದೇಶದ ಮಾದರಿಯನ್ನು ಅನುಸರಿಸಬೇಕಿತ್ತು? ಭಾರತದ ಇಂದಿನ ಆರ್ಥಿಕ ವಸ್ತುಸ್ಥಿತಿ ಏನು? ಇಲ್ಲಿದೆ ಮಾಹಿತಿ.
ಮಲೇಷ್ಯಾದ ಲಾಕ್‌ಡೌನ್ ಮಾದರಿ
ಮಲೇಷ್ಯಾ ಕೇವಲ 40 ವರ್ಷಗಳ ಹಿಂದೆ ನಮಗಿಂತಲೂ ಬಡವರಾಗಿದ್ದ ಮಧ್ಯಮ ಮಟ್ಟದ ಕೈಗಾರಿಕೀಕರಣಗೊಂಡ ರಾಷ್ಟ್ರ. ಆದರೆ, ಪ್ರಸ್ತುತ ಈ ರಾಷ್ಟ್ರ ತಾಂತ್ರಿಕವಾಗಿ ಮತ್ತು ಅಭಿವೃದ್ಧಿ ದೃಷ್ಟಿಕೋನದಿಂದ ನಮಗಿಂತ ಎತ್ತರಕ್ಕೆ ಬೆಳೆದಿದೆ. ಅಲ್ಲದೆ, ಲಾಕ್‌ಡೌನ್ ಮೂಲಕ ಕರೋನಾ ನಿಯಂತ್ರಿಸುವಲ್ಲಿ ಮತ್ತು ದೇಶದ ಆರ್ಥಿಕತೆಯನ್ನು ಉಳಿಸಿಕೊಳ್ಳುವಲ್ಲೂ ಈ ರಾಷ್ಟ್ರ ಭಾರತಕ್ಕೆ ಮಾದರಿಯಾಗಿದೆ.
ಅಸಲಿಗೆ ಕರೋನಾ ಸೋಂಕು ಸಾಮೂದಾಯಿಕವಾಗಿ ಹರಡುವುದನ್ನು ತಡೆಯುವ ಸಲುವಾಗಿ ಮಲೇಷ್ಯಾ ಭಾರತಕ್ಕಿಂತ ಒಂದು ವಾರದ ಮೊದಲೇ ಲಾಕ್‌ಡೌನ್ ಘೋಷಣೆ ಮಾಡಿತ್ತು. ಮಾರ್ಚ್ 18ರ ವೇಳೆಗೆ ಇಡೀ ದೇಶವನ್ನು ಲಾಕ್ ಮಾಡಲಾಗಿತ್ತು. ಅಲ್ಲದೆ, ಮೂರನೇ ಹಂತದಲ್ಲಿ ಮೇ 12 ರಂದು ಲಾಕ್‌ಡೌನ್ ಕೊನೆಗೊಳ್ಳುವಂತೆ ವಿನ್ಯಾಸಗೊಳಿಸಲಾಗಿತ್ತು.
ಆದರೆ, ಮೇ.4 ರಿಂದಲೇ ಸ್ಥಳೀಯ ಉದ್ಯಮಗಳು ಮತ್ತು ಸಾರ್ವಜನಿಕ ಸಾರಿಗೆಯ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲಾಗಿತ್ತು. ಆನಂತರ ಅರ್ಧ ಮಿಲಿಯನ್ ಮಲೇಷಿಯನ್ನರು ಸಹಿ ಮಾಡಿದ ಸಾರ್ವಜನಿಕ ಅರ್ಜಿಯ ನಂತರ, ಇದು ಭಾಗಶಃ ವಿಶ್ರಾಂತಿ ಪಡೆದ ಮೂರನೇ ಹಂತದ ಲಾಕ್‌ಡೌನ್ ಅನ್ನು ಮೇ.10 ರಿಂದ ಜೂನ್.09ರ ವರೆಗೆ ವಿಸ್ತರಿಸಲಾಗಿತ್ತು.
ಮಲೇಷ್ಯಾದಲ್ಲಿ ಈ ಎರಡೂ ಲಾಕ್‌ಡೌನ್ ಯಶಸ್ವಿಯಾಗಿತ್ತು. ಏಕೆಂದರೆ ಈ ಅವಧಿಯಲ್ಲಿ ದೇಶದಲ್ಲಿರುವ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅಲ್ಲದೆ, ಸೂಕ್ತ ಚಿಕಿತ್ಸೆ ನೀಡುವ ಮೂಲಕ ಕರೋನಾವನ್ನು ನಿರ್ಮೂಲನೆ ಮಾಡಲಾಗಿತ್ತು. ಪರಿಣಾಮ ಜೂನ್ 8-9ರ ಹೊತ್ತಿಗೆ ದೇಶವು ಅನುಭವಿಸಿದ ಒಟ್ಟು COVID-19 ಪ್ರಕರಣಗಳ ಸಂಖ್ಯೆ 8,319. ಚೇತರಿಸಿಕೊಂಡವರ ಸಂಖ್ಯೆ 6,694 . ಅಂದರೆ ಕರೋನಾ ರೋಗಿಗಳ ಪೈಕಿ ಶೇ.80 ರಷ್ಟು ಜನ ರೋಗಿಂದ ಮುಕ್ತರಾಗಿದ್ದರು. ಜೂನ್ 8 ರಂದು ಮಲೇಷ್ಯಾದಲ್ಲಿ ದಾಖಲಾದ ಹೊಸ ಪ್ರಕರಣಗಳ ಸಂಖ್ಯೆ ಕೇವಲ ಏಳು ಮಾತ್ರ.
ಮಲೇಷ್ಯಾ ಈ ಮಟ್ಟದ ಯಶಸ್ಸು ಸಾಧಿಸಲು ಉನ್ನತ ಮಟ್ಟದ ಅಭಿವೃದ್ಧಿ, ಉತ್ತಮ ಆರೋಗ್ಯ ಸೇವೆ ಮತ್ತು ಪರಿಣಾಮಕಾರಿ ಆಡಳಿತವೇ ಕಾರಣ ಎನ್ನಲಾಗುತ್ತಿದೆ. ಅಲ್ಲದೆ, ಪ್ರಜ್ಞಾಪೂರ್ವಕವಾಗಿ ಲಾಕ್‌ಡೌನ್ ಮಾಡಲಾದ ಪರಿಣಾಮ ಹಾಗೂ ಉದ್ಯಮದಾತರ ಮೇಲೆ ನಿರ್ದಿಷ್ಟವಾಗಿ ನೈತಿಕ ಹೊಣೆಗಾರಿಕೆಯನ್ನು ಹೇರಿದ್ದ ಪರಿಣಾಮ ದೇಶದ ಆರ್ಥಿಕತೆಯೂ ವೃದ್ಧಿಸಿತ್ತು. ಅಲ್ಲದೆ, ನಿರುದ್ಯೋಗ, ಕಾರ್ಮಿಕರ ಸಮಸ್ಯೆಯೂ ತಲೆದೋರಿರಲಿಲ್ಲ. ಮಲೇಷ್ಯಾದ ಪ್ರಧಾನಿ ಮುಹಿದ್ದೀನ್ ಯಾಸಿನ್ ಇಂತಹ ಪ್ರಜ್ಞಾಪೂರ್ವಕ ನಿರ್ಧಾರವನ್ನು ಮೊದಲಿನಿಂದಲೂ ಪಾಲಿಸಿದ್ದರು. ಆದರೆ, ಭಾರತದ ಪ್ರಧಾನಿ ಮೋದಿ ಇದನ್ನು ಪಾಲಿಸಿರಲಿಲ್ಲ.
ಪರಿಣಾಮ ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿದ್ದರೆ, ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೆ, ಮಹಾಯಾನದಲ್ಲಿ ಮೃತಪಟ್ಟ ಸಾಲು ಸಾಲು ವಲಸೆ ಕಾರ್ಮಿಕರ ಅಳಲನ್ನು ಭಾಗಶಃ ಭಾರತೀಯರು ಮರೆತಿರಲು ಸಾಧ್ಯವಿಲ್ಲ.
ಬೇಡಿಕೆಯಲ್ಲಿ ಕುಸಿತ
ಲಾಕ್‌ಡೌನ್‌ನ ನಂತರದ ಭಾರತದಲ್ಲಿ ಬೇಡಿಕೆಯು ಕನಿಷ್ಟ ಶೇ.30 ರಷ್ಟು ಕುಸಿದಿದೆ. ಸಾರಿಗೆ ಇಂಧನಗಳ ಬೇಡಿಕೆ ತೀವ್ರವಾಗಿ ಕುಸಿಯಿತು. ಪರಿಣಾಮ ತೈಲ ಸಂಸ್ಕರಣಾಗಾರಗಳು ಅವುಗಳ ಉತ್ಪಾದನೆಯನ್ನು ಅರ್ಧಕ್ಕೆ ಇಳಿಸಬೇಕಾಯಿತು.
ಆಟೋಮೊಬೈಲ್ ಉದ್ಯಮದ ದಿಗ್ಗಜರಾದ ಮಾರುತಿ ಏಪ್ರಿಲ್-ಮೇ ನಲ್ಲಿ ಒಂದೇ ಒಂದು ಕಾರು ಅಥವಾ ವಾಣಿಜ್ಯ ವಾಹನವನ್ನು ತಯಾರಿಸಲಿಲ್ಲ. ಕಳೆದ ವರ್ಷ ಹಠಾತ್ತನೆ ಜಿಎಸ್ಟಿ ಹೇರಿದ ನಂತರ ಸಂಗ್ರಹವಾದ ಷೇರುಗಳಿಂದ ಕೈಯಲ್ಲಿರುವ ಕೆಲವು ರಫ್ತು ಆದೇಶಗಳನ್ನು ಮಾತ್ರ ಈ ಕಂಪೆನಿ ಪೂರೈಸುತ್ತಿದೆ.
ಭಾರತದ ಇತರ ಆಟೋಮೋಟಿವ್ ದೈತ್ಯ ಬಜಾಜ್ ಮೋಟಾರ್ಸ್ ಏಪ್ರಿಲ್ನಲ್ಲಿ ಭಾರತದಲ್ಲಿ ಯಾವುದೇ ವಾಹನಗಳನ್ನು ಮಾರಾಟ ಮಾಡಿಲ್ಲ. ಇನ್ನೂ ಶೇ.80 ರಷ್ಟು ರಫ್ತು ಸಹ ನಿಂತಿದೆ. (ಏಪ್ರಿಲ್ನಲ್ಲಿ 32,009 ದ್ವಿಚಕ್ರ ಮತ್ತು 5,869 ತ್ರಿಚಕ್ರ ವಾಹನಗಳು ಮಾತ್ರ ಮಾರಾಟವಾಗಿವೆ. 2019 ರಲ್ಲಿ ಅದೇ ತಿಂಗಳಲ್ಲಿ 160,393 ದ್ವಿಚಕ್ರ ಮತ್ತು 38,818 ತ್ರಿಚಕ್ರ ವಾಹನಗಳು ಮಾರಾಟವಾಗಿದ್ದವು).
ಸಿಯಾಮ್ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ತಯಾರಕರು ಈಗ ಬೇಡಿಕೆ ಏರದಿದ್ದರೆ ಈ ವರ್ಷದ ಉತ್ಪಾದನೆ ಕನಿಷ್ಟ ಶೇ.35-40 ರಷ್ಟು ಕುಸಿಯುತ್ತದೆ ಎಂದು ಊಹಿಸಿದ್ದಾರೆ. ಅಂದರೆ ಸಾಸರಿಯಾಗಿ 57 ಬಿಲಿಯನ್ ಡಾಲರ್ ಮೌಲ್ಯದ ಮಾರಾಟವನ್ನು ಕಳೆದುಕೊಳ್ಳಳಿದೆ ಎಂದು ಆಟೋಮೊಬೈಲ್ ತಯಾರಕರ ಸಂಘ ಎಸಿಎಂಎ ತಿಳಿಸಿದೆ. ಇದು ಭಾರತದ ಜಿಡಿಪಿಯ ಶೇ.2-3 ರಷ್ಟು.
ಜವಳಿ ಉದ್ಯಮವು ಅಷ್ಟೇ ಕೆಟ್ಟ ಸ್ಥಿತಿಯಲ್ಲಿದೆ. ಎ.ಸಿ. ನೀಲ್ಸನ್ ನಡೆಸಿದ 2,000 ಸಂಸ್ಥೆಗಳ ಸಮೀಕ್ಷೆಯು ಲಾಕ್‌ಡೌನ್ ನಂತರ ಅವುಗಳ ಉತ್ಪಾದನೆಯು ಶೇ.84 ರಷ್ಟು ಕುಸಿದಿದೆ ಎನ್ನಲಾಗುತ್ತಿದೆ. ಪ್ರತಿವರ್ಷ ಭಾರತದ ಶೇ.40 ರಷ್ಟು ಕೃಷಿಯೇತರ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ನಿರ್ಮಾಣ ಉದ್ಯಮವು ಕೋಮಾದಲ್ಲಿದೆ. ಏಕೆಂದರೆ, ವಲಸೆ ಕಾರ್ಮಿಕರ ನಿರ್ಗಮನದೊಂದಿಗೆ ಈ ಕ್ಷೇತ್ರವೂ ಪಾತಾಳಕ್ಕೆ ಕುಸಿದೆ. ಕೊನೆಯದಾಗಿ ಪ್ರಯಾಣ, ಆತಿಥ್ಯ ಮತ್ತು ಮನರಂಜನಾ ಉದ್ಯಮಗಳು ಜಿಡಿಪಿಯ ಕಾಲು ಅಥವಾ ಅದಕ್ಕಿಂತ ಹೆಚ್ಚಿನದನ್ನು ಹೊಂದಿವೆ. ಕೃಷಿಯ ನಂತರದ ಅತಿದೊಡ್ಡ ಉದ್ಯೋಗದಾತರು ಈ ವಿಭಾಗದವರು. ಆದರೆ, ಸಾಮಾಜಿಕ ಅಂತರದ ಅವಶ್ಯಕತೆಯಿಂದಾಗಿ ಈ ಉದ್ಯಮದ ಮೇಲೂ ಬಾರಿ ಪೆಟ್ಟು ಬಿದ್ದಿದೆ.
ಒಟ್ಟಾರೆ ಲಾಕ್‌ಡೌನ್ ಎಂಬುದು ಭಾರತದ ಆರ್ಥಿಕತೆಯನ್ನು ಜರಡಿ-ಜರಡಿಯನ್ನಾಗಿಸಿದೆ. ಆದರೆ, ಮಲೇಷ್ಯಾ ಮಾಡಿದ್ದನ್ನು ಭಾರತ ಮಾಡಿದ್ದರೆ – ಲಾಕ್‌ಡೌನ್‌ನಿಂದಾಗಿ ಅವರ ಆರ್ಥಿಕ ಭವಿಷ್ಯವು ದುರ್ಬಲಗೊಳ್ಳದಂತೆ ನೋಡಿಕೊಳ್ಳುಬಹುದಿತ್ತು. ಅಲ್ಲದೆ, ವಲಸೆ ಕಾರ್ಮಿಕರಿಗೆ ಕನಿಷ್ಟ ಊಟದ ಸೌಲಭ್ಯ ನೀಡಿ ಅವರು ಇದ್ದಲ್ಲೇ ಇರುವಂತೆ ಸರಿಯಾದ ನೀತಿ ನಿಯಮ ರೂಪಿಸಿದ್ದರೆ, ಇಂದು ಲಕ್ಷಾಂತರ ಜನ ಸೋಂಕನ್ನು ಹೊತ್ತು ತಮ್ಮ ಹಳ್ಳಿಗಳಿಗೆ ಹಿಂತಿರುಗುವುದನ್ನು ತಡೆಯಬಹುದಿತ್ತು.
ಆದರೆ, ಭಾರತ ಎಲ್ಲಾ ವಿಭಾಗದಲ್ಲೂ ಎಡವಿದೆ. ಆಡಳಿತದಲ್ಲಿ ಉಳ್ಳವರು ಈಗಲೂ ಭಾರತ ಎಡವಿದ್ದು ಎಲ್ಲಿ? ಎಂಬುದನ್ನು ಮನಗಂಡು ಅದನ್ನು ಸರಿಪಡಿಸದೆ ಇದ್ದಲ್ಲಿ, ಈ ದೇಶದ ಆರ್ಥಿಕತೆ ಎಂದೂ ಮತ್ತೆ ಉತ್ತುಂಗಕ್ಕೆ ಏರುವುದು ಸಾಧ್ಯವೇ ಇಲ್ಲ ಎಂಬುದು ಮಾತ್ರ ದಿಟ.





