ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿ ಮಾಜಿ ಸಚಿವ, ಹಾಲಿ ಶಾಸಕ ಡಿ.ಕೆ.ಶಿವಕುಮಾರ್ ಆಯ್ಕೆಯಾಗುವುದು ಬಹುತೇಕ ಖಚಿತವಾಗುತ್ತಿದ್ದಂತೆ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ಬೆಂಬಲ ಪಡೆಯಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಯತ್ನಿಸುತ್ತಿದ್ದಾರೆಯೇ ಇದರೊಂದಿಗೆ ಒಕ್ಕಲಿಗ ಸಮುದಾಯದವರೇ ಪ್ರಾಬಲ್ಯ ಹೊಂದಿರುವ ಹಳೇ ಮೈಸೂರು ಭಾಗದ ಮೇಲೆ ಹಿಡಿತ ಸಾಧಿಸಲು ಒಂದು ಕಾಲದ ಜೋಡೆತ್ತುಗಳು ಇದೀಗ ಬೇರೆ ಬೇರೆಯಾಗಿ ಸ್ಪರ್ಧೆಗಿಳಿದಿವೆಯೇ ಬಿಜೆಪಿ ವಿರುದ್ಧ ಒಕ್ಕಲಿಗ ಸಮುದಾಯದವರನ್ನು ಎತ್ತಿಕಟ್ಟುವ ಪ್ರಯತ್ನಕ್ಕೆ ಕುಮಾರಸ್ವಾಮಿ ಮುಂದಾಗಿದ್ದಾರೆಯೇ
ಇಂತಹ ಪ್ರಶ್ನೆಗಳು ಎದುರಾಗುವುದಕ್ಕೆ ಕಾರಣವೂ ಇದೆ. ಇತ್ತೀಚೆಗೆ ಎಲ್ಲದಕ್ಕೂ ಅಗತ್ಯಕ್ಕಿಂತ ಹೆಚ್ಚು ಪ್ರತಿಕ್ರಿಯಿಸುತ್ತಿರುವ ಕುಮಾರಸ್ವಾಮಿ, ತಮ್ಮ ಮೇಲೆ ಬಿಜೆಪಿ ಮಾಡಿದ್ದ ಆರೋಪ ಮತ್ತು ಅವರಿಗೆ ಅಪರಿಚಿತರಿಂದ ಬಂದ ಕೊಲೆ ಬೆದರಿಕೆ ಪ್ರಕರಣಗಳ ಕುರಿತಂತೆ ನೀಡಿದ ಪ್ರತಿಕ್ರಿಯೆ ಇದಕ್ಕೆ ಕಾರಣ. ತಮ್ಮ ವಿರುದ್ಧದ ರಾಜಕೀಯ ಟೀಕೆ, ಆರೋಪಗಳಳು, ಕೊಲೆ ಬೆದರಿಕೆಗಳಿಗೆ ಅದೇ ಧಾಟಿಯಲ್ಲಿ ಉತ್ತರ ಕೊಡುವ ಸಾಮರ್ಥ್ಯ ಕುಮಾರಸ್ವಾಮಿ ಅವರಿಗೆ ಇಲ್ಲದೆ ಏನೂ ಅಲ್ಲ. ಆದರೆ, ಪ್ರತಿಕ್ರಿಯಿಸುವಾಗ ಅನಾವಶ್ಯಕವಾಗಿ ಒಕ್ಕಲಿಗ ಸಮುದಾಯವನ್ನು ಎಳೆತಂದಿರುವುದು ಇಷ್ಟೆಲ್ಲಾ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ.
ಮೈತ್ರಿ ಸರ್ಕಾರ ಉರುಳುವ ಸಂದರ್ಭ ಮತ್ತು ಸರ್ಕಾರ ಉರುಳಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜೆಡಿಎಸ್ ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಪಕ್ಷಕ್ಕೆ ಹಿನ್ನಡೆ ತಂದುಕೊಡುತ್ತಿವೆ. ಪಕ್ಷದ ಒಬ್ಬೊಬ್ಬರೇ ಮುಖಂಡರು ದೂರ ಸರಿಯುವ ಮುನ್ಸೂಚನೆ ನೀಡುತ್ತಿದ್ದಾರೆ. ಇದರಿಂದ ಕುಮಾರಸ್ವಾಮಿ ಅವರು ಉದ್ವೇಗಕ್ಕೆ ಒಳಗಾಗಿದ್ದಾರೆ. ಮತ್ತೆ ಶುರುವಿನಿಂದ ಪಕ್ಷ ಕಟ್ಟುವ ಅನಿವಾರ್ಯತೆ ಸೃಷ್ಟಿಯಾಗುತ್ತದೆಯೋ ಎಂಬ ಆತಂಕವೂ ಅವರನ್ನು ಕಾಡುತ್ತಿದೆ. ಅದಕ್ಕಾಗಿ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಕೈಹಿಡಿದಿರುವ ಒಕ್ಕಲಿಗ ಸಮುದಾಯವನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಉದ್ದೇಶದಿಂದ ಈ ರೀತಿಯ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂಬುದು ಮೋಲ್ನೋಟಕ್ಕೆ ಕಂಡುಬರುತ್ತಿದೆ.
ಬಿಜೆಪಿಯವರು ತಮ್ಮ ಮೇಲೆ ಮಾಡಿರುವ ಆರೋಪ ಮತ್ತು ತಮಗೆ ಬಂದಿರುವ ಕೊಲೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಮಾಡಿರುವ ಸರಣಿ ಟ್ವೀಟ್ ಗಳನ್ನೇ ಗಮನಿಸಿ…
ಟ್ವೀಟ್ 1-
ಸಮಾಜದ ಶಾಂತಿಗಾಗಿ ಹೋರಾಡಿದ್ದಕ್ಕೆ ನನ್ನನ್ನು ಕೊಲ್ಲುವ ಸಂಚು ನಡೆಯುತ್ತಿದೆಯಂತೆ. ನನ್ನನ್ನು ಕೊಲ್ಲಿಸುವ ಕೆಲಸಕ್ಕೆ ಕೈಹಾಕಿದವರೇ, ಒಂದು ವಿಚಾರ ತಿಳಿದುಕೊಳ್ಳಿ. ನನ್ನಂತೆ ಹೋರಾಡಬಲ್ಲ ಲಕ್ಷಾಂತರ ಕಾರ್ಯಕರ್ತರು, ಅಭಿಮಾನಿಗಳ ಪಡೆ ನನ್ನ ಬೆನ್ನಿಗಿದೆ. ನನ್ನನ್ನು ಕೊಲ್ಲಬಹುದು. ಆದರೆ, ನನ್ನ ಬೆನ್ನಿಗೆ ನಿಂತವರನ್ನು ಕೊಲ್ಲಲಾದೀತೆ?
ಟ್ವೀಟ್ 2-
ಇದೇ ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ನಾನು ನಡೆಸುತ್ತಿರುವ ಹೋರಾಟಕ್ಕೆ ಬೆದರಿರುವ ಬಿಜೆಪಿ ನನ್ನನ್ನು ‘ಪಾಕಿಸ್ತಾನಿ’ ಎಂದು ಕರೆದು ಅಪಮಾನಿಸುವ ಪ್ರಯತ್ನ ಮಾಡುತ್ತಿದೆ. ಕೊಲ್ಲಲು ಬಂದವರದ್ದು ಬೆದರಿಕೆಯ ‘ಉಗ್ರ’ ತಂತ್ರವಾದರೆ, ಅವರದ್ದೇ ಸಿದ್ದಾಂತ ಪ್ರತಿಪಾದಿಸುತ್ತಿರುವ ಬಿಜೆಪಿಯದ್ದು ಅಪಮಾನದ ತಂತ್ರ.
ಟ್ವೀಟ್ 3-
ಕರ್ನಾಟಕದಲ್ಲಿ ಒಕ್ಕಲಿಗ ನಾಯಕತ್ವದ ವಿರುದ್ಧ ಹಿಂದಿನಿಂದಲೂ ದೌರ್ಜನ್ಯ ರಾಜಕಾರಣ ಇದ್ದದ್ದೇ. ಮೂದಲಿಸುವುದು, ಸಲ್ಲದ ಆರೋಪ ಮಾಡುವುದು. ಈ ಹಿಂದೆ ನಡೆದ ತಂತ್ರಗಳು. ಆದರೆ ಈಗಿನ ಕೊಲ್ಲುವ ಸಂಚು, ಪಾಕಿಸ್ತಾನಿ ಪ್ರಯೋಗ ಒಕ್ಕಲಿಗ ರಾಜಕಾರಣದ ವಿರುದ್ಧ ನಡೆಯುತ್ತಿರುವ ಮತ್ತೊಂದು ಬಗೆಯ ದೌರ್ಜನ್ಯ.
ಟ್ವೀಟ್ 4-
ಒಕ್ಕಲಿಗರು ಹೋರಾಟಕ್ಕಿಳಿದರೆ, ಅಧಿಕಾರಕ್ಕೆ ಬಂದರೆ ಅವರನ್ನು ಬೆದರಿಸುವ, ಸರ್ಕಾರಗಳನ್ನು ಬೀಳಿಸುವ ಕಾಯಕ ಹಿಂದಿನಿಂದ ನಡೆದುಕೊಂಡು ಬಂದಿದೆ. ದೇವೇಗೌಡರಂಥವರ ಮೇಲೇ ಹಲ್ಲೆ ಪ್ರಯತ್ನಗಳು ನಡೆದಿವೆ. ಅವರಿಗೆ ಅಧಿಕಾರ ವಂಚಿಸಲು ಯತ್ನಿಸಿದ್ದನ್ನು ಸಮಾಜ ನೋಡಿದೆ. ಈಗ ಈ ಶಕ್ತಿಗಳು ನನ್ನ ವಿರುದ್ಧ ನಿಂತಿವೆ. ಇದಕ್ಕೆ ಬೆದರುವ ವ್ಯಕ್ತಿ ನಾನಲ್ಲ.
ಟ್ವೀಟ್ 5-
“ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗತ್ತು” ಎಂಬ ಕವಿವಾಣಿ ನೆನಪಿರಲಿ. ಅವರ ಪ್ರತಿನಿಧಿ ನಾನು. ರೈತರಿಗಾಗಿ ಕಾರ್ಯಕ್ರಮ ಹಮ್ಮಿಕೊಂಡವ ನಾನು. ನೀವು ನನ್ನನ್ನು ಕೊಲ್ಲಲಾದೀತೇ? ನನ್ನನ್ನು ಪಾಕಿಸ್ತಾನಿ ಎನ್ನುವಿರೇ? ಮುಂದೊಂದು ದಿನ ಪ್ರಾಯಶ್ಚಿತ ಪಡಲೆಂದೇ ಇಂದು ನೀವು ಮಾಡಿಕೊಳ್ಳುತ್ತಿರುವ ಪಾಪಗಳಿವು.
ಟ್ವೀಟ್ 6-
ನನ್ನನ್ನು ಅಪಮಾನಿಸುತ್ತಿರುವ ಬಿಜೆಪಿಗರೇ ಎಚ್ಚರ… ನಿಮ್ಮ ಜೀನ್ ಗಳು ಪಾಕಿಸ್ತಾನದಲ್ಲಿರಬಹುದು. ಅಥವಾ ಜರ್ಮನಿಯ ನಾಜಿಗಳಲ್ಲಿರಬಹುದು. ನನ್ನ ಜೀನ್ ಈ ಮಣ್ಣಿನಲ್ಲಿದೆ. ನನ್ನನ್ನು ಕೊಲ್ಲಲೆತ್ನಿಸುವವರು ನವ ಉಗ್ರರು. ಅಪಮಾನಿಸಲು ಯತ್ನಿಸುತ್ತಿರುವವರು ಒಕ್ಕಲಿಗ ಅಸ್ಮಿತೆಯ ವಿರೋಧಿಗಳು.
ಆರೋಪ, ಬೆದರಿಕೆಗಳ ಹಿಂದೆ ಜಾತಿಯ ಅಂಶವೇ ಇಲ್ಲ
ಬಿಜೆಪಿಯವರಾಗಲಿ, ಕೊಲೆ ಬೆದರಿಕೆ ಹಾಕಿದವರಾಗಲೀ, ಕುಮಾರಸ್ವಾಮಿ ಅವರ ಜಾತಿ ವಿಚಾರವನ್ನು ಎಲ್ಲೂ ಪ್ರಸ್ತಾಪಿಸಿಲ್ಲ. ಅವರು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಪ್ರಕರಣ ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರು ಮುಸ್ಲಿಂ ಸಮುದಾಯದವರನ್ನು ಓಲೈಸುತ್ತಿದ್ದಾರೆ. ಬಿಜೆಪಿ ಸರ್ಕಾರ ಮತ್ತು ಪೊಲೀಸರ ಬಗ್ಗೆ ಕೀಳು ಮಟ್ಟದ ಟೀಕೆಗಳನ್ನು ಮಾಡುತ್ತಾರೆ ಎಂಬ ಕಾರಣಕ್ಕೆ ಬಿಜೆಪಿಯ ಕೆಲವರು ನೀವು ಪಾಕಿಸ್ತಾನಕ್ಕೆ ಹೋಗಿ ಎಂದಿದ್ದರೆ, ಅಪರಿಚಿತರು ಕೊಲೆ ಬೆದರಿಕೆ ಹಾಕಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸುವವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಬಗ್ಗೆ ಕೇವಲವಾಗಿ ಮಾತನಾಡುವವರನ್ನು ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುವುದು ಬಿಜೆಪಿ ನಾಯಕರಿಗೆ ಅಭ್ಯಾಸವಾಗಿದೆ. ಪಾಕಿಸ್ತಾನಕ್ಕೆ ಹೋಗಿ ಎಂದು ಬಿಜೆಪಿಯವರು ಹೇಳಿದ್ದು ಕುಮಾರಸ್ವಾಮಿ ಒಬ್ಬರಿಗೇ ಅಲ್ಲ, ಪ್ರತಿಪಕ್ಷದ ಸಾಕಷ್ಟು ಮುಖಂಡರಿಗೆ ಹೇಳಿದ್ದಾರೆ. ಅವರಲ್ಲಿ ಬಹುತೇಕರು ಒಕ್ಕಲಿಗ ಸಮುದಾಯದವರು ಅಲ್ಲ.
ಇನ್ನು ಕೊಲೆ ಬೆದರಿಕೆ ಹಾಕಿದವರು ಈ ಬೆದರಿಕೆ ಹಾಕಿದ್ದು ಕುಮಾರಸ್ವಾಮಿ ಒಬ್ಬರಿಗೇ ಅಲ್ಲ. ನಿಜಗುಣಾನಂದ ಸ್ವಾಮೀಜಿ, ನಿಡುಮಾಮಿಡಿ ಸ್ವಾಮೀಜಿ, ನಟರಾದ ಪ್ರಕಾಶ್ ರೈ, ಚೇತನ್, ಸಾಹಿತಿಗಳಾದ ಪ್ರೊ.ಚಂದ್ರಶೇಖರ ಪಾಟೀಲ, ಕೆ.ಎಸ್.ಭಗವಾನ್ ಹೀಗೆ 15 ಮಂದಿಗೆ ಜೀವ ಬೆದರಿಕೆ ಹಾಕಿದ್ದು, ಇವರಲ್ಲಿ ಬಹುತೇಕರು ಒಕ್ಕಲಿಗೇತರರು. ಹೀಗಿದ್ದರೂ ಇದಕ್ಕೆ ಪ್ರತಿಕ್ರಿಯಿಸುವಾಗ ಒಕ್ಕಲಿಗ ಸಮುದಾಯವನ್ನು ಎಳೆತಂದು ಸಮುದಾಯದ ನೆರಳಲ್ಲಿ ರಕ್ಷಣೆ ಪಡೆಯಲು ಮುಂದಾಗಿರುವುದರ ಹಿಂದೆ ರಾಜಕೀಯ ಕಾರಣಗಳು ಇರುವುದು ಸ್ಪಷ್ಟ.
ಏನದು ರಾಜಕೀಯ ಲಾಭ?
ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಮಧ್ಯೆ ರಾಜಕೀಯ ಸಮರ ಹೊಸದೇನೂ ಅಲ್ಲ. ಒಂದೇ ಸಮುದಾಯಕ್ಕೆ ಸೇರಿದವರಾದರೂ ಇವರಿಬ್ಬರ ಜಗಳ ಸಮುದಾಯದ ಸ್ವಾಮೀಜಿಗಳವರೆಗೂ ತಲುಪಿ ವಿವಾದ ಸೃಷ್ಟಿಸಿತ್ತು. ಆದರೆ, 2018ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಿವಕುಮಾರ್ ಮತ್ತು ಕುಮಾರಸ್ವಾಮಿ ವೈರತ್ವ ಮರೆತು ಜೋಡೆತ್ತುಗಳಂತಾದರು. ಕುಮಾರಸ್ವಾಮಿ ಅವರ ಸಂಪುಟದಲ್ಲಿ ಶಿವಕುಮಾರ್ ಅವರಿಗೆ ಒಳ್ಳೆಯ ಖಾತೆ ಸಿಕ್ಕಿದ್ದಲ್ಲದೆ, ಹೆಚ್ಚಿನ ಆದ್ಯತೆಯನ್ನೂ ನೀಡಲಾಗುತ್ತಿತ್ತು. ಮೈತ್ರಿ ಸರ್ಕಾರ ಉರುಳಿದ ಬಳಿಕವೂ ಇಬ್ಬರ ನಡುವೆ ಅವಿನಾಭಾವ ಸಂಬಂಧ ಮುಂದುವರಿದಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿ ಜೈಲಿಗೆ ಕಳುಹಿಸಿದಾಗ ಕುಮಾರಸ್ವಾಮಿ ಅವರು ಶಿವಕುಮಾರ್ ಅವರಿಗೆ ಬೆಂಬಲವಾಗಿ ನಿಂತಿದ್ದರು.
ಆದರೆ, ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಚಿತವಾಗುತ್ತಿರುವುದು ಕುಮಾರಸ್ವಾಮಿ ಅವರಲ್ಲಿ ಆತಂಕ ಮೂಡಿಸಿದೆ. ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದಾಗ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದವರು ಒಗ್ಗಟ್ಟಾಗಿ ಹೋರಾಟ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದರು. ಇಂತಹ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದರೆ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯ ಜೆಡಿಎಸ್ ನಿಂದ ದೂರವಾಗಿ ಕಾಂಗ್ರೆಸ್ ಕಡೆ ವಾಲಬಹುದು. ಅದಕ್ಕಾಗಿ ತಮ್ಮ ವಿರುದ್ಧ ಬಂದಿರುವ ಕೊಲೆ ಬೆದರಿಕೆ ಪ್ರಕರಣದಲ್ಲಿ ಸಮುದಾಯದ ಹೆಸರನ್ನು ಪ್ರಸ್ತಾಪಿಸಿ ಅನುಕಂಪ ಗಿಟ್ಟಿಸಿಕೊಳ್ಳಲು ಕುಮಾರಸ್ವಾಮಿ ಪ್ರಯತ್ನಿಸಿದಂತೆ ಕಾಣುತ್ತಿದೆ.
ಇನ್ನೊಂದೆಡೆ ಬಿಜೆಪಿಯೂ ಹಳೇ ಮೈಸೂರು ಭಾಗದ ಒಕ್ಕಲಿಗ ಸಮುದಾಯದ ಮೇಲೆ ಕಣ್ಣಿಟ್ಟಿದೆ. ಈಗಾಗಲೇ ಸಮುದಾಯದ ಒಬ್ಬ ಶಾಸಕರನ್ನು ಸೆಳೆದುಕೊಂಡಿರುವ ಬಿಜೆಪಿ, ಇನ್ನೂ 2-3 ಶಾಸಕರಿಗೆ ಗಾಳ ಹಾಕಿದೆ. ಆ ಶಾಸಕರು ಕೂಡ ಬಿಜೆಪಿಯತ್ತ ಹೋದರೆ ಭವಿಷ್ಯದಲ್ಲಿ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳು ಜೆಡಿಎಸ್ ಕೈತಪ್ಪಬಹುದು. ಹೀಗಾಗಿ ಅನುಕಂಪದ ಮೂಲಕ ಒಕ್ಕಲಿಗ ಸಮುದಾಯದ ಬೆಂಬಲ ಗಳಿಸಿದರೆ ಶಾಸಕರು ಪಕ್ಷ ತೊರೆದು ಹೋಗುವುದೂ ತಪ್ಪುತ್ತದೆ, ಬಿಜೆಪಿ ತಳವೂರಲೂ ಆಗುವುದಿಲ್ಲ. ಈ ಎರಡು ಕಾರಣಗಳಿಗಾಗಿಯೇ ಕುಮಾರಸ್ವಾಮಿ ಅವರು ಬಿಜೆಪಿಯವರು ಮತ್ತು ಕೊಲೆ ಬೆದರಿಕೆ ಹಾಕಿದವರಿಗೆ ತಮ್ಮೊಂದಿಗೆ ಒಕ್ಕಲಿಗ ಸಮುದಾಯವನ್ನು ಎಳೆತಂದು ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.