‘ಕೋಚಿಂಗ್ ಸೆಂಟರ್ ಗಳಿಗೆ ಲಕ್ಷಗಟ್ಟಲೆ ದುಡ್ಡು ಸುರಿಯಲು ತಾಕತ್ತಿರುವವರಿಗೆ ಮಾತ್ರ ನೀಟ್ ಪ್ರವೇಶ ಪರೀಕ್ಷೆಯಿಂದ ಪ್ರಯೋಜನವಾಗುತ್ತಿದ್ದು, ಆರ್ಥಿಕವಾಗಿ ಹಿಂದುಳಿದಿರುವ ಗ್ರಾಮಾಂತರ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳು ವೈದ್ಯಕೀಯ ಸೀಟುಗಳನ್ನು ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ’ – ಇದು ಪ್ರಕರಣವೊಂದರ ತೀರ್ಪಿನಲ್ಲಿ ಮದ್ರಾಸ್ ಹೈಕೋರ್ಟ್ ಸೋಮವಾರ ನೀಡಿರುವ ಮಹತ್ವದ ಹೇಳಿಕೆ. ವೈದ್ಯಕೀಯ ಶಿಕ್ಷಣದ ಪ್ರವೇಶ ಪರೀಕ್ಷೆಯ ನಿಯಮಗಳಲ್ಲಿ ತಿದ್ದುಪಡಿ ಮಾಡುವಂತೆಯೂ ಹೈಕೋರ್ಟ್ ಕೇಂದ್ರ ಸರಕಾರವನ್ನು ಸೂಚಿಸಿದೆ. ಕೋಚಿಂಗ್ ಪಡೆದ 3033 ವಿದ್ಯಾರ್ಥಿಗಳು ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಗಿಟ್ಟಿಸಿಕೊಂಡರೆ, ಯಾವುದೇ ಕೋಚಿಂಗ್ ಪಡೆಯದೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಕೇವಲ 48 ಎಂಬ ಅಂಕಿ ಅಂಶವನ್ನೂ ನ್ಯಾಯಾಲಯ ಸರಕಾರದ ಮುಂದಿಟ್ಟಿದೆ.
ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಅಭಿವೃದ್ಧಿ ಪಡಿಸುವುದು ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿ ಚಾಲ್ತಿಯಲ್ಲಿದ್ದ ಎಲ್ಲಾ ಪ್ರವೇಶ ಪರೀಕ್ಷೆಗಳನ್ನು ರದ್ದುಗೊಳಿಸಿ, ಏಕಗವಾಕ್ಷಿ ಪರೀಕ್ಷೆ ನಡೆಸುವುದರ ಮೂಲಕ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಾಗುತ್ತಿದ್ದ ಭ್ರಷ್ಟಾಚಾರಗಳನ್ನು ತಡೆಯುವುದು ನೀಟ್ ಪ್ರವೇಶ ಪರೀಕ್ಷೆಯ ಉದ್ದೇಶ. ಆದರೂ ಅನುಷ್ಟಾನ ಪ್ರಕ್ರಿಯೆಯಲ್ಲಾಗಬಹುದಾದ ಅಡೆತಡೆಗಳ ಬಗ್ಗೆ ತಲೆಕೆಡಿಸದೆ, ನಮ್ಮ ಸರಕಾರಗಳು ಜಾರಿಗೆ ತರುವ ಅವೈಜ್ಞಾನಿಕ ನಿಯಮ, ಕಾನೂನುಗಳು ಹೇಗೆ ಎಡವಟ್ಟು ಮಾಡಿಕೊಳ್ಳುತ್ತವೆ ಎಂಬುದಕ್ಕೆ ಈ ಉದಾಹರಣೆ ಸಾಕೇನೋ?
ಕರ್ನಾಟಕಕ್ಕೆ ಬಂದರೂ ಪರಿಸ್ಥಿತಿ ತಮಿಳುನಾಡಿಗಿಂತ ಭಿನ್ನವಾಗಿಲ್ಲ. ಆರ್ಥಿಕವಾಗಿ ಹಿಂದುಳಿದಿರುವ ಗ್ರಾಮೀಣ ಪ್ರದೇಶದ ಪ್ರತಿಭಾವಂತ ಮಕ್ಕಳು ಕಲಿಯುತ್ತಿರುವ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ನೀಟ್ ಪ್ರವೇಶ ಪರೀಕ್ಷೆ ಬರೆಯಲು ತರಬೇತಿ ನೀಡಲಾಗುತ್ತಿದೆಯೇ? ಹಳ್ಳಿಯ ಮಕ್ಕಳಿಗೆ ನೀಟ್ ಪ್ರವೇಶ ಪರೀಕ್ಷೆಯ ಆನ್‍ಲೈನ್ ರಿಜಿಸ್ಟ್ರೇಶನ್, ಬಳಿಕದ ಕೌನ್ಸಿಲಿಂಗ್ ಪ್ರಕ್ರಿಯೆ ಕುರಿತಂತೆ ಹೇಳಿಕೊಡಲು ಸರಕಾರಿ ಕಾಲೇಜುಗಳ ಪ್ರಾಂಶುಪಾಲರಿಗೆ ತಿಳಿದಿದೆಯೇ? ಶಿಕ್ಷಣದ ಖಾಸಗೀಕರಣ, ಸರಕಾರಿ ಕೋಟಾದ ಸೀಟುಗಳ ಹಂಚಿಕೆ ಪ್ರಮಾಣದಲ್ಲಿ ನಿರಂತರ ಕಡಿತ, ಸ್ವಾಯತ್ತ ವಿಶ್ವವಿದ್ಯಾನಿಲಯಗಳಿಗೆ ಅನುಮತಿ, ಪ್ರತಿವರ್ಷವೂ ಹೆಚ್ಚುತ್ತಿರುವ ಶುಲ್ಕಗಳು, ಸೀಟು ಬ್ಲಾಕಿಂಗ್ ದಂಧೆ… ಇವೆಲ್ಲವೂ ವೈದ್ಯಕೀಯ ಶಿಕ್ಷಣವು ಉಳ್ಳವರ ಪಾಲಾಗಲು ಅನುವು ಮಾಡಿಕೊಟ್ಟಿವೆ.
ಸರಕಾರಿ ಕೋಟಾದ ಸೀಟು ಹಂಚಿಕೆಯಲ್ಲಿ ಕಡಿತ:
ಸಿಇಟಿ (ಕಾಮನ್ ಎಂಟ್ರೆನ್ಸ್ ಟೆಸ್ಟ್) ಪರೀಕ್ಷೆಯನ್ನು ಪರಿಚಯಿಸಿದ ದೇಶದ ಮೊದಲ ರಾಜ್ಯ ಎಂಬ ಕೀರ್ತಿ ಕರ್ನಾಟಕದ್ದು. ಆರಂಭದಲ್ಲಿ ವೃತ್ತಿಪರ ಕೋರ್ಸ್‍ಗಳಿಗೆ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳ ಸೀಟು ಹಂಚಿಕೆಯ ಅನುಪಾತ 85:15 ಇತ್ತು. ಅಂದರೆ, ಖಾಸಗಿ ವಿದ್ಯಾ ಸಂಸ್ಥೆಗಳು ತಮ್ಮ 85% ಸೀಟುಗಳನ್ನು ಸರಕಾರಿ ಕೋಟಾದಲ್ಲಿ ನೀಡಬೇಕಾಗಿತ್ತು. ಇದು ನಿರಂತರವಾಗಿ ಕಡಿತಗೊಂಡು 75 ಶೇ. 60 ಶೇ., 50 ಶೇ., 45 ಶೇ., 42 ಶೇ. ತಲುಪಿ, ಏಳು ವರ್ಷಗಳ ಹಿಂದೆ ಶೇ. 40ಕ್ಕೆ ನಿಂತಿದೆ! ಈ ಅನುಪಾತವೇ ಮುಂದುವರಿಯುತ್ತಿದೆ. ಆದರೆ, ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಕಾಲೇಜುಗಳು 25 ಶೇ. ಸೀಟುಗಳನ್ನು ಮಾತ್ರ ನೀಡಬೇಕಾಗಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಸರಕಾರಿ ಕೋಟಾದ ಸೀಟುಗಳನ್ನು ನೀಡುವ ರಾಜ್ಯವಾಗಿ ಇಂದು ಕರ್ನಾಟಕ ಬದಲಾಗಿದೆ. ರಾಜಕಾರಣಿಗಳು, ಪ್ರಭಾವೀ ಜಾತಿ ಸಂಘಟನೆ ಮತ್ತು ಮಠಗಳಿಂದ ರಾಜ್ಯದಲ್ಲಿ ವಿದ್ಯಾಸಂಸ್ಥೆಗಳ ಸ್ಥಾಪನೆಯಾಗಿರುವುದು ಈ ಬೆಳವಣಿಗೆಗೆ ಕಾರಣವೆನ್ನಬಹುದೇನೋ?
ಸ್ವಾಯತ್ತ ವಿಶ್ವವಿದ್ಯಾನಿಲಯಗಳಲ್ಲಿ ಸರಕಾರಿ ಕೋಟಾದ ಸೀಟುಗಳೆಷ್ಟು?
ರಾಜ್ಯದ ಖಾಸಗಿ ಮೆಡಿಕಲ್ ಕಾಲೇಜುಗಳು ಮಾತ್ರ ಸೀಟು ಹಂಚಿಕೆಯ ಮೇಲಿನ ಅನುಪಾತವನ್ನು ಅನುಸರಿಸಬೇಕೇ ವಿನಹ, ಸ್ವಾಯತ್ತ ವಿಶ್ವ ವಿದ್ಯಾನಿಲಯಗಳಿಗೆ ಈ ನಿಯಮಗಳು ಅನ್ವಯಿಸುವುದಿಲ್ಲ. ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜು (ಕೆಎಂಸಿ), ಮೈಸೂರಿನ ಜಗದ್ಗುರು ಶ್ರೀ ಶಿವರಾತ್ರೀಶ್ವರ ಮೆಡಿಕಲ್ ಕಾಲೇಜು (ಜೆಎಸ್‍ಎಸ್), ಬೆಳಗಾವಿಯ ಜವಾಹರ್ ಲಾಲ್ ನೆಹರು ಮೆಡಿಕಲ್ ಕಾಲೇಜು (ಜೆಎನ್‍ಎಂಸಿ) ವಿಜಯಪುರದ ಶ್ರೀ ಬಿ. ಎಂ. ಪಾಟೀಲ್ ಮೆಡಿಕಲ್ ಕಾಲೇಜು (ಎಸ್‍ಬಿಎಂಪಿಎಂಸಿ), ಮಂಗಳೂರಿನ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ (ನಿಟ್ಟೆ ಯುನಿವರ್ಸಿಟಿ) ಮತ್ತು ಯೇನೆಪೋಯ ಮೆಡಿಕಲ್ ಕಾಲೇಜು (ವೈಎಂಸಿ), ತುಮಕೂರಿನ ಶ್ರೀ ಸಿದ್ದಾರ್ಥ ಮೆಡಿಕಲ್ ಕಾಲೇಜು (ಎಸ್‍ಎಸ್‍ಎಂಸಿ), ಕೋಲಾರದ ಶ್ರೀ ದೇವರಾಜ ಅರಸ್ ಮೆಡಿಕಲ್ ಕಾಲೇಜು (ಎಸ್‍ಡಿಯುಎಂಸಿ), ಬೆಂಗಳೂರಿನ ಸೈಂಟ್ ಜಾನ್ಸ್ ಮೆಡಿಕಲ್ ಕಾಲೇಜು (ಎಸ್‍ಜೆಎಂಸಿ) ಹಾಗೂ ಕಲಬುರ್ಗಿಯ ಖ್ವಾಜಾ ಬಂದೇ ನವಾಝ್ ಯುನಿವರ್ಸಿಟಿ; ಇವು ರಾಜ್ಯದ ಸ್ವಾಯತ್ತ ವಿಶ್ವವಿದ್ಯಾನಿಲಗಳ ಅಧೀನದಲ್ಲಿರುವ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು. ಮೇಲಿನ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ರಾಜ್ಯದ ಪ್ರತಿಭಾವಂತ ಮಕ್ಕಳಿಗೆ ನೀಡುವ ಸರಕಾರಿ ಕೋಟಾದ ಸೀಟುಗಳೆಷ್ಟು? ಮುಂದೆ ನೋಡಿ.
250 ಸೀಟುಗಳಿರುವ ಕೆಎಂಸಿ ಮಣಿಪಾಲ, 150 ಸೀಟುಗಳಿರುವ ಶ್ರೀ ಬಿ.ಎಂ. ಪಾಟೀಲ್ ಮೆಡಿಕಲ್ ಕಾಲೇಜು, 130 ಸೀಟುಗಳಿರುವ ಶ್ರೀ ಸಿದ್ದಾರ್ಥ ಮೆಡಿಕಲ್ ಕಾಲೇಜು, 150 ಸೀಟುಗಳಿರುವ ಸೈಂಟ್ ಜಾನ್ಸ್ ಮೆಡಿಕಲ್ ಕಾಲೇಜು ಹಾಗೂ 150 ಸೀಟುಗಳಿರುವ ಶ್ರೀ ದೇವರಾಜ ಅರಸ್ ಮೆಡಿಕಲ್ ಕಾಲೇಜುಗಳಲ್ಲಿ ಸರಕಾರಿ ಕೋಟಾದ ಸೀಟುಗಳು ಶೂನ್ಯ! ಉಳಿದಂತೆ ಜೆಎಸ್‍ಎಸ್ ಮೈಸೂರು 200 ಸೀಟುಗಳ ಪೈಕಿ 12, ಜೆಎನ್‍ಎಂಸಿ ಬೆಳಗಾವಿ 200 ಸೀಟುಗಳ ಪೈಕಿ 12, ನಿಟ್ಟೆ ಯುನಿವರ್ಸಿಟಿ 150 ಸೀಟುಗಳ ಪೈಕಿ 12, ಯೇನೆಪೋಯ ಯುನಿವರ್ಸಿಟಿ 150 ಸೀಟುಗಳ ಪೈಕಿ 13 ಸೀಟುಗಳನ್ನು ಸರಕಾರಿ ಕೋಟಾದಡಿ ನೀಡುತ್ತಿವೆ. ಉಳಿದ ಸೀಟುಗಳೆಲ್ಲವೂ ಖಾಸಗಿ ಸೀಟುಗಳಾಗಿವೆ. ನೂರು ಸೀಟುಗಳಿರುವ ಕಲಬುರ್ಗಿಯ ಖ್ವಾಜಾ ಬಂದೇನವಾಝ್ ಯನಿವರ್ಸಿಟಿ ಮಾತ್ರ 25 ಸೀಟುಗಳನ್ನು ಸರಕಾರಿ ಕೋಟಾದಲ್ಲಿ ನೀಡುತ್ತಿದೆ. ಅಂದರೆ ಪ್ರತಿ ವರ್ಷ ರಾಜ್ಯದಲ್ಲಿರುವ ಸ್ವಾಯತ್ತ ಮೆಡಿಕಲ್ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ 1630 ವಿದ್ಯಾರ್ಥಿಗಳ ಪೈಕಿ 74 ವಿದ್ಯಾರ್ಥಿಗಳು ಮಾತ್ರ ಸರಕಾರಿ ಕೋಟಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಾರೆ.

ದಂತ ವೈದ್ಯಕೀಯ ಶಿಕ್ಷಣ: ಸರಕಾರಿ ಕೋಟಾದ ಸೀಟುಗಳು ಶೂನ್ಯ!
ಮೇಲೆ ವಿವರಿಸಲಾದ ಕರ್ನಾಟಕ ರಾಜ್ಯದ ಸ್ವಾಯತ್ತ ವಿಶ್ವವಿದ್ಯಾನಿಲಯಗಳ ಪೈಕಿ ವಿಜಯಪುರದ ಎಸ್‍ಬಿಎಂಪಿಎಂಸಿ, ಕೋಲಾರದ ಎಸ್‍ಡಿಯುಎಂಸಿ, ಬೆಂಗಳೂರಿನ ಸೈಂಟ್ ಜಾನ್ಸ್ ಮೆಡಿಕಲ್ ಕಾಲೇಜು ಮತ್ತು ಕಲಬುರ್ಗಿಯ ಖ್ವಾಜಾ ಬಂದೇನವಾಝ್ ಯನಿವರ್ಸಿಟಿ ಹೊರತು ಪಡಿಸಿ ಉಳಿದ ಎಲ್ಲ ಸಂಸ್ಥೆಗಳಲ್ಲಿ ದಂತ ವೈದ್ಯಕೀಯ ಕಾಲೇಜುಗಳಿವೆ. ಆದರೆ ಅಲ್ಲಿರುವ ಎಲ್ಲ ಸೀಟುಗಳು ಖಾಸಗಿ ಸೀಟುಗಳಾಗಿವೆಯೇ ಹೊರತು ಸರಕಾರಿ ಕೋಟಾದ ಸೀಟುಗಳು ಮಾತ್ರ ಲಭ್ಯವಿಲ್ಲ.
ಸರಕಾರಿ ವೈದ್ಯಕೀಯ ಶಿಕ್ಷಣಕ್ಕೆ ಶುಲ್ಕ ಹೆಚ್ಚಳ:
2017ರಲ್ಲಿ ಸರಕಾರಿ ಮೆಡಿಕಲ್ ಕಾಲೇಜುಗಳ ವಾರ್ಷಿಕ ಶುಲ್ಕ ರೂ. 16,700 ಮಾತ್ರವಿತ್ತು. 2018ರಲ್ಲಿ ಈ ಶುಲ್ಕವನ್ನು ಮೂರು ಪಟ್ಟು ಅಂದರೆ, ರೂ. 49,850ಕ್ಕೆ ಏರಿಸಲಾಗಿದೆ. 2019ರಲ್ಲಿ ಈ ಶುಲ್ಕ ರೂ. 59,350 ಆಗಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳ ಸರಕಾರಿ ಕೋಟಾದ ಸೀಟುಗಳ ವಾರ್ಷಿಕ ಶುಲ್ಕ 2017ರಲ್ಲಿ ರೂ. 77,000 ಇದ್ದಿದ್ದು, 2018ರಲ್ಲಿ ರೂ. 1,10,000ಕ್ಕೆ ಏರಿಸಲಾಗಿದೆ. 2019ರಲ್ಲಿ ಈ ಶುಲ್ಕ ರೂ. 1,24,000 ಆಗಿದೆ.
ಸೀಟು ಬ್ಲಾಕಿಂಗ್ ದಂಧೆ:
ಖಾಸಗಿ/ಸ್ವಾಯತ್ತ ಯುನಿವರ್ಸಿಟಿಗಳ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟುಗಳನ್ನು ವಿದ್ಯಾರ್ಥಿಗಳಿಗೆ ಆನ್‍ಲೈನ್ ಕೌನ್ಸಿಲಿಂಗ್ ಮೂಲಕ ಹಂಚಿಕೆ ಮಾಡುವುದು ಮೆಡಿಕಲ್ ಕೌನ್ಸಿಲಿಂಗ್ ಕಮಿಟಿ (ಎಂಸಿಸಿ). ಇಲ್ಲಿ ಸೀಟು ಬ್ಲಾಕಿಂಗ್ ನಡೆಯುತ್ತಿರುವುದು ಇತ್ತೀಚೆಗೆ ಬೆಳಕಿಗೆ ಬಂದಿದೆ. ಈ ಪ್ರಕರಣವೂ ಕೂಡಾ ಉಳ್ಳವರಿಗೆ ಸೀಟು ಒದಗಿಸಿಕೊಡುವ ದಂಧೆಯೊಂದನ್ನು ಪರಿಚಯಿಸಿದೆ.
ಒಟ್ಟಿನಲ್ಲಿ ಹಲವು ಸಾಂಕ್ರಾಮಿಕ ರೋಗಗಳು ಸೇವಾರಂಗವಾಗಿರುವ ಆರೋಗ್ಯ ಕ್ಷೇತ್ರವನ್ನು ಬಾಧಿಸಿ, ಯುವಜನರಲ್ಲಿ ಲೂಟಿಕೋರ ಮನಸ್ಥಿತಿಯನ್ನು ಬೆಳೆಸುತ್ತಿವೆ. ಕೋಟಿಗಟ್ಟಲೆ ದುಡ್ಡು ಸುರಿದು ವೈದ್ಯರಾಗಿ, ಆರೋಗ್ಯ ಕ್ಷೇತ್ರ ಪ್ರವೇಶಿಸುವವರಿಂದ ಯಾವ ರೀತಿಯ ಸೇವೆಯನ್ನು ಜನ ನಿರೀಕ್ಷಿಸಬಹುದೆಂಬುದು ಉತ್ತರ ಸಿಗದ ಪ್ರಶ್ನೆಯಾಗಿ ಉಳಿದುಕೊಂಡಿದೆ.