ರಾಜ್ಯದಲ್ಲಿ ಕರೋನಾದಿಂದ ನೂರಾರು ಜನರು ಸಾವನ್ನಪ್ಪುತ್ತಿದ್ದಾರೆ. ದಿನವೊಂದಕ್ಕೆ ಕರೋನಾ ಸೋಂಕಿತರ ಸಂಖ್ಯೆ ಮೂರರಿಂದ ನಾಲ್ಕು ಸಾವಿರ ಬರುತ್ತಿದೆ. ರಾಜ್ಯದಲ್ಲಿ ಸೋಮವಾರ 3,648 ಹೊಸ ಕರೋನಾ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯಾದ್ಯಂತ 730 ಜನರು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದರೆ, 72 ಸೋಂಕಿತರು ಕೋವಿಡ್ 19ಗೆ ಬಲಿಯಾಗಿದ್ದಾರೆ. ಐಸಿಯುಗಳಲ್ಲಿ 580 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ 31 ಜನರು ಕೋವಿಡ್ 19ನಿಂದ ಸಾವನ್ನಪ್ಪಿದ್ದಾರೆ. ಜೊತೆಗೆ 1,452 ಹೊಸದಾಗಿ ಸೋಂಕಿತರು ಪತ್ತೆಯಾಗಿದ್ದಾರೆ. ಆದರೆ ಅಷ್ಟು ಜನರಿಗೆ ಬೆಂಗಳೂರು ಸೇರಿ ರಾಜ್ಯದ ಇತರ ಕಡೆಗಳಲ್ಲಿ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ. ಆದರೆ ಆತಂಕಾರಿ ವಿಚಾರ ಎಂದರೆ ಕೋವಿಡ್ ಅಲ್ಲದ ಬೇರೆ ಕಾಯಿಲೆ ಜನರು ಸಾಕಷ್ಟು ಮಂದಿ ಪರಲೋಕ ಸೇರುತ್ತಿದ್ದಾರೆ.
ಕರೋನಾ ಸೋಂಕಿನಿಂದ ದಿನಕ್ಕೆ ನೂರಾರು ಜನರು ಸಾಯುತ್ತಿರುವುದು ಒಂದು ಕಡೆಯಾದರೆ, ಕರೋನಾ ಇಲ್ಲದೆ ಇರುವ ಜನರು ಬೇರೆ ಬೇರೆ ಕಾಯಿಲೆಗಳಿಂದಲೂ ನೂರಾರು ಜನರು ಸಾಯುತ್ತಿದ್ದಾರೆ. ಆದರೆ ಇದರ ಬಗ್ಗೆ ಸರ್ಕಾರ ಯಾವುದೇ ವರದಿ ಬಿಡುಗಡೆ ಮಾಡುತ್ತಿಲ್ಲ ಅಷ್ಟೆ. ಕೇವಲ ಕೋವಿಡ್ 19ನಿಂದ ಸಾವನ್ನಪ್ಪುತ್ತಿರುವ ಜನರ ಅಂಕಿಸಂಖ್ಯೆಯನ್ನು ಬಿಡುಗಡೆ ಮಾಡುತ್ತಿರುವ ಸರ್ಕಾರ, ಚಿಕಿತ್ಸೆ ಸಿಗದೆ ಸಾಯುತ್ತಿರುವವರ ಸಂಖಿಸಂಖ್ಯೆಯನ್ನು ಬಿಡುಗಡೆ ಮಾಡಿದ್ದರೆ ರಾಜ್ಯದ ಜನರು ಮತ್ತಷ್ಟು ಕಂಗಾಲಾಗಬೇಕಿತ್ತು. ಆ ಪರಿಸ್ಥಿತಿ ಬೆಂಗಳೂರಿನಲ್ಲಿ ತಲೆದೋರಿದೆ.
ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಚಿಕಿತ್ಸೆ ಸಿಗದೆ ಜನರು ಪರದಾಡುತ್ತಿದ್ದಾರೆ. ಸೋಮವಾರ ಮುಂಜಾನೆ 3 ಗಂಟೆಯಿಂದ ಮಹಿಳೆಯೊಬ್ಬರು ಆಸ್ಪತ್ರೆಗಳಿಗಾಗಿ ಅಲೆದಾಡಿದ್ದಾರೆ. ಹೆರಿಗಾಗಿ ಬೆಂಗಳೂರು ಆಸ್ಪತ್ರೆಗಳಿಗೆಲ್ಲಾ ಎಡತಾಕಿದರೂ ಯಾವ ಆಸ್ಪತ್ರೆಯಲ್ಲೂ ಗರ್ಭಿಣಿಯನ್ನು ದಾಖಲಿಸಿಕೊಂಡು ಚಿಕಿತ್ಸೆ ಕೊಡುವ ಮನಸ್ಸು ಮಾಡಿಲ್ಲ. ಅಂತಿಮವಾಗಿ ಕೆ.ಸಿ ಜನರಲ್ ಆಸ್ಪತ್ರೆ ಬಳಿ ಬರುವಾಗ ಆಟೋದಲ್ಲಿಯೇ ಹೆರಿಗೆಯಾಗಿದೆ. ಆದರೆ ಕರೋನಾ ಕಾಲದಲ್ಲಿ ಕಣ್ಬಿಡಬೇಕಿದ್ದ ಕಂದಮ್ಮವೊಂದು ಲೋಕವನ್ನೇ ನೋಡದೆ ಕಣ್ಮುಚ್ಚಿಕೊಂಡಿದೆ. ಶ್ರೀರಾಮಪುರದ ನಿವಾಸಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆ, ವಿಕ್ಟೋರಿಯಾ, ವಾಣಿ ವಿಲಾಸ್ ಸೇರಿ ಹತ್ತಕ್ಕೂ ಹೆಚ್ಚು ಆಸ್ಪತ್ರೆಗೆ ಭೇಟಿ ನೀಡಿದರೂ ಚಿಕಿತ್ಸೆ ಕೊಡುವುದಕ್ಕೆ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುವುದಕ್ಕೆ ಮನಸ್ಸು ಮಾಡಿಲ್ಲ. ಹೆರಿಗೆ ನೋವು ಬಂದು ಎಂಟು ಗಂಟೆ ಬೆಂಗಳೂರಿನಲ್ಲಿ ಸುತ್ತಾಡಿದ ಬಳಿಕ ಕೆ.ಸಿ ಜನರಲ್ ಆಸ್ಪತ್ರೆ ಮುಂಭಾಗ ಹೆರಿಗೆಯಾಗಿದೆ. ಹೆರಿಗೆ ನೋವಿನಿಂದ ನರಳಾಡಿದ್ದ ಮಹಿಳೆ ಕೊನೆಗೆ ಕಂದಮ್ಮನನ್ನೂ ಕಳೆದುಕೊಂಡು ಸಂಕಟ ಅನುಭವಿಸುವಂತಾಗಿದೆ. ಆಸ್ಪತ್ರೆಗಳ ಅಮಾನವೀಯ ನಡೆಗೆ ಹಸುಗೂಸು ಬಲಿಯಾಗಿದೆ.
ಬೆಂಗಳೂರಿನಲ್ಲಿ ಕರೋನಾ ಸೋಂಕಿತರಿಗಿಂತಲೂ ಕರೋನಾ ಇಲ್ಲದ ರೋಗಿಗಳಿಗೇ ಹೆಚ್ಚು ಸಂಕಷ್ಟ ಅನುಭವಿಸ್ತಿದ್ದಾರೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಇದೆ. ಕರೋನಾ ಟೆಸ್ಟ್ ರಿಪೋರ್ಟ್ ಇಲ್ಲದೆ ಇದ್ದರೆ ರೋಗಿಗಳಿಗೆ ಚಿಕಿತ್ಸೆ ನೀಡಲು ಯಾವುದೇ ವೈದ್ಯರು ಮುಂದೆ ಬರುತ್ತಿಲ್ಲ. ಸಾಮಾನ್ಯ ಕಾಯಿಲೆಯಿಂದ ಬಳಲುವ ರೋಗಿಯೊಬ್ಬ ಸಾಮಾನ್ಯವಾಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚುತ್ತಲೇ ಇದೆ. ಕರೋನಾ ಸೋಂಕು ಇಲ್ಲದಿದ್ದರೂ ಚಿಕಿತ್ಸೆ ಸಿಗದೆ ಅಕ್ಕಳನ್ನು ಕಳೆದುಕೊಂಡು ತಮ್ಮನೊಬ್ಬ ಕಣ್ಣೀರು ಇಟ್ಟಿರುವ ಘಟನೆ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ.
ಕಾಮಾಕ್ಷಿಪಾಳ್ಯದ ರಘು ಎಂಬಾತನ ಸಹೋದರಿ ಕಳೆದ 5 ದಿನಗಳಿಂದ ಚಿಕಿತ್ಸೆಗಾಗಿ ಎಲ್ಲಾ ಆಸ್ಪತ್ರೆಗೂ ಅಲೆದಾಡಿದ್ದಾನೆ. ಅಕ್ಕನ ಚಿಕಿತ್ಸೆಗಾಗಿ ಏನೆಲ್ಲಾ ಕಷ್ಟವನ್ನ ಅನುಭವಿಸಬೇಕಾಗಿ ಬಂತು ಎಂದು ವಿವರಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಅನಾರೋಗ್ಯ ಪೀಡಿತ ಅಕ್ಕನನ್ನ ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಕರೋನಾ ಟೆಸ್ಟ್ ಮಾಡಿದಾಗ ನೆಗೆಟಿವ್ ರಿಪೋರ್ಟ್ ಬಂದಿತ್ತು. ಹೀಗಾಗಿ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಕರೆದುಕೊಂಡು ಹೋದೆವು. ಆದರೆ ಯಾವುದೇ ಆಸ್ಪತ್ರೆಯಲ್ಲೂ ಚಿಕಿತ್ಸೆ ಕೊಡಲು ಹಿಂದೇಟು ಹಾಕಿದರು. ಕೋವಿಡ್ ಱಪಿಡ್ (Rapid) ಟೆಸ್ಟ್ ವರದಿ ನಂಬಲು ಸಾಧ್ಯವಿಲ್ಲ. ಬೇರೆ ಕಡೆ ಹೋಗಿ ಎಂದಿದ್ದಾರೆ ಎನ್ನಲಾಗಿದೆ. ಕೊನೆಗೆ ಎಲ್ಲಿಯೂ ಚಿಕಿತ್ಸೆ ಸಿಗದೇ ರಘು ಸಹೋದರಿ ಸಾವನ್ನಪ್ಪಿದ್ದಾರೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದು ಬೆಂಗಳೂರಿನ ಸದ್ಯದ ಪರಿಸ್ಥಿತಿ. ಈ ಬಗ್ಗೆ ಮಾಜಿ ಸಿಎಂ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಹೆರಿಗೆಗಾಗಿ ಬೆಂಗಳೂರಿನ ಆಸ್ಪತ್ರೆಗಳಿಗೆಲ್ಲಾ ಸುತ್ತಾಡಿದ ಗರ್ಭಿಣಿಯನ್ನು
ಎಲ್ಲಿಯೂ ಸೇರಿಸಿಕೊಳ್ಳದೆ ಇದ್ದಾಗ ಕೊನೆಗೆ ಅಟೊ ರಿಕ್ಷಾದಲ್ಲಿಯೇ ಮಗು ಹಡೆದ ಪರಿಣಾಮ ಹಸುಕೂಸನ್ನು ಕಳೆದುಕೊಳ್ಳಬೇಕಾಯಿತು. ಯಡಿಯೂರಪ್ಪ ಅವರೇ ಮೊದಲು ಈ ನತದೃಷ್ಟ ತಾಯಿಯ ಮಗುವಿನ ಕೊಲೆಗಡುಕ ಆಸ್ಪತ್ರೆಗಳ ಮೇಲೆ ಕ್ರಮಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರಿಗಿಂತ ಹೆಚ್ಚು, ಬೇರೆ ಕಾಯಿಲೆಯ ರೋಗಿಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ಸಾಯುತ್ತಿದ್ದಾರೆ. ಮುಖ್ಯಮಂತ್ರಿ ಅವರೇ, ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ಪರವಾನಿಗೆಯನ್ನು ರದ್ದುಮಾಡುವ ಕಠಿಣ ನಿರ್ಧಾರ ಕೈಗೊಳ್ಳಿ. ನಿಮ್ಮ ಹುಸಿ ಬೆದರಿಕೆಗೆ ಅವರು ಜಗ್ಗುವವರಲ್ಲ ಎಂದು ಮನವಿ ಮಾಡಿದ್ದಾರೆ.
ಒಟ್ಟಾರೆ, ಕರೋನಾ ಸೋಂಕಿನಿಂದ 100 ಜನರು ಸಾಯುತ್ತಿದ್ದರೆ, ಮತ್ತೊಂದು ಕಡೆಗೆ ಕರೋನಾ ಸೋಂಕಿನ ಭೀತಿಯಲ್ಲಿ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸುತ್ತಿದ್ದಾರೆ. ಬೇರೆ ಬೇರೆ ಕಾಯಿಲೆಗಳಿಂದ ನರಳುವ ಜನರು ಚಿಕಿತ್ಸೆ ಪಡೆದರೆ ಸಾವಿನಿಂದ ಪಾರಾಗುವ ಸಾಧ್ಯತೆಗಳಿದ್ದರೂ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿರುವುದು ಸರ್ಕಾರದ ಹೊಣಗೇಡಿತನಕ್ಕೆ ಸಾಕ್ಷಿಯಾಗಿದೆ.