ಭಾರೀ ಕುತೂಹಲ ಮೂಡಿಸಿರುವ ರಾಜರಾಜೇಶ್ವರಿ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಆಡಳಿತ ಪಕ್ಷ ಬಿಜೆಪಿಯಿಂದ ಮುನಿರತ್ನ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರೆ, ಕಾಂಗ್ರೆಸ್‌ನಿಂದ ಕುಸುಮಾ ಹನುಮಂತರಾಯಪ್ಪ ಅವರು ನಾಮಪತ್ರಸಲ್ಲಿಸಿದ್ದಾರೆ.
2018 ರಲ್ಲಿ ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್‌ನಿಂದ ಚುನಾವಣೆ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದ ಮುನಿರತ್ನ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಹೋಗಿ ಅಲ್ಲಿಯೂ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ವರ್ಷದಲ್ಲಿ ಕ್ಷೇತ್ರದಲ್ಲಿ ಏನು ಬದಲಾವಣೆ ಆಯಿತೋ ಇಲ್ಲವೋ ಮುನಿರತ್ನರ ಆಸ್ತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು ಕುತೂಹಲ ಮೂಡಿಸಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
2018 ರ ಚುನಾವಣೆಗೆ ನಾಮ ಪತ್ರ ಘೋಷಿಸುವಾಗ ನೀಡಿದ ಅಫಿಡವಿಟ್‌ನಲ್ಲಿರುವುದಕ್ಕಿಂತ 2020 ರ ನಾಮಪತ್ರದೊಂದಿಗೆ ಸಲ್ಲಿಸಿದ ಆಸ್ತಿ ವಿವರದಲ್ಲಿ ಭಾರೀ ಪ್ರಮಾಣದಲ್ಲಿ ಆಸ್ತಿ ಏರಿಕೆಯಾಗಿರುವುದು ಕಂಡು ಬಂದಿದೆ.
2018ರಲ್ಲಿ ಮುನಿರತ್ನ ಅವರ ಸ್ಥಿರಾಸ್ಥಿ ಮೌಲ್ಯ 27,94,48,400 ರುಪಾಯಿ ಆಗಿದ್ದು, 2020 ರ ವೇಳೆಗೆ ಈ ಮೌಲ್ಯ 51,91,97,400 ರುಪಾಯಿ ತಲುಪಿದೆ. ಪತ್ನಿಯ ಹೆಸರಿನಲ್ಲಿರುವ ಸ್ಥಿರಾಸ್ಥಿ ಮೌಲ್ಯ 6,00,69,000 ರುಪಾಯಿಯಿಂದ 10,69,37,000 ರುಪಾಯಿಗೆ ಏರಿದೆ.
Also Read: ವ್ಯಕ್ತಿಗಳ ಪಾಲಿಗಲ್ಲದಿದ್ದರೂ ಈ ಉಪಚುನಾವಣೆ ಪಕ್ಷಗಳ ಪಾಲಿಗೆ ಪ್ರತಿಷ್ಠೆಯೇ!
ಮುನಿರತ್ನರ ಚರಾಸ್ಥಿಯಲ್ಲೂ ಏರಿಕೆ ಕಂಡುಬಂದಿದ್ದು ಅವರ ಪತ್ನಿಯ ಆಸ್ತಿಯಲ್ಲಿ ಇಳಿಕೆಯಾಗಿರುವುದು ದಾಖಲಾಗಿದೆ. 2018 ರಲ್ಲಿ ಮುನಿರತ್ನರ ಬಳಿಯಿದ್ದ 8,71,87,341 ರುಪಾಯಿ ಮೌಲ್ಯದ ಚರಾಸ್ಥಿ 2020 ರ ವೇಳೆಗೆ 26,11,16,191 ರುಪಾಯಿ ತಲುಪಿದೆ. ಇನ್ನು ಪತ್ನಿಯ ಚರಾಸ್ಥಿಯ ಮೌಲ್ಯ 1,04,82,765 ರುಪಾಯಿಯಿಂದ 40,97,286 ಕ್ಕೆ ಇಳಿದಿದೆ.
ಮುನಿರತ್ನ 2018 ರಲ್ಲಿ 26,20,221 ರುಪಾಯಿ ನಗದು ಇರುವುದಾಗಿ ಘೋಷಿಸಿಕೊಂಡಿದ್ದರೆ, ಮುನಿರತ್ನ ಅವರ ಪತ್ನಿ ಮಂಜುಳಾ 3,26,233 ರುಪಾಯಿ ಇರುವುದಾಗಿ ಘೋಷಿಸಿಕೊಂಡಿದ್ದರು. ಅದೇ 2020 ರ ಆಸ್ತಿ ಘೋಷಣೆಯಲ್ಲಿ 10,66,420 ರುಪಾಯಿ ನಗದು ಮುನಿರತ್ನ ಬಳಿ ಹಾಗೂ 3,98,697 ರುಪಾಯಿ ನಗದು ಮಂಜುಳಾರ ಬಳಿ ಇರುವುದಾಗಿ ಘೋಷಿಸಿದ್ದಾರೆ.
1,23,99,005 ರುಪಾಯಿ ಮೌಲ್ಯದ ಆಭರಣ ಮುನಿರತ್ನ ಬಳಿಯಿದ್ದರೆ, 4,40,000 ರುಪಾಯಿ ಮೌಲ್ಯದ ಆಭರನ ಪತ್ನಿ ಮಂಜುಳಾ ಅವರ ಬಳಿಯಿದೆ ಎಂದು ಘೋಷಿಸಿದ್ದಾರೆ. ಆಭರಣದ ಮೌಲ್ಯದಲ್ಲಿ 2020 ರಲ್ಲಿ ಯಾವುದೇ ಬದಲಾವಣೆಯನ್ನು ದಾಖಲಿಸಿಲ್ಲ.
ಆದರೆ, ಇಬ್ಬರ ಬ್ಯಾಂಕ್ ಠೇವಣಿಯಲ್ಲಿಯೂ ಏರಿಕೆ ಕಂಡು ಬಂದಿದೆ. 2018 ರಲ್ಲಿ 44,48,871 ರುಪಾಯಿ ಮುನಿರತ್ನ ಅವರ ಖಾತೆಗಳಲ್ಲಿದ್ದರೆ, 2020 ರ ವೇಳೆಗೆ ಈ ಮೊತ್ತದ ಮೌಲ್ಯ 1,08,70,549 ರುಪಾಯಿ ತಲುಪಿದೆ. ಅದೇ ವೇಳೆ ಅವರ ಪತ್ನಿಯ ಬ್ಯಾಂಕ್ ಖಾತೆಯ ಮೌಲ್ಯ 37,928 ರುಪಾಯಿಗಳಿಂದ 5,67,589 ರುಪಾಯಿಗಳಾಗಿವೆ.
24,90,61,068 ರುಪಾಯಿಗಳು ಇದ್ದ ಮುನಿರತ್ನರ ಸಾಲ 2020 ರ ವೇಳೆಗೆ 42,03,47,501 ರುಪಾಯಿ ತಲುಪಿದೆ. ಮಡದಿಯ ಹೆಸರಲ್ಲೂ 4,38,14,284 ಸಾಲ ಇದೆ. 2018 ರಲ್ಲಿ 75,13,285 ರುಪಾಯಿಗಳು ಮಂಜುಳಾ ಅವರ ಹೆಸರಿನಲ್ಲಿ ಸಾಲ ಇತ್ತು.
Also Read: ಶಿರಾ ಮತ್ತು ಆರ್‌ಆರ್ ನಗರ ಬಿಜೆಪಿ ಅಭ್ಯರ್ಥಿ ಆಯ್ಕೆ
2018 ರಲ್ಲಿ 44 ಲಕ್ಷವಿದ್ದ ಬ್ಯಾಂಕ್ ಠೇವಣಿ 2020 ರಲ್ಲಿ ಒಂದು ಕೋಟಿಗೆ ಏರಿದೆ. ಪತ್ನಿಯ ಹೆಸರಿನಲ್ಲಿ 5,67,589 ರುಪಾಯಿಗಳ ಬ್ಯಾಂಕ್ ಠೇವಣಿ ಇದೆ.
2018 ರಲ್ಲಿ ಒಟ್ಟು 29 ವಾಹನಗಳು ಇವರ ಒಡೆತನದಲ್ಲಿದ್ದರೆ 2020 ರ ವೇಳೆಗೆ ಅವುಗಳ ಸಂಖ್ಯೆಗೆ ಇನ್ನೂ ಒಂದು ಸೇರ್ಪಡೆಯಾಗಿದೆ.
ಎಸ್‌ಎಸ್‌ಎಲ್‌ಸಿ ವರೆಗೆ ಶಿಕ್ಷಣ ಪೂರೈಸಿರುವ ಮುನಿರತ್ನ ವಿರುದ್ಧ ಒಟ್ಟು ಐದು ಪ್ರಕರಣಗಳಿದ್ದು, ಎಲ್ಲವೂ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ.
ಕಾಮಾಕ್ಷಿ ಪಾಳ್ಯ, ಜಾಲಹಳ್ಳಿ ಪೊಲೀಸ್ ಠಾಣೆಗಳಲ್ಲಿ ಮುನಿರತ್ನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹಾಗೂ BMTF ಠಾಣೆಯಲ್ಲಿ ದಾಖಲಾದ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ (ಪ್ರಕರಣ ಸಂಖ್ಯೆ 33672/2018) ಐಪಿಸಿ ಸೆಕ್ಷನ್ 171(e), ಸೆಕ್ಷನ್ 188, ಸೆಕ್ಷನ್ 123(a) ಮೊದಲಾದ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.
Also Read: ಶಿರಾ ಉಪಚುನಾವಣೆ: ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಟಿ ಬಿ ಜಯಚಂದ್ರ
ಸೆಕ್ಷನ್ 120 (b), 171 (e), 171(f), 171(h), 188, 201, 135 (a), 123, RP 1951 ಕಾಯ್ದೆಯಡಿಯಲ್ಲಿ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭ್ರಷ್ಟಾಚಾರ ನಿಗ್ರಹದಡಿಯಲ್ಲಿ ದಾಖಲಾದ ಪ್ರಕರಣ ಸಿಐಡಿಗೆ ವರ್ಗಾವಣೆಗೊಂಡಿದೆ. ಈ ಪ್ರಕರಣಗಳ ವಿಚಾರಣೆ ಪ್ರಸ್ತುತ ನಡೆಯುತ್ತಿದೆ.
ಮುನಿರತ್ನ ವಿರುದ್ಧ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಅಮೇರಿಕಾದ ಯೂನಿವರ್ಸಿಟಿ ಆಫ್ ಮಸಾಚುಯೇಟ್ಸ್ ನಲ್ಲಿ ಮಾಸ್ಟರ್ ಆಫ್ ಸೈನ್ಸ್ ಇನ್ ಇನ್ಫಾರ್ಮೇಶನ್ ಟೆಕ್ನಾಲಜಿ ಕೋರ್ಸ್ ಮಾಡಿದ್ದಾರೆ.
ಕುಸುಮಾ ಕೂಡಾ ನಾಮಪತ್ರ ಸಲ್ಲಿಸಿದ್ದು ಅವರು ಕೊಟ್ಟಿರುವ ಆಸ್ತಿ ವಿವರ ಈ ಕೆಳಗಿನಂತಿದೆ.
ಕೈಯಲ್ಲಿರುವ ನಗದು: 1,41,050
ಬಂಡವಾಳ ಹೂಡಿಕೆ: 2,45,000
ಸ್ವಯಾರ್ಜಿತ ಆಸ್ಥಿ; 30,00,000
ಪಿತ್ರಾರ್ಜಿತ ಆಸ್ಥಿ: 1,07,10,000
ಸಾಲ: 20,48,000,
ಚರಾಸ್ಥಿ: 1,13,02,197.38
ಬ್ಯಾಂಕ್‌ನಲ್ಲಿರುವ ಠೇವಣಿ – 5,52,830