ಅರುಣಾಚಲ ಪ್ರದೇಶದಲ್ಲಿ ನಡೆಯಬೇಕಾಗಿದ್ದ ಪಂಚಾಯತಿ ಚುನಾವಣೆಗಳು, ತೀವ್ರ ಪ್ರತಿಭಟನೆಯ ಕಾರಣ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿವೆ. ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ ಉಗ್ರ ರೂಪಕ್ಕೆ ತಾಳಿದ್ದು, ಚಾಂಗ್ಲಾಂಗ್ ಜಿಲ್ಲೆಯ ಬಹುತೇಕ ಸರ್ಕಾರಿ ಕಚೇರಿಗಳನ್ನು ಸುಟ್ಟು ಹಾಕಲಾಗಿದೆ.
ಚುನಾವಣೆಯ ಮತದಾರರ ಪಟ್ಟಿಯಲ್ಲಿ, ಈ ಹಿಂದೆ ಅಸ್ಸಾಂ ರೈಫಲ್ಸ್ನಲ್ಲಿ ಕಾರ್ಯನಿರ್ವಹಿಸಿದ್ದ ಸೈನಿಕರ ಹೆಸರನ್ನು ಸೇರಿಸಬಾರದು ಎಂದು ಪಟ್ಟು ಹಿಡಿದಿರುವ ಆಲ್ ಯೋಬಿನ್ ವಿದ್ಯಾರ್ಥಿ ಸಂಘಟನೆ ಹಾಗೂ ಆಲ್ ಅರುಣಾಚಲ ಪ್ರದೇಶ ಭ್ರಷ್ಟಾಚಾರ ಮುಕ್ತ ವಿದ್ಯಾರ್ಥಿ ಸಂಘಟನೆಯ ಸದಸ್ಯರು ಈ ಕಾರ್ಯವನ್ನು ಮಾಡಿದ್ದಾರೆ. ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ ಹೊಸದಾಗಿ ಹೆಸರು ನಮೂದಿಸುವವರು ಯಾರೂ ನಮ್ಮವರಲ್ಲ, ಅವರು ಹೊರಗಿನವರು ಎಂಬುದು ವಿದ್ಯಾರ್ಥಿ ಸಂಘಟನೆಗಳ ವಾದ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆಲ್ ಅರುಣಾಚಲ ಪ್ರದೇಶ ಭ್ರಷ್ಟಾಚಾರ ಮುಕ್ತ ವಿದ್ಯಾರ್ಥಿ ಸಂಘಟನೆಯು ಕಳೆದ ಒಂದು ವರ್ಷದಿಂದ ಈ ವಿಚಾರವಾಗಿ ಅಭಿಯಾನವನ್ನು ಆರಂಭಿಸಿತ್ತು. ಈಗ ಪ್ರತಿಭಟನೆ ಹಿಂಸಾ ರೂಪಕ್ಕೆ ತಿರುಗಿದೆ. ಹೀಗಾಗಿ, ಡಿಸೆಂಬರ್ 22 ರಂದು ನಡೆಯಬೇಕಾಗಿದ್ದ ಚುನಾವಣೆಯು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಪ್ರತಿಭಟನಾಕಾರರು, ಹೆಚ್ಚುವರಿ ಸಹಾಯಕ ಆಯುಕ್ತರ ಕಚೇರಿ, ಪೋಸ್ಟ್ ಆಫೀಸ್, ಸ್ಪೆಷಲ್ ಬ್ಯೂರೋ ಕಚೇರಿ, ಸ್ಥಳೀಯ ಪೊಲೀಸ್ ಠಾಣೆ ಸೇರಿದಂತೆ ಹೆಲಿಪ್ಯಾಡ್ ಅನ್ನು ಕೂಡಾ ಧ್ವಂಸ ಮಾಡಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾದರೂ, ಸಾರ್ವಜನಿಕ ಆಸ್ತಿಪಾಸ್ತಿ ಅಪಾರವಾಗಿ ನಷ್ಟವಾಗಿದೆ ಎಂದು, ಪೊಲೀಸ್ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ.