ಕನ್ನಡ ಚಿತ್ರರಂಗದಲ್ಲಿ 1970ರಿಂದ 85ರ ಅವಧಿಯನ್ನು ಸುವರ್ಣಯುಗ ಎಂದೇ ಕರೆಯಲಾಗುತ್ತದೆ. ಈ ಅವಧಿಯಲ್ಲಿನ ಸಂಗೀತವೂ ಸೊಗಸು. ಮಾಧುರ್ಯ ಪ್ರಧಾನವಾದ ಸಂಗೀತ ಸುಧೆಯನ್ನು ಹರಿಸಿದ ಸಂಗೀತ ಸಂಯೋಜಕರ ಸಾಲಿನಲ್ಲಿ ರಾಜನ್-ನಾಗೇಂದ್ರ ಅವರದ್ದು ಗಮನಾರ್ಹ ಸಾಧನೆ. ಗೀತಸಾಹಿತ್ಯ ಇಂಪಾಗಿ, ಸ್ಪಷ್ಟವಾಗಿ ಕೇಳಿಸುವಂತಹ ಮಾಧುರ್ಯಭರಿತ ಸಂಗೀತ ಸಂಯೋಜಿಸಿದವರು ರಾಜನ್-ನಾಗೇಂದ್ರ. ಸುವರ್ಣಯುಗದ ನಂತರದ ದಶಕದಲ್ಲೂ ರಾಜನ್-ನಾಗೇಂದ್ರ ಅವರ ಪ್ರಯೋಗಗಳು ಹೊಸತನದಿಂದ ಕೂಡಿದ್ದವು. ಇದೀಗ ರಾಜನ್ ನಮ್ಮನ್ನು ಅಗಲಿದ್ದಾರೆ. ಅವರ ಅಗಲಿಕೆಯಿಂದಾಗಿ ಕನ್ನಡ ಚಿತ್ರಸಂಗೀತದ ಮಹತ್ವದ ಪರಂಪರೆಯೊಂದು ಕೊನೆಯಾದಂತಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮೂಲತಃ ಮೈಸೂರಿನವರಾದ ರಾಜನ್ ಜನಿಸಿದ್ದು 1935ರಲ್ಲಿ. ತಂದೆ ಬಿ ರಾಜಪ್ಪನವರು ದೊಡ್ಡ ಸಂಗೀತ ವಿದ್ವಾಂಸರು. ಹಾರ್ಮೋನಿಯಂ ಮೇಷ್ಟ್ರಾಗಿದ್ದ ಅವರಿಗೆ ದೊಡ್ಡ ಶಿಷ್ಯಬಳಗವಿತ್ತು. 30ರ ದಶಕದ ಮೂಕಿ ಚಿತ್ರಗಳಿಗೆ ಅವರು ಸಾಂದರ್ಭಿಕ ಸಂಗೀತ ಒದಗಿಸುತ್ತಿದ್ದರು. ಮನೆಯಲ್ಲಿನ ಸಂಗೀತದ ವಾತಾವರಣ ಸಹಜವಾಗಿಯೇ ರಾಜನ್-ನಾಗೇಂದ್ರರ ಮೇಲೆ ಗಾಢ ಪ್ರಭಾವ ಬೀರಿತು. ತಂದೆಯವರ ಮಾರ್ಗದರ್ಶನದಲ್ಲಿ ರಾಜನ್ ಪಿಯಾನೋ, ಜಲತರಂಗ, ಹಾರ್ಮೋನಿಯಂನಲ್ಲಿ ಪರಿಣತಿ ಹೊಂದಿದರು.
ರಾಜಪ್ಪನವರ ಕುಟುಂಬ ಬೆಂಗಳೂರಿಗೆ ಬಂದು ನೆಲೆನಿಂತ ಮೇಲೆ ರಾಜನ್ ಜಯಮಾರುತಿ ವಾದ್ಯವೃಂದಕ್ಕೆ ಸೇರಿ ಆರೇಳು ಸಂಗೀತ ಕಚೇರಿಯಲ್ಲಿ ಭಾಗವಹಿಸಿದರು. ಮಧ್ಯೆ ನಾಟಕಗಳಿಗೆ ಸಂಗೀತ ಸಂಯೋಜಿಸುವುದೂ ಜಾರಿಯಲ್ಲಿತ್ತು. ಮುಂದೆ ಮದರಾಸಿಗೆ ತೆರಳಿದ ರಾಜನ್ ಅಂದಿನ ಜನಪ್ರಿಯ ಸಂಗೀತ ಸಂಯೋಜಕ ಎಚ್ ಆರ್ ಪದ್ಮನಾಭಶಾಸ್ತ್ರಿ ಅವರಲ್ಲಿ ಸಹಾಯಕನಾಗಿ ಕೆಲಸಕ್ಕೆ ಸೇರಿದರು. ಮುಂದೆ ಸಹೋದರ ನಾಗೇಂದ್ರ ಅವರೊಡಗೂಡಿ ‘ಸೌಭಾಗ್ಯಲಕ್ಷ್ಮಿ’ (1953) ಚಿತ್ರಕ್ಕೆ ಸಂಗೀತ ಸಂಯೋಜಿಸುವ ಮೂಲಕ ಅಧಿಕೃತವಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅಲ್ಲಿಂದ ಮುಂದೆ ಸಹೋದರರು ನಿರಂತರವಾಗಿ ಸಂಗೀತ ಸಂಯೋಜನೆಯಲ್ಲಿ ತೊಡಗಿಸಿಕೊಂಡರು.
“ರಾಜನ್ ಮತ್ತು ನಾಗೇಂದ್ರ ಅವರಲ್ಲಿ ಅಪರೂಪದ ಹೊಂದಾಣಿಕೆ ಇತ್ತು. ನಾಗೇಂದ್ರ ಅವರು ನೊಟೇಷನ್, ಆರ್ಕೆಸ್ಟ್ರಾದ ಹೊಣೆಗಾರಿಕೆ ನಿಭಾಯಿಸಿದರೆ ರಾಜನ್ ಸ್ವರಸಂಯೋಜನೆಯ ಜವಾಬ್ದಾರಿ ಹೊರುತ್ತಿದ್ದರು. ಈ ಜೋಡಿಯಿಂದ ವಿಶಿಷ್ಟ ಪ್ರಯೋಗಗಳಾಗಿವೆ. ಸಿಂಗಾಪುರದಲ್ಲಿ ರಾಜಾಕುಳ್ಳ ಚಿತ್ರದಲ್ಲಿನ ಹಿನ್ನೆಲೆ ಸಂಗೀತವಾಗಿರಬಹುದು, ನಾನೊಬ್ಬಕಳ್ಳ ಚಿತ್ರದಲ್ಲಿನ ಗಝಲ್ ಶೈಲಿಯ ಸಂಯೋಜನೆ ಸೇರಿದಂತೆ ಹಲವು ಪ್ರಯೋಗಗಳನ್ನು ಗುರುತಿಸಬಹುದು. ಮಂತ್ರಾಲಯ ಮಹಾತ್ಮೆಯಲ್ಲಿ ಕೊಳಲು ಮತ್ತು ವೀಣೆ ಎರಡೇ ವಾದ್ಯಗಳೊಂದಿಗೆ ಅದ್ಭುತ ಸಂಗೀತ ಸಂಯೋಜಿಸಿದ್ದರು” ಎನ್ನುತ್ತಾರೆ ಹಿರಿಯ ಪತ್ರಕರ್ತ ಎನ್ ಎಸ್ ಶ್ರೀಧರಮೂರ್ತಿ.
ಕನ್ನಡದ ಹೆಮ್ಮೆಯ ಗಾಯಕಿ ಮಂಜುಳಾ ಗುರುರಾಜ್ ಅವರು ರಾಜನ್-ನಾಗೇಂದ್ರ ಸಂಯೋಜನೆಯ ಹಲವಾರು ಹಾಡುಗಳಿಗೆ ದನಿಯಾಗಿದ್ದಾರೆ. ಅವರು ಹಾಡಲು ಶುರು ಮಾಡಿದ್ದು 1983ರಲ್ಲಿ. ಕಾರಣಾಂತರಗಳಿಂದ 1988ರವರೆಗೂ ಮಂಜುಳಾರಿಗೆ ರಾಜನ್-ನಾಗೇಂದ್ರ ಅವರ ಸಂಯೋಜನೆಗೆ ಹಾಡಲು ಸಾಧ್ಯವಾಗಿರಲಿಲ್ಲ. ಅದೊಂದು ದಿನ ಇವರ ಸಂಯೋಜನೆಗೆ ಹಾಡುವ ಅವಕಾಶ ಒದಗಿಬರುತ್ತದೆ. ಆ ಕ್ಲಿಷ್ಟ ಸಂದರ್ಭವನ್ನು ಅವರು ನೆನಪು ಮಾಡಿಕೊಳ್ಳುತ್ತಾರೆ.
“ಆಗ ನನ್ನ ಮೂರು ವರ್ಷದ ಮಗನಿಗೆ ಅನಾರೋಗ್ಯ. ನಾನು ಆಸ್ಪತ್ರೆಯಲ್ಲಿದ್ದೆ. ನಿರ್ದೇಶಕ ಫಣಿರಾಮಚಂದ್ರ ತಮ್ಮ ನಿರ್ದೇಶನದ ಡಾಕ್ಟರ್ ಕೃಷ್ಣ ಸಿನಿಮಾಗೆ ಹಾಡುವಂತೆ ಕರೆ ಮಾಡಿದ್ದರು. ರಾಜನ್-ನಾಗೇಂದ್ರ ಸಂಯೋಜನೆಯ ಅವಕಾಶ ಮಿಸ್ ಮಾಡಿಕೊಳ್ಳಬಾರದು ಎಂದು ಆಸ್ಪತ್ರೆಯಿಂದ ನೇರವಾಗಿ ಚಾಮುಂಡೇಶ್ವರಿ ರೆಕಾರ್ಡಿಂಗ್ ಸ್ಟುಡಿಯೋಗೆ ಹೋದೆ. ನನ್ನ ಹಾಡು ಮೆಚ್ಚುಗೆಯಾಗಿ ಅದೇ ಚಿತ್ರದ ಮತ್ತೊಂದು ಹಾಡನ್ನು ರಾಜನ್-ನಾಗೇಂದ್ರ ನನ್ನಿಂದ ಹಾಡಿಸಿದರು. ನನ್ನ ಗಾಯನ ಮೆಚ್ಚಿಕೊಂಡ ಅವರು ಮುಂದೆ ತಮ್ಮ ಸಂಯೋಜನೆಯ ಹಲವಾರು ಹಾಡುಗಳಿಗೆ ನನಗೆ ಅವಕಾಶ ಕೊಟ್ಟರು. ನಮ್ಮ ಸ್ಟುಡಿಯೋ ಉದ್ಘಾಟಿಸಿ ಶುಭ ಹಾರೈಸಿದ್ದರು” ಎಂದು ಸ್ಮರಿಸುತ್ತಾರೆ ಮಂಜುಳಾ.
ರಾಜನ್-ನಾಗೇಂದ್ರ ಅವರ ಸಂಗೀತದ ತಂತ್ರಗಾರಿಕೆಯ ಬಗ್ಗೆ ಮಂಜುಳಾ ವಿಶೇಷವಾಗಿ ಹೇಳುತ್ತಾರೆ. “ಟೆಕ್ನಿಕಲೀ ಅವರು ತುಂಬಾ ಸ್ಟ್ರಾಂಗ್. ಗಾಯಕ – ಗಾಯಕಿಯರ ಧ್ವನಿ ಮತ್ತು ಟೋನ್ ಬ್ಯಾಲೆನ್ಸಿಂಗ್ಗೆ ಸಂಬಂಧಿಸಿದಂತೆ ಹೇಳುವುದಾದರೆ ದಕ್ಷಿಣ ಭಾರತದಲ್ಲೇ ಅವರು ನಂಬರ್ ಒನ್ ಕಂಪೋಸರ್ಸ್. ಹಾಡಿನ ಕಂಪೋಸಿಷನ್ಗೆ ಸಂಬಂಧಿಸಿದಂತೆ ಅವರು ತುಂಬಾ ಹೋಂವರ್ಕ್ ಮಾಡುತ್ತಿದ್ದರು. ಪ್ರತೀ ಚಿತ್ರದ ಹಾಡುಗಳಿಗೆ ಒಂದೊಂದು ನೋಟ್ಬುಕ್ ಇಟ್ಟು ಅಲ್ಲಿ ನೊಟೇಷನ್ಸ್ ಮಾಡಿಡುತ್ತಿದ್ದರು” ಎನ್ನುತ್ತಾರೆ ಮಂಜುಳಾ ಗುರುರಾಜ್.
ರಾಜನ್ – ನಾಗೇಂದ್ರ ಅವರು ಕನ್ನಡದ 212 ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಕನ್ನಡದ ಜೊತೆಗೆ ತೆಲುಗು, ತಮಿಳು, ತುಳು, ಸಿಂಹಳಿ ಭಾಷೆಯ ಚಿತ್ರಗಳು ಸೇರಿದಂತೆ ಒಟ್ಟು ಮುನ್ನೂರ ಎಪ್ಪತ್ತೈದಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ದಾಖಲೆ ಅವರದು. “ಮೂಕಿಚಿತ್ರಗಳ ಕಾಲದಿಂದಲೂ ಸಂಗೀತದ ನಂಟು ಹೊಂದಿದ್ದ ಕುಟುಂಬ ಅವರದು. ಸಹೋದರ ನಾಗೇಂದ್ರ ಇರುವವರೆಗೂ ರಾಜನ್ ಉತ್ಸಾಹದಿಂದಿದ್ದರು. ನಾಗೇಂದ್ರರ ಅಗಲಿಕೆ ಅವರ ಮನಸ್ಸಿಗೆ ನೋವು ತಂದಿತ್ತು. ಗೀತಸಂಗೀತ ಮತ್ತು ಹಿನ್ನೆಲೆ ಸಂಗೀತದಲ್ಲಿ ಮಹತ್ವದ ಪ್ರಯೋಗಗಳನ್ನು ನಡೆಸಿದರು. ಕನ್ನಡ ಚಿತ್ರರಂಗ ಇರುವವರೆಗೂ ಈ ಜೋಡಿಯ ಸಂಯೋಜನೆಯ ಹಾಡುಗಳು ಅಸ್ತಿತ್ವದಲ್ಲಿರುತ್ತವೆ” ಎಂದು ಹಿರಿಯ ಪತ್ರಕರ್ತೆ ಡಾ ವಿಜಯಮ್ಮ ಅವರು ರಾಜನ್ರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾರೆ.