ಇದಕ್ಕೆ ರಾಜಕೀಯದ ಅತಿರೇಕ ಎನ್ನದೇ ವಿಧಿಯಿಲ್ಲ. ಯಾರೋ ಮಾಡಿದ ಜನಪರ ಯೋಜನೆಗೆ ತನ್ನ ಹೆಸರನ್ನು ಹಾಕಿಕೊಳ್ಳಲು ಹುನ್ನಾರ ನಡೆಸಿರುವುದು ನಾಚಿಕೆಗೇಡಿನ ಸಂಗತಿ.
ರಾಜ್ಯದಲ್ಲಿ ಹಿಂದುಳಿದವರು, ನಿರ್ಗತಿಕರು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಕಡಿಮೆ ದರದಲ್ಲಿ ಊಟ-ತಿಂಡಿ ಸಿಗಲಿ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಅನ್ನು ಆರಂಭ ಮಾಡಿತ್ತು.
ಈ ಕ್ಯಾಂಟೀನ್ ಗಳು ಬಡವರ ಪಾಲಿನ ಅನ್ನಪೂರ್ಣೆಯಾಗಿವೆ. ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ವೇಳೆಯಲ್ಲಿ ದಣಿದು ಬರುವ ದುಡಿಯುವ ವರ್ಗದ ಕಾರ್ಮಿಕರು, ಶ್ರಮಿಕರಿಗೆ ಕಡಿಮೆ ದುಡ್ಡಿಗೆ ಹೊಟ್ಟೆ ತುಂಬಾ ಅನ್ನ ಅಂದರೆ ಊಟ ದೊರೆಯುವಂತೆ ಮಾಡುವ ಮೂಲಕ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದವರ ಹರಿಕಾರರಾಗಿ ಹೊರಹೊಮ್ಮಿದ್ದರು.
ಅವರು ಜಾರಿಗೆ ತಂದ ಈ ಯೋಜನೆ ಅತ್ಯಲ್ಪ ಅವಧಿಯಲ್ಲಿ ಮನೆಮಾತಾಯಿತು. ದಿನಕಳೆದಂತೆ ಬಡವರ ಆಶಾಕಿರಣದಂತಾದ ಇಂದಿರಾ ಕ್ಯಾಂಟೀನ್ ಗಳು ಈ ವರ್ಗದ ಅವಿಭಾಜ್ಯ ಅಂಗದಂತಾದವು. ಹೀಗಾಗಿಯೇ ಇಂದಿಗೂ ಜನರು ಇಂದಿರಾ ಕ್ಯಾಂಟೀನ್ ಗಳಿಗೆ ಮುಗಿ ಬಿದ್ದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.
ಇಂದಿರಾ ಕ್ಯಾಂಟೀನ್ ಗಳ ಮೇಲೆ ಬಿಜೆಪಿ `ಕಾಕದೃಷ್ಟಿ’!
ಎಲ್ಲವೂ ಉತ್ತಮವಾಗಿ ನಡೆದುಕೊಂಡು ಹೋಗುತ್ತಿರುವ ಈ ಸಂದರ್ಭದಲ್ಲಿ ಆಪರೇಷನ್ ಕಮಲದ ಮೂಲಕ ಜೆಡಿಎಸ್ –ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಬೀಳಿಸಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಇಂದಿರಾ ಕ್ಯಾಂಟೀನ್ ಮೇಲೆ ತನ್ನ ಕಾಕದೃಷ್ಟಿಯನ್ನು ಹಾಕಿದೆ.
ಸದುದ್ದೇಶದಿಂದ ಪಕ್ಷಾತೀತವಾಗಿ ಆರಂಭವಾಗಿರುವ ಇಂದಿರಾ ಕ್ಯಾಂಟೀನ್ ವಿಚಾರದಲ್ಲಿ ಬಿಜೆಪಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿರುವುದು ನಾಚಿಕೆಗೇಡು ಮತ್ತು ವಿಪರ್ಯಾಸದ ಸಂಗತಿಯಾಗಿದೆ.
ಕ್ಯಾಂಟೀನ್ ಗಳಿಗೆ ಇಂದಿರಾ ಎಂದು ಹೆಸರಿಟ್ಟಿರುವುದನ್ನು ಬಿಜೆಪಿಗರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಈ ಕಾರಣದಿಂದಲೇ ಇಂದಿರಾ ಹೆಸರನ್ನೇ ಅಳಿಸಿ ಹಾಕುವ ಯತ್ನಕ್ಕೆ ಕೈಹಾಕಲು ತಯಾರಿ ನಡೆಸಿದೆ.
ಬಡವರಿಗೆ ಊಟೋಪಚಾರ ಮಾಡುವ ಸಂಸ್ಥೆಗೆ ಯಾರ ಹೆಸರಿದ್ದರೇನಂತೆ? ಇಂದಿರಾಗಾಂಧಿ ಹೆಸರಿದ್ದಾ ಕ್ಷಣಕ್ಕೆ ಇಲ್ಲಿ ಊಟ ಮಾಡುವವರೆಲ್ಲಾ ಕಾಂಗ್ರೆಸ್ ಗೆ ಮತ ಹಾಕುತ್ತಾರೆಯೇ? ಅಥವಾ ಇಲ್ಲಿ ಊಟ-ತಿಂಡಿ ತಿನ್ನುವವರೆಲ್ಲಾ ಕಾಂಗ್ರೆಸ್ ಕಾರ್ಯಕರ್ತರೇ? ಹಾಗೊಂದು ವೇಳೆ ಇವರೆಲ್ಲಾ ಕಾಂಗ್ರೆಸ್ ಕಾರ್ಯಕರ್ತರಾಗಿದಿದ್ದರೆ ಅಥವಾ ಕಾಂಗ್ರೆಸ್ ಗೇ ಮತ ಹಾಕಿದ್ದರೆ ಬಿಜೆಪಿ ಬೆಂಗಳೂರು ನಗರದಲ್ಲಿ ಹೆಚ್ಚು ಶಾಸಕರನ್ನು ಗೆದ್ದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
ಆದರೆ, ಈ ಸಾಮಾನ್ಯ ಜ್ಞಾನವನ್ನೂ ಇಟ್ಟುಕೊಳ್ಳದ ಕಮಲದ ನಾಯಕರು ಕಾಂಗ್ರೆಸ್ ನಾಯಕಿ, ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರ ಹೆಸರಿದೆ ಎಂಬುದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಅಷ್ಟಕ್ಕೂ ಇಂದಿರಾ ಕ್ಯಾಂಟೀನ್ ಗಳಲ್ಲಿ ಕಾಂಗ್ರೆಸ್ ಪಕ್ಷದ ಹೆಸರಿನ ಅಕ್ಕಿ-ಬೇಳೆಯಿಂದ ಅಡುಗೆ ತಯಾರು ಮಾಡಲಾಗುತ್ತಿದೆಯೇ? ಕಾಂಗ್ರೆಸ್ ಕಾರ್ಯಕರ್ತರು ಕ್ಯಾಂಟೀನ್ ಗಳನ್ನು ನಡೆಸುತ್ತಿದ್ದಾರೆಯೇ? ಇಂತಹ ಹತ್ತು ಹಲವಾರು ಪ್ರಶ್ನೆಗಳಿಗೆ ಇಲ್ಲ ಎಂಬ ಉತ್ತರ ನಿಸ್ಸಂಶಯವಾಗಿ ಬರುತ್ತದೆ.
ಹಾಗಿದ್ದರೂ, ಇಂದಿರಾ ಕ್ಯಾಂಟೀನ್ ಮೇಲೆ ಬಿಜೆಪಿಗೆ ಏಕಿಷ್ಟು ದ್ವೇಷ? ಈ ಪ್ರಶ್ನೆಗೆ ಮಾತ್ರ ಬಿಜೆಪಿ ಬಳಿ ಯಾವುದೇ ಉತ್ತರವಿಲ್ಲ. ಅದರ ತಲೆಯಲ್ಲಿ ಹೊಕ್ಕಿರುವುದು ಕೇವಲ ಇಂದಿರಾ ಎಂಬ ಹೆಸರು. ಹೇಗಾದರೂ ಮಾಡಿ ಈ ಹೆಸರನ್ನು ತೆಗೆದುಹಾಕಬೇಕೆಂಬ ಅಜೆಂಡಾ ಬಿಜೆಪಿ ನಾಯಕರ ಕಣ್ಣ ಮುಂದಿದೆಯಷ್ಟೆ.
ಇಲ್ಲಿ ಬಿಜೆಪಿಗರಿಗೆ ಹೆಸರಿನ ಮೇಲೆ ವ್ಯಾಮೋಹ ಇದೆಯೇ ಹೊರತು ಬಡ-ಬಗ್ಗರಿಗೆ ಇರುವ ಯೋಜನೆಯನ್ನು ಯಾವ ರೀತಿ ಇನ್ನೂ ಪರಿಣಾಮಕಾರಿಯಾಗಿ ಹೆಚ್ಚು ಜನರಿಗೆ ತಲುಪುವಂತೆ ಮಾಡಬೇಕೆಂಬ ಇರಾದೆಯೇ ಇದ್ದಂತಿಲ್ಲ. ಬಿಜೆಪಿಗರು ಜಿದ್ದಾಜಿದ್ದಿಗೆ ಬಿದ್ದಂತೆ ಹೆಸರನ್ನು ಬದಲಾವಣೆ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ಪಕ್ಷ ತನ್ನ ರಾಜಕೀಯ ವಿರೋಧಿ. ಇದನ್ನು ಒಪ್ಪಿಕೊಳ್ಳೋಣ. ಆದರೆ, ಜನಪರವಾದ ಒಂದು ಯೋಜನೆ ತಂದು ಅದಕ್ಕೊಂದು ಹೆಸರಿಟ್ಟಿದ್ದನ್ನೇ ರಾಜಕೀಯ ದಾಳವಾಗಿ ಬಳಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ. ಇದು ನಿಜಕ್ಕೂ ಬಿಜೆಪಿ ಇಂದಿರಾ ಕ್ಯಾಂಟೀನ್ ವಿಚಾರದಲ್ಲಿ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಹೊರಟಿರುವುದಂತೂ ಸ್ಪಷ್ಟವಾಗಿದೆ.
ಕ್ಯಾಂಟೀನ್ ಹೆಸರನ್ನು ಬದಲಾವಣೆ ಮಾಡಲು ಹೊರಟಿರುವ ಬಿಜೆಪಿಗರಿಗೆ ಇಲ್ಲೊಂದು ಪ್ರಶ್ನೆ ಇದೆ. ಹಿಂದಿನ ಕಾಂಗ್ರೆಸ್ ಸರ್ಕಾರ ಬಡವರ ಪರವಾದ ನಿಲುವನ್ನು ಹೊಂದಿ ಆ ವರ್ಗಕ್ಕೊಂದು ಏನಾದರೂ ಯೋಜನೆಯನ್ನು ತರಬೇಕೆಂಬ ದೃಷ್ಟಿಯಿಂದ ಇಂದಿರಾ ಕ್ಯಾಂಟೀನ್ ಅನ್ನು ಆರಂಭಿಸಿತ್ತು.
ಆದರೆ, ಕಾಂಗ್ರೆಸ್ ಸರ್ಕಾರ ಬರುವ ಮೊದಲು ಅಧಿಕಾರದಲ್ಲಿದ್ದ ಬಿಜೆಪಿಗೆ ಇಂತಹ ಯೋಜನೆಗಳನ್ನು ಜಾರಿಗೆ ತರುವ ಆಸಕ್ತಿ ಏಕಿರಲಿಲ್ಲ? ಇಂತಹ ಯೋಜನೆಗಳ ಬಗ್ಗೆ ರೂಪುರೇಶೆಯನ್ನು ಏಕೆ ರೂಪಿಸಿರಲಿಲ್ಲ? ಬಿಜೆಪಿಗೆ ಕೇವಲ ಕಾರ್ಪೊರೇಟ್ ಸಂಸ್ಕೃತಿ, ಕಾರ್ಪೊರೇಟ್ ಸಂಸ್ಥೆಗಳ ಶ್ರೇಯೋಭಿವೃದ್ಧಿಯೇ ಮುಖ್ಯವೇ? ಅಧಿಕಾರಕ್ಕೆ ಬಂದಾಗಲೆಲ್ಲಾ ಹೆಸರು ಬದಲಾವಣೆ ಸೇರಿದಂತೆ ಮತ್ತಿತರೆ ವಿವಾದಗಳನ್ನು ಸೃಷ್ಟಿಸಿ ಅದರ ಮೂಲಕವೇ ವೋಟ್ ಬ್ಯಾಂಕ್ ರಾಜಕಾರಣವನ್ನು ಬಿಟ್ಟು ಜನರ ಆಶೋತ್ತರಗಳ ಬಗ್ಗೆ ಏಕೆ ಯೋಚಿಸುವುದಿಲ್ಲ?
ಈ ಹಿಂದೆ ಅಧಿಕಾರದಲ್ಲಿದ್ದಾಗ ಇಂತಹ ಜನಪರವಾದ ಯೋಜನೆಯನ್ನು ತಂದಿದ್ದೇ ಆಗಿದ್ದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಇಂದಿರಾ ಕ್ಯಾಂಟೀನ್ ಅನ್ನು ಸ್ಥಾಪಿಸುವ ಅಗತ್ಯವೇ ಇರುತ್ತಿರಲಿಲ್ಲ. ಬಿಜೆಪಿ ಕೈಲಿ ಮಾಡಲು ಸಾಧ್ಯವಾಗದ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಈ ಜನಪರ ಕಾರ್ಯಕ್ರಮಗಳ ವಿಚಾರದಲ್ಲಿ ಮತ್ಸರವೇಕೆ?
ಸಮ್ಮಿಶ್ರ ಸರ್ಕಾರವನ್ನು ಕೆಡವಿ ಹಾಕಿ ಅಧಿಕಾರಕ್ಕೆ ಬಂದ ಆರಂಭದಲ್ಲಿ ಸಂಘಪರಿವಾರದ ಹಿರಿಯ ನಾಯಕರ ಹೆಸರನ್ನು ಇಂದಿರಾ ಕ್ಯಾಂಟೀನ್ ಗೆ ಮರುನಾಮಕರಣ ಮಾಡುವ ಬಗ್ಗೆ ಆಲೋಚನೆ ಮಾಡಲಾಗಿತ್ತು. ಆದರೆ, ಇದಕ್ಕೆ ಸಾರ್ವಜನಿಕವಾಗಿ ಟೀಕೆಗಳು ಬರುತ್ತವೆ ಎಂಬ ಕಾರಣಕ್ಕೆ ಆ ಪ್ರಸ್ತಾವನೆಯನ್ನು ಪ್ರಸ್ತಾಪ ಮಾಡಿರಲಿಲ್ಲ.
ಈಗ ಕೆಲವು ಶಾಸಕರು ಮತ್ತು ನಾಯಕರನ್ನು ಛೂ ಬಿಟ್ಟು ಒಂದು ಮನವಿಯನ್ನು ಸ್ವೀಕರಿಸಿದಂತೆ ಮಾಡಿ, ಶಾಸಕರು ಮತ್ತು ನಾಯಕರಿಂದ ಮನವಿಗಳು ಬಂದ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾವಣೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳುತ್ತಿದ್ದಾರೆ ಬಿಜೆಪಿ ನಾಯಕರು ಮತ್ತು ಸಚಿವರು.
ಅಷ್ಟಕ್ಕೂ ಇಂದಿರಾ ಕ್ಯಾಂಟೀನ್ ನ ಬಹುತೇಕ ರಾಜಧಾನಿ ಬೆಂಗಳೂರಿನಲ್ಲಿವೆ. ಹಾಗಾದರೆ ಹೆಸರನ್ನು ಬದಲಿಸುವಂತೆ ಮನವಿಯನ್ನು ಕೊಟ್ಟಿರುವ ಶಾಸಕರಿಗೂ ಬೆಂಗಳೂರಿಗೂ ಯಾವುದೇ ಸಂಬಂಧವಿಲ್ಲ. ಈ ಶಾಸಕರು ಇಂದಿರಾ ಕ್ಯಾಂಟೀನ್ ಗೆ ಮಹರ್ಷಿ ವಾಲ್ಮೀಕಿ ಅನ್ನ ಕುಟೀರ ಎಂದು ನಾಮಕರಣ ಮಾಡುವಂತೆ ಮನವಿ ಮಾಡಿದ್ದಾರೆ. ಇಲ್ಲಿ ಬಿಜೆಪಿ ಸರ್ಕಾರಕ್ಕೆ ಇಂದಿರಾ ಹೆಸರನ್ನು ತೆಗೆದುಹಾಕುವುದು ಬೇಕಿತ್ತು. ಮರುನಾಮಕರಣವನ್ನು ಸುಮ್ಮನೇ ಮಾಡಲು ಬರುವುದಿಲ್ಲ. ಏಕೆಂದರೆ ಕಾನೂನು ತೊಡಕುಗಳು ಎದುರಾಗುತ್ತವೆ ಎಂಬ ಕಾರಣಕ್ಕೆ ದಾಖಲೆಗೆ ಇರಲಿ ಎಂದು ಶಾಸಕರಿಂದ ಒಂದು ಮನವಿ ಪತ್ರವನ್ನು ಸ್ವೀಕರಿಸಿದೆ. ಇದರ ಆಧಾರದ ಮೇಲೆ ಕ್ಯಾಂಟೀನ್ ಹೆಸರನ್ನು ಬದಲಿಸಲು ಹೊರಟಿದೆ.
ಹಾಗಾದರೆ, ಹೀಗೆ ಹತ್ತು ಹಲವಾರು ಸರ್ಕಾರದ ಯೋಜನೆಗಳಿಗೆ ಇರುವ ಹೆಸರುಗಳನ್ನು ಬದಲಿಸಿ ಎಂದು ಮತ್ತೆ ಕೆಲವು ಶಾಸಕರು ಮನವಿ ಮಾಡುತ್ತಾರೆ. ಅದಕ್ಕೆ ಸರ್ಕಾರ ಸಮ್ಮತಿ ಸೂಚಿಸುತ್ತದೆಯೇ? ಬಂದ ಬಂದ ಶಾಸಕರ ಮನವಿಗೆಲ್ಲಾ ಪುರಸ್ಕಾರ ಮಾಡುತ್ತಾ ಹೋದರೆ ಸರ್ಕಾರದ ಯೋಜನೆಗಳ ಮಹತ್ವ ಏನು ಉಳಿದುಕೊಳ್ಳುತ್ತದೆ?
ಹೌದು. ಮಹರ್ಷಿ ವಾಲ್ಮೀಕಿ ಹೆಸರು ನಮ್ಮ ಸಂಸ್ಕೃತಿಯಲ್ಲಿ ಅಜರಾಮರವಾಗಿದೆ. ಹಾಗೊಂದು ವೇಳೆ ಬಿಜೆಪಿ ಸರ್ಕಾರಕ್ಕೆ ವಾಲ್ಮೀಕಿ ಮೇಲೆ ಅಷ್ಟೊಂದು ಅಭಿಮಾನ, ಅಕ್ಕರೆ ಇದ್ದಿದ್ದೇ ಆದಲ್ಲಿ ಸರ್ಕಾರದ ಬೇರೊಂದು ಯೋಜನೆಗಳಿಗೆ ಅಥವಾ ಕೇಂದ್ರ ಸರ್ಕಾರದ ಯೋಜನೆಯಾಗಿರುವ ಅಂತ್ಯೋದಯ ಯೋಜನೆಗೆ ಇಟ್ಟಿರುವ ದೀನದಯಾಳು ಹೆಸರನ್ನು ತೆಗೆದು ಹಾಕಿ ಮಹರ್ಷಿ ವಾಲ್ಮೀಕಿ ಅಂತ್ಯೋದಯ ಯೋಜನೆ ಎಂದು ಮರುನಾಮಕರಣ ಮಾಡುವ ಧೈರ್ಯ ತೋರಿಸಲಿ.
ವಿಧಾನಸೌಧದ ಹೆಸರನ್ನೂ ಬದಲಿಸಿ!
ಹಾಗಾದರೆ, ರಾಜ್ಯದ ಶಕ್ತಿಕೇಂದ್ರವಾದ ವಿಧಾನಸೌಧವನ್ನು ಕೆಂಗಲ್ ಹನುಮಂತಯ್ಯ ಕಟ್ಟಿಸಿದ್ದರು. ಅದಕ್ಕೆ ವಿಧಾನಸೌಧ ಎಂದು ಹೆಸರಿಟ್ಟಿದ್ದರು. ಅವರು ಬಿಜೆಪಿಯವರಲ್ಲದ ಕಾರಣ ಮತ್ತು ಅವರು ಹೆಸರಿಟ್ಟಿದ್ದಾರೆ ಎಂಬ ಕಾರಣಕ್ಕೆ ವಿಧಾನಸೌಧದ ಹೆಸರನ್ನೇ ಬದಲಿಸಿ ಬಿಜೆಪಿಯವರ ಹೆಸರಿಡುತ್ತಾರೆಯೇ?
ಸಿದ್ದರಾಮಯ್ಯ ಆಕ್ರೋಶ
ಇಂದಿರಾ ಕ್ಯಾಂಟೀನ್ ಗಳ ಹೆಸರನ್ನು ಬದಲಾಯಿಸಲು ಹೊರಟಿರುವ ರಾಜ್ಯದ ಬಿಜೆಪಿ ಸರ್ಕಾರದ ನಡೆಯನ್ನು ಖಂಡಿಸುತ್ತೇನೆ ಮತ್ತು ಇಂತಹ ಕ್ಷುಲ್ಲಕ ರಾಜಕಾರಣವನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಪಡಿಸುತ್ತೇನೆ ಎಂದು ಪ್ರತಿಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಗರೀಬಿ ಹಟಾವೋ ಘೋಷಣೆಯ ಮೂಲಕ ಬಡತನದ ವಿರುದ್ಧ ಯುದ್ದ ಸಾರಿ ಗೆದ್ದವರು. ಅವರು ಕೇವಲ ಕಾಂಗ್ರೆಸ್ ಪಕ್ಷದ ನಾಯಕರಾಗಿರಲಿಲ್ಲ, ದೇಶದ ನಾಯಕಿಯಾಗಿದ್ದರು, ಬಡವರ ಪಾಲಿನ ಆಪತ್ಪಾಂಧವಗಾಗಿದ್ದರು. ಈ ಕಾರಣಕ್ಕಾಗಿ ಇಂದಿರಾ ಕ್ಯಾಂಟೀನ್ ಎಂದು ನಾಮಕರಣ ಮಾಡಲಾಗಿತ್ತು ಎಂದಿದ್ದಾರೆ.
ಈ ಕ್ಯಾಂಟೀನ್ ಗಳಿಗೆ ನಮ್ಮೆಲ್ಲರ ಹೆಮ್ಮೆಯ ಕವಿ ಮಹರ್ಷಿ ವಾಲ್ಮೀಕಿಯವರ ಹೆಸರು ಇಡುವ ಯೋಚನೆ ಇದೆಯಂತೆ. ಮಹರ್ಷಿ ವಾಲ್ಮೀಕಿಯವರ ಬಗ್ಗೆ ನಮಗೆಲ್ಲ ಅಪಾರವಾದ ಗೌರವ ಇದೆ. ಅವರ ಹೆಸರನ್ನು ಬಿಜೆಪಿ ತನ್ನ ಕ್ಷುಲ್ಲಕ ರಾಜಕಾರಣಕ್ಕೆ ದುರ್ಬಳಕೆ ಮಾಡಿಕೊಂಡು ಮಹಾಕವಿಗೆ ಅವಮಾನ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಹರ್ಷಿ ವಾಲ್ಮೀಕಿಯವರು ಒಬ್ಬ ಮಹಾಕವಿ, ಅವರ ಸಾಧನೆಗೆ ಹೊಂದುವಂತಹ ಯೋಜನೆಯನ್ನು ಬಿಜೆಪಿ ಸರ್ಕಾರ ಪ್ರಾರಂಭಿಸಲಿ, ಒಬ್ಬರಿಗೆ ಅಗೌರವ ಸಲ್ಲಿಸುವ ಮೂಲಕ ಇನ್ನೊಬ್ಬರಿಗೆ ಗೌರವ ಸಲ್ಲಿಸುವುದು ಇಬ್ಬರಿಗೂ ಮಾಡುವ ಅವಮಾನವಾಗಿದೆ. ರಾಜ್ಯ ಬಿಜೆಪಿ ಬದಲಾಯಿಸಬೇಕಾಗಿರುವುದು ಇಂದಿರಾ ಕ್ಯಾಂಟೀನ್ ಹೆಸರಲ್ಲ, ತನ್ನೊಳಗಿನ ಸಣ್ಣ ಬುದ್ದಿಯನ್ನು ಬದಲಾಯಿಸಬೇಕು. ನಮ್ಮ ಸರ್ಕಾರ ಜಾರಿಗೆ ತಂದಿರುವ ಪ್ರತಿಯೊಂದು ಬಡವರ ಪರ ಯೋಜನೆಗಳನ್ನು ರದ್ದುಮಾಡಲು ಹೊರಟಿರುವ ರಾಜ್ಯದ ಬಿಜೆಪಿ ಸರ್ಕಾರ ಜನಾಕ್ರೋಶಕ್ಕೆ ಹೆದರಿ ಯೋಜನೆಗಳ ಹೆಸರು ಬದಲಾಯಿಸಲು ಹೊರಟಿದೆ. ಬಡವರ ಪರವಾದ ಹೊಸ ಯೋಜನೆಗಳನ್ನು ರೂಪಿಸುವ ಶಕ್ತಿಯೂ ಇಲ್ಲ, ಮನಸ್ಸೂ ಇಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.