ಜಾಮೀನಿನ ಮೇಲೆ ಹೊರಗಿರುವ ಬಾಂಬ್ ಸ್ಫೋಟದ ಆಪಾದಿತೆ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಆಡಬಾರದ ಮಾತುಗಳನ್ನು ಮತ್ತೊಮ್ಮೆ ಆಡಿದ್ದಾರೆ. ಗಾಂಧೀಜಿಯನ್ನು ಕೊಂದ ಗೋಡ್ಸೆ ಅಸೀಮ ದೇಶಭಕ್ತ ಎಂಬ ಮಾತುಗಳನ್ನು ಆಕೆ ಈ ಬಾರಿ ಜನತಂತ್ರದ ಮಹಾದೇಗುಲ ಎಂದು ಕರೆಯಲಾಗುವ ಸಂಸತ್ತಿನಲ್ಲಿ ನಿಂತು ಆಡುವ ಧಾರ್ಷ್ಟ್ಯ ಮೆರೆದಿದ್ದಾರೆ.
2017ರಲ್ಲಿ ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆಯಡಿ ಆಕೆಯ ಮೇಲೆ ಹೊರಿಸಲಾಗಿದ್ದ ಆಪಾದನೆಗಳನ್ನು ಎನ್.ಐ.ಎ. ಕೈ ಬಿಟ್ಟಿತು. ಈ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್ ಆಕೆಗೆ ಅನಾರೋಗ್ಯದ ಕಾರಣದ ಮೇರೆಗೆ ಜಾಮೀನಿನ ಮೇಲೆ ಬಿಡುಗಡೆಗೆ ಆದೇಶ ನೀಡಿತ್ತು. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿ ಹಲವು ಆರೋಪಗಳನ್ನು ಎದುರಿಸುತ್ತಿರುವ ವಿಚಾರಣಾಧೀನ ವ್ಯಕ್ತಿ ಈಕೆ.
2008ರಲ್ಲಿ ಮಹಾರಾಷ್ಟ್ರದ ಮಾಲೇಗಾಂವ್ ಮಸೀದಿಯ ಮುಂದೆ ರಂಜಾನ್ ಸಂದರ್ಭದಲ್ಲಿ ನಡೆದ ಬಾಂಬ್ ಸ್ಫೋಟ ಆರು ಮಂದಿಯನ್ನು ಬಲಿ ತೆಗೆದುಕೊಂಡಿತ್ತು. ನೂರು ಮಂದಿ ಗಾಯಗೊಂಡಿದ್ದರು. ಸಾಧ್ವಿಯನ್ನು ಬಂಧಿಸಿದಾಗ ಪ್ರತಿಪಕ್ಷ ಬಿಜೆಪಿಯು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ರಾಜಕೀಯ ಸಮರವನ್ನೇ ಸಾರಿತ್ತು. ಸಂಘ ಪರಿವಾರಕ್ಕೆ ಮಸಿ ಬಳಿಯಲು ಹಿಂದೂ ಹೋರಾಟಗಾರರ ಮೇಲೆ ಸುಳ್ಳು ಕೇಸು ಹೂಡಲಾಗಿದೆ ಎಂದು ಪ್ರತಿಭಟಿಸಿತ್ತು. ಹತ್ತು ವರ್ಷಗಳ ನಂತರ ಇತ್ತೀಚಿನ ಲೋಕಸಭಾ ಚುನಾವಣೆಗಳಲ್ಲಿ, ಜಾಮೀನಿನ ಮೇಲೆ ಹೊರಗಿರುವ ಆಕೆಯನ್ನು ಹಿಂದೂ ಭಯೋತ್ಪಾದನೆ ಎಂಬ ನುಡಿಗಟ್ಟನ್ನು ರಭಸದಿಂದ ಪ್ರಚಾರಕ್ಕೆ ತಂದಿದ್ದ ಕಾಂಗ್ರೆಸ್ಸಿನ ತಲೆಯಾಳು ದಿಗ್ವಿಜಯ ಸಿಂಗ್ ವಿರುದ್ಧ ಕಣಕ್ಕೆ ಇಳಿಸಲಾಗಿತ್ತು. ಗಾಂಧೀಯನ್ನು ಕೊಂದ ಗೋಡ್ಸೆ ದೇಶಭಕ್ತ ಎಂಬ ಸಾಧ್ವಿ ಹೇಳಿಕೆಯನ್ನು ಆಕೆಯ ಬೆಂಬಲಿಗ ಮತದಾರರು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸಿದ್ದರು. ಮೂರೂವರೆ ಲಕ್ಷಕ್ಕೂ ಹೆಚ್ಚಿನ ಭಾರೀ ಬಹುಮತದಿಂದ ಆಕೆಯ ಆರಿಸಿ ಬಂದರು.
ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದಿಂದ (ಎ.ಟಿ.ಎಸ್.) ರಾಷ್ಟ್ರೀಯ ತನಿಖಾ ಏಜೆನ್ಸಿಯು (ಎನ್.ಐ.ಎ) 2011ರಲ್ಲಿ ವಹಿಸಿಕೊಂಡಿತ್ತು. ಆದರೆ ಅದು ಸಕ್ರಿಯವಾದದ್ದು 2015ರಲ್ಲಿ. ಆ ವೇಳೆಗೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಕೇಸು ದುರ್ಬಲವಾಗುವ ಅನುಮಾನ ಕಾಲಕ್ರಮೇಣ ನಿಜವೂ ಆಯಿತು. ಆಪಾದಿತರ ಮೇಲೆ ಕಾಠಿಣ್ಯ ತೋರದಿರಿ ಎಂಬುದಾಗಿ ಎನ್.ಐ.ಎ.ಯ ಹಿರಿಯ ಅಧಿಕಾರಿಯೊಬ್ಬರು ತಮಗೆ ಸೂಚಿಸಿದ್ದಾಗಿ ಕೇಸಿನ ಪಬ್ಲಿಕ್ ಪ್ರಾಸಿಕ್ಯೂಟರ್ ರೋಹಿಣಿ ಸಾಲಿಯಾನ್ ಅದೇ ವರ್ಷ ಹೇಳಿದರು. ಎನ್.ಐ.ಎ. ಈ ಮಾತನ್ನು ನಿರಾಕರಿಸಿತಾದರೂ ಮರು ವರ್ಷ ಸಲ್ಲಿಸಿದ ಪೂರಕ ಆಪಾದನಾ ಪಟ್ಟಿಯಲ್ಲಿ ಸಾಧ್ವಿಯನ್ನು ದೋಷಮುಕ್ತೆ ಎಂದು ನಮೂದಿಸಿತ್ತು. ಆದರೆ 2017ರಲ್ಲಿ ನ್ಯಾಯಾಧೀಶರಾದ ಎಸ್.ಡಿ.ಟಾಕಳೆ ಅವರು ಆಕೆಯನ್ನು ಬಿಡುಗಡೆ ಮಾಡಲು ಒಪ್ಪಲಿಲ್ಲ. ಆಕೆಯ ವಿರುದ್ಧ ವಿಚಾರಣೆ ಮುಂದುವರೆಸಲು ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದರು. ಇತ್ತೀಚೆಗೆ ಆಕೆಯ ಲೋಕಸಭಾ ಉಮೇದುವಾರಿಕೆಯನ್ನು ಪ್ರಶ್ನಿಸಲಾದ ಅರ್ಜಿಯ ವಿಚಾರಣೆಯಲ್ಲಿ ಎನ್.ಐ.ಎ. ಪುನಃ ತನ್ನ ಹಳೆಯ ವಾದವನ್ನು ನ್ಯಾಯಾಲಯದ ಮುಂದಿರಿಸಿ, ನ್ಯಾಯಾಧೀಶ ವಿನೋದ್ ಪಡಲ್ಕರ್ ಅವರಿಂದ ತರಾಟೆಗೆ ಗುರಿಯಾಗಿತ್ತು
ಗೋಡ್ಸೆಯನ್ನು ಬಾರಿ ಬಾರಿಗೆ ‘ಜೀವಂತಗೊಳಿಸುವ’ ಪ್ರಯತ್ನಗಳು ಇತ್ತೀಚಿನ ವರ್ಷಗಳಲ್ಲಿ ಎಡೆಬಿಡದೆ ನಡೆಯತೊಡಗಿವೆ. ಗಾಂಧೀ ಹತ್ಯೆಯನ್ನು ನ್ಯಾಯಬದ್ಧ ಎಂದು ಸಾರುವ ಕ್ರಿಯೆಗಳು ಸಾಂಕ್ರಾಮಿಕ ಆಗತೊಡಗಿವೆ. ಮೇರಠ್ ನ ಹಿಂದೂ ಮಹಾಸಭೆಯ ಪೂಜಾ ಶಕುನ ಪಾಂಡೆ ಅವರು ಗಾಂಧೀ ಚಿತ್ರಪಟಕ್ಕೆ ಗುಂಡು ಹಾರಿಸಿ ಅದರ ಹಿಂದೆ ಬಲೂನಿನಲ್ಲಿ ತುಂಬಿಸಿಟ್ಟ ಕೆಂಪು ಬಣ್ಣವನ್ನು ನೆಲಕ್ಕೆ ಸುರಿಸಿದ್ದರು. ಆನಂತರ ಮಿಠಾಯಿ ಹಂಚಲಾಗಿತ್ತು. ಪಾಂಡೆಯವರನ್ನು ಬಂಧಿಸಲಾಗಿತ್ತು. ಅವರು ತಡವಿಲ್ಲದೆ ಬಂಧ ಮುಕ್ತರಾದರು.
ಅಹಿಂಸೆಯನ್ನು ಸಾರಿದ ಶಾಂತಿಯ ಪ್ರತಿಪಾದಕ ಗಾಂಧೀಜಿಯ ನಾಡು ಭಾರತ ಎಂದು ಹೊರದೇಶಗಳಲ್ಲಿ ಎದೆತಟ್ಟಿ ಹೇಳಿಕೊಳ್ಳುತ್ತಾರೆ ಪ್ರಧಾನಿಯವರು. ದೇಶದ ಒಳಗೆ ಅವರದೇ ಪಕ್ಷ ಪರಿವಾರದ ಸಂಗಾತಿಗಳು ಅದೇ ಗಾಂಧೀಜಿಯನ್ನು ಕೊಂದ ಗೋಡ್ಸೆಯನ್ನು ಆರಾಧಿಸುವುದು ಸರ್ವೇ ಸಾಮಾನ್ಯ ಸಂಗತಿ. ಎರಡೆಳೆಯ ನಾಲಗೆಯ ಆಚಾರ ವಿಚಾರವಿದು.
ಇತಿಹಾಸಕಾರ ರಾಮಚಂದ್ರ ಗುಹಾ ಅವರು ಸರಿಯಾಗಿಯೇ ಗುರುತಿಸಿರುವ ಪ್ರಕಾರ ನಾಥೂರಾಮ್ ಗೋಡ್ಸೆ ಪ್ರತಿಪಾದಕ ಪಂಥ ಮೂಲೆಯಲ್ಲೋ ಅಂಚಿನಲ್ಲೋ ದೂರದಲ್ಲೆಲ್ಲೋ ಅಸ್ಪಷ್ಟವಾಗಿ ಠಳಾಯಿಸುತ್ತಿಲ್ಲ, ಬದಲಾಗಿ ತಾನೇ ಮುಖ್ಯ ಪ್ರವಾಹ ಆಗತೊಡಗಿದೆ.
90ರ ದಶಕದ ಆರಂಭದಲ್ಲಿ ಹಿರಿಯ ಗಾಂಧೀವಾದಿ ಸುಶೀಲಾ ನಯ್ಯರ್ ಅಯೋಧ್ಯೆಯ ಕೋಮುಸೌಹಾರ್ದ ಸಭೆಯೊಂದರಲ್ಲಿ ಗಾಂಧೀಜಿಯ ನೆಚ್ಚಿನ ರಘುಪತಿ ರಾಘವ ರಾಜಾ ರಾಮ್….ಪ್ರಾರ್ಥನೆಯನ್ನು ಗುಂಪಿನೊಂದಿಗೆ ಹಾಡಿದರು. ಈಶ್ವರ ಅಲ್ಲಾ ತೇರೋ ನಾಮ್ ವಾಕ್ಯ ಬರುತ್ತಿದ್ದಂತೆಯೇ ಪ್ರತಿಭಟನಾಕಾರರ ಗುಂಪೊಂದು ವೇದಿಕೆಗೆ ನುಗ್ಗಿ ಪ್ರಾರ್ಥನೆಯನ್ನು ತಡೆಯಿತು. ನಾವು ಗಾಂಧೀಜಿ ಕಡೆಯಿಂದ ಬಂದಿದ್ದೇವೆ ಎಂದು ಸುಶೀಲಾ ನಯ್ಯರ್ ಮಾತಿಗೆ ಗುಂಪು ಹೇಳಿತು- ನಾವು ಗೋಡ್ಸೆ ಕಡೆಯಿಂದ ಬಂದಿದ್ದೇವೆ. ಗುಹಾ ಅವರೇ ಉಲ್ಲೇಖಿಸಿರುವ ಘಟನೆಯಿದು.
ಗಾಂಧೀ ಕೋಮು ಸಾಮರಸ್ಯದ ಪ್ರಬಲ ಪ್ರತಿಪಾದಕರಾಗಿದ್ದರು. ಅಲ್ಪಸಂಖ್ಯಾತರಾದ ಮುಸಲ್ಮಾನರಿಗೆ ಅನ್ಯಾಯವಾದರೆ ದನಿ ಎತ್ತುವವರ ಪೈಕಿ ಮೊದಲಿಗರಾಗಿರುತ್ತಿದ್ದರು. ಬಹುಸಂಖ್ಯಾತ ಹಿಂದೂ ರಾಷ್ಟ್ರವಾದವನ್ನು ಮತ್ತು ಮುಸಲ್ಮಾನ ದ್ವೇಷದ ಧರ್ಮಾಂಧತೆಯನ್ನು ಒಂದು ವೇಳೆ ಒಪ್ಪಿದ್ದಿದ್ದರೆ, ಸಾಧ್ವಿ ಪ್ರಜ್ಞಾ ಮತ್ತು ಅವರು ಪ್ರತಿನಿಧಿಸುವ ವಿಚಾರಧಾರೆಯ ಪರಿವಾರ ಗಾಂಧೀಜಿಯನ್ನು ತಲೆ ಮೇಲೆ ಹೊತ್ತು ಕೊಂಡಾಡುತ್ತಿದ್ದರು. ದೇಶ ವಿಭಜನೆಯನ್ನು ತಡೆಯುವುದು ಗಾಂಧೀ ಮಾತ್ರವಲ್ಲ, ಯಾರಿಂದಲೂ ಸಾಧ್ಯವಿರಲಿಲ್ಲ. ಆದರೆ ಸಾಧ್ವಿಯ ಪರಿವಾರಕ್ಕೆ ಈ ವಾಸ್ತವವನ್ನು ಒಪ್ಪಿಕೊಳ್ಳುವ ಮನಸ್ಸಿಲ್ಲ.
ಬಹುಸಂಖ್ಯಾತ ಧರ್ಮಾಂಧರ ಪ್ರಕಾರ ಗಾಂಧೀಜಿ ದೇಶವಿಭಜನೆಯನ್ನು ತಡೆಯಲಿಲ್ಲ. ಭಾರತ ಅಖಂಡವಾಗಿ ಉಳಿಯಬೇಕೆಂದು ಆಮರಣಾಂತ ಉಪವಾಸ ಕೂರಲಿಲ್ಲ. ವಿಭಜನೆಯ ನಂತರ ಪಾಕಿಸ್ತಾನಕ್ಕೆ ಸಲ್ಲಬೇಕಿದ್ದ ನಗದು ಹಣವನ್ನು ಸಂದಾಯ ಮಾಡುವಂತೆ ಪಟ್ಟು ಹಿಡಿದಿದ್ದರು. ಹಿಂದೂಗಳನ್ನು ಹೆಚ್ಚಾಗಿ ಪ್ರೀತಿಸದೆ ಹಿಂದೂ-ಮುಸಲ್ಮಾನರಿಬ್ಬರನ್ನೂ ಸಮ ಸಮವಾಗಿ ಪ್ರೀತಿಸಿದರು. ಬಹುಸಂಖ್ಯಾತ ಧರ್ಮಾಂಧರ ಪ್ರಕಾರ ಗಾಂಧೀಜಿ ದೇಶವಿಭಜನೆಯನ್ನು ತಡೆಯಲಿಲ್ಲ. ಭಾರತ ಅಖಂಡವಾಗಿ ಉಳಿಯಬೇಕೆಂದು ಆಮರಣಾಂತ ಉಪವಾಸ ಕೂರಲಿಲ್ಲ. ವಿಭಜನೆಯ ನಂತರ ಪಾಕಿಸ್ತಾನಕ್ಕೆ ಸಲ್ಲಬೇಕಿದ್ದ ನಗದು ಹಣವನ್ನು ಸಂದಾಯ ಮಾಡುವಂತೆ ಪಟ್ಟು ಹಿಡಿದಿದ್ದರು. ಹಿಂದೂಗಳನ್ನು ಹೆಚ್ಚಾಗಿ ಪ್ರೀತಿಸದೆ ಹಿಂದೂ-ಮುಸಲ್ಮಾನರಿಬ್ಬರನ್ನೂ ಸಮ ಸಮವಾಗಿ ಪ್ರೀತಿಸಿದರು. ಹಿಂದೂ ರಾಷ್ಟ್ರ ಪರಿಕಲ್ಪನೆಯನ್ನು ವಿರೋಧಿಸಿದ್ದ ನೆಹರೂ ಅವರನ್ನು ಮೊದಲ ಪ್ರಧಾನಿ ಆಗಿಸಿದರು. ಇಂತಹ ‘ಪರಮ ರಾಷ್ಟ್ರವಿರೋಧಿ’ಯ ‘ಸಂಹಾರ’ ಮಾಡಿದ ಗೋಡ್ಸೆ ದೇಶಭಕ್ತನಲ್ಲದೆ ಬೇರೆ ಇನ್ನೇನಿರಲು ಸಾಧ್ಯ ಎಂಬುದು ಸಾಧ್ವಿ ಮತ್ತು ಆಕೆಯ ಪರಿವಾರದ ವಾದ.
ಗಾಂಧೀಜಿ ಹಂತಕನನ್ನು ದೇಶಭಕ್ತರೆಂದು ಕರೆಯುವವರು ಸಂಸತ್ತಿನಲ್ಲಿ ಕುಳಿತುಕೊಳ್ಳುವ ದಿನಗಳು ಬಂದು ಬಹಳ ಕಾಲವಾಯಿತು. ಮಹಾತ್ಮನ ಕೊಲೆಗಡುಕರನ್ನು ಆಶೀರ್ವದಿಸಿ ಕಳಿಸಿದ್ದ ವಿನಾಯಕ ದಾಮೋದರ ಸಾವರ್ಕರ್ ಅವರ ಆಳೆತ್ತರದ ಚಿತ್ರಪಟ ಕೂಡ ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಇತರೆ ಗಣ್ಯರ ಚಿತ್ರಗಳ ಜೊತೆಗೆ ವಾಜಪೇಯಿ ಪ್ರಧಾನಿಯಾಗಿದ್ದಾಗಲೇ ಗೋಡೆಗೇರಿತು.
ಪ್ರಸಕ್ತ ಚಳಿಗಾಲದ ಸಂಸತ್ ಅಧಿವೇಶನದ ಅವಧಿಯಲ್ಲಿ ಬಿಜೆಪಿ ಸಂಸದೀಯ ಪಕ್ಷದ ಸಭೆಗಳಿಂದ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಅವರನ್ನು ದೂರ ಇರಿಸಿರುವ ಮತ್ತು ದೇಶದ ರಕ್ಷಣಾ ವ್ಯವಹಾರದ ಸಂಸದೀಯ ಸಲಹಾ ಸಮಿತಿಯ ಸದಸ್ಯತ್ವದಿಂದ ತೆಗೆದು ಹಾಕಿರುವ ‘ಶಿಕ್ಷೆ’ಯನ್ನು ನೀಡಲಾಗಿದೆ. ಗೋಡ್ಸೆ ಕುರಿತು ಪ್ರಜ್ಞಾ ಹೇಳಿಕೆಯನ್ನು ಬಿಜೆಪಿಯ ಹಲವು ಸಂಸದರು ಬಹಿರಂಗವಾಗಿ ಬೆಂಬಲಿಸಿದ್ದಾರೆ. ಗೋಡ್ಸೆ ದೇಶಭಕ್ತನೆಂದು ಬಹಿರಂಗವಾಗಿ ಹೇಳುವ ‘ದಿಟ್ಟತನ’ವನ್ನು ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಬಾರಿ ಬಾರಿಗೆ ತೋರಿದ್ದಾರೆ.ಪ್ರಾಯಶಃ ಗುಪ್ತ ಮತದಾನ ನಡೆದರೆ ಅಂತರಂಗದಲ್ಲಿ ಗೋಡ್ಸೆಯನ್ನು ಆರಾಧಿಸುವ ಬಿಜೆಪಿ ಮತ್ತು ಮಿತ್ರ ಪಕ್ಷಗಳ ಸದಸ್ಯರು ದೊಡ್ಡ ಸಂಖ್ಯೆಯಲ್ಲಿರುವ ಆಘಾತಕಾರಿ ವಿಷಯ ಬಹಿರಂಗ ಆದೀತು. ಅವರಿಗೆಲ್ಲ ಯಾವ ಶಿಕ್ಷೆ ವಿಧಿಸಲು ಬಂದೀತು? ಅವರನ್ನೆಲ್ಲ ದೂರ ಇರಿಸಿದರೆ ಬಿಜೆಪಿ ಸಂಸದೀಯ ಮಂಡಳಿ ಸಭೆ ಅರ್ಧಕ್ಕರ್ಧ ಖಾಲಿ ಆದೀತು.
ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಾತಿಗೂ ಆಕೆ ಸೊಪ್ಪು ಹಾಕಿಲ್ಲ. ಆಕೆಯ ಹೇಳಿಕೆಯನ್ನು ತಾವು ಎಂದೆಂದಿಗೂ ಕ್ಷಮಿಸುವುದಿಲ್ಲ ಎಂದು ಪ್ರಧಾನಿಯವರು ಲೋಕಸಭಾ ಚುನಾವಣೆಗಳ ಪ್ರಚಾರದ ಸಂದರ್ಭದಲ್ಲಿ ಹೇಳಿದ ವಿಡಿಯೋ ಚಿತ್ರೀಕರಣ ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಪ್ರಧಾನಿಯವರೇ ಹೀಗೆ ಹೇಳಿದ ನಂತರ ಆಕೆಯ ವಿರುದ್ಧ ಯಾವುದಾದರೂ ಶಿಸ್ತಿನ ಕ್ರಮ ಜರುಗೀತೆಂದು ನಿರೀಕ್ಷಿಸಲಾಗಿತ್ತು. ಅಂತಹುದೇನೂ ನಡೆಯಲಿಲ್ಲ. ಬದಲಾಗಿ ನೆಹರೂ ಅವರನ್ನು ಕ್ರಿಮಿನಲ್ ಎಂದು ಕರೆದ ಸಾಧ್ವಿ, ಮುಂಬಯಿಯ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾಗಿ ಶೌರ್ಯ ಮೆರೆದು ಅಶೋಕ ಚಕ್ರ ದ ಸಮ್ಮಾನಕ್ಕೆ ಪಾತ್ರರಾದ ಹಿರಿಯ ಪೊಲೀಸ್ ಅಧಿಕಾರಿ ಹೇಮಂತ ಕರಕರೆ ತಮ್ಮ ಶಾಪದಿಂದಲೇ ಭಯೋತ್ಪಾದಕರ ಗುಂಡಿಗೆ ಸಿಕ್ಕಿ ಸತ್ತದ್ದಾಗಿ ಹೇಳಿದರು. ಇದೆಲ್ಲ ಆದ ನಂತರ ಇತ್ತೀಚೆಗೆ ಆಕೆಯನ್ನು ಸಂಸತ್ತಿನ ರಕ್ಷಣಾ ಸಲಹಾ ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಯಿತು. ಖುದ್ದು ಬಿಜೆಪಿಯೇ ಈ ಸಮಿತಿಗೆ ಆಕೆಯ ಹೆಸರನ್ನು ಸೂಚಿಸಿತ್ತು. ಮೋದಿ ಕ್ಷಮಿಸುವುದಿಲ್ಲ ಎಂದು ಹೇಳಿದ ನಂತರ ಆಕೆಗೆ ರಕ್ಷಣಾ ಸಮಿತಿಯ ಸದಸ್ಯತ್ವವನ್ನು ಕೊಡುವ ಧೈರ್ಯ ಬಿಜೆಪಿಯಲ್ಲಾಗಲೀ, ಸರ್ಕಾರದಲ್ಲೇ ಆಗಲಿ ಯಾರಿಗಿದ್ದೀತು? ಅರ್ಥಾತ್ ಮೋದಿಯವರ ಸಮ್ಮತಿಯಿಂದಲೇ ಈ ನೇಮಕ ನಡೆದಿರುವುದು ನಿಚ್ಚಳ. ಆಕೆಯ ಹೇಳಿಕೆಗೆ ಅವರ ಖಂಡನೆಯೇನಿದ್ದರೂ ಚುನಾವಣೆಯ ನಟ್ಟ ನಡುವೆ ಪಕ್ಷಕ್ಕೆ ಆಗಬಹುದಾದ ನಷ್ಟವನ್ನು ತಡೆಯುವುದು ಮಾತ್ರವೇ ಆಗಿತ್ತು.
ಹೀಗಾಗಿ ಉಗ್ರ ಹಿಂದುತ್ವವನ್ನು ಮುಖ್ಯಧಾರೆಗೆ ತರುವ ಕಾರ್ಯಸೂಚಿಯ ಅಂಗವಾಗಿಯೇ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಅವರನ್ನು ಲೋಕಸಭೆಗೆ ಆರಿಸಿ ತರಲಾಗಿದೆ ಎಂಬ ಟೀಕೆಯನ್ನು ಸಲೀಸಾಗಿ ತಳ್ಳಿ ಹಾಕಲು ಬರುವುದಿಲ್ಲ.