ರೋಟರಿ ಚಿತಾಗಾರದ ಬಾಗಿಲಲ್ಲಿ ಹರಿಶ್ಚಂದ್ರನ ಬೃಹತ್ ಪ್ರತಿಮೆ. ಪಕ್ಕದಲ್ಲಿ ಚಿಕ್ಕದಾದ ಮನೆ ಇದೆ. ಅಲ್ಲಿ ಎಪ್ಪತ್ತು ದಾಟಿದ ಎರಡು ಮೂರು ಅಜ್ಜಿಯಂದಿರು ಕಾಲು ಚಾಚಿಕೊಂಡು ಕೂತಿರುತ್ತಾರೆ. ಅನುಸೂಯಮ್ಮ ಎಂದು ಕೂಗಿದರೆ ಸಾಕು ಬಾಡಿದ ಮುಖ, ಸೊರಗಿದ ಕಣ್ಣುಗಳ ಮಹಿಳೆ ಹೊರಗೆ ಇಣುಕಿ ನೋಡಿ ಮೃತ ದೇಹದ ಕಡೆಯವರೇನೋ ಎಂದು ತಡಬಡಾಯಿಸುತ್ತಾ ಬರುತ್ತಾರೆ.
ಶಿವಮೊಗ್ಗದ ತುಂಗಾ ತೀರದಲ್ಲಿರುವ ರೋಟರಿ ಸಂಸ್ಥೆಯ ಚಿತಾಗರದಲ್ಲಿ ಮೃತ ದೇಹಕ್ಕೆ ಅಗ್ನಿ ಸ್ಪರ್ಶ ಮಾಡುವುದು ಒಬ್ಬ ಬ್ರಾಹ್ಮಣ ಮಹಿಳೆ, ಆಕೆಯ ಹೆಸರು ಅನಸೂಯ, ರೂಢಿಯಲ್ಲಿ ಅನುಸೂಯಮ್ಮ ಎನ್ನುತ್ತಾರೆ. ಸುಮಾರು ಐವತ್ತು ವರ್ಷ ಆಗಿರಬಹುದು, ಹುಟ್ಟಿದ ಇಸವಿ ಆಕೆಗೂ ಸರಿಯಾಗಿ ಗೊತ್ತಿಲ್ಲ, ಹಿಂದೆ ಸಂಸಾರ ಅಂದ ಒಂದಿತ್ತು, ತಂದೆ-ತಾಯಿ ಹಾಗೂ ಪತಿ ಇದ್ದರು, ದೇವರು ಎಲ್ಲಾ ದೂರ ಮಾಡಿ ಒಂಟಿ ಮಾಡಿಬಿಟ್ಟ ಎಂಬುದಷ್ಟೇ ಅನುಸೂಯಮ್ಮನಿಗೆ ಗೊತ್ತು.
ಚಿತಾಗಾರದಲ್ಲಿ ಒಂದು ಕಡೆ ದೇಹ ದಹಿಸುತ್ತಿದ್ದರೆ, ಪಕ್ಕದಲ್ಲಿ ಅರ್ಧ ಬೆಂದ ದೇಹಕ್ಕೆ ಮರುಉರುವಲು ಕೂಡಬೇಕು. ಪೂರ್ಣ ದಹಿಸಿದ ಮೇಲೆ ಪುನಃ ಸಂಬಂಧಿಕರಿಗೆ ಅದರ ಚಿತಾಭಸ್ಮ ನೀಡಬೇಕು, ಹೀಗೆ ದಿನವಿಡೀ ಅನುಸೂಯಮ್ಮ ಇದೇ ಕಾಯಕದಲ್ಲಿ ನಿರತವಾಗಿರುತ್ತಾರೆ. ರೋಟರಿ ಚಿತಾಗರದೆಲ್ಲೆಡೆ ಶವದ ಉರಿಯ ಹೊಗೆ ಆವರಿಸಿರುತ್ತೆ, ಎಷ್ಟೇ ತುಪ್ಪ, ಗಂಧಗಳನ್ನಿಟ್ಟರೂ ಸುಟ್ಟ ವಾಸನೆ ಪಸರಿಸಿರುತ್ತೆ, ಈ ಪ್ರತಿಕೂಲ ಪರಿಸರದಲ್ಲಿ ಅನುಸೂಯಮ್ಮ ೧೮ ವರ್ಷ ಕಳೆದಿದ್ದಾರೆ. ಮಾಧ್ಯಮಗಳನ್ನ ನೋಡಿದರೆ ಆಕೆಗೆ ಸಂಕೋಚ, ತನ್ನ ಸ್ಥಿತಿ ಜಗತ್ತಿಗೆಲ್ಲಾ ತಿಳಿದರೆ ಎಂಬ ಭಯ..! ಹಾಗಾದರೆ ಅನುಸೂಯಮ್ಮಗೆ ಯಾರಾದದೂ ಸಂಬಂಧಿಕರಿದ್ದಾರೆಯೇ ಎಂಬುದು ಕೂಡಾ ತಿಳಿದಿಲ್ಲ.

ಆಕೆ ಯಾರ ಬಳಿಯೂ ಅನವಶ್ಯಕವಾಗಿ ಮಾತನಾಡುತ್ತಿರಲಿಲ್ಲ..! ನಿಧಾನವಾಗಿ ಮಾತಿಗಿಳಿದ ಅನುಸೂಯಮ್ಮ ನಾನೂ ಕೂಡ ದೈವಜ್ಞ ಬ್ರಾಹ್ಮಣ ಕುಲದವಳು ಈ ಕೆಲಸ ಮಾಡುತ್ತಿದ್ದೇನೆ ಎನ್ನುತ್ತ ತನ್ನ ಬಗ್ಗೆ ಹೇಳುತ್ತಾ ಹೋದಳು. ನಾವೆಲ್ಲ ಚಿಕ್ಕವರಿದ್ದಾಗ ಗೋಕರ್ಣದ ಬಳಿಯಲ್ಲಿ ಹಳ್ಳಿಯೊಂದರಲ್ಲಿ ನೆಲೆಸಿದ್ದೆವು, ಬಡತನ ಹೆಚ್ಚಿದ್ದ ಕಾರಣ ಸಾಕಷ್ಟು ಕುಟುಂಬಗಳು ಶಿವಮೊಗ್ಗಕ್ಕೆ ಗುಳೇ ಬಂದವು. ನನ್ನನ್ನ ಶಿವಮೊಗ್ಗದಲ್ಲೇ ಮದುವೆ ಮಾಡಿಕೊಟ್ಟರು. ನನ್ನ ತಂದೆ ತಾಯಿ ಕೆಲವು ವರ್ಷಗಳಲ್ಲಿ ಮೃತರಾದರು. ಪತಿ ಕೆಲಸ ಮಾಡುತ್ತಿರಲಿಲ್ಲ, ಹಣವನ್ನ ಕುಡಿತಕ್ಕಾಗಿ ಖಾಲಿ ಮಾಡುತ್ತಿದ್ದರು, ಸ್ಮಶಾನದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು, ಮೈ ತುಂಬ ಸಾಲ ಮಾಡಿಕೊಂಡು ಮೃತರಾದರು. ನನಗೆ ಮಕ್ಕಳಿಲ್ಲ, ಸಂಬಂಧಿಕರೂ ಆಸರೆಯಾಗಲಿಲ್ಲ, ಒಂಟಿಯಾದೆ. ಜೀವನ ಸಾಗಿಸಲು ಮಾರ್ಗವಿಲ್ಲದಂತಾಯ್ತು ಗಂಡ ಬಿಟ್ಟು ಹೋದ ಕಾಯಕವನ್ನೇ ಮುಂದುವರಿಸಿಕೊಂಡು ಬಂದೆ ಎನ್ನುತ್ತಾ ಕ್ಷಣಕಾಲ ಸುಮ್ಮನೇ ಕೂತುಬಿಟ್ಟರು.
ಅನುಸೂಯಮ್ಮನವರ ಜೀವನವನ್ನ ಮತ್ತಷ್ಟು ಕೆದುಕುವುದು ಬೇಡ ಎನಿಸಿತು. ಅನುಸೂಯಮ್ಮ ನಿಮಗೆ ಏನು ಆಗಬೇಕಿದೆ..? ನಿಮ್ಮವರು ಅಂತ ಯಾರಾದರೂ ಶಿವಮೊಗ್ಗದಲ್ಲಿದ್ದಾರ ಎಂದು ಕೇಳಿದೆ. ಇಲ್ಲ ಅವರ್ಯಾರೂ ಇಲ್ಲಿಲ್ಲ, ಆದರೆ ಟಿವಿಯಲ್ಲೊಮ್ಮೆ ಹೀರೋ ಆಗಿ ನಾನು ಕಾಣಿಸಿಕೊಂಡಿದ್ದೆ, ಅದು ಸಂಬಂಧಿಕರಿಗೆ ಇಷ್ಟವಾಗಿಲ್ಲ, ಅದೇ ಟಿವಿಯಲ್ಲಿ ರೋಟರಿಯವರು ನನಗೊಂದು ಸ್ವಂತ ಸೂರು ಮಾಡಿಕೊಡಲಿ ಎಂದಿದ್ದೆ ಅದೂ ಅಗಲಿಲ್ಲ ಎಂದರು. ಅನುಸೂಯಮ್ಮ ಎರಡು ದಶಕ ಇದೇ ಗಾಳಿ ಕುಡಿದು ನಿಸ್ತೇಜವಾಗಿದ್ದಾರೆ, ಅವರಿಗೆ ಕೊನೆದಿನಗಳಲ್ಲಾದರೂ ಬೇರೆ ವಾತಾವರಣದಲ್ಲಿ ಜೀವನ ಮಾಡಬೇಕೆಂಬ ಆಸೆ ಇದೆ, ಆದರೆ ಎಲ್ಲಾ ಕ್ಷೇತ್ರದಂತೆ ಈಕೆಯ ಸಾಧನೆಯನ್ನ ಪರಿಗಣಿಸುವರ್ಯಾರು..?