ಸ್ಥಳೀಯ ಪ್ರದೇಶಗಳ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸುವ ನಗರ ಸ್ಥಳಿಯ ಸಂಸ್ಥೆಗಳ ಮೇಯರ್- ಉಪ ಮೇಯರ್, ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ಇನ್ನೂ ನಡೆಯದಿರುವುದು ಆಡಳಿತ ವ್ಯವಸ್ಥೆಗೆ ಗ್ರಹಣ ಹಿಡಿದಂತಾಗಿದೆ. ರಾಜ್ಯದ ಬಹುತೇಕ ನಗರಾಡಳಿತ ಸಂಸ್ಥೆಗಳಲ್ಲಿ ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಿಂದಾಗಿ ಅಧಿಕಾರಿಗಳದ್ದೇ ದರ್ಬಾರ್ ನಡೆಯುತ್ತಿದೆ.
ರಾಜ್ಯದಲ್ಲಿ ಒಟ್ಟು 91 ಪಟ್ಟಣ ಪಂಚಾಯ್ತಿ, 117 ಪುರಸಭೆ, 58 ನಗರ ಸಭೆ ಹಾಗೂ 10 ಮಹಾ ನಗರ ಪಾಲಿಕೆಗಳಿದ್ದು ಇವೆಲ್ಲ ಸಂಸ್ಥೆಗಳಿಗೂ 2018 ರ ಅಕ್ಟೋಬರ್ 18 ರಂದು ಚುನಾವಣೆ ನಡೆದಿತ್ತು. 2018 ರ ಅಕ್ಟೋಬರ್ 31 ರಂದೇ ಚುನಾವಣಾ ಫಲಿತಾಂಶ ಹೊರಬಿದ್ದಿತ್ತು. ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳೂ ಹುದ್ದೆಗಾಗಿ ಲಾಬಿ ಆರಂಭಿಸಿದ್ದರು. ಅಂದಿನ ಮುಖ್ಯ ಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಈ ಹುದ್ದೆಗಳಿಗೆ ಮೀಸಲಾತಿಯನ್ನೂ ಹೊರಡಿಸಿತ್ತು.
ಆದರೆ 2018 ರ ನವೆಂಬರ್ ತಿಂಗಳಿನಲ್ಲೇ ಕಲ್ಬುರ್ಗಿ ಜಿಲ್ಲೆಯ ಕೆಲವು ಜನಪ್ರತಿನಿಧಿಗಳು ಮೀಸಲಾತಿ ಸರಿಯಾಗಿ ಮಾಡದೇ ಕಾನೂನನ್ನು ಉಲ್ಲಂಘಿಸಲಾಗಿದೆ, ರೊಟೇಷನ್ ಪದ್ದತಿ ಅನುಸರಿಸಿಲ್ಲ ಎಂಬ ನೆಪವೊಡ್ಡಿ ಹೈ ಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದರು. ಇದರಿಂದಾಗಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಸದಂತೆ ಕೋರ್ಟು ತಡೆಯಾಜ್ಞೆ ನೀಡಿತು. ಹೀಗಾಗಿ ಕೋರ್ಟಿನಲ್ಲಿರುವ ಪ್ರಕರಣ ಮುಗಿಯುವವರೆಗೂ ಚುನಾವಣೆ ನಡೆಯುವುದಿಲ್ಲ.
ಎಲ್ಲ ಸ್ಥಳೀಯ ಸಂಸ್ಥೆಗಳಲ್ಲೂ ಯಾವುದೇ ಅಭಿವೃದ್ದಿ ಕಾರ್ಯವನ್ನು ಕೈಗೆತ್ತಿಕೊಳ್ಳುವ ಮೊದಲು ವಾರ್ಡ್ ಸಭೆ ನಡೆಸಿ ನಂತರ ಆಡಳಿತ ಮಂಡಳಿಯ ಸಭೆಯಲ್ಲಿ ಇಟ್ಟು ಅನುಮೋದನೆ ಪಡೆದುಕೊಳ್ಳಲಾಗುತ್ತದೆ. ನಂತರವೇ ಕ್ರಿಯಾ ಯೋಜನೆ ರೂಪಿಸಲಾಗುತ್ತದೆ. ಆದರೆ ಈ ಪ್ರಕ್ರಿಯೆ ಕಳೆದ ಒಂದು ವರ್ಷದಿಂದ ನಡೆದೇ ಇಲ್ಲ. ಸರ್ಕಾರದಿಂದ ಬರಬೇಕಾದ ಕೋಟ್ಯಾಂತರ ರೂಪಾಯಿಗಳ ಅನುದಾನ, ಕೈಗೆತ್ತಿಕೊಳ್ಳಬೇಕಾದ ಕೆಲಸಗಳಿಗೂ ಅನುಮೋದನೆ ದೊರೆಯುತ್ತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಬಜೆಟ್‌ನ್ನು ಸಮರ್ಪಕವಾಗಿ ರೂಪಿಸುವುದೂ ಸಾಧ್ಯವಾಗಿಲ್ಲ.
ರಾಜ್ಯದ ಅತ್ಯಂತ ದೊಡ್ಡದಾದ ಹುಬ್ಬಳ್ಳಿ -ಧಾರವಾಡ ಮಹಾ ನಗರ ಪಾಲಿಕೆಯ ಹೆಚ್ಚುವರಿ ಅಯುಕ್ತ ಅಜೀಜ್ ಆರ್ ದೇಸಾಯಿ ಅವರನ್ನು ಪ್ರತಿಧ್ವನಿ ಮಾತಾಡಿಸಿದಾಗ ನೂತನ ಮೇಯರ್ ಉಪಮೇಯರ್ ಅವರ ಅಯ್ಕೆ ಆಗದಿರುವುದರಿಂದ ನಗರಪಾಲಿಕೆಯ ಅಭಿವೃದ್ಧಿ ಕಾರ್ಯದಲ್ಲಿ ತೊಡಕಾಗಿಲ್ಲ ಎಂದು ಹೇಳಿದರು.
ಅಲ್ಲದೆ ಚುನಾಯಿತ ಪ್ರತಿನಿಧಿಗಳ ಅಯ್ಕೆ ಅಗಿರುವುದರಿಂದ ವಾರ್ಡ್ ಗಳಲ್ಲಿ ಯಾವುದೇ ರೀತಿಯ ಅಭಿವೃದ್ದಿ ಕೆಲಸ ಮಾಡುವಾಗ ಆಯಾ ಚುನಾಯಿತ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಕೆಲಸ ಮಾಡುತಿದ್ದೇವೆ ಎಂದೂ ಅವರು ಹೇಳಿದರು.
ಮೈಸೂರು ಮಹಾನಗರ ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತ ಶಿವಾನಂದ ಮೂರ್ತಿ ಅವರೂ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಪ್ರಸ್ತುತ ಮಹಾ ನಗರ ಪಾಲಿಕೆಗಳಿಗೆ ಆಯಾ ವ್ಯಾಪ್ತಿಯ ಕಂದಾಯ ಇಲಾಖೆಯ ಪ್ರಾದೇಶಿಕ ಕಮೀಷನರ್ ಗಳನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ನಗರ ಸಭೆಗಳಿಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಪಟ್ಟಣ ಪಂಚಾಯ್ತಿ ಗಳಿಗೆ ಸ್ಥಳೀಯ ತಹಸೀಲ್ದಾರ್ ಅವರನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಏನೇ ಅದರೂ ಅಧಿಕಾರಿಗಳ ಆಡಳಿತದಲ್ಲಿ ಸ್ಥಳಿಯ ಬಡ ವರ್ಗದ ಜನತೆಯ ಸಮಸ್ಯೆಗಳು ಮೇಲಿನತನಕ ತಲುಪುವುದೇ ದುಸ್ತರವಾಗಿದೆ. ರಾಜ್ಯ ಸರ್ಕಾರದಲ್ಲಿ ಸದ್ಯಕ್ಕೆ ಮಳೆ ಸಂತ್ರಸ್ಥರಿಗೆ ಪರಿಹಾರ ನೀಡಲು ಅನುದಾನದ ಕೊರತೆ ಇರುವುದರಿಂದ ಸ್ಥಳೀಯ ಸಂಸ್ಥೆಗಳಿಗೆ ತುರ್ತು ಕಾಮಗಾರಿಗಳಿಗೆ ಹಣ ಬಿಡುಗಡೆಯೂ ವಿಳಂಬವಾಗುತ್ತಿದೆ.
ಮೈಸೂರಿನ ನಗರ ಪಾಲಿಕೆಯ ನೂತನ ಸದಸ್ಯ ಶ್ರೀನಿವಾಸ್ ಅವರ ಪ್ರಕಾರ ಆಯಾ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ವಾರ್ಡ್ ಗಳಲ್ಲಿ ಸಾಕಷ್ಟು ಸಮಸ್ಯೆ ಇರುತ್ತದೆ. ಇದನ್ನು ಸಮರ್ಪಕವಾಗಿ ಬಗೆಹರಿಸಲು ರಾಜ್ಯ ಸರ್ಕಾರದ ಅನುದಾನ ಕೆಲವೊಮ್ಮೆ ಬೃಹತ್ ಮಟ್ಟದ್ದಾಗಿದ್ದಲ್ಲಿ ರಾಜ್ಯ ಸರ್ಕಾರದ ವಿಶೇಷ ಅನುದಾನವೂ ಅವಶ್ಯಕತೆ ಇರುತ್ತದೆ. ಕೆಲವೊಮ್ಮೆ ರಾಜ್ಯ ಸರ್ಕಾರವೇ ಬಜೆಟ್ ನಲ್ಲೇ ಯೋಜನೆಗಳನ್ನು ಘೋಷಿಸಿರುತ್ತದೆ. ಆದರೆ ಅನುದಾನ ಬಿಡುಗಡೆ ಅಗಿರುವುದಿಲ್ಲ. ಇಂತಹ ಸಂಧರ್ಭಗಳಲ್ಲಿ ಮೇಯರ್ ಹಾಗೂ ಸದಸ್ಯರ ನಿಯೋಗವನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಅನುದಾನ ಬಿಡುಗಡೆಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಬೇಕಾಗುತ್ತದೆ. ಆದರೆ ಮೇಯರ್ ಉಪ ಮೇಯರ್ ಆಯ್ಕೆಯೇ ಇನ್ನೂ ಅಗದಿರುವುದರಿಂದ ಅಭಿವೃದ್ದಿಯೇ ಕುಂಠಿತಗೊಂಡಿದೆ ಎಂದು ಹೇಳಿದರು.
ಕೊಡಗಿನಂತಹ ಜಿಲ್ಲೆಯಲ್ಲಿ ಸಮಸ್ಯೆಗಳು ಬೆಟ್ಟದಷ್ಟಿದ್ದು ಇದಕ್ಕೆ ಚುನಾಯಿತ ಜನ ಪ್ರತಿನಿಧಿಗಳ ಉಪಸ್ಥಿತಿ ಬಹಳ ಮುಖ್ಯವಾಗಿದೆ. ಏಕೆಂದರೆ ಎರಡು ವರ್ಷಗಳ ಭೀಕರ ಮಳೆ ಹಾಗೂ ಭೂ ಕುಸಿತದಿಂದ ಜಿಲ್ಲೆಯಲ್ಲಿ ಸಾವಿರಾರು ಜನರು ಸಂತ್ರಸ್ಥರಾಗಿದ್ದಾರೆ. ಉದಾಹರಣೆಗೆ ವಿರಾಜಪೇಟೆ ಪಟ್ಟಣದ ಮಧ್ಯ ಭಾಗದಲ್ಲಿ ರಾಜ್ಯದಿಂದ ಕೇರಳಕ್ಕೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆಗೆ ಲೋಕೋಪಯೋಗಿ ಇಲಾಖೆಗೆ ರಾಜ್ಯ ಸರ್ಕಾರ 16 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಆದರೆ ಅಧಿಕಾರಿಗಳು ಈ ಯೋಜನೆ ಕೈಗೆತ್ತಿಕೊಂಡ ಕೂಡಲೇ ವಿಸ್ತರಣೆ ಸಂಭಂದ ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಅಂತರ ರಾಜ್ಯ ಸಂಪರ್ಕ ಕಲ್ಪಿಸುವ ಈ ಹೆದ್ದಾರಿಯನ್ನು ವಿಸ್ತರಿಸಿದರೆ ಮಾತ್ರ ವಾಹನಗಳ ಸುಗಮ ಸಂಚಾರ ಸಾಧ್ಯ. ಆದರೆ ಸ್ಥಳೀಯ ನಿವಾಸಿಗಳು ರಾಜ್ಯ ಹೈ ಕೋರ್ಟಿನ ಮೊರೆ ಹೋಗಿ ವಿಸ್ತರಣೆ ಮಾಡದಂತೆ ತಡೆಯಾಜ್ಞೆ ತರುವಲ್ಲಿ ಯಶಸ್ವಿ ಆಗಿದ್ದಾರೆ . ಒಂದು ವೇಳೆ ಇಲ್ಲಿ ಅಧ್ಯಕ್ಷರ ಆಯ್ಕೆ ಆಗಿದ್ದಲ್ಲಿ ಜನಾಭಿಪ್ರಾಯ ರೂಪಿಸಲು ಹೆಚ್ಚಿನ ಅನುಕೂಲ ಮತ್ತು ಅವಕಾಶ ಸಿಗುತಿತ್ತು. ಆದರೆ ಇಲ್ಲಿ ಅಭಿಪ್ರಾಯ ರೂಪಿಸಬೇಕಾದ ಪಟ್ಟಣ ಪಂಚಾಯ್ತಿಯ ಮುಖ್ಯಸ್ಥರ ಅನುಪಸ್ಥಿತಿಯಿಂದಾಗಿ ಅನುದಾನ ಇದ್ದರೂ ಕೂಡ ಅಭಿವೃದ್ದಿ ಕಾರ್ಯ ಆಗುತ್ತಿಲ್ಲ.
ಇದು ಬರೀ ಕೊಡಗಿನ ಪಟ್ಟಣವೊಂದರ ಕಥೆಯಲ್ಲ. ರಾಜ್ಯದ ಬಹುತೇಕ ಪಟ್ಟಣಗಳಲ್ಲಿ ಅಭಿವೃದ್ದಿ ನನೆಗುದಿಗೆ ಬಿದ್ದಿದೆ. ರಾಜ್ಯ ಸರ್ಕಾರ ವಿಶೇಷ ಆಸಕ್ತಿ ವಹಿಸಿದಲ್ಲಿ ಮಾತ್ರ ಚುನಾಯಿತ ಪ್ರತಿನಿಧಿಗಳು ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯ.