ಚೀನಾ- ಭಾರತ ನಡುವಿನ ಸಂಘರ್ಷದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯ ನಡೆಯ ಕುರಿತು ಅಪಸ್ವರಗಳೆದ್ದಿವೆ. ಪ್ರಧಾನಿಯ ಮೌನ ನಡೆಯೇ ಚೀನಾ ಭಾರತದ ಯೋಧರನ್ನು ಬಲಿ ಪಡೆದುಕೊಂಡಿದೆ ಎನ್ನುವ ಆರೋಪಗಳು ವ್ಯಕ್ತವಾಗುತ್ತಿದೆ.
ಭಾರತ-ಚೀನಾ ಯೋಧರು ಮುಖಾಮುಖಿಯಾದ ಗಾಲ್ವನ್ ಕಣಿವೆ ಪ್ರದೇಶ ಚೀನಾ ತನ್ನ ಪ್ರದೇಶವೆಂದು ಹೇಳಿಕೊಂಡಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯೂ ಚೀನಾದ ಹೇಳಿಕೆಯನ್ನು ಪರೋಕ್ಷವಾಗಿ ಬೆಂಬಲಿಸುವಂತೆ “ಭಾರತದ ಗಡಿಯೊಳಗೆ ಯಾರೂ ಅತಿಕ್ರಮ ಪ್ರವೇಶ ನಡೆಸಿಲ್ಲ” ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ.
ನಿರರ್ಗಳ ಮಾತುಗಾರನೆಂದೇ ಕರೆಯಲ್ಪಡುವ ನರೇಂದ್ರ ಮೋದಿಯವರು ತಮ್ಮ ವಾಕ್ಚಾತುರ್ಯದ ಮೂಲಕ ಭಾರತದ 30% ಜನಮಾನಸದಲ್ಲಿ ಸ್ಥಾನ ಪಡೆದವರು. ಸಣ್ಣಪುಟ್ಟ ವಿಚಾರಕ್ಕೂ ತಕ್ಷಣ ಪ್ರತಿಕ್ರಿಯಿಸುವ, ಹಲವು ನಿಮಿಷಗಳ ಕಾಲ ದೇಶವನ್ನು ಉದ್ದೇಶಿಸಿ ಮಾತನಾಡುವ ಮೋದಿ, ಚೀನಾ ಭಾರತೀಯ ಯೋಧರನ್ನು ಹತ್ಯೆಗೈದಾಗ ದೀರ್ಘ ಮೌನ ವಹಿಸಿದ್ದರು. ಜೂನ್ 19 ರ ರಾತ್ರಿ 9 ಗಂಟೆಗೆ ಲೈವ್ನಲ್ಲಿ ಬಂದ ಮೋದಿ ಕೇವಲ 08 ನಿಮಿಷಗಳಷ್ಟೇ ಮಾತನಾಡಿದ್ದರು.
ಪ್ರಧಾನಿಯ ಮೇಲಿದ್ದ ಭರವಸೆಯನ್ನು, ನಿರೀಕ್ಷೆಯನ್ನು ಮೋದಿ ಹುಸಿ ಮಾಡಿದ್ದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಭಾರತವನ್ನು ಯಾರೂ ಆಕ್ರಮಿಸಿಲ್ಲ ಎಂಬರ್ಥದಲ್ಲಿ ಮಾತನಾಡಿದ ಬಳಿಕ ಭಾರತದ ಯೋಧರು ಹೇಗೆ ಬಲಿಯಾದರು ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಶುರುವಾಗಿದೆ.
ʼಉಗ್ರ ರಾಷ್ಟ್ರೀಯವಾದಿʼಯ ಭೂಷಣದಲ್ಲಿ ಗದ್ದುಗೆ ಏರಿರುವ ಮೋದಿಯ ಮಾತುಗಳು ಜನ ಸಾಮಾನ್ಯರನ್ನು ನಿರಾಶೆಗೊಳಿಸಿದಂತೆಯೇ ಯೋಧರನ್ನೂ ನಿರಾಶೆಗೊಳಿಸಿದೆ. ಎಂಟು ನಿಮಿಷಗಳಲ್ಲಿ ಮಾತು ಮುಗಿಸಿದ ಪ್ರಧಾನಿಯನ್ನು ಮಾಜಿ ಯೋಧರು ಟ್ವಿಟ್ಟರಿನಲ್ಲಿ ಪ್ರಶ್ನಿಸಿದ್ದಾರೆ.
“ಪ್ರಧಾನಿಯ ಮಾತುಗಳನ್ನು ಕೇಳಿಸಿಕೊಂಡೆ, ನನ್ನ ಅಥವಾ ಯಾವುದೇ ಯೋಧರ ನೈತಿಕ ಸ್ಥೈರ್ಯವನ್ನು ಯಾರಿಗೂ ಕುಗ್ಗಿಸಲು ಸಾಧ್ಯವಿಲ್ಲ. ಆದರೆ ಅವರು (ಪ್ರಧಾನಿ) ಅದನ್ನು ಹೆಚ್ಚಿಸಬಹುದೆಂದು ನಾನು ತಪ್ಪಾಗಿ ಭಾವಿಸಿಕೊಂಡಿದ್ದೆ” ಎಂದು ಕಾರ್ಗಿಲ್ ಯುದ್ಧದಲ್ಲಿ ತನ್ನ ಒಂದು ಕಾಲನ್ನು ಕಳೆದುಕೊಂಡಿರುವ ಮೇಜರ್ ಡಿಪಿ ಸಿಂಗ್ ಟ್ವೀಟ್ ಮಾಡಿದ್ದಾರೆ.
ಅಲ್ಲದೆ, ಗಡಿ ನಿಯಂತ್ರಕ ರೇಖೆಯಲ್ಲಿ ನಮ್ಮ ಸೈನಿಕರನ್ನು ಶಸ್ತ್ರಾಸ್ತ್ರಗಳೊಂದಿಗೆ ನಿಯೋಜಿಸಲು ಸರ್ಕಾರ ಇನ್ನೂ ನಿರ್ಧರಿಸಿಲ್ಲದಿದ್ದರೆ, “ದಯವಿಟ್ಟು ನನ್ನನ್ನು ಅಲ್ಲಿಗೆ ಹೋಗಲು ಅನುಮತಿಸಿ, ಚೀನಿಯರು ಇನ್ನೊಮ್ಮೆ ತಕರಾರು ಎತ್ತುವ ಮೊದಲು ನನ್ನ ಬ್ಲೇಡ್ ಅವರನ್ನು ತುಂಡರಿಸುತ್ತದೆ. ಹಾಗಾದರೂ ನನ್ನ ಕೆಲವು ಸಹೋದರರನ್ನು ರಕ್ಷಿಸಬಹುದು” ಎಂದು ಟ್ವೀಟ್ ಮಾಡಿರುವ ಮೇಜರ್, ತನ್ನ ಮುರಿದ ಕಾಲಿಗೆ ಅಳವಡಿಸಿರುವ ಕೃತಕ ಕಾಲಿನ ಚಿತ್ರ ಹಾಕಿದ್ದಾರೆ.
ಚೀನಾದ ವಿರುದ್ಧ ಪ್ರಧಾನಿಯ ನಡೆಯನ್ನು ನಿವೃತ್ತ ಲೆಫ್ಟಿನೆಂಟ್ ಜನರಲ್ ರಾಮೇಶ್ವರ್ ರಾಯ್ ಕೂಡಾ ಬೇಸರದಿಂದ ಟೀಕಿಸಿದ್ದಾರೆ. “ನನಗೆ ಹಾಗೂ ನನ್ನಂತ ಯೋಧರಿಗೆ ಇದು ದುರದೃಷ್ಟಕರ ದಿನ. ನಾಲ್ಕು ದಶಕಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿರುವ ನನ್ನ ಗುರಿ ಭಾರತದ ಗಡಿಯನ್ನು ಕಾಪಾಡುವುದಷ್ಟೇ, ಆದರೆ ಇಂದು ಭಾರತದ ಗಡಿಯನ್ನು ಚೀನಾ ಅತಿಕ್ರಮಿಸಿಕೊಂಡಿದ್ದರೂ ಪ್ರಧಾನಿ ಅದನ್ನು ಮೌನವಾಗಿ ಒಪ್ಪಿಕೊಂಡಿರುವುದು ನನ್ನಂತಹ ಯೋಧರಿಗೆ ತೀವ್ರ ನೋವಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಚೀನಾ- ಭಾರತ ಗಡಿ ಸಂಘರ್ಷದ ಕುರಿತು ಮೋದಿಯನ್ನು ಬಲವಾಗಿ ಟೀಕಿಸಿರುವವರು ಲೆಫ್ಟಿನೆಂಟ್ ಜನರಲ್ (ನಿವೃತ್ತ) ಪ್ರಕಾಶ್ ಮೆನನ್, “ಮೋದಿಯವರು ಶರಣಾಗಿದ್ದಾರೆ ಮತ್ತು ʼಕುಚ್ ಹುವಾ ಹಾಯ್ ನಹಿʼ (ಪ್ರಾದೇಶಿಕ ನಷ್ಟದ ವಿಷಯದಲ್ಲಿ ಏನೂ ಸಂಭವಿಸಿಲ್ಲ) ಎಂದು ಹೇಳಿದ್ದಾರೆ! ಅವರೂ ಚೀನಾದ ನಿಲುವನ್ನು ಹೊಂದಿರುವುದರಿಂದ, ಅವರನ್ನು ದೇಶದ್ರೋಹದ ಹೇಳಿಕೆಯಡಿಯಲ್ಲಿ ಅವರ ವಿಚಾರಣೆ ಮಾಡುವಂತಹ ಒಂದು ಪ್ರಕರಣವಿದೆಯೇ? ಕಾನೂನು/ ಸಾಂವಿಧಾನಿಕ ಕ್ರಮ ಯಾವುದು. ಸಹಾಯ ಮಾಡಿ! ” ಎಂದು ಟ್ವೀಟ್ ಮಾಡಿದ್ದಾರೆ.
ಯಾವುದೇ ಅತಿಕ್ರಮಣ ನಡೆದಿಲ್ಲ ಎಂದಾದರೆ, ನಮ್ಮ ಹುಡುಗರು (ಯೋಧರು) ಚೀನಾದ ನೆಲೆಗಳಿಗೆ ಹೋಗಿ ಅವರನ್ನೇ ಹೊರದಬ್ಬಲು ಯತ್ನಿಸಿದರೆ..? ಚೀನಾವೂ ಇದನ್ನು ಹೇಳುತ್ತಿದೆ. “20 ಯೋಧರ ಬಲಿದಾನವನ್ನು ಅಪಮಾನಗೊಳಿಸಲಾಗುತ್ತಿದೆ” ಎಂದು ನಿವೃತ್ತ ಮೇಜರ್ ಜನರಲ್ ಸ್ಯಾಂಡಿ ಥಾಪರ್ ಟ್ವೀಟ್ ಮಾಡಿದ್ದಾರೆ.
ಮೋದಿ ವಿರುದ್ಧ ಮಾಜಿ ಯೋಧರು ಅಸಮಧಾನ ವ್ಯಕ್ತಪಡಿಸುವುದು ಇದೇ ಮೊದಲೇನಲ್ಲ..
ಈ ಹಿಂದೆಯೂ ಹಲವು ಬಾರಿ ಪ್ರಧಾನಿ ನರೇಂದ್ರ ಮೋದಿಯವರು ಮಾಜಿ ಯೋಧರಿಂದ ಟೀಕೆಗೊಳಗಾಗಿದ್ದಾರೆ. 2019 ರ ಫೆಬ್ರವರಿಯಲ್ಲಿ, ಸ್ವಾತಂತ್ರ್ಯೋತ್ತರ ಯುದ್ಧಗಳಲ್ಲಿ ಮಡಿದ ಯೋಧರಿಗಾಗಿ ನಿರ್ಮಿಸಿದ ಸ್ಮಾರಕ ಉದ್ಘಾಟನೆಯ ವೇಳೆ ರಾಜಕೀಯ ಪ್ರೇರಿತ ಭಾಷಣ ಮಾಡಿರುವುದನ್ನು ಅಂದು ಹಲವು ಮಾಜಿ ಸೇನಾಧಿಕಾರಿಗಳು ಟೀಕಿಸಿದ್ದರು. ಸೇನೆಯನ್ನು ರಾಜಕಾರಣಕ್ಕೆ ಬಳಸಬಾರದೆಂದು ಯೋಧರು ಕೇಳಿಕೊಂಡಿದ್ದರು.
ಅಲ್ಲದೆ ಕಳೆದ ವರ್ಷ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾರತೀಯ ಸೇನೆಯನ್ನು ಮೋದಿಜಿ ಕಾ ಸೇನೆ ಎಂದು ಬಣ್ಣಿಸಿದ್ದು ಕೂಡಾ ವಿವಾದವನ್ನು ಹುಟ್ಟು ಹಾಕಿತ್ತು.
2012 ರಿಂದ 2015 ರವರೆಗೆ ಗೋಲನ್ ಹೈಟ್ಸ್ನಲ್ಲಿ ನಡೆದ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯ ಮಿಷನ್ ಮತ್ತು ಫೋರ್ಸ್ ಕಮಾಂಡರ್ ಆಗಿದ್ದ ಲೆ. ಜನರಲ್ ಸಿಂಘ “ಭಾರತದ ಸೇನೆ ಮೋದಿ ಸೇನೆಯಲ್ಲ, ಭಾರತದ ಜನರ ಸೇನೆ” ಎಂಬ ಲೇಖನದ ಮೂಲಕ ತಿರುಗೇಟು ನೀಡಿದ್ದರು.