ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಪ್ರಜೆಗಳೇ ಸಾರ್ವಭೌಮರು. ಪ್ರತಿ 5 ವರ್ಷಕ್ಕೆ ಒಮ್ಮೆ ಎದುರಾಗುವ ಚುನಾವಣೆಯಲ್ಲಿ ತಮ್ಮನ್ನು ಆಳುವ ಜನನಾಯರು ಯಾರಾಗಬೇಕು ಎಂದು ಆಯ್ಕೆ ಮಾಡುವ ಸ್ವಾತಂತ್ರ್ಯ ಹೊಂದಿದ್ದಾರೆ. 5 ವರ್ಷದಲ್ಲಿ ಆಯ್ಕೆ ಮಾಡಿದ ನಾಯಕ ಸರಿಯಾಗಿ ಕೆಲಸ ಮಾಡಲಿಲ್ಲ ಎನ್ನುವ ಆರೋಪ ಇದ್ದರೆ ಮುಂದಿನ ಬಾರಿ ಸೋಲಿಸುವ ಸಿದ್ಧ ಸೂತ್ರವೂ ಜನರ ಬಳಿಯೇ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಸ್ಥಳೀಯ ನಾಯಕ ಕೆಲಸ ಮಾಡಲಿ, ಅಪ್ರಯೋಜಕ ಆಗಿರಲಿ, ದೇಶಭಕ್ತಿ, ರಾಷ್ಟ್ರರಕ್ಷಣೆ, ಧರ್ಮ, ಜಾತಿ ಆಧಾರದಲ್ಲಿ ಆಯ್ಕೆ ಮಾಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಒಂದು ಪಕ್ಷದ ನಾಯಕನು ಸಮರ್ಥ ಎನಿಸಿಬಿಟ್ಟರೆ, ಸ್ಥಳೀಯವಾಗಿ ಆಯ್ಕೆಯಾಗುವ ವ್ಯಕ್ತಿ ಅಸಮರ್ಥ ಎನ್ನುವುದು ಗೊತ್ತಿದ್ದರೂ ಜನರು ಮತ ಹಾಕಿಸಿ ಗೆಲ್ಲಿಸುತ್ತಿದ್ದಾರೆ. ಗೆದ್ದು ಹೋದವರು ಸಂಸತ್ ಹಾಗು ವಿಧಾನಸಭೆಯಲ್ಲಿ ಎದ್ದು ಮಾತನಾಡಲು ಆಗದವರಾಗಿದ್ದರೂ ಗೆಲ್ಲಿಸುವ ಮೂರ್ಖತನವನ್ನು ಇದೇ ಪ್ರಜಾಪ್ರಭುತ್ವದ ಸಾರ್ವಭೌಮನೇ ಮಾಡುತ್ತಿರುವುದು ವಿಶೇಷ.
ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮತದಾರ ಭ್ರಷ್ಟನಾಗಿದ್ದಾನೆ ಎನ್ನುವ ಮಾತುಗಳು ಸರ್ವೇ ಸಾಮಾನ್ಯವಾಗಿದೆ. ಮತದಾರನೂ ಕೂಡ ಭ್ರಷ್ಟ ರಾಜಕಾರಣಿ ಲಂಚ ಪಡೆದು ಕೋಟಿ ಕೋಟಿ ಆಸ್ತಿ ಮಾಡಿದ್ದಾನೆ. ಕೊಡಲಿ ಬಿಡು ಎನ್ನುವ ಉದಾಸಿನದಿಂದ ಚುನಾವಣೆ ವೇಳೆ ಕೊಟ್ಟಷ್ಟು ಹಣವನ್ನು ಪಡೆದುಕೊಳ್ಳುತ್ತಿದ್ದಾನೆ. ಚುನಾವಣಾ ಆಯೋಗ ಚುನಠಾವಣಾ ವೆಚ್ಚಕ್ಕೆ ನಿಗದಿ ಮಾಡಿರುವ ಹಣದಲ್ಲಿ ಚುನಾವಣೆ ನಡೆಯುತ್ತಿಲ್ಲ ಎನ್ನುವುದು ಚುನಾವನಾ ಆಯೋಗಕ್ಕೂ ಗೊತ್ತು. ಆದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ಚುನಾವಣಾ ಆಯೋಗ ಯಾವುದೇ ಪರಿಹಾರ ಕ್ರಮದ ಬಗ್ಗೆ ಚಿಂತನೆ ನಡೆಸುತ್ತಿಲ್ಲ.
ಸುಧಾರಣಾ ಕ್ರಮ ಕೈಗೊಳ್ಳುವ ಬದಲು, ಅಧಿಕಾರದಲ್ಲಿರುವ ಪಕ್ಷದ ಕೈಗೊಂಬೆಯಂತೆ ಕಾರ್ಯನಿರ್ವಹಿಸುತ್ತಿರುವ ಆರೋಪ ಪ್ರತಿಸಲವೂ ಕೇಳಿಬರುತ್ತದೆ. ಆಡಳಿತರೂಢ ಪಕ್ಷ ತನಗೆ ಎದುರಾಳಿಯಾದ ಪಕ್ಷದ ಅಭ್ಯರ್ಥಿಗಳ ಮೇಲೆ ಅಧಿಕಾರಿಗಳನ್ನು ಬಳಸಿಕೊಂಡು ರೇಡ್ ಮಾಡುವುದು. ಚುನಾವಣೆಯಲ್ಲಿ ಎದುರಾಳಿಯನ್ನು ಕಟ್ಟಿ ಹಾಕುವುದು ಸಹಜ ಎನ್ನುವಂತಾಗಿದೆ. ಅಧಿಕಾರದಲ್ಲಿದ್ದವರ ಪರವಾಗಿ ಚುನಾವಣೆ ನಡೆಸ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ ಎನ್ನುವಂತಾಗಿದೆ.
ಆದ್ರೆ, ಅದೇ ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು ವಿಧಾನಸೌಧದಲ್ಲಿ ಸಂವಿಧಾನ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಎಲ್ಲಾ ಆಯಾಮಗಳಲ್ಲೂ ಶಾಸಕರು ಚರ್ಚೆ ನಡೆಸುತ್ತಿದ್ದಾರೆ. ಅದರಲ್ಲಿ ಹಾಸನ ಜಿಲ್ಲೆ ಅರಸೀಕೆರೆಯಿಂದ ಆಯ್ಕೆಯಾಗಿರುವ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಚುನಾವಣಾ ಹೇಗೆ ನಡೆಯುತ್ತಿದೆ..? ಸುಧಾರಣೆ ಮಾಡುವ ಅಗತ್ಯತೆ ಬಗ್ಗೆ ಗಮನ ಸೆಳೆದಿದ್ದಾರೆ. ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಬೇಕು ಎನ್ನುವ ಇಚ್ಛಾಶಕ್ತಿ ಇದ್ದರೆ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಒಂದಾಗಿ ಮೊದಲು ಚುನಾವಣಾ ಸುಧಾರಣೆಗೆ ಕಾನೂನು ತರಬೇಕು. ಪ್ರತಿ ಗ್ರಾಮದಲ್ಲೂ ಒಂದೊಂದು ಸ್ಕ್ರೀನ್ ಹಾಕುವುದು. ತಾಲೂಕು ಮಟ್ಟದಲ್ಲಿ ಕುಳಿತು ಚುನಾವಣೆ ಪ್ರಚಾರ ಮಾಡುವುದು.
ಎಲ್ಲಾ ಪಕ್ಷಗಳಿಗೂ ಇಂತಿಷ್ಟು ಸಮಯ ನಿಗದಿ ಮಾಡಿ, ನಮ್ಮ ಅಭಿವೃದ್ಧಿ, ಪ್ರಣಾಳಿಕೆ ಬಗ್ಗೆ ಹೇಳುವುದು. ಯಾವುದೇ ಊರಿಗೆ ಹೋಗುವಂತಿಲ್ಲ, ಯಾರಿಗೂ 5 ರೂಪಾಯಿ ಕೊಡುವಂತಿಲ್ಲ. ನಾವು ಯಾರ ಬಳಿಯೂ ಕಮಿಷನ್ ಪಡೆಯುವಂತಿಲ್ಲ. ಚುನಾವಣೆ ಮುಗಿದ ಬಳಿಕ ಅಭಿವೃದ್ಧಿ ಮಾಡದಿದ್ರೆ ಜನರೇ ಕೊರಳುಪಟ್ಟಿ ಹಿಡಿದು ಕೇಳ್ತಾರೆ. ಚುನಾವಣಾ ಭೂತವನ್ನು ಸರಿ ಮಾಡದಿದ್ದರೆ ಎಲ್ಲರೂ ಭ್ರಷ್ಟಾಚಾರಿಗಳಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಭ್ರಷ್ಟಾಚಾರ ಕಡಿಮೆ ಮಾಡಬೇಕು ಎನ್ನುವುದಾದರೆ ಚುನಾವಣಾ ಸುಧಾರಣೆ ತಂದರೆ ಶೇಕಡ 90ರಷ್ಟು ಕಡಿಮೆ ಆಗುತ್ತದೆ. ಕೇವಲ ಶಾಸಕಾಂಗ ಅಷ್ಟೇ ಅಲ್ಲ, ಕಾರ್ಯಾಂಗ, ನ್ಯಾಯಂಗ ಜೊತೆಗೆ ನಾಲ್ಕನೇ ಅಂಗವೂ ಭ್ರಷ್ಟಾಚಾರಿಗಳಾಗಿದ್ದಾರೆ ಎನ್ನುವ ಮೂಲಕ ಮಾಧ್ಯಮಗಳಲ್ಲೂ ಕೆಲವರು ಭ್ರಷ್ಟಾಚಾರಿಗಳಿದ್ದಾರೆ ಟೀಕಿಸಿದ್ದಾರೆ.
ಶಿವಲಿಂಗೇಗೌಡ ಅವರು ಹೇಳಿರುವ ಮಾತಿನಲ್ಲಿ ಬಹುತೇಕ ಸತ್ಯಾಂಶವಿದೆ. ಇದೀಗ ಸಂವಿಧಾನದ ಅಧಿಕೃತ ಮೂರು ಅಂಗಗಳು ಭ್ರಷ್ಟಾಚಾರವನ್ನು ಹಾಸುಹೊದ್ದು ಮಲಗಿವೆ. ಅನಧಿಕೃತವಾಗಿದ್ದರೂ ಸಂವಿಧಾನದ ನಿಜವಾದ ಕಾವಲು ನಾಯಿ ಮಾಧ್ಯಮ ಕೂಡ ಭ್ರಷ್ಟವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ನಿಜವಾದ ಪತ್ರಕರ್ತ ಭ್ರಷ್ಟನಲ್ಲ. ಆದರೆ ಬಂಡವಾಳಶಾಹಿ ವರ್ಗದ ಹಿಡಿತಕ್ಕೆ ಒಳಗಾಗಿರುವ ಮಾಧ್ಯಮ, ಕೆಲವೊಮ್ಮೆ ಮಾಲೀಕರು ಹೇಳಿದಂತೆ ಕೆಲಸ ಮಾಡುವ ಅನಿವಾರ್ಯತೆಗೆ ಸಿಲುಕಿದೆ. ಈ ಪರಿಸ್ಥಿತಿಯಿಂದ ಹೊರಗೆ ಬರಬೇಕಾದರೆ ಕೆಲವೊಂದಷ್ಟು ಸಮಯ ಹಿಡಿಯುತ್ತದೆ. ಆದರೆ ಶಾಸಕ ಶಿವಲಿಂಗೇಗೌಡರು ಹೇಳಿರುವಂತೆ ಚುನಾವಣಾ ಸುಧಾರಣಾ ಕ್ರಮ, ಕೈಗೊಂಡರೆ, ಬಹುತೇಕ ಭ್ರಷ್ಟಾಚಾರವನ್ನು ಮಟ್ಟ ಹಾಕಬಹುದು. ಕಾರಣ ಎಂದರೆ ಚುನಾವಣಾ ವೆಚ್ಚಕ್ಕೆ ಸುಮಾರು 50 ರಿಂದ 60 ಕೋಟಿ ರೂಪಾಯಿ ವೆಚ್ಚ ಮಾಡಿ ಗೆದ್ದು ಬರುವ ಓರ್ವ ಶಾಸಕ ಅಥವಾ ಸಂಸದ ಅದರ ಎರಡರಷ್ಟು ಹಣವನ್ನು ವಾಪಸ್ ಪಡೆಯುವ ಹಪಾಹಪಿಯಲ್ಲಿ ಇರುತ್ತಾನೆ. ಒಂದು ವೇಳೆ ಚುನಾವಣೆಯಲ್ಲಿ ಕಾಸು ಖರ್ಚು ಮಾಡಿಲ್ಲದಿದ್ದರೆ, ಹಣವನ್ನೇ ಮಾಡುವುದಿಲ್ಲ ಎನ್ನಲಾಗದು.
ಆದರೆ, ಜನರು ನೇರವಾಗಿ ಪ್ರಶ್ನೆ ಮಾಡುವ ಅವಕಾಶ ಹೊಂದಿರುತ್ತಾನೆ. ಆದರೆ, ಇದೀಗ ನಮ್ಮೂರಿನ ರಸ್ತೆಗೆ ಡಾಂಬಾರ್ ಹಾಕಿಸಿ ಎಂದು ಓರ್ವ ಸ್ಥಳೀಯ ನಾಯಕ ಪ್ರಶ್ನೆ ಮಾಡಲು ಹೋದರೆ, ಚುನಾವಣೆ ವೇಳೆ ಖರ್ಚು ಮಾಡಿರುವ ಹಣ ಸಂಪಾದಿಸಬೇಕು. ರಸ್ತೆಯನ್ನೇ ಮಾಡದೆ ಬಿಲ್ ಪಾಸ್ ಮಾಡಿಸಿ ಎನ್ನುತ್ತಾನೆ ಶಾಸಕ. ಆಡಳಿತ ವರ್ಗದ ಜೊತೆ ಸೇರಿಕೊಂಡು ನಕಲಿ ಫೋಟೋ ತೋರಿಸಿ ಕೋಟಿ ಕೋಟಿ ಹಣವೂ ಬಿಡುಗಡೆ ಆಗುತ್ತದೆ. ಇದೀಗ ಹಳ್ಳಿಗಳಲ್ಲಿ ಅದೆಷ್ಟೋ ರಸ್ತೆಗಳು ಡಾಂಬಾರ್ ಎಂದು ವರದಿಯಲ್ಲಿದೆಯೋ ಯಾರು ಬಲ್ಲರು. ಇಲ್ಲ ಎಂದುಕೊಳ್ಳುವುದು ನಿಮ್ಮ ಮೂರ್ಖತನ. ಬೇಕಿದ್ದರೆ, ತಾಲೂಕು ಕಚೇರಿಗೆ ಹೋಗಿ ಸಂಪೂರ್ಣ ಮಾಹಿತಿ ಪಡೆಯಿರಿ, ಪರಿಶೀಲಿಸಿ.