ಕೇಂದ್ರ ಸರ್ಕಾರವು ಕೃಷಿ ಕಾನೂನುಗಳಿಗೆ ತಂದಿರುವ ತಿದ್ದುಪಡಿಯನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ 23ನೇ ದಿನಕ್ಕೆ ಕಾಲಿಟ್ಟಿದೆ. ರೈತರ ಮುಷ್ಕರವನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮುಗಿದಿದ್ದು, ಪ್ರತಿಭಟನೆ ರೈತರ ಹಕ್ಕು ಎಂದು ಸುಪ್ರಿಂ ಹೇಳಿದೆ. ಈ ಮೂಲಕ, ಪ್ರತಿಭಟಿಸುತ್ತಿರುವ ರೈತರಿಗೆ ಸುಪ್ರಿಂ ಅಭಯ ಸಿಕ್ಕಂತಾಗಿದೆ.
ರಸ್ತೆತಡೆ, ಕೆಲವು ಕಡೆ ಗಲಭೆ, ಸಾವುನೋವು, ಕೋವಿಡ್- 19 ಸಾಂಕ್ರಾಮಿಕ ರೋಗವನ್ನು ಗಮನಹರಿಸಿ ರೈತರ ಮುಷ್ಕರ ನಿಲ್ಲಿಸಬೇಕೆಂದು ಕಾನೂನು ವಿದ್ಯಾರ್ಥಿಯೊಬ್ಬರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿ ಈ ಬಗ್ಗೆ ಸುಪ್ರೀಂ ಪ್ರತಿಕ್ರಿಯೆ ನೀಡಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದೀಗ ದೆಹಲಿಯಲ್ಲಿ ರೈತರು ಶಾಂತಿಯುತವಾಗಿ ಪ್ರತಿಭಟಿಸಲು ಅವಕಾಶ ನೀಡಿದ್ದು, ಸಮಸ್ಯೆಯ ವಿರುದ್ಧ ಪ್ರತಿಭಟಿಸುವುದು ಸಂವಿಧಾನಬದ್ಧ ಹಕ್ಕು. ಯಾರಿಂದಲೂ ಪ್ರತಿಭಟನೆ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಅರ್ಜಿ ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬ್ಡೆ ಹೇಳಿದ್ದಾರೆ.
ದೆಹಲಿ ಗಡಿ ಭಾಗಗಳಲ್ಲಿ ರೈತರ ಮುಷ್ಕರ ತೀವ್ರ ಸ್ವರೂಪ ತಾಳುತ್ತಿದ್ದು, ಮತ್ತೊಮ್ಮೆ ರಸ್ತೆ ತಡೆದು ದೊಡ್ಡಮಟ್ಟದಲ್ಲಿ ಪ್ರತಿಭಟನೆ ಮಾಡುವ ಮುನ್ಸೂಚನೆ ತಿಳಿದು ಬಂದ ಬೆನ್ನಲ್ಲಿಯೇ, ಅರ್ಜಿಯ ವಿಚಾರಣೆ ನಡೆಸಿ ರೈತರ ಹೋರಾಟ, ರೂಪುರೇಷೆಯ ಬಗ್ಗೆ ಕೋರ್ಟ್ ಸ್ಪಷ್ಟತೆಯನ್ನು ನೀಡಿದೆ.
ಇವರೆಗೂ ಪ್ರತಿಭಟನಾಕರರ ಪ್ರಶ್ನೆಗೆ ಉತ್ತರಿಸದ ಕೇಂದ್ರ ಸರ್ಕಾರದ ನಡೆಗೆ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕೃಷಿ ಕಾನೂನಿನ ಬಿಕ್ಕಟ್ಟನ್ನು ಪರಿಹರಿಸಲು ರೈತ ಸಂಘಟನೆಗಳು ಮತ್ತು ಸರ್ಕಾರ ಜೊತಗೆ ಗೂಡಿ ಮಾತುಕತೆ ನಡೆಸಿ ಸಮಸ್ಯೆಯನ್ನ ಬಗೆಹರಿಸಿಕೊಳ್ಳಬೇಕು, ಎಂದು ಕೋರ್ಟ್ ಹೇಳಿದೆ.
ಈ ಸಂಬಂಧ ಸಿಜೆಐ ಬೊಬ್ಡೆ, ನ್ಯಾಯಮೂರ್ತಿ ಎಸ್. ಎಸ್ ಬೋಪಣ್ಣ, ವಿ ರಾಮ ಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯಪೀಠವು ಈ ಬಿಕ್ಕಟ್ಟನ್ನು ಬಗೆಹರಿಸಲು ಸರ್ಕಾರ ಮತ್ತು ರೈತ ಸಂಘಗಳನ್ನೊಳಗೊಂಡ ಸ್ವತಂತ್ರ ಸಮಿತಿಯೊಂದನ್ನು ರಚಿಸಬಹುದೆಂಬುದರ ಸೂಚನೆ ನೀಡಿದೆ.
ಪ್ರತಿಭಟನಾಕಾರರು ಎಲ್ಲಿಯವರೆಗೆ ಸಾರ್ವಜನಿಕ ಆಸ್ತಿಯನ್ನು ನಾಶಪಡಿಸುವುದಿಲ್ಲವೋ, ರಸ್ತೆ ತಡೆಗಳನ್ನು ಮಾಡದೆ ಸಾರ್ವಜನಿಕ ಜನಜೀವನಕ್ಕೆ ತೊಂದರೆಯನ್ನುಂಟು ಮಾಡದೆ ಸಂವಿಧಾನದ ತತ್ವಗಳಿಗೆ ಬದ್ಧವಾಗಿ ಹೋರಾಟ ಮಾಡುತ್ತಾರೋ ಅಲ್ಲಿಯವರೆಗೆ ಹೋರಾಟಕ್ಕೆ ಅವಕಾಶವಿದೆ ಎಂಬುದು ಕೋರ್ಟ್ ಅಭಿಪ್ರಾಯ. ಈ ವಿಚಾರದಲ್ಲಿ ನ್ಯಾಯಾಲಯ ನ್ಯಾಯಬದ್ಧವಾಗಿ ಸ್ವತಂತ್ರವಾಗಿ, ನಿಶ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತದೆ, ಎಂದು ತ್ರಸದಸ್ಯ ಪೀಠವು ಹೇಳಿದೆ.