ಯಾವ ಪಕ್ಷವೇ ಅಧಿಕಾರದಲ್ಲಿದ್ದರೂ, ಎಷ್ಟೇ ಒತ್ತಡ ಹಾಕಿದರೂ ಆಡಳಿತದ ನಿಯಮಗಳು, ಕಾರ್ಯವಿಧಾನಗಳು ಬದಲಾಗುವುದಿಲ್ಲ. ಅದು ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ವಿಚಾರವೇ ಆಗಿರಲಿ, ಅಧಿಕಾರಿಗಳು ನಿಯಮ, ಕಾಯ್ದೆಗಳನ್ನು ಉಲ್ಲಂಘಿಸುವುದಿಲ್ಲ. ನಿಯಮಗಳ ಮುಂದೆ ಮಾನವೀಯತೆಯೂ ಗೌಣವಾಗುತ್ತದೆ. ಅದು ಬಿಜೆಪಿ ಸರ್ಕಾರವಿರಲಿ, ಕಾಂಗ್ರೆಸ್ ಸರ್ಕಾರವೇ ಆಗಿರಲಿ. ರಾಜಕಾರಣಿಗಳು ಹೇಳಿದರೂ ಅಧಿಕಾರಿಗಳು ನಿಯಮ ಮೀರಿ ಕೆಲಸ ಮಾಡಲು ಒಪ್ಪುವುದಿಲ್ಲ.
ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ರಾಜ್ಯದಲ್ಲಿ ಭಾರೀ ಮಳೆ, ಭೀಕರ ಪ್ರವಾಹ ಬಂದು ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿ ಜನ ಬೀದಿಗೆ ಬಂದಿದ್ದರೂ ಕೇಂದ್ರ ಸರ್ಕಾರದಿಂದ ಇದುವರೆಗೆ ಪರಿಹಾರ ಬಿಡುಗಡೆಯಾಗದೇ ಇರಲು ಇದುವೇ ಕಾರಣ. ಇದರಿಂದಾಗಿಯೇ ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರವಿದೆ. ಕೇಳಿದ ಕೂಡಲೇ ಕೇಂದ್ರ ಸರ್ಕಾರ ನೆರವಿಗೆ ಬರುತ್ತದೆ ಎಂಬ ಬಿಜೆಪಿ ನಾಯಕರ ಮಾತುಗಳು ಸುಳ್ಳಾಗಿ ಜನ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವಂತಾಗಿದೆ. ಯಾರೆಷ್ಟೇ ಬೊಬ್ಬೆ ಹಾಕಿದರೂ, ಪರಿ ಪರಿಯಾಗಿ ಕೇಳಿಕೊಂಡರೂ ನಿಯಮಾವಳಿಗಳ ಎದುರು ಕುರುಡಾಗಿರುವ ಅಧಿಕಾರಶಾಹಿ ಅದನ್ನು ಕೇಳಿಸಿಕೊಳ್ಳುವುದಿಲ್ಲ. ಬದಲಾಗಿ ನಿಯಮಗಳು ಏನು ಹೇಳುತ್ತವೆಯೋ ಅದನ್ನೇ ಮಾಡುತ್ತಾರೆ.
ರಾಜ್ಯದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಭಾರೀ ಮಳೆ ಮತ್ತು ಭೀಕರ ಪ್ರವಾಹದಿಂದಾಗಿ ಅಂದಾಜು 38,000 ಕೋಟಿ ರೂಪಾಯಿಗೂ ಅಧಿಕ ನಷ್ಟವಾಗಿದೆ. ರಾಷ್ಟ್ರೀಯ ನೈಸರ್ಗಿಕ ವಿಪತ್ತು ಪರಿಹಾರ (ಎನ್‌ಡಿಆರ್‌ಎಫ್) ನಿಯಮಾವಳಿ ಅನ್ವಯ 3,500 ಕೋಟಿ ರೂಪಾಯಿ ನೆರವು ನೀಡಿ ಎಂದು ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದ್ದರೂ ಕೇಂದ್ರ ಸರ್ಕಾರ ಈ ಪ್ರಸ್ತಾವನೆಗೆ ಆಕ್ಷೇಪ ವ್ಯಕ್ತಪಡಿಸುತ್ತಾ, ಸ್ಪಷ್ಟೀಕರಣಗಳನ್ನು ಕೇಳುತ್ತಾ ಇದುವರೆಗೆ ಹಣ ಬಿಡುಗಡೆ ಮಾಡದೇ ಇರಲು ಕಾರಣ ಈ ನಿಯಮಾವಳಿಗಳೇ ಆಗಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವುದು ಒಂದೇ ಪಕ್ಷವಿರಲಿ, ಪರಸ್ಪರ ಸ್ನೇಹಿತರೇ ಆಗಿರಲಿ, ನಿಯಮಗಳ ಮುಂದೆ ಅವೆಲ್ಲವೂ ಗೌಣವಾಗುತ್ತವೆ.
Also Read: ಪ್ರಕೃತಿ ವಿಕೋಪ ಪರಿಹಾರ: ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ
ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ಈ ಬಾರಿ ನೆರವು ನೀಡದೇ ಇರುವುದನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು, ಬಿ. ಎಸ್. ಯಡಿಯೂರಪ್ಪ ಅವರ ಬಗ್ಗೆ ಬಿಜೆಪಿ ಹೈಕಮಾಂಡ್ ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಹೀಗಾಗಿ ರಾಜ್ಯಕ್ಕೆ ಕೇಂದ್ರದಿಂದ ನೆರವು ಸಿಗುತ್ತಿಲ್ಲ ಎಂದು ಬೊಬ್ಬೆ ಹಾಕುತ್ತಿದ್ದಾರೆ. ಆದರೆ, ಇದುವರೆಗೆ ಯಾವತ್ತೂ ಪ್ರವಾಹ ಅಥವಾ ಬರ ಬಂದಾಗ ತಕ್ಷಣಕ್ಕೆ ಕೇಂದ್ರದಿಂದ ಪರಿಹಾರ ಬಂದ ಉದಾಹರಣೆ ಇಲ್ಲ. ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದ (ಬೇರೆ ಬೇರೆ ಇಲಾಖೆಗಳಿಗೆ ಹಂಚಿಕೆ ಮಾಡಿದ ಅನುದಾನವನ್ನು ತಿರುಗಿಸಿ) ಹಣ ಖರ್ಚು ಮಾಡಿ ಪರಿಹಾರ ಕಾರ್ಯ ಕೈಗೊಳ್ಳಬೇಕು. ಮೂರ್ನಾಲ್ಕು ತಿಂಗಳ ನಂತರ ಕೇಂದ್ರ ಸರ್ಕಾರದಿಂದ ಪರಿಹಾರದ ಮೊತ್ತ ಬಂದ ಬಳಿಕ ಅದನ್ನು ಹೊಂದಾಣಿಕೆ ಮಾಡಿಕೊಳ್ಳಬೇಕು. ಇದು ನಡೆದುಕೊಂಡು ಬಂದಿರುವ ಪದ್ಧತಿ.
ಪರಿಹಾರ ಪ್ರಸ್ತಾವನೆಗಳಿಗೆ ಸ್ಪಷ್ಟೀಕರಣ ಕೇಳುವುದು ಸಹಜ ಪ್ರಕ್ರಿಯೆ
ರಾಜ್ಯದಲ್ಲಿ ಮಳೆ ಮತ್ತು ಪ್ರವಾಹದಿಂದ 38 ಸಾವಿರ ಕೋಟಿ ರೂಪಾಯಿಗಿಂತಲೂ ಹೆಚ್ಚು ನಷ್ಟವಾಗಿದ್ದು, ಎನ್. ಡಿ. ಆರ್. ಎಫ್. ನಿಯಮಾವಳಿಯಡಿ 3500 ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಯ ಬಗ್ಗೆ ಸ್ಪಷ್ಟೀಕರಣ ಕೇಳಿದ್ದ ಕೇಂದ್ರ, ತನ್ನದೇ ಆದ ಲೆಕ್ಕಾಚಾರಗಳ ಪ್ರಕಾರ ಅಷ್ಟೊಂದು ಹಾನಿಯಾಗಿಲ್ಲ. ಪ್ರಸ್ತಾವನೆಯನ್ನು ಪರಿಷ್ಕರಿಸಿ ಎಂದು ಹೇಳಿತ್ತು. ಅದರಂತೆ ಸುಮಾರು 35,000 ಕೋಟಿ ರೂ. ನಷ್ಟವಾಗಿದೆ ಎಂದು ಹೇಳಿ ರಾಜ್ಯ ಸರ್ಕಾರ ಪರಿಷ್ಕೃತ ಪ್ರಸ್ತಾವನೆ ಕಳುಹಿಸಿತ್ತು. ಇದೀಗ ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರದ ಅಧಿಕಾರಿಗಳ ತಂಡ ನೀಡಿದ್ದ ವರದಿಯು ರಾಜ್ಯ ಸರ್ಕಾರ ಸಲ್ಲಿಸಿರುವ ನಷ್ಟದೊಂದಿಗೆ ತಾಳೆಯಾಗುತ್ತಿಲ್ಲ. ರಾಜ್ಯ ಸರ್ಕಾರದ ಪ್ರಸ್ತಾವನೆಯಲ್ಲಿ 2.5 ಲಕ್ಷ ಮನೆಗಳು ನೆಲಕಚ್ಚಿವೆ ಎಂದು ಹೇಳಲಾಗಿದೆ. ಆದರೆ, ಕೇಂದ್ರದ ಅಧ್ಯಯನ ತಂಡದ ವರದಿ ಪ್ರಕಾರ 1.15 ಲಕ್ಷ ಮನೆಗಳು ಮಾತ್ರ ನೆಲಕಚ್ಚಿವೆ. ನೆಲಕಚ್ಚಿದ ಮನೆಗಳೆಲ್ಲವೂ 5 ಲಕ್ಷ ರೂ. ಬೆಲೆ ಬಾಳುತ್ತಿದ್ದವೇ ಎಂಬುದನ್ನು ಸ್ಪಷ್ಟಪಡಿಸಿ ಎಂದು ಕೇಂದ್ರ ಸರ್ಕಾರ ಹೇಳಿದೆ.
ಸಾಮಾನ್ಯವಾಗಿ ಕೇಂದ್ರ ಅಧ್ಯಯನ ತಂಡದ ವರದಿಗಳು ಮತ್ತು ರಾಜ್ಯ ಸರ್ಕಾರ ಸಲ್ಲಿಸುವ ವರದಿಗಳಲ್ಲಿ ವ್ಯತ್ಯಾಸ ಇದ್ದೇ ಇರುತ್ತದೆ. ಮನೆಗಳು ಸಂಪೂರ್ಣ ನೆಲಕಚ್ಚಿದರೆ ಮಾತ್ರವಲ್ಲ, ಶೇ. 75ಕ್ಕಿಂತ ಹೆಚ್ಚು ಹಾನಿಗೊಂಡಿದ್ದರೆ ರಾಜ್ಯ ಸರ್ಕಾರ ಅದನ್ನು ಸಂಪೂರ್ಣ ನೆಲಕಚ್ಚಿದೆ ಎಂದು ನಿರ್ಧರಿಸಿ ವರದಿ ನೀಡುತ್ತದೆ. ಆದರೆ, ಕೇಂದ್ರದ ಅಧ್ಯಯನ ತಂಡ ಸಂಪೂರ್ಣ ಕುಸಿದ ಮನೆಗಳನ್ನು ಮಾತ್ರ ಲೆಕ್ಕ ಹಾಕಿದೆ. ಅದೇ ರೀತಿ ರಾಜ್ಯ ಸರ್ಕಾರ ಕುಸಿದ ಪ್ರತಿ ಮನೆಗೆ 5 ಲಕ್ಷ ರೂ. ಪರಿಹಾರ ಕೇಳಿದೆ. ಈ ಬಗ್ಗೆ ಕೇಂದ್ರ ಸರ್ಕಾರ ನೆಲಕಚ್ಚಿದ ಮನೆಗಳೆಲ್ಲವೂ 5 ಲಕ್ಷ ರೂ. ಬೆಲೆ ಬಾಳುತ್ತದೆಯೇ ಎಂಬುದನ್ನು ಪ್ರಮಾಣೀಕರಿಸುವಂತೆ ಸೂಚಿಸಿದೆ. ಇಲ್ಲಿ ಕೆಲವು ಮನೆಗಳ ಮೌಲ್ಯ 5 ಲಕ್ಷಕ್ಕಿಂತ ಕಮ್ಮಿ ಇದ್ದರೆ, ಇನ್ನು ಕೆಲವು ಮನೆಗಳ ಮೌಲ್ಯ 5 ಲಕ್ಷಕ್ಕಿಂತ ಹೆಚ್ಚಾಗಿರುತ್ತದೆ. ಸರಾಸರಿ ಅಂದಾಜು ಹಾಕಿ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿರುತ್ತದೆ. ಹೀಗಾಗಿ ಈ ಕುರಿತು ಸ್ಪಷ್ಟೀಕರಣಗಳನ್ನು ಕೇಂದ್ರ ಸರ್ಕಾರ ಕೇಳಿದೆ ಎನ್ನುತ್ತಾರೆ ಕಂದಾಯ ಇಲಾಖೆ ಅಧಿಕಾರಿಗಳು.
ಈ ಹಿಂದೆ ಪ್ರವಾಹ ಬಂದು ಮನೆಗಳು ಕುಸಿದಾಗ ರಾಜ್ಯ ಸರ್ಕಾರ ಪರಿಹಾರ ಕೋರಿ ಪ್ರಸ್ತಾವನೆ ಸಲ್ಲಿಸಿದ ಸಂದರ್ಭದಲ್ಲೂ ಕೇಂದ್ರ ಸರ್ಕಾರ ಸ್ಪಷ್ಟೀಕರಣಗಳನ್ನು ಕೇಳಿತ್ತು. ಪರಿಹಾರ ಪ್ರಸ್ತಾವನೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ 2-3 ಬಾರಿ ಈ ರೀತಿಯ ಸಂವಹನ ನಡೆಯುತ್ತದೆ. ಏನೇ ಮಾಡಿದರೂ ಅಧ್ಯಯನ ತಂಡದ ವರದಿಗೂ ರಾಜ್ಯ ಸರ್ಕಾರದ ಪ್ರಸ್ತಾವನೆಗೂ ಹೊಂದಾಣಿಕೆಯಾಗುವುದಿಲ್ಲ. ಅಂತಿಮವಾಗಿ ಎರಡೂ ವರದಿಗಳನ್ನು ಮುಂದಿಟ್ಟುಕೊಂಡು ಕೇಂದ್ರ ಗೃಹ ಸಚಿವರನ್ನೊಳಗೊಂಡ ಉನ್ನತ ಮಟ್ಟದ ಸಮಿತಿ ಪರಿಹಾರದ ಮೊತ್ತವನ್ನು ನಿರ್ಧರಿಸಿ ರಾಜ್ಯಕ್ಕೆ ಬಿಡುಗಡೆ ಮಾಡುತ್ತದೆ.
ಈ ಪ್ರಕ್ರಿಯೆಗಳು ನಡೆಯಲು ತಿಂಗಳುಗಳ ಕಾಲಾವಕಾಶ ಬೇಕಾಗುತ್ತದೆ. 2018ರಲ್ಲಿ ರಾಜ್ಯದಲ್ಲಿ ಕಾಣಿಸಿಕೊಂಡ ಬರಗಾಲಕ್ಕೆ 2019ರ ಸೆಪ್ಟೆಂಬರ್ ತಿಂಗಳಲ್ಲಿ ಪರಿಹಾರ ಬಂದಿದ್ದೇ ಇದಕ್ಕೆ ಉದಾಹರಣೆ. ಈ ಹಿಂದಿನ ವರ್ಷಗಳಲ್ಲಿ ಪ್ರವಾಹ ಬಂದು ಸಾವಿರಾರು ಕೋಟಿ ರೂ. ನಷ್ಟವಾದಾಗಲೂ ಕೇಂದ್ರದಿಂದ ಪರಿಹಾರ ಬರುವುದು ವಿಳಂಬವಾಗಿತ್ತು. ಅದು ಯು. ಪಿ. ಎ. ಸರ್ಕಾರವಿರಲಿ, ಎನ್. ಡಿ. ಎ. ಸರ್ಕಾರವಿರಲಿ, ನಿಯಮಗಳು ಬದಲಾಗುವುದಿಲ್ಲ ಎಂದೂ ಅವರು ಹೇಳುತ್ತಾರೆ.
ಹೀಗಾಗಿ ಯಾವ ಪಕ್ಷದ ಸರ್ಕಾರವೇ ಅಧಿಕಾರದಲ್ಲಿರಲಿ, ಕಾಯ್ದೆ, ನಿಯಮಗಳ ಮುಂದೆ ಪರಿಸ್ಥಿತಿಯ ಜಟಿಲತೆ, ಜನರ ಸಂಕಷ್ಟಗಳಿಗೆ ಸ್ಪಂದನೆ ಸಿಗುವುದಿಲ್ಲ. ಪ್ರಕೃತಿ ವಿಕೋಪ ಸಂಭವಿಸಿದಾಗ ಕೇಂದ್ರ ಸರ್ಕಾರ ತಕ್ಷಣ ನೆರವಿಗೆ ಧಾವಿಸಬೇಕಾದರೆ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಸಂಬಂಧಿಸಿದ ನಿಯಮಾವಳಿಗಳಿಗೆ ತಿದ್ದುಪಡಿಯಾಗಬೇಕೇ ಹೊರತು ಬೇರೆ ಯಾವ ಮಾರ್ಗವೂ ಇಲ್ಲ ಎಂಬುದು ಅಧಿಕಾರಿಗಳ ಅಭಿಪ್ರಾಯ.