ದೆಹಲಿಯ ಹಿಂಸಾಚಾರ ಮುಂದುವರಿದಿದೆ. ಸೋಮವಾರ ಸಂಜೆ ಭುಗಿಲೆದ್ದಿದ್ದ ಹಿಂಸಾಚಾರ ತಡರಾತ್ರಿಯವರೆಗೆ ಮುಂದುವರಿದು, ಒಬ್ಬ ಪೊಲೀಸ್ ಸೇರಿದಂತೆ ಒಟ್ಟು ಏಳು ಮಂದಿ ಉದ್ರಿಕ್ತ ಗುಂಪಿನ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಈ ನಡುವೆ, ಸೋಮವಾರ ಇಡೀ ಹಿಂಸಾಚಾರ ತಡೆಯುವ ನಿಟ್ಟಿನಲ್ಲಿ ಯಾವುದೇ ಬಿಗಿ ಕ್ರಮಕ್ಕೆ ಮುಂದಾಗದೇ ಮೌನವಾಗಿದ್ದ ಗೃಹ ಸಚಿವ ಅಮಿತ್ ಶಾ, ಇಂದು ಪೊಲೀಸ್ ಅಧಿಕಾರಿಗಳು ಮತ್ತು ದೆಹಲಿ ಸಿಎಂ ಮತ್ತು ಲೆಫ್ಟಿನೆಂಟ್ ಗವರ್ನರ್ ಅವರ ಪ್ರತ್ಯೇಕ ಸಭೆ ಕರೆದಿದ್ದಾರೆ.
ಈ ನಡುವೆ ತಡರಾತ್ರಿಯ ಬಳಿಕ ಹತೋಟಿಗೆ ಬಂದಿದ್ದ ಗಲಭೆ, ಮಂಗಳವಾರ ಬೆಳಗ್ಗೆ ಮತ್ತೆ ಭುಗಿಲೆದ್ದಿದ್ದು, ಮೌಜ್ ಪುರ ಮತ್ತು ಬ್ರಹ್ಮಪುರಿ ಪ್ರದೇಶದಲ್ಲಿ ಮುಸ್ಲಿಂ ಮನೆ, ಅಂಗಡಿ-ಮಂಗಟ್ಟುಗಳಿಗೆ ಬೆಂಕಿ ಹಚ್ಚಲಾಗಿದೆ. ಹಿಂಸಾಚಾರ ಮತ್ತೆ ವ್ಯಾಪಿಸುತ್ತಿದೆ ಎಂದು ವರದಿಗಳು ಹೇಳಿವೆ. ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಸೆತದಂತಹ ಘಟನೆಗಳು ಮತ್ತೆ ಮರುಕಳಿಸಿವೆ.
ಈ ನಡುವೆ ದೆಹಲಿ ಗಲಭೆಯ ವಿಷಯದಲ್ಲಿ ಸಂಪೂರ್ಣ ಮೂಕಪ್ರೇಕ್ಷಕನಾಗಿರುವ ಸರ್ಕಾರ ಮತ್ತು ದೆಹಲಿ ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಶಾಹೀನ್ ಭಾಗ್ ಪ್ರತಿಭಟನೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ವಿಭಾಗೀಯ ಪೀಠದ ಮುಂದೆ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅರ್ಜಿ ಸಲ್ಲಿಸಿದ್ದಾರೆ. ಗಲಭೆಯನ್ನು ನಿಯಂತ್ರಿಸುವಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಮತ್ತು ಗೃಹ ಮಂತ್ರಿಗಳು ಸಂಪೂರ್ಣ ವಿಫಲರಾಗಿದ್ಧಾರೆ ಎಂದಿರುವ ಕಾಂಗ್ರೆಸ್ ನಾಯಕ ಪಿ ಚಿದಂಬರಂ, ಎಐಎಂಐಎಂ ನಾಯಕ ಅಸಾದುದ್ದೀನ್ ಒವೈಸಿ ಮತ್ತಿತರ ನಾಯಕರು, ದೆಹಲಿ ಪೊಲೀಸರು ಗಲಭೆ ಹತೋಟಿ ಮಾಡುವ ಬದಲು ಸ್ವತಃ ಒಂದು ಗುಂಪಿನ ಪರ ನಿಂತು ಮತ್ತೊಂದು ಗುಂಪಿನ ಕಡೆ ಕಲ್ಲು ತೂರುವ ಮೂಲಕ ಸರ್ಕಾರದ ಪಕ್ಷಪಾತಿ ಧೋರಣೆಯನ್ನು ತೋರಿಸಿದ್ದಾರೆ. ಇದು ಆಘಾತಕಾರಿ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ನಡುವೆ, ಶಾಹೀನ್ ಭಾಗ್ ಪ್ರತಿಭಟನಾಕಾರರ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ವೀಡಿಯೋ ಒಂದನ್ನು ಶೇರ್ ಮಾಡಲಾಗಿದ್ದು, ದೆಹಲಿ ಪೊಲೀಸರು ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ನೆಲದಲ್ಲಿ ಉರುಳಾಡಿಸಿ ಹೊಡೆಯುತ್ತಿರುವುದು, ಗಾಯಗೊಂಡು ರಕ್ತಸಿಕ್ತರಾಗಿ ನಿತ್ರಾಣಗೊಂಡಿರುವ ಯುವಕರಿಗೆ ರಾಷ್ಟ್ರಗೀತೆ ಮತ್ತು ವಂದೇ ಮಾತರಂ ಹಾಡುವಂತೆ ಹಿಂಸೆ ನೀಡುತ್ತಿರುವ ದೃಶ್ಯಾವಳಿಗಳಿವೆ. ‘ರಕ್ಷಕರೇ ಭಕ್ಷಕರಾದರೆ ರಕ್ಷಣೆಗಾಗಿ ಯಾರಿಗೆ ಮೊರೆ ಇಡುವುದು? ಮಾನವೀಯ ಮೌಲ್ಯಗಳನ್ನೇ ಅವಮಾನಿಸುವ ರೀತಿಯಲ್ಲಿ ನಡೆದುಕೊಂಡಿರುವ ದೆಹಲಿ ಪೊಲೀಸರೇ, ನಿಮಗೆ ನಾಚಿಕೆಯಾಗಲಿ. ನಮ್ಮ ರಾಷ್ಟ್ರಗೀತೆಗೆ ಗೌರವ ತೋರುವ ತಮ್ಮ ಸಂವಿಧಾನಿಕ ಹೊಣೆಗಾರಿಕೆಯನ್ನು ದೆಹಲಿ ಪೊಲೀಸರು ನಿಭಾಯಿಸುವ ರೀತಿ ಇದೇನಾ?’ ಎಂಬ ಹೇಳಿಕೆಯೊಂದಿಗೆ ಆ ವೀಡಿಯೋ ಶೇರ್ ಮಾಡಲಾಗಿದ್ದು, ನರಳಾಡುತ್ತಾ ನೆಲದ ಮೇಲೆ ಬಿದ್ದಿರುವವರನ್ನು ಬೂಟುಕಾಲಲ್ಲಿ ತುಳಿಯುತ್ತಿರುವ ಪೊಲೀಸರು ರಾಷ್ಟ್ರಗೀತೆ ಹೇಳುವಂತೆ ಹಿಂಸಿಸುವ ಸುಮಾರು 30 ಸೆಕೆಂಡಿನ ಆಘಾತಕಾರಿ ದೃಶ್ಯಾವಳಿ ಆ ವೀಡಿಯೋದಲ್ಲಿದೆ. ಹಾಗೇ ಆಜಾದಿ ಎಂದು ಈಗ ಹೇಳಿ, ವಂದೇ ಮಾತರಂ ಹೇಳಿ ಎಂದು ಕೂಗುತ್ತಿರುವ ದನಿಗಳೂ ಕೇಳಿಸುತ್ತವೆ.
ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಿಜೆಪಿ ದೆಹಲಿ ನಾಯಕ ಕಪಿಲ್ ಮಿಶ್ರಾ ಅವರು ಪೊಲೀಸ್ ಅಧಿಕಾರಿಯೊಬ್ಬರ ಪಕ್ಕದಲ್ಲೇ ನಿಂತು, ದೆಹಲಿ ಪೊಲೀಸರು ಕೂಡಲೇ ದೆಹಲಿ ರಸ್ತೆಗಳನ್ನು ಸಿಎಎ ಹೋರಾಟಮುಕ್ತಗೊಳಿಸದೇ ಇದ್ದಲ್ಲಿಮ ತಾವೇ ಸ್ವತಃ ಬೀದಿಗಿಳಿದು ಬುದ್ದಿ ಹೋರಾಟಗಾರರಿಗೆ ಬುದ್ದಿ ಕಲಿಸುತ್ತೇವೆ ಎಂದ ಕ್ಷಣದಿಂದ ಈವರೆಗೆ ದೆಹಲಿ ಪೊಲೀಸರು ಸಿಎಎ ಪರ- ವಿರೋಧಿ ಬಣಗಳ ವಿಷಯದಲ್ಲಿ ನಡೆದುಕೊಂಡ ರೀತಿ ಸಾಕಷ್ಟು ಟೀಕೆಗೆ ಈಡಾಗಿದೆ.
ಹಿಂಸೆಗೆ ಕುಮ್ಮಕ್ಕು ನೀಡುವ ಮಾತುಗಳನ್ನಾಡಿದ ಬಿಜೆಪಿ ನಾಯಕನ ವಿರುದ್ಧ ಯಾವುದೇ ಕ್ರಮ ಜರುಗಿಸದೇ ಆತನ ಬೆನ್ನಿಗೆ ನಿಂತು, ಪರೋಕ್ಷವಾಗಿ ಆತನ ವರಸೆಯನ್ನು ಸಮರ್ಥಿಸುವ ರೀತಿಯಲ್ಲಿ ನಡೆದುಕೊಂಡ ದೆಹಲಿ ಪೊಲೀಸರು, ಭಾನುವಾರ ಸಂಜೆ ಈಶಾನ್ಯ ದೆಹಲಿಯ ಹಲವೆಡೆ ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಸಿಎಎ ಪರ ಹೋರಾಟಗಾರರು ಎಂದು ಹೇಳಲಾಗುತ್ತಿರುವ ಗುಂಪು ದಾಳಿ ನಡೆಸುತ್ತಿರುವಾಗಲೂ ಬಹುತೇಕ ಮೂಕಪ್ರೇಕ್ಷಕರಾಗೇ ಇದ್ದರು ಎಂಬ ಆರೋಪಗಳು ಕೇಳಿಬಂದಿವೆ. ಇಂತಹ ಆರೋಪಗಳಿಗೆ ಪೂರಕವಾಗಿ ಸೋಮವಾರ ಗಲಭೆ ತೀವ್ರಗೊಂಡು ಇಡೀ ಈಶಾನ್ಯ ದೆಹಲಿ ಭಾಗ ಹೊತ್ತಿ ಉರಿಯುತ್ತಿದ್ದರೂ ದೆಹಲಿ ಪೊಲೀಸರು, ಒಂದೆರಡು ಕಡೆ ಲಾಠಿ ಪ್ರಹಾರ ಮತ್ತು ಅಶ್ರುವಾಯು ಸಿಡಿಸಿದ್ದಾರೆಯೇ ವಿನಃ, ಉಳಿದಂತೆ ಗಲಭೆಕೋರರ ನಿಯಂತ್ರಣಕ್ಕೆ ಬಿಗಿ ಕ್ರಮಕೈಗೊಂಡಿಲ್ಲ. ಪೊಲೀಸರ ಈ ನಿಷ್ಕ್ರಿಯತೆಯನ್ನು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಕೂಡ ಖಂಡಿಸಿದ್ದು, ಪೊಲೀಸರು ದಂಗೆಕೋರರ ಮೇಲೆ ಲಾಠಿ ಬೀಸಲು ಕೂಡ ಕೇಂದ್ರ ನಾಯಕರ ಆದೇಶಕ್ಕಾಗಿ ಕಾದಿದ್ದರೇ ಎಂದು ಪ್ರಶ್ನಿಸಿದ್ದಾರೆ.
ಈ ನಡುವೆ, ಏಳು ಮಂದಿ ಜೀವಹಾನಿಯಾದರೂ ಗಲಭೆಪೀಡಿತ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಯುವ ನಿಟ್ಟಿನಲ್ಲಿ ದೆಹಲಿ ಪೊಲೀಸರು ಯಾಕೆ ಕರ್ಫ್ಯೂ ಹೇರಿಕೆಯಂತಹ ಕ್ರಮಕ್ಕೆ ಮುಂದಾಗಿಲ್ಲ ಎಂಬ ಪ್ರಶ್ನೆಯೂ ಎದ್ದಿದೆ. ಒಟ್ಟಾರೆ ಪೊಲೀಸರು ಗಲಭೆ ನಿರ್ವಹಿಸಿದ ರೀತಿ, ಗಲಭೆನಿರತ ಒಂದು ಗುಂಪಿನ ಪರ ಪೊಲೀಸರೇ ನಿಂತಿದ್ದಾರೆ ಎಂಬ ಆರೋಪಗಳಿಗೆ ಪುಷ್ಟಿನೀಡುವಂತಿದೆ ಎಂಬುದು ನಿರ್ವಿವಾದ.
ಈ ನಡುವೆ, ಸೋಮವಾರ ಗಲಭೆ ವೇಳೆ ಹಾಡಹಗಲೇ ರಿವಾಲ್ವರ್ ಹಿಡಿದು ಪ್ರತಿಭಟನಾಕಾರರ ಕಡೆ ಎಂಟು ಸುತ್ತು ಗುಂಡು ಹಾರಿಸಿದ್ದ ಮತ್ತು ಪೊಲೀಸರತ್ತ ಗನ್ ಹಿಡಿದು ಬೆದರಿಸಿದ್ದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಬಂಧಿತನನ್ನು 33 ವರ್ಷದ ಶಾರುಖ್ ಎಂದು ಗುರುತಿಸಲಾಗಿದೆ ಎಂದು ದೆಹಲಿ ಪೊಲೀಸರು ಮಾಧ್ಯಮ ಹೇಳಿಕೆ ನೀಡಿದ್ದಾರೆ. ಆತ ಸಿಎಎ ವಿರೋಧಿ ಹೋರಾಟಗಾರರ ಗುಂಪಿನ ಕಡೆಯಿಂದಲೇ ಬಂದಿದ್ದು, ಸಿಎಎ ಪರ ಹೋರಾಟಗಾರರತ್ತ ಗುಂಡು ಹಾರಿಸಿದ್ದ ಎಂದು ‘ಆಲ್ಟ್ ನ್ಯೂಸ್’ ವಾಸ್ತವಾಂಶಗಳ ಸಹಿತ ವರದಿ ಮಾಡಿದೆ.
ಜೊತೆಗೆ, ಇದೀಗ ದೆಹಲಿ ಗಲಭೆಗೆ ಮೂಲ ಕಾರಣವಾಗಿರುವ ಸಿಎಎ ಪರ ಹೋರಾಟದ ಬಗ್ಗೆಯೂ ಸಾಕಷ್ಟು ಅನುಮಾನಗಳು ಎದ್ದಿದ್ದು, ಸಿಎಎ ಮಸೂದೆ, ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರವಾಗಿ, ರಾಷ್ಟ್ರಪತಿಗಳ ಅಂಕಿತವನ್ನೂ ಪಡೆದು ಕಾಯ್ದೆಯಾಗಿ ಜಾರಿಗೆ ಬಂದಿದೆ. ಸ್ವತಃ ಸರ್ಕಾರವೇ ಕಾಯ್ದೆಯನ್ನು ಜಾರಿ ಮಾಡುವುದರಲ್ಲಿ ಯಾವ ಅನುಮಾನವಿಲ್ಲ ಎಂದು ಹೇಳಿದೆ. ಪ್ರಧಾನಿ ಮತ್ತು ಗೃಹ ಸಚಿವರು ಕೂಡ ಸಿಎಎ ಜಾರಿ ವಿಷಯದಲ್ಲಿ ಹಿಂದೆ ಸರಿಯುವುದಿಲ್ಲ ಎಂದು ಸಂಸತ್ತಿನ ಒಳಹೊರಗೆ ಸ್ಪಷ್ಟಪಡಿಸಿದ್ದಾರೆ. ಹಾಗಿರುವಾಗ, ಸಿಎಎ ವಿರೋಧಿ ಹೋರಾಟಕ್ಕೆ ಪರ್ಯಾಯವಾಗಿ ಸಿಎಎ ಪರ ಹೋರಾಟದ ಅಗತ್ಯವೇನಿದೆ? ಎಂಬ ಪ್ರಶ್ನೆ ಸಹಜವಾಗೇ ಕೇಳಿಬಂದಿದೆ.
ಸಿಎಎ ಪರ ಹೋರಾಟ ಎಂಬುದನ್ನು ಅದು ಮಸೂದೆಯ ಹಂತದಲ್ಲಿರುವಾಗ ಬಿಜೆಪಿ ಸಂಘಟಿಸಿದ್ದು ಹೌದಾದರೂ, ಈಗ ಕಾಯ್ದೆಯಾಗಿ ಜಾರಿಗೆ ಬಂದ ಬಳಿಕ ಬಿಜೆಪಿ ಅಂತಹ ಪ್ರಯತ್ನ ನಡೆಸಿರಲಿಲ್ಲ. ಅದಕ್ಕೆ ಬದಲಾಗಿ ಅದು ಮನೆಮನೆ ಭೇಟಿ ಮೂಲಕ ಕಾಯ್ದೆಯ ಪರ ಜನಾಭಿಪ್ರಾಯ ಮೂಡಿಸುವ ಅಭಿಯಾನ ನಡೆಸಿತ್ತು. ಆದರೆ, ಇದೀಗ ದೆಹಲಿಯಲ್ಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ನೇತೃತ್ವದಲ್ಲಿ ಸಿಎಎ ಪರ ಹೋರಾಟ ಎಂಬ ಹೆಸರಿನಲ್ಲಿ ‘ಜೈ ಶ್ರೀರಾಮ್’ ಘೋಷಣೆ ಕೂಗುತ್ತಾ, ‘ವಂದೇ ಮಾತರಂ’ ಹೇಳುತ್ತಾ, ಸಿಎಎ ವಿರೋಧಿ ಹೋರಾಟಗಾರರನ್ನೇ ಗುರಿಯಾಗಿಸಿಕೊಂಡು ಹಿಂಸಾಚಾರಕ್ಕೆ ಇಳಿದಿರುವುದರ ಹಿಂದಿನ ಉದ್ದೇಶವೇನು?. ಇಡೀ ಸರ್ಕಾರವೇ ಅಧಿಕೃತವಾಗಿ ಕಾಯ್ದೆಯನ್ನ ಜಾರಿಗೆ ತರುತ್ತಿರುವಾಗ, ಅದನ್ನು ಬೆಂಬಲಿಸಿ ರಸ್ತೆಗಿಳಿಯುವ ಜರೂರು ಏನಿದೆ? ಹೀಗೆ ಸಿಎಎ ಪರ ಹೋರಾಟದ ಹೆಸರಿನಲ್ಲಿ ಸಿಎಎ ವಿರೋಧಿಗಳನ್ನು ಬಲಪ್ರಯೋಗದ ಮೂಲಕ, ಹಿಂಸೆಯ ಮೂಲಕ ಹಿಮ್ಮಟ್ಟಿಸುವ ಅಜೆಂಡಾ ಜಾರಿಗೆ ಬಂದಿದೆಯಾ? ಎಂಬ ಪ್ರಶ್ನೆಗಳು ಎದ್ದಿವೆ. ಬಹುಶಃ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಸಾಧ್ಯವಾದರೆ ರಾಜಧಾನಿಯ ರಕ್ತಸಿಕ್ತ ಹಿಂಸಾಚಾರದ ಹಿಂದಿನ ಕೈ ಮತ್ತು ಕೈವಾಡಗಳು ನಿಚ್ಛಳವಾಗಲಿವೆ!