ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆಗೊಂಡರೂ ನಿಲ್ಲದ ಸಾ.ರಾ ಮಹೇಶ್ ಆರೋಪ: ಸಿಂಧೂರಿ ತಿರುಗೇಟು

ಮೈಸೂರಿನಲ್ಲಿ ಜಿಲ್ಲಾದಿಕಾರಿ ಆಗಿದ್ದ  ರೋಹಿಣಿ ಸಿಂಧೂರಿ ಅವರು ಬೆಂಗಳೂರಿನ ಧಾರ್ಮಿಕ ದತ್ತಿ ಇಲಾಖೆಗೆ ವರ್ಗಾವಣೆಗೊಂಡರೂ  ಕೆ ಆರ್‌ ನಗರ ಕ್ಷೇತ್ರದ ಶಾಸಕ  ಸಾ ರಾ ಮಹೇಶ್‌ ಅವರ ಕೋಪ ಮಾತ್ರ ತಣ್ಣಗಾಗಿಲ್ಲ. ಬುಧವಾರವೂ ಕೂಡ  ಮಹೇಶ್‌ ಸಿಂಧೂರಿ ಅವರ ವಿರುದ್ದ ಆರೋಪ ಮಾಡಿದರು ಅಷ್ಟೇ ಅಲ್ಲ  ತಾವೂ ಚಿತ್ರ ನಿರ್ಮಾಣಕ್ಕೆ ಇಳಿಯುವ ಬಯಕೆ ವ್ಯಕ್ತಪಡಿಸಿದರು. ಇಂದು ಸುದ್ದಿ ಗೋಷ್ಟಿಯಲ್ಲಿ  ಮಾತನಾಡಿದ ‘ಮಹೇಶ್‌ ಅವರು  ಆಂಧ್ರ ಮೂಲದ ಐಎಎಸ್ ಅಧಿಕಾರಿಯೊಬ್ಬರ ಜೀವನದ ಕುರಿತು ಚಲನಚಿತ್ರ ನಿರ್ಮಾಣಕ್ಕೆ ಸಿದ್ಧತೆ ನಡೆದಿರುವುದು ಮಾಧ್ಯಮಗಳ ಮೂಲಕ ಗಮನಕ್ಕೆ ಬಂದಿದೆ. ಬಡ ರೈತನ ಮಗನೊಬ್ಬ ಐಎಎಸ್ ಆದ ಕಥೆಯನ್ನಾಧರಿಸಿ ನಾನೂ ಒಂದು ಸಿನಿಮಾ ಮಾಡುತ್ತೇನೆ’ ಎಂದು  , ಹೆಸರು ಹೇಳದೆಯೇ ರೋಹಿಣಿ ಸಿಂಧೂರಿ ಅವರನ್ನು ಕುಟುಕಿದರು.  ಅವರ ಬಗ್ಗೆ ನಿರ್ಮಾಣ ಆಗುತ್ತಿರುವ ಸಿನಿಮಾ ಬಿಡುಗಡೆ ಆಗಲಿ. ಆ ಬಳಿಕ ನಾವೂ ನಿರ್ಮಾಣಕ್ಕೆ ಇಳಿಯುವೆವು. ಬಡ ರೈತನ ಮಗನೊಬ್ಬ ಕಷ್ಟಪಟ್ಟು ಓದಿ ಐಎಎಸ್ ಅಧಿಕಾರಿಯಾದದ್ದು, ಅವರ ಜೀವನ ಹೇಗೆ ದುರಂತ ಅಂತ್ಯ ಕಂಡಿತು ಎಂಬ ಕುರಿತು ಸಿಬಿಐ ವರದಿಯನ್ನಾಧರಿಸಿ ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂದರು.

  ಈ ಹಿಂದಿನ ಜಿಲ್ಲಾಧಿಕಾರಿಗಳು ಇದ್ದ ಅವಧಿಯಲ್ಲಿ ಅವರ ನಿವಾಸದ ವಿದ್ಯುತ್ ಬಿಲ್ ಗರಿಷ್ಠ ಎಂದರೆ ತಿಂಗಳಿಗೆ ₹ 7 ರಿಂದ 8 ಸಾವಿರದವರೆಗೆ ಬರುತ್ತಿತ್ತು. ಆದರೆ ಇವರು ಬಂದ ಬಳಿಕ ತಿಂಗಳಿಗೆ ₹ 50 ಸಾವಿರಕ್ಕೂ ಅಧಿಕ ವಿದ್ಯುತ್ ಬಿಲ್ ಬಂದಿದೆ ಎಂದು ಆರೋಪಿಸಿದರು. ಜಿಲ್ಲಾಧಿಕಾರಿಗಳ ನಿವಾಸಕ್ಕೆ ಒಟ್ಟು ಮೂರು ವಿದ್ಯುತ್ ಮೀಟರ್ಗಳು ಇವೆ. ಅವುಗಳಲ್ಲಿ ಎರಡು ಮೀಟರ್ಗಳಲ್ಲಿ ಮೇ ತಿಂಗಳಲ್ಲಿ ₹ 42,371 ಹಾಗೂ ಜೂನ್ ತಿಂಗಳಲ್ಲಿ ₹ 36,406 ಬಿಲ್ಗಳು ಬಂದಿವೆ. ಇನ್ನೊಂದು ಮೀಟರ್ಗೆ ಬಂದಿರುವ ಬಿಲ್ಅನ್ನೂ ಸೇರಿಸಿದರೆ ತಿಂಗಳ ಒಟ್ಟು ಬಿಲ್ ₹ 50 ಸಾವಿರ ದಾಟುತ್ತದೆ. ಜಿಮ್, ಈಜುಕೊಳ ನಿರ್ಮಾಣ ಆಗಿರುವುದೇ ಇದಕ್ಕೆ ಕಾರಣ ಎಂದರು. ‘ಮೈಸೂರಿನ ಜನರಿಗೆ ಬೇಸಿಗೆಯಲ್ಲಿ ಕುಡಿಯಲು ನೀರು ಇರುವುದಿಲ್ಲ. ಆದರೆ ಜಿಲ್ಲಾಧಿಕಾರಿ ನಿವಾಸದಲ್ಲಿ ನಿರ್ಮಾಣವಾಗಿರುವ ಈಜುಕೊಳಕ್ಕೆ ಕುಡಿಯುವ ನೀರು ಬಳಸಲಾಗಿದೆ. ಅವರನ್ನು ವರ್ಗಾವಣೆ ಮಾಡುವ ಬದಲು ಅಮಾನತು ಮಾಡಬೇಕಿತ್ತು’ ಎಂದು ಕಿಡಿಕಾರಿದರು.‘ಮೈಸೂರಿನಿಂದ ವರ್ಗಾವಣೆಯಾಗಿರುವ ಜಿಲ್ಲಾಧಿಕಾರಿ ವಿರುದ್ಧ ನಾನು ಮಾಡಿರುವ 10 ಆರೋಪಗಳ ಕುರಿತು ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ಎಲ್ಲ ದಾಖಲೆಗಳನ್ನೂ ಒದಗಿಸಿದ್ದೇನೆ. ಇವುಗಳ ಬಗ್ಗೆ ಸಮಗ್ರ ತನಿಖೆ ಆಗಲಿ. ಇದೇ ವಿಷಯಗಳನ್ನು ವಿಧಾನಸಭೆಯಲ್ಲೂ ಪ್ರಸ್ತಾಪಿಸುತ್ತೇನೆ’ ಎಂದರು.   

ಕಳೆದ ಒಂದು ತಿಂಗಳಿನಿಂದಲೂ  ಸತತವಾಗಿ  ರೋಹಿಣಿ ಸಿಂಧೂರಿ ಅವರ ವಿರುದ್ದ ವೈಯಕ್ತಿಕ ಆರೋಪಗಳನ್ನೇ ಮಾಡುತ್ತಾ ಬಂದಿದ್ದ  ಶಾಸಕ ಸಾ ರಾ ಮಹೇಶ್‌ ಅವರ ಇದಕ್ಕೆ ರೋಹಿಣಿ ತಿರುಗೇಟು ನೀಡಿದ್ದಾರೆ. ತಮ್ಮ ಮೇಲಿನ ಆರೋಪಕ್ಕೆ  ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು  ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಹಾಗೂ ಸಾ.ರಾ.ಮಹೇಶ್ ಪಾಲುದಾರಿಕೆಯಲ್ಲಿ ಭೂ ಮಾಫಿಯಾ ಸಕ್ರಿಯವಾಗಿದೆ ಎಂದು ಆರೋಪಿಸಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಅವರು, ‘ಭೂ ಮಾಫಿಯಾದವರು ಸೇರಿ ನನ್ನನ್ನು ವರ್ಗಾವಣೆ ಮಾಡಿಸಿದರು. ವರ್ಗಾವಣೆಯಾದ ಮೇಲೂ ನನ್ನ ಮೇಲೆ ಮುಗಿಬೀಳುತ್ತಿದ್ದಾರೆ. ತನಿಖೆ ನಡೆಯಬಹುದು ಎಂದು ಭಯ ಪಡುತ್ತಿದ್ದಾರೆ. ಎಲ್ಲದಕ್ಕೂ ಸಾ.ರಾ.ಮಹೇಶ್ ಪ್ರಮುಖ ಪಾತ್ರಧಾರಿ’ ಎಂದು ವಾಗ್ದಾಳಿ ನಡೆಸಿದ್ದಾರೆ.’ಮೈಸೂರು ನಗರದಲ್ಲಿನ ರಾಜಕಾಲುವೆ ಮೇಲೆ ಸಾ.ರಾ.ಚೌಲ್ಟ್ರಿ ನಿರ್ಮಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಪ್ರಾಧಿಕಾರಕ್ಕೆ ನೋಟಿಸ್ ನೀಡಿ ಮಾಹಿತಿ ಕೇಳಿದೆ. ಆ ಕಾರಣ ನನ್ನ ಮೇಲೆ ಸಾ.ರಾ.ಮಹೇಶ್ ಮುಗಿಬಿದ್ದರು’ ಎಂದು ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

‘ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಹಾಗೂ ಸಾ.ರಾ.ಮಹೇಶ್ ಪಾಲುದಾರಿಕೆಯಲ್ಲಿ ಭೂ ಮಾಫಿಯಾ ಸಕ್ರಿಯವಾಗಿದೆ. ಕ್ರಮ ಕೈಗೊಳ್ಳುವ ಹಕ್ಕು, ಅಧಿಕಾರ ಜಿಲ್ಲಾಧಿಕಾರಿಗೆ ಇರುತ್ತದೆ. ನಾನು ರಾಜ್ಯಪಾಲರಿಗೆ ಏಕೆ ಪತ್ರ ಬರೆಯಬೇಕು?’ ಎಂದು ರೋಹಿಣಿ ಸಿಂಧೂರಿ ಪ್ರಶ್ನಿಸಿದ್ದಾರೆ.  ‘ಖಾಸಗಿ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಸಾ.ರಾ.ಮಹೇಶ್ ಪಾಲುದಾರಿಕೆ ಹೊಂದಿದ್ದಾರೆ. ಅವರೊಂದಿಗೆ ಶಿಲ್ಪಾ ನಾಗ್ ಕೂಡ ಕೈಜೋಡಿಸಿದ್ದರು. ಹೀಗಾಗಿ, ಮೈಸೂರು ನಗರದಲ್ಲಿ ಸರ್ಕಾರಿ ಕೋವಿಡ್ ಕೇರ್ ಕೇಂದ್ರ ತೆರೆಯಲಿಲ್ಲ’ ಎಂದು ಅವರು ಹೇಳಿದ್ದಾರೆ. ‘ಎಲ್ಲರೂ ಷಡ್ಯಂತ್ರ ಮಾಡಿ ನನ್ನನ್ನು ವರ್ಗಾವಣೆ ಮಾಡಿಸಿದರು. ಸಾ.ರಾ.ಮಹೇಶ್ ನನ್ನನ್ನು ಮಾಡೆಲ್ ಎಂದು ಕರೆದು ವೈಯಕ್ತಿಕ ಟೀಕೆಗಿಳಿದರು. ಆದರೆ, ನಾನು ಮೌನವಾಗಿದ್ದೆ’ ಎಂದರು. ಒಟ್ಟಿನಲ್ಲಿ ಯಾರದು ತಪ್ಪು ಯಾರದು ಸರಿ ಎಂದು  ತಿಳಿಯಲು ಸರ್ಕಾರ ತನಿಖೆ ನಡೆಸಬೇಕಿದೆ.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...