ಮೈಸೂರು ಜಿಲ್ಲೆಯ ಐ.ಎ.ಎಸ್ ಅಧಿಕಾರಿಗಳ ನಡುವಿನ ಕಿತ್ತಾಟಕ್ಕೆ ಬಿಜೆಪಿಯ ಚುನಾಯಿತ ಪ್ರತಿನಿಧಿಗಳು ಹಾಗೂ ಜೆ.ಡಿ.ಎಸ್ ನ ಸಾ.ರಾ ಮಹೇಶ್ ಕಾರಣ. ಸಂಸದ ಪ್ರತಾಪ್ ಸಿಂಹ ಮೊದಲು ರೋಹಿಣಿ ಸಿಂಧೂರಿ ಅವರನ್ನು ಬೆಂಬಲಿಸಿದ್ರು, ಈಗ ಶಿಲ್ಪಾನಾಗ್ ಪರವಾಗಿ ನಿಂತಿದ್ದಾರೆ. ಒಟ್ಟಿನಲ್ಲಿ ಇಬ್ಬರನ್ನೂ ಎತ್ತಿಕಟ್ಟಿ ಜಗಳ ತಂದಿಟ್ಟಿದ್ದಾರೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಭೂ ಹಗರಣದ ತನಿಖೆಗೆ ಮುಂದಾಗಿದ್ದೇ ನನ್ನ ವರ್ಗಾವಣೆಗೆ ಕಾರಣ ಎಂದು ರೋಹಿಣಿ ಸಿಂಧೂರಿ ಹೇಳಿದ್ದಾರೆ. ಆ ಹಗರಣ ಯಾವುದು? ಅದರಲ್ಲಿ ಯಾರೆಲ್ಲಾ ರಾಜಕಾರಣಿಗಳು ಷಾಮೀಲಾಗಿದ್ದಾರೆ? ಈ ವಿಷಯದಲ್ಲಿ ಯಾವ ಅಧಿಕಾರಿಗಳನ್ನು ಬಳಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂಬುದು ತನಿಖೆಯಿಂದ ಹೊರಬರಬೇಕು. ಬಿಜೆಪಿಯ ಸಂಸದ, ಶಾಸಕರು ಜಿಲ್ಲಾಧಿಕಾರಿ ಹುದ್ದೆಯಲ್ಲಿ ಶಿಲ್ಪಾ ನಾಗ್ ಅವರನ್ನು ಕೂರಿಸುವ ಪ್ರಯತ್ನ ಮಾಡುತ್ತಿದ್ದರು. ಅದು ವಿಫಲವಾದಾಗ ಇಬ್ಬರೂ ಅಧಿಕಾರಿಗಳನ್ನು ಪರಸ್ಪರ ಎತ್ತಿ ಕಟ್ಟಿದರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಪತ್ರಿಕಾಗೋಷ್ಠಿ ಕರೆದು ಮಾತನಾಡಲು ಅಧಿಕಾರಿಗಳಿಗೆ ಅನುಮತಿ ನೀಡಿದವರು ಯಾರು? ಅನುಮತಿ ಇಲ್ಲದೆ ಪತ್ರಿಕಾಗೋಷ್ಠಿ ಕರೆಯಲು ಅವಕಾಶ ಇಲ್ಲ. ವರ್ಗಾವಣೆ ಮಾಡಿದರಷ್ಟೇ ಸಾಲದು ನಿಯಮ ಉಲ್ಲಂಘಿಸಿದ ಇಬ್ಬರು ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಸರ್ಕಾರ ಸದೃಢವಾಗಿದ್ದರೆ ಅಧಿಕಾರಿಗಳು ಈ ರೀತಿ ಬೇಕಾಬಿಟ್ಟಿ ನಡೆದುಕೊಳ್ಳುತ್ತಿರಲಿಲ್ಲ. ರಾಜಕಾರಣಿಗಳು ಅಧಿಕಾರಿಗಳನ್ನು ಬೆಂಬಲಿಸುವ ಅಥವಾ ವಿರೋಧಿಸುವ ಕೆಲಸ ಮಾಡಬಾರದು. ಅದು ತಪ್ಪು. ಇದು ರಾಜಕೀಯ ನಾಯಕತ್ವದ ವೈಫಲ್ಯ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.