ಏಪ್ರಿಲ್ 2020ರ ನಂತರ 3500ಕ್ಕೂ ಹೆಚ್ಚು ಮಕ್ಕಳು ಅನಾಥರಾಗಿದ್ದಾರೆ: ಎನ್‌ಸಿಪಿಸಿಆರ್

ಕರೋನ ವೈರಸ್ ಸಾಂಕ್ರಾಮಿಕವು ದೇಶವನ್ನು ತೀವ್ರವಾಗಿ ಅಪ್ಪಳಿಸಿದಾಗಿನಿಂದ, ಕನಿಷ್ಠ 3,621 ಮಕ್ಕಳು ಅನಾಥರಾಗಿದ್ದಾರೆ ಮತ್ತು 26,000 ಕ್ಕೂ ಹೆಚ್ಚು ಮಕ್ಕಳು ಒಬ್ಬ ಪೋಷಕರನ್ನು ಕಳೆದುಕೊಂಡಿದ್ದಾರೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಸಮಿತಿಯು ಅಫಿಡವಿಟ್‌ನಲ್ಲಿ, COVID-19 ಸಾಂಕ್ರಾಮಿಕ ರೋಗದಿಂದಾಗಿ 30,071 ಮಕ್ಕಳು ಅನಾಥರಾಗಿದ್ದಾರೆ, ಪೋಷಕರನ್ನು ಕಳೆದುಕೊಂಡಿದ್ದಾರೆ ಅಥವಾ ಕುಟುಂಬದಿಂದ ಕೈಬಿಡಲಾಗಿದೆ ಎಂದು ಹೇಳಿದೆ. ಒಟ್ಟು, 26,176 ಮಕ್ಕಳು ಒಬ್ಬ ಪೋಷಕರನ್ನು ಕಳೆದುಕೊಂಡಿದ್ದಾರೆ, 3,621 ಮಕ್ಕಳು ಅನಾಥರಾಗಿದ್ದಾರೆ ಮತ್ತು 274 ಮಕ್ಕಳನ್ನು ಕುಟುಂಬದಿಂದ ಹೊರದಬ್ಬಲಾಗಿದೆ.

ಆದಾಗ್ಯೂ, ಮಕ್ಕಳ ಹಕ್ಕುಗಳ ‌ಸಂಸ್ಥೆ ತನ್ನ ಅಫಿಡವಿಟ್‌ನಲ್ಲಿ ಹೇಳಿದಂತೆ ಪೋಷಕರ ಸಾವುಗಳು ಕೇವಲ COVID-19 ಗೆ ಸಂಬಂಧಿಸಿಲ್ಲ ಮತ್ತು ಇತರ ಕಾರಣಗಳಿಂದಲೂ ಆಗಿರಬಹುದು ಎಂಬ ಅಭಿಪ್ರಾಯಗಳೂ ಇವೆ.

ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, 2020 ಏಪ್ರಿಲ್ 1 ರಿಂದ 2021 ರ ಜೂನ್ 5 ರವರೆಗೆ ತಾಯಿ ಅಥವಾ ತಂದೆ ಅಥವಾ ಇಬ್ಬರೂ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಬಗ್ಗೆ ರಾಜ್ಯವಾರು ಮಾಹಿತಿ ದೊರೆತಿದೆ. ಮತ್ತು ಈ ವಿವರಗಳನ್ನು ‘ಬಾಲ್ ಸ್ವರಾಜ್’ ಪೋರ್ಟಲ್‌‌ಗೆ ಅಪ್‌ಲೋಡ್ ಮಾಡಲಾಗಿದೆ. 

ಈ ಅವಧಿಯಲ್ಲಿ ಮಹಾರಾಷ್ಟ್ರವು ಅತಿ ಹೆಚ್ಚು ದುರಂತ ಕಂಡಿದ್ದು, ಇಲ್ಲಿ 7,084 ಮಕ್ಕಳು ಅನಾಥರಾಗಿದ್ದಾರೆ, ತ್ಯಜಿಸಲ್ಪಟ್ಟಿದ್ದಾರೆ. ಅಥವಾ ಪೋಷಕರನ್ನು ಕಳೆದುಕೊಂಡಿದ್ದಾರೆ. ಉತ್ತರ ಪ್ರದೇಶ (3,172), ರಾಜಸ್ಥಾನ (2,482), ಹರಿಯಾಣ (2,438), ಮಧ್ಯಪ್ರದೇಶ (2,243), ಆಂಧ್ರಪ್ರದೇಶ (2,089), ಕೇರಳ (2,002), ಬಿಹಾರ (1,634) ಮತ್ತು ಒಡಿಶಾ  (1,073) ನಂತರದ ಸ್ಥಾನದಲ್ಲಿವೆ.

ದೇಶಾದ್ಯಂತ ಸಾಂಕ್ರಾಮಿಕದ ಪರಿಣಾಮವನ್ನು ಈ ರೀತಿ ಅನುಭವಿಸುತ್ತಿರುವ ಹೆಚ್ಚಿನ ಮಕ್ಕಳು 8-13 ವಯಸ್ಸಿನವರು.  ಈ ವಯಸ್ಸಿನ 11,815 ಮಕ್ಕಳನ್ನು ಕುಟುಂಬದಿಂದ ಕೈಬಿಡಲಾಗಿದೆ, ಪೋಷಕರನ್ನು ಕಳೆದುಕೊಂಡಿದ್ದಾರೆ ಅಥವಾ ಅನಾಥರಾಗಿದ್ದಾರೆ ಎಂದು ಎನ್‌ಸಿಪಿಸಿಆರ್ ಹೇಳಿದೆ.  ಹೆಚ್ಚುವರಿಯಾಗಿ, 0-3 ವರ್ಷದೊಳಗಿನ 2,902 ಮಕ್ಕಳು ಬಾಧಿತರಾಗಿದ್ದರೆ, 4-7 ವರ್ಷದ 5,107 ಮಕ್ಕಳು ಮತ್ತು 14-15 ವರ್ಷ ವಯಸ್ಸಿನ 4,908 ಮಕ್ಕಳು ಬಾಧಿತರಾಗಿದ್ದಾರೆ.  16 ರಿಂದ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು 5,339ರಷ್ಟಿದ್ದಾರೆ ಎಂದು ಅದು ಹೇಳಿದೆ.

ಮೇ 31 ರಂದು ಉನ್ನತ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ 9,346 ಮಕ್ಕಳನ್ನು ಕುಟುಂಬದಿಂದ ಕೈಬಿಡಲಾಗಿದೆ, ಅನಾಥವಾಗಿದ್ದಾರೆ ಅಥವಾ ಪೋಷಕರನ್ನು ಕಳೆದುಕೊಂಡಿದ್ದಾರೆ ಎಂದು ಹೈಕೋರ್ಟಿಗೆ ಸಲ್ಲಿಸಿದ್ದ ಅಫಿಡವಿಟ್ ಮಾಹಿತಿಯನ್ನೂ ಹೊಸ ಡೇಟಾದಲ್ಲಿ ಸೇರಿಸಲಾಗಿದೆ ಎಂದು ಅದು ಹೇಳಿದೆ.

ಡೇಟಾ ಅಪ್‌ಲೋಡ್ ಚಾಲ್ತಿಯಲ್ಲಿರುವ  ಪ್ರಕ್ರಿಯೆಯಾಗಿದ್ದು, ಇದು ‘ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಗುವನ್ನು ಗುರುತಿಸಲು ಮತ್ತು ಆ ಮಕ್ಕಳ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಟ್ರ್ಯಾಕಿಂಗ್‌ಗೆ ಸಹಾಯ ಮಾಡುತ್ತದೆ ಎಂದು ಅದು ಹೇಳಿದೆ.

ಎನ್‌ಸಿಪಿಸಿಆರ್ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಪ.ಬಂಗಾಳ ಮತ್ತು ದೆಹಲಿ  ರಾಜ್ಯಗಳು ಪೋರ್ಟಲ್‌ನಲ್ಲಿ ವಿವರಗಳನ್ನು ಅಪ್‌ಲೋಡ್ ಮಾಡಿಲ್ಲ ಎಂದು ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಅನಿರುದ್ಧ ಬೋಸ್ ಅವರ ನ್ಯಾಯಪೀಠಕ್ಕೆ ತಿಳಿಸಿದ ನಂತರ ಸುಪ್ರೀಂ ಕೋರ್ಟ್ ಈ ಎರಡೂ ರಾಜ್ಯಗಳನ್ನು ತರಾಟೆಗೆ ತೆಗೆದುಕೊಂಡಿದೆ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.

 “ನಾವು ಹೊರಡಿಸಿದ ಆದೇಶವನ್ನು ನೀವು ನೋಡಿದ್ದೀರಿ. ಮಾರ್ಚ್ 2020 ರ‌ನಂತರ ಅನಾಥರಾದ ಮಕ್ಕಳ ಮಾಹಿತಿಯನ್ನು ಸಂಗ್ರಹಿಸಿ ವಿವರಗಳನ್ನು ಅಪ್‌ಲೋಡ್ ಮಾಡಿ ಎಂದು ನಾವು ಹೇಳಿದ್ದೇವೆ.  ಉಳಿದ ಎಲ್ಲಾ ರಾಜ್ಯಗಳು ಇದನ್ನು ಸರಿಯಾಗಿ ಅರ್ಥಮಾಡಿಕೊಂಡಿವೆ ಮತ್ತು ಮಾಹಿತಿಯನ್ನು ಅಪ್‌ಲೋಡ್ ಮಾಡಿವೆ.  ಪಶ್ಚಿಮ ಬಂಗಾಳ ಮಾತ್ರ ಆದೇಶವನ್ನು ಅರ್ಥಮಾಡಿಕೊಳ್ಳದಿರುವುದು ಹೇಗೆ? ”  ಎಂದು ಬೆಂಚ್ ಕೇಳಿದೆ.

ಜುವೆನೈಲ್ ಜಸ್ಟೀಸ್ ಆಕ್ಟ್ 2015 ರ ಅಡಿಯಲ್ಲಿ ನೀಡಲಾದ ಕಾರ್ಯವಿಧಾನವನ್ನು ಅನುಸರಿಸದೆ ಅನಾಥ ಮಕ್ಕಳನ್ನು ದತ್ತು ಪಡೆಯಲು ಮುಂದಾಗಿರುವ ಕೆಲವು ಖಾಸಗಿ ಜನರು ಮತ್ತು ಸಂಸ್ಥೆಗಳು ದತ್ತಾಂಶ ಸಂಗ್ರಹಣೆಯಲ್ಲಿ ತೊಡಗಿವೆ ಎಂಬ ಆತಂಕವನ್ನು ಮಕ್ಕಳ ಹಕ್ಕುಗಳ ಸಮಿತಿ ಮತ್ತೊಮ್ಮೆ ಆತಂಕ ವ್ಯಕ್ತಪಡಿಸಿದೆ.

ಕುಟುಂಬ ಬೆಂಬಲವನ್ನು ಕಳೆದುಕೊಂಡಿರುವ ಅಥವಾ ಸಹಾಯದ ಅಗತ್ಯವಿರುವ ಮಕ್ಕಳಿಗೆ ವ್ಯಾಪಕವಾದ ಬೆಂಬಲ ಒದಗಿಸುವುದರ ಜೊತೆಗೆ, ಅನಾಥ, ಪರಿತ್ಯಕ್ತ ಅಥವಾ ಶರಣಾದ ಮಕ್ಕಳನ್ನು ದತ್ತು ಪಡೆಯಲು ಸಮಗ್ರ ವಿಧಾನವನ್ನು ಸಹ ಈ ಕಾಯಿದೆಯು ಸೂಚಿಸುತ್ತದೆ.

ಮಕ್ಕಳ ಗುರುತು ಮತ್ತು ಮಾಹಿತಿಗಳನ್ನು ಸರ್ಕಾರಿ ಅಧಿಕಾರಿಗಳು ಖಾಸಗಿ ಎನ್‌ಜಿಒಗಳು ಮತ್ತು ಸಂಸ್ಥೆಗಳಿಗೆ ಬಹಿರಂಗಪಡಿಸುವ ಬಗ್ಗೆಯೂ ಮಾಹಿತಿ ಪಡೆಯುತ್ತಿದೆ ಎಂದು ಎನ್‌ಸಿಪಿಸಿಆರ್ ತಿಳಿಸಿದೆ.

“ಬಾಲಾಪರಾಧಿ ನ್ಯಾಯ ಕಾಯ್ದೆ, 2015 ರ ಸೆಕ್ಷನ್ 74 ರ ಉಲ್ಲಂಘನೆಯಾಗದಂತೆ ಅಧಿಕಾರಿಗಳು ಕಾಳಜಿ ವಹಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ. ಮಗುವಿನ ಹೆಸರು, ಶಾಲೆ, ವಯಸ್ಸು, ವಿಳಾಸ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಮಗುವಿನ ಅಗತ್ಯ ವಿವರಗಳನ್ನು ಬಹಿರಂಗಪಡಿಸುವ ಮತ್ತು ಮಗುವನ್ನು ಗುರುತಿಸುವಲ್ಲಿ ಸಹಾಯ ಮಾಡುವ ಯಾವುದೇ ವಿವರಗಳನ್ನು ಬಹಿರಂಗಪಡಿಸುವುದನ್ನು ನಿಷೇಧಿಸಲಾಗಿದೆ” ಎಂದು ಅಫಿಡವಿಟ್ನಲ್ಲಿ ತಿಳಿಸಲಾಗಿದೆ.

ಮಕ್ಕಳ ಬಗ್ಗೆ ಯಾವುದೇ ಗೌಪ್ಯ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬಾರದು ಅಥವಾ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಒದಗಿಸಬಾರದು ಎಂದು ಆಯೋಗವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನಗಳನ್ನು ನೀಡಿದೆ.

COVID-19 ನಿಂದ ಭಾದಿತರಾದ ಮಕ್ಕಳಿಗೆ ಹಲವಾರು ಎನ್‌ಜಿಒಗಳು ಹಣಕಾಸಿನ ನೆರವು ಕೋರುತ್ತಿರುವುದಕ್ಕೆ  ಆಯೋಗವು ಕಳವಳ ವ್ಯಕ್ತಪಡಿಸಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.  “ತೊಂದರೆಯಲ್ಲಿರುವ ಮಕ್ಕಳ ಬಗ್ಗೆ ಎನ್‌ಜಿಒಗಳ ಗಮನಕ್ಕೆ ಬಂದರೆ ಅಂತಹ ಮಗುವಿನ ಬಗ್ಗೆ ಶಾಸನಬದ್ಧ ಪ್ರಾಧಿಕಾರಕ್ಕೆ ತಿಳಿಸುವುದು ಕಡ್ಡಾಯವಾಗಿದೆ.

“ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಗುವನ್ನು ಕಂಡುಕೊಂಡರೆ ಭಾರತ ಸರ್ಕಾರದ ಸೂಚನೆಗಳಿಗೆ ಅನುಗುಣವಾಗಿ ರಾಜ್ಯ /ಜಿಲ್ಲಾ ಅಧಿಕಾರಿಗಳಿಗೆ ಕಡ್ಡಾಯವಾಗಿ ತಿಳಿಸಬೇಕು ಎಂದು ಎನ್‌ಜಿ‌ಎಗಳಿಗೆ ನಿರ್ದೇಶನ ನೀಡಬೇಕು” ಎಂದು ಅದು ಕೋರಿದೆ.

COVID-19 ಸಾಂಕ್ರಾಮಿಕದಿಂದ ಅನಾಥವಾಗಿರುವ ಮಕ್ಕಳಿಗಾಗಿ ಮೇ 29 ರಂದು ಕೇಂದ್ರವು ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ.  ಇದರಲ್ಲಿ 10 ಲಕ್ಷ ರೂ.ಗಳ ಕಾರ್ಪಸ್ ಸಹ ಸೇರಿದೆ. ಇದರ ಬಡ್ಡಿಯನ್ನು ಅವರಿಗೆ 18 ವರ್ಷ ತುಂಬಿದಾಗ ಐದು ವರ್ಷಗಳವರೆಗೆ ಸ್ಟೈಫಂಡ್ ಆಗಿ ನೀಡಲಾಗುತ್ತದೆ. ಈ ಮಕ್ಕಳ ಶಿಕ್ಷಣಕ್ಕೆ ಆಡಳಿತ ಮತ್ತು ಆರ್ಥಿಕ ಸಹಾಯವನ್ನೂ ಘೋಷಿಸಲಾಯಿತು.  ಈ ಯೋಜನೆಗಳಿಗೆ ಹಣ PM PARES ನಿಧಿಯಿಂದ ಬರುತ್ತದೆ ಎಂದು ಘೋಷಣೆಯಾಗಿದೆ.

ಕೃಪೆ: ದಿ ವೈರ್

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...