ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಪ್ರಯತ್ನಿಸುತ್ತಿದೆಯಾ ಬಿಜೆಪಿ?

ಚುನಾವಣಾ ಸಮಯದಲ್ಲಿ ರಾಜಕೀಯ ನಾಯಕರು ವಾಗ್ದಾಳಿ ನಡೆಸುವುದು, ದ್ವೇಷ-ಅಸೂಹೆ ಕಾರಿಕೊಳ್ಳುವುದು, ಸಭ್ಯತೆಯ ಎಲ್ಲೆ ಮೀರುವುದು, ಪದವಿಯ ಘನತೆಯನ್ನು ಮರೆಯುವುದು ಸಾಮಾನ್ಯ. ಚುನಾವಣೆ ಮುಗಿದ ಬಳಿಕ ಜನಾದೇಶ ಪಾಲಿಸಬೇಕು. ಗೆದ್ದವರು-ಸೋತವರು ಮತ್ತೆ ಸುಮಧುರ ವಾತಾವರಣ ನಿರ್ಮಾಣ ಮೂಡುವಂತೆ ಮಾಡಬೇಕು. ಭಾರತ ಮಾದರಿಯ ಒಕ್ಕೂಟ ವ್ಯವಸ್ಥೆ ಎಂಬುದನ್ನು ಜಗತ್ತಿಗೆ ಸಾರಿ ಹೇಳಬೇಕು.

ಈವರೆಗೆ ಬಹುಪಾಲು ಅದೇ ರೀತಿ ಆಗಿದೆ. ಆದರೆ ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಅದಕ್ಕೆ ಅಪವಾದ. ‘ಮಳೆ ನಿಂತರೂ ಹನಿ‌‌ ನಿಲ್ಲದು’ ಎನ್ನುವಂತೆ ಫಲಿತಾಂಶ ಬಂದು ತಿಂಗಳಾದರೂ ಪ್ರತಿಕಾರದ ತೀವ್ರತೆ ಕಡಿಮೆ ಆಗಿಲ್ಲ. ಈಗ ಅದು ಇನ್ನೊಂದು ಪರಾಕಾಷ್ಠೆ ತಲುಪಿದೆ ಎಂಬ ಮಾತು ಕೇಳಿಬರುತ್ತಿವೆ. ಸೋತು ತೀವ್ರ ಮುಖಭಂಗ ಅನುಭವಿಸಿರುವ ಬಿಜೆಪಿ‌ ಈಗ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಏರಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ‌.


ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಪಕ್ಷ ಪಶ್ಚಿಮ ಬಂಗಾಳದಲ್ಲಿ ಅಭೂತಪೂರ್ವ ಜಯ ಸಾಧಿಸಿರುವುದರಿಂದ ಅಂದರೆ 294 ಕ್ಷೇತ್ರಗಳ ಪೈಕಿ 213 ಸ್ಥಾನಗಳನ್ನು ಗೆದ್ದುಕೊಂಡಿರುವುದರಿಂದ ‘ರಾಷ್ಟ್ರಪತಿ ಆಳ್ವಿಕೆ ಹೇರುವ’ ಸಂಗತಿ ಕೇಳಿದಾಕ್ಷಣ ಒಪ್ಪಲು ಸಾಧ್ಯವಾಗುವುದಿಲ್ಲ. ಆದರೆ ಫಲಿತಾಂಶ ಹೊರಬಂದಾಗಿನಿಂದ ಈವರೆಗೆ ಪಶ್ಚಿಮ ಬಂಗಾಳದ ವಿಷಯದಲ್ಲಿ ಬಿಜೆಪಿ ನಡೆದುಕೊಳ್ಳುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಂಥದೊಂದು ಅನುಮಾನ ಮೂಡದೇ ಇರದು.


ಮೊದಲಿಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೊತ್ತರ ಗಲಭೆ, ಘರ್ಷಣೆಗಳನ್ನು ಬಿಜೆಪಿ ದೇಶಾದ್ಯಂತ ಚರ್ಚೆಯಾಗುವಂತೆ ಮಾಡಿತು. ಪಕ್ಷದ ವತಿಯಿಂದ ಮತ್ತು ಆರ್‌ಎಸ್‌ಎಸ್  ಪರೋಕ್ಷವಾಗಿ ನಡೆಸುವ ನೂರಾರು ಸಂಸ್ಥೆಗಳ ಮೂಲಕ, ಬಿಜೆಪಿ ಐಟಿ ಸೆಲ್ ನ ಟ್ರೋಲ್ ಪಡೆಗಳ ಮೂಲಕ ವಿಷಯವನ್ನು ‘ದೊಡ್ಡದು’ ಮಾಡಿತು. ಇದರಲ್ಲಿ ಮೂರು ಉದ್ದೇಶಗಳಿದ್ದವು. ಪ್ರಧಾನ ಮಂತ್ರಿ ನರೇಂದ್ರ ಮೋದಿಯಂತಹ ಧೈತ್ಯ ನಾಯಕನನ್ನು ಮಣಿಸಿದ ಮಮತಾ ಬ್ಯಾನರ್ಜಿ ಅವರ ಬಗ್ಗೆ‌ ದೇಶದ ಇತರೆ ಭಾಗದಲ್ಲಿ ಒಂದು ರೀತಿಯ ಅಸಮಾಧಾನದ ಭಾವನೆ ಬಿತ್ತುವುದು ಮೊದಲ ಉದ್ದೇಶವಾಗಿತ್ತು. ಬಿಜೆಪಿ ಬಗ್ಗೆ ಮೃಧು ಧೋರಣೆ ಬರುವಂತೆ ಮಾಡುವುದು ಮತ್ತೊಂದು ಉದ್ದೇಶವಾಗಿತ್ತು. ಇದಲ್ಲದೆ ಮಮತಾ ಬ್ಯಾನರ್ಜಿ ಮತ್ತೆ ಅಧಿಕಾರಕ್ಕೆ ಬಂದ ಮೇಲೆ ಅಧಿಕಾರದ ದರ್ಪ ಅತಿಯಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಬಿಂಬಿಸಿ ‘ರಾಷ್ಟ್ರಪತಿ ಆಳ್ವಿಕೆ’ಗೆ ಮುನ್ನುಡಿ ಬರೆಯುವುದು ಮೂರನೇಯ ಉದ್ದೇಶವಾಗಿತ್ತು.


ಇದಾದ ಮೇಲೆ ಅಲ್ಲಿನ ರಾಜ್ಯಪಾಲ ಜಗದೀಪ್ ದಂಖರ ಅವರು ನಿರಂತರವಾಗಿ ‘ರಾಜ್ಯದಲ್ಲಿ ‌ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ’ ಎಂದು‌ ಹೇಳುತ್ತಿದ್ದಾರೆ. ಇದು‌ ಕೂಡ ಮುಂದೊಂದು‌ ದಿನ ರಾಷ್ಟ್ರಪತಿಗೆ ದೂರು ನೀಡಲು ಬರೆಯುತ್ತಿರುವ ಪೀಠಿಕೆಯೇ ಆಗಿದೆ. ಈ ನಡುವೆ ದಶಕಗಳಷ್ಟು ಹಳೆಯದಾದ ‘ನಾರದಾ ಪ್ರಕರಣ’ಕ್ಕೆ ಜೀವ ತುಂಬಿ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರ ಮೇಲೆ ಮಾತ್ರ ಕ್ರಮ ಕೈಗೊಳ್ಳುವ ಪ್ರಯತ್ನವಾಯಿತು. ಅಧಿಕಾರಿಗಳು ಅಧಿಕಾರದಲ್ಲಿ ಇರುವವರ ಸಲಹೆ-ಸೂಚನೆಗಳಿಗೆ ಅನುಗುಣವಾಗಿ ವರ್ತಿಸುತ್ತಾರೆ ಎಂಬುದು ಸಾಮಾನ್ಯವಾದ ಸಂಗತಿ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಶ್ಚಿಮ ಬಂಗಾಳಕ್ಕೆ ಚಂಡಮಾರುತದಿಂದ ಆದ ಹಾನಿಯನ್ನು ‌ಪರಿಶೀಲಿಸಲು ಭೇಟಿ ನೀಡಿದ್ದಾಗ ಗೃರು ಆಗಿದ್ದರು ಎಂಬ ಕಾರಣಕ್ಕೆ ಅಲ್ಲಿನ ಮುಖ್ಯ ಕಾರ್ಯದರ್ಶಿ (ಆಗ) ಅಲ್ಪನ್ ಬಂಡೋಪಾಧ್ಯಾಯ ಅವರಿಗೆ ನೊಟೀಸ್ ನೀಡಲಾಯಿತು.


ಪಶ್ಚಿಮ ಬಂಗಾಳಕ್ಕೆ ಕರೋನಾ ಲಸಿಕೆಗಳನ್ನು‌ ಕೊಡುವುದರಲ್ಲಿ ತಾರತಮ್ಯ ಮಾಡಲಾಯಿತು. ಮಮತಾ ಬ್ಯಾನರ್ಜಿ ‘ರಾಜ್ಯ ಸರ್ಕಾರವೇ ಲಸಿಕೆ ನೀಡಬೇಕಾದರೆ ಲಸಿಕೆ ಪಡೆದ ದಾಖಲೆ ಪತ್ರದ ಮೇಲೆ ರಾಜ್ಯದ ಜನರ ತೆರಿಗೆ ಹಣದಲ್ಲಿ ನಿಮ್ಮ ಫೋಟೋ ಏಕೆ ಹಾಕಬೇಕು, ಮುಖ್ಯಮಂತ್ರಿ ಆಗಿರುವ ತಮ್ಮದೇ ಫೋಟೋವನ್ನು ಹಾಕುತ್ತೇನೆ’ ಎಂದು ಹೇಳಿದ್ದು ಪ್ರಚಾರ ಪ್ರಿಯ ಮೋದಿಯನ್ನು ವಿಚಲಿತರನ್ನಾಗಿ ಮಾಡಿತು. ಇದಾದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳದ ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿಯನ್ನು ದೆಹಲಿಗೆ ಕರೆಸಿಕೊಂಡು ಚರ್ಚೆ ಮಾಡಿದ್ದಾರೆ. ಅತ್ತ ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಕೋಲ್ಕತ್ತಾದಲ್ಲಿ ಶಾಸಕರ ಸಭೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ರಾಷ್ಟ್ರಪತಿಗೆ ದೂರು ನೀಡುವ ತಯಾರಿ ನಡೆಸಿದ್ದಾರೆ.‌ ಅಲ್ಲಿಗೆ ಕಾನೂನು ಸುವ್ಯವಸ್ಥೆ ನೆಪವೊಡ್ಡಿ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ಬಿಕೆ ಹೇರಲು ಪ್ರಯತ್ನಿಸುತ್ತಿರುವುದು ಬಹಿರಂಗವಾದಂತಾಗಿದೆ.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...