ಈಗಾಗಲೇ ಮೂವರು ಉಪಮುಖ್ಯಮಂತ್ರಿಗಳಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಸರ್ಕಾರದಲ್ಲಿ ನಾಲ್ಕನೇ ಉಪಮುಖ್ಯಮಂತ್ರಿ ನೇಮಕದ ಬೇಡಿಕೆ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂಬ ಕೂಗು ಜೋರಾಗುತ್ತಿದೆ. ಮೇಲ್ನೋಟಕ್ಕೆ ಇದು ಬಳ್ಳಾರಿ ಜಿಲ್ಲೆಯ ಕೆಲ ಬಿಜೆಪಿ ಶಾಸಕರು ಮತ್ತು ವಾಲ್ಮೀಕಿ ಸಮುದಾಯದ ಬೇಡಿಕೆ ಎಂಬಂತೆ ಕಂಡು ಬರುತ್ತಿದೆಯಾದರೂ ಅದರ ಹಿಂದೆ ಬಿಜೆಪಿ ವರಿಷ್ಠರಲ್ಲೂ ಅಂತಹದ್ದೊಂದು ಆಲೋಚನೆ ಇದೆ ಎಂಬ ಮಾಹಿತಿ ಪಕ್ಷದ ಮೂಲಗಳಿಂದ ಲಭ್ಯವಾಗಿದೆ.
ಹೌದು, ಯಡಿಯೂರಪ್ಪ ಅವರು ಸರ್ಕಾರ ರಚಿಸುತ್ತಾರೆ ಎಂದಾಗಲೇ ಉಪಮುಖ್ಯಮಂತ್ರಿ ಸ್ಥಾನಕ್ಕೆ ಶ್ರೀರಾಮುಲು ಹೆಸರು ಕೇಳಿಬಂದಿತ್ತು. ಆದರೆ, ಬದಲಾದ ರಾಜಕೀಯ ಸನ್ನಿವೇಶಗಳಿಂದ ಮೂವರು ಉಪಮುಖ್ಯಮಂತ್ರಿಗಳನ್ನು ನೇಮಿಸಲಾಯಿತಾದರೂ ಅವಕಾಶ ಮಾತ್ರ ಶ್ರೀರಾಮುಲು ಕೈತಪ್ಪಿ ಬೇರೆಯವರಿಗೆ ಸಿಕ್ಕಿತ್ತು. ಇದೀಗ 2013ರ ವಿಧಾನಸಭೆ ಮತ್ತು 2024ರ ಲೋಕಸಬೆ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಬೇಕು ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಯೋಚನೆಯಿಂದಾಗಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ಶ್ರೀರಾಮುಲು ಹೆಸರು ಮತ್ತೆ ಮುನ್ನಲೆಗೆ ಬಂದಿದೆ.
ರಾಜ್ಯದಲ್ಲಿ ಬಿಜೆಪಿಯ ಪ್ರಮುಖ ವೋಟ್ ಬ್ಯಾಂಕ್ ಲಿಂಗಾಯತ ಸಮುದಾಯ. ಯಡಿಯೂರಪ್ಪ ಅವರ ಕಾರಣದಿಂದ ಈ ಸಮುದಾಯ ಬಿಜೆಪಿ ಕೈಹಿಡಿದಿದೆ. ಹೀಗಾಗಿ ಯಡಿಯೂರಪ್ಪ ಅವರ ಬಳಿಕ ಮತ್ತೊಬ್ಬ ಲಿಂಗಾಯತ ನಾಯಕರನ್ನು ಬೆಳೆಸಬೇಕು ಎಂಬ ಕಾರಣಕ್ಕೆ ಚುನಾವಣೆಯಲ್ಲಿ ಸೋತರೂ ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿ ಮಾಡಿ ಉತ್ತರ ಕರ್ನಾಟಕ ಭಾಗದಲ್ಲಿ ಅವರಿಗೆ ಸಂಘಟನೆಯ ಬಗ್ಗೆ ಗಮನಹರಿಸುವಂತೆ ಸೂಚಿಸಲಾಗಿದೆ.
ಉಳಿದಂತೆ ಪ್ರಬಲ ಸಮುದಾಯಗಳೆಂದರೆ ದಲಿತರು ಮತ್ತು ಒಕ್ಕಲಿಗರು. ಈ ಸಮುದಾಯದವರನ್ನು ಓಲೈಸುವ ಉದ್ದೇಶದಿಂದ ದಲಿತ ವರ್ಗಕ್ಕೆ ಸೇರಿದ ಗೋವಿಂದ ಕಾರಜೋಳ ಮತ್ತು ಒಕ್ಕಲಿಗ ಸಮುದಾಯದ ಡಾ. ಸಿ. ಎನ್. ಅಶ್ವತ್ಥನಾರಾಯಣ ಅವರನ್ನು ಉಪಮುಖ್ಯಮಂತ್ರಿಗಳನ್ನಾಗಿ ಮಾಡಲಾಗಿದೆ. ಒಕ್ಕಲಿಗ ಸಮುದಾಯದಲ್ಲಿ ಅಶ್ವತ್ಥನಾರಾಯಣ್ ಅವರಿಗಿಂತ ಹಿರಿಯರಾದ ಆರ್. ಅಶೋಕ್ ಇದ್ದರೂ ಅವರು ಇದುವರೆಗೆ ಒಕ್ಕಲಿಗ ಸಮುದಾಯವನ್ನು ಪಕ್ಷದ ಪರ ಸಂಘಟಿಸುವಲ್ಲಿ ಯಶಸ್ವಿಯಾಗಲಿಲ್ಲ ಎಂದು ಈ ಜವಾಬ್ದಾರಿಯನ್ನು ಅಶ್ವತ್ಥನಾರಾಯಣ ಅವರಿಗೆ ವಹಿಸಲಾಗಿದೆ.
ಗೋವಿಂದ ಕಾರಜೋಳ ಅವರನ್ನು ಉಪಮುಖ್ಯಮಂತ್ರಿ ಮಾಡಿ ದಲಿತರನ್ನು ಓಲೈಸುವ ಪ್ರಯತ್ನ ಮಾಡಲಾಗಿದೆಯಾದರೂ ವಯಸ್ಸಿನ ಕಾರಣದಿಂದ ಪಕ್ಷ ಸಂಘಟನೆ ವಿಚಾರದಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಲೇ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂಬ ಕೂಗು ಎದ್ದಿರುವುದು. ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡಲಾಗುವುದು ಎಂದು ಅಮಿತ್ ಶಾ ಅವರು ಹಿಂದೆಯೇ ಹೇಳಿದ್ದರಿಂದ ಮತ್ತು ಜನರನ್ನು ಸಂಘಟಿಸುವಲ್ಲಿ ಶ್ರೀರಾಮುಲು ಬಿಜೆಪಿಯ ಪಾಲಿಗೆ ಪ್ರಮುಖ ನಾಯಕರಾಗಿರುವುದರಿಂದ ಅಮಿತ್ ಶಾ ಅವರಿಗೆ ಆಪ್ತರಾಗಿರುವ ರಾಜ್ಯದ ಕೆಲವು ನಾಯಕರು ನಾಲ್ಕನೇ ಉಪಮುಖ್ಯಮಂತ್ರಿ ನೇಮಕಕ್ಕೆ ಒತ್ತಡ ಹೇರುತ್ತಿದ್ದಾರೆ.
ಶ್ರೀರಾಮುಲು ಹೆಸರೇ ಏಕೆ ಪ್ರಸ್ತಾಪ
ಪರಿಶಿಷ್ಟ ವರ್ಗಕ್ಕೆ ಸೇರಿದ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಬೇಕು ಎಂಬ ಬೇಡಿಕೆಗೆ ಬಿಜೆಪಿಯ ಈ ಗುಂಪು ಹಲವು ಕಾರಣಗಳನ್ನು ನೀಡುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಡುವೆ ಸಾಮ್ಯತೆಗಳಿದ್ದು, ಶ್ರೀರಾಮುಲು ಎರಡೂ ಸಮುದಾಯದವರನ್ನು ಒಟ್ಟಿಗೆ ಕರೆದೊಯ್ಯಲು ಸಾಧ್ಯವಾಗಬಹುದು. ಇದಲ್ಲದೆ, ಹಿಂದುಳಿದ ವರ್ಗಗಳಲ್ಲಿ ಕೂಡ ಶ್ರೀರಾಮುಲು ಪ್ರಭಾವಿ ನಾಯಕರಾಗಿದ್ದಾರೆ. ಹೀಗಾಗಿ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡಿದರೆ ಮೂರು ಸಮುದಾಯಗಳಲ್ಲಿ ಬಿಜೆಪಿಗೆ ಬೆಂಬಲ ಹೆಚ್ಚಾಗಬಹುದು.
2013ರ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಯನ್ನು ತೊರೆದು ಶ್ರೀರಾಮುಲು ಅವರು ಬಿಎಸ್ ಆರ್ ಕಾಂಗ್ರೆಸ್ ಎಂಬ ಹೊಸ ಪಕ್ಷ ಕಟ್ಟಿದ್ದರು. ಚುನಾವಣೆಯಲ್ಲಿ ಅವರ ಪಕ್ಷ 4 ಸ್ಥಾನಗಳಲ್ಲಿ ಗೆದ್ದಿತ್ತು. ಅವರ ಪಕ್ಷ ಶೇ. 2.68ರಷ್ಟು ಮತಗಳನ್ನೂ ಪಡೆದಿತ್ತು. ಏಕಾಂಗಿಯಾಗಿಯೇ ಇಷ್ಟೊಂದು ಪ್ರಭಾವಿಯಾಗಿರುವ ಶ್ರೀರಾಮುಲು ಅವರಿಗೆ ಪಕ್ಷವು ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಪರಿಶಿಷ್ಟ ಮತ್ತು ಹಿಂದುಳಿದ ಸಮುದಾಯಗಳ ಬೆಂಬಲ ಬಿಜೆಪಿಗೆ ಸಿಗಬಹುದು. ಯಡಿಯೂರಪ್ಪ ಅವರಿಲ್ಲದಿದ್ದರೆ ಪಕ್ಷ ಸಂಘಟನೆಗೆ ಎಲ್ಲಾ ಜಾತಿ, ಸಮುದಾಯಗಳ ಬೆಂಬಲ ಬೇಕಿದ್ದು, ಅದಕ್ಕಾಗಿ ಪರಿಶಿಷ್ಟ, ಲಿಂಗಾಯತ, ಒಕ್ಕಲಿಗ ಮತ್ತು ಹಿಂದುಳಿದ ವರ್ಗಗಳನ್ನೆಲ್ಲಾ ಸೇರಿಸಬೇಕಿದೆ. ಉಪಮುಖ್ಯಮಂತ್ರಿ ಸ್ಥಾನ ಸಿಕ್ಕಿದರೆ ಶ್ರೀರಾಮುಲು ಕೂಡ ಹೆಚ್ಚು ಕ್ರಿಯಾಶೀಲರಾಗಿ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತಾರೆ ಎಂಬ ವಾದವನ್ನು ಬಿಜೆಪಿಯ ಒಂದು ಬಣ ಮುಂದಿಟ್ಟಿದೆ.
ಅನರ್ಹ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಾಗಿ ಅವರು ಗೆದ್ದು ಬಂದರೆ ಆಗ ರಮೇಶ್ ಜಾರಕಿಹೊಳಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕಾಗುತ್ತದೆ. ರಮೇಶ್ ಜಾರಕಿಹೊಳಿ ಬೆಳಗಾವಿ ಜಿಲ್ಲೆಯಲ್ಲಿ ಪ್ರಭಾವಿ ನಾಯಕರು ಹೌದಾದರೂ ಬೇರೆ ಜಿಲ್ಲೆಗಳಲ್ಲಿ ಬೆಂಬಲಿಗರು ಇಲ್ಲ. ಆದರೆ, ಶ್ರೀರಾಮುಲು ವಿಚಾರದಲ್ಲಿ ಹಾಗಲ್ಲ. ಹಲವು ಜಿಲ್ಲೆಗಳಲ್ಲಿ ಪ್ರಭಾವ ಹೊಂದಿದ್ದಾರೆ. ಮೇಲಾಗಿ ಪರಿಶಿಷ್ಟ ಪಂಗಡದ ನಾಯಕ ಎಂದು ಈಗಾಗಲೇ ಗುರುತಿಸಿಕೊಂಡಿದ್ದಾರೆ. ಹೀಗಿರುವಾಗ ರಮೇಶ್ ಜಾರಕಿಹೊಳಿ ಅವರನ್ನು ಉಪಮುಖ್ಯಮಂತ್ರಿ ಮಾಡಿ ಶ್ರೀರಾಮುಲು ಅವರನ್ನು ಕೈಬಿಟ್ಟರೆ ಸಮುದಾಯ ಪಕ್ಷದ ವಿರುದ್ಧ ತಿರುಗಿ ಬೀಳಬಹುದು. ಹೀಗಾಗಿ ಉಪ ಚುನಾವಣೆ ನಡೆಯುವ ಮುನ್ನವೇ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಎಂಬುದಾಗಿ ಘೋಷಿಸಬೇಕು ಎಂಬ ಬೇಡಿಕೆಯನ್ನೂ ಇವರು ಬಿಜೆಪಿ ರಾಷ್ಟ್ರೀಯ ನಾಯಕರ ಮುಂದಿಟ್ಟಿದ್ದಾರೆ.
ಇಕ್ಕಟ್ಟಿಗೆ ಸಿಲುಕಿರುವ ಸಿಎಂ ಯಡಿಯೂರಪ್ಪ
ಈ ಬೇಡಿಕೆಯಿಂದಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮಾತ್ರ ಇಕ್ಕಟ್ಟಿಗೆ ಸಿಲುಕಿದ್ದಾರೆ. ಮೂವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡುವುದೇ ಅವರಿಗೆ ಇಷ್ಟವಿರಲಿಲ್ಲ. ವರಿಷ್ಠರ ಒತ್ತಡಕ್ಕೆ ಮಣಿದು ನಿರ್ಧಾರ ಕೈಗೊಳ್ಳಬೇಕಾಯಿತು. ಈ ಮಧ್ಯೆ ಕೊಟ್ಟ ಭರವಸೆಯಂತೆ ರಮೇಶ್ ಜಾರಕಿಹೊಳಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿ ಗೆದ್ದು ಬಂದರೆ ಅವರಿಗೂ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕಾಗುತ್ತದೆ. ಅದರ ಜತೆಗೆ ಶ್ರೀರಾಮುಲು ಕೂಡ ಸೇರಿಕೊಂಡರೆ 34 ಮಂದಿ ಇರುವ ಸಂಪುಟದಲ್ಲಿ ಒಬ್ಬ ಮುಖ್ಯಮಂತ್ರಿ, ಐವರು ಉಪಮುಖ್ಯಮಂತ್ರಿಗಳು ಆದಂತಾಗುತ್ತದೆ. ಅಷ್ಟೇ ಅಲ್ಲ, ಇತರೆ ಸಮುದಾಯದವರಿಂದಲೂ ಈ ಹುದ್ದೆಯ ಬೇಡಿಕೆ ಬಂದರೆ ಎಂಬ ಆತಂಕ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಾಡುತ್ತಿದೆ. ಹೀಗಾಗಿ ಸದ್ಯಕ್ಕೆ ಹೆಚ್ಚುವರಿಯಾಗಿ ಉಪಮುಖ್ಯಮಂತ್ರಿಗಳ ನೇಮಕ ಬೇಡ ಎಂಬ ಇಂಗಿತವನ್ನು ವರಿಷ್ಠರ ಮುಂದೆ ಅವರು ವ್ಯಕ್ತಪಡಿಸಿದ್ದಾರೆ. ಇದಕ್ಕೆ ವರಿಷ್ಠರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದರ ಮೇಲೆ ಮತ್ತೊಂದು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಯ ಭವಿಷ್ಯ ಅಡಗಿದೆ.