ರಾಜ್ಯದ ಪುಟ್ಟ ಪ್ರವಾಸ ಜಿಲ್ಲೆ ಕೊಡಗು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಹೆಚ್ಚು ಜನ ಪ್ರವಾಸಿಗರನ್ನು ತನ್ನತ್ತ ಸೆಳೆಯುತಿತ್ತು. ಆದರೆ ಕೊರೋನ ಎಂಬ ಸಾಂಕ್ರಮಿಕದ ಕಾರಣದಿಂದಾಗಿ ಸರ್ಕಾರವು ಲಾಕ್ ಡೌನ್ ಘೋಷಿಸಿದ್ದೇ ತಡ ಜಿಲ್ಲೆಯಲ್ಲಿ ಪ್ರವಾಸೋದ್ಯಮವೇ ಸ್ಥಬ್ದವಾಗಿ ಹೋಯಿತು. ಪ್ರವಾಸಿಗರನ್ನೇ ನಂಬಿಕೊಂಡಿದ್ದ ಸಾವಿರಾರು ಹೋಂ ಸ್ಟೇ , ಹೋಟೆಲ್ ಗಳಲ್ಲಿ ವ್ಯಾಪಾರವಿಲ್ಲದೆ ಮುಚ್ಚಲ್ಪಟ್ಟವು. ಆದರೆ ಕಳೆದ ಅಕ್ಟೋಬರ್ನ ದಸರಾ ನಂತರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಒಂದಷ್ಟು ಚೇತರಿಕೆ ಕಾಣುತ್ತಿದೆ. ಹೊರ ಜಿಲ್ಲೆ ರಾಜ್ಯಗಳಿಂದಲೂ ಪ್ರವಾಸಿಗರ ಆಗಮನ ಮತ್ತು ಹೋಂ ಸ್ಟೇ ಗಳ ಮುಂಗಡ ಬುಕಿಂಗ್ ಗಳು ಮೊದಲಿನ ಸ್ಥಿತೆಗೆ ಮರಳುತ್ತಿವೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದು ಜಿಲ್ಲೆಯ ಜನತೆಗೆ ನಿಜಕ್ಕೂ ನೆಮ್ಮದಿ ತಂದಿರುವ ವಿಷಯ. ಭೀಕರ ಮಳೆ ಹಾಗೂ ಭೂಕುಸಿತದಿಂದ ಕಳೆದ ಮೂರು ವರ್ಷಗಳಿಂದ ತತ್ತರಿಸಿದ್ದ ಕೊಡಗಿನ ಕೃಷಿಕರು ಪರ್ಯಾಯ ಉದ್ಯೋಗವಾಗಿ ಹೋಂ ಸ್ಟೇ ಗಳನ್ನು ನಿರ್ಮಿಸಿ ಆರ್ಥಿಕವಾಗಿಯೂ ಒಂದಷ್ಟು ಲಾಭ ಗಳಿಸುತಿದ್ದರು. ಆದರೆ ಕರೋನಾದಿಂದಾಗಿ ವ್ಯಾಪಾರ ವಹಿವಾಟು ಕುಸಿದೇ ಹೋಗಿತ್ತು. ಮತ್ತೊಂದೆಡೆ ಕೊಡಗಿನ ಜೀವ ನಾಡಿಯಾಗಿರುವ ಕಾಫಿ ಮತ್ತು ಕರಿಮೆಣಸಿನ ದರವೂ ಕುಸಿದಿತ್ತು. ಈ ಸಮಯದಲ್ಲಿ ಕೈ ಹಿಡಿದಿದ್ದು ಆತಿಥ್ಯ ಉದ್ಯಮ. ಇದೀಗ ಕೊಡಗಿನ ಪ್ರಮುಖ ತಾಣಗಳಾದ ಕಾವೇರಿ ನಿಸರ್ಗ ಧಾಮ, ದುಬಾರೆ ಎಲಿಫೆಂಟ್ ಕ್ಯಾಂಪ್ ಮತ್ತು ಮಡಿಕೇರಿಯ ರಾಜಾ ಸೀಟ್ ನಲ್ಲಿ ಪ್ರವಾಸಿಗರ ಕಲರವ ಕೇಳಿ ಬರುತಿದ್ದು ಪ್ರವಾಸೋದ್ಯಮ ಸಹಜ ಸ್ಥಿತಿಗೆ ಮರಳುತ್ತಿದೆ. ಹೋಂ ಸ್ಟೇ ಗಳ ಬುಕಿಂಗ್ ಗಳೂ ಹೆಚ್ಚಾಗುತ್ತಿವೆ.
ಕೊಡಗಿಗೆ ಬರುವ ಬಹುತೇಕ ಪ್ರವಾಸಿಗರು ನೀರಿನಲ್ಲಿ ಆಟವಾಡಲು , ರಿವರ್ ರ್ಯಾಫ್ಟಿಂಗ್ ಮಾಡಲು ಹಾತೊರೆಯುತ್ತಾರೆ. ಆದರೆ ಸಾಹಸ ಪ್ರಿಯರು ಮತ್ತು ಯುವ ಜನಾಂಗ ಹೆಚ್ಚಾಗಿ ಬಯಸುವುದು ಚಾರಣವನ್ನು. ಈ ಬೆಟ್ಟ ಗುಡ್ಡಗಳಿಂದ ಕೂಡಿರುವ ಜಿಲ್ಲೆ ಚಾರಣಕ್ಕೆ ಹೇಳಿ ಮಾಡಿಸಿದಂತಿದೆ. ಅಷ್ಟೇ ಅಲ್ಲ ಚಾರಣ ಪ್ರಿಯರ ಸ್ವರ್ಗವೆಂದೂ ಕರೆಸಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಪ್ರವಾಸಿಗರು ಮತ್ತು ಸ್ಥಳೀಯರು ಚಾರಣ ಮಾಡುತ್ತಿದ್ದಾದರೂ ಅದಕ್ಕೆ ಸರ್ಕಾರದ ಅಧಿಕೃತತೆ ಇರಲಿಲ್ಲ, ಹೊರ ಜಿಲ್ಲೆ ದೂರದ ಊರುಗಳಿಂದ ಬರುವ ಪ್ರವಾಸಿಗರು ಚಾರಣಕ್ಕೆ ಹಾತೊರೆಯುತಿದ್ದರು. ಅದರೆ ಅವರಿಗೆ ಸೂಕ್ತ ಮಾರ್ಗದರ್ಶನ ಮತ್ತು ಅವಕಾಶ ಇರಲಿಲ್ಲ . ಇದೀಗ ಅರಣ್ಯ ಇಲಾಖೆಯು ಅಧಿಕೃತವಾಗಿಯೇ ಚಾರಣ ಸೌಲಭ್ಯ ಕಲ್ಪಿಸಿಕೊಡಲು ಮುಂದಾಗಿದೆ. ಅರಣ್ಯ ಇಲಾಖೆಯ ಈ ಕ್ರಮಕ್ಕೆ ಜಿಲ್ಲೆಯ ಜನತೆಯಿಂದ ಮತ್ತು ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೊಡಗಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರು ಮುತುವರ್ಜಿ ವಹಿಸಿ ಜಿಲ್ಲೆಯ ಬೆಟ್ಟ ಗುಡ್ಡಗಳನ್ನು ಚಾರಣಿಗರಿಗೆ ಮುಕ್ತಗೊಳಿಸಿದ್ದಾರೆ. ೧೦ ಚಾರಣಿಗರ ಗುಂಪೊಂದನ್ನು ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಮಾರ್ಗದರ್ಶಿಸಲಿದ್ದು ಅವರಿಗೆ ರೂ 500 ‘ಗೈಡ್’ ಶುಲ್ಕವೆಂದು ನಿಗದಿಪಡಿಸಲಾಗಿದೆ. ಕೊಡಗಿನಲ್ಲಿ ಅನೇಕ ಚಾರಣ ತಾಣಗಳಿವೆ. ಆದರೆ, ಕೈ ಎಣಿಕೆಗಿಂತ ಕಡಿಮೆ ತಾಣಗಳು ಚಾರಣಿಗರಿಗೆ ಪರಿಚಯವಾಗಿವೆ. ಇಲಾಖೆಯಿಂದ ಸುಮಾರು 14 ಅಭಯಾರಣ್ಯ ಹಾಗೂ ಇತರ ಅರಣ್ಯ ಚಾರಣಗಳನ್ನು ನಾವೀಗ ಗುರುತಿಸಿದ್ದು, ಈ ಎಲ್ಲಾ ತಾಣಗಳ ಸಾಕ್ಷ್ಯ ಚಿತ್ರಗಳನ್ನು ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುತ್ತೇವೆ, ಎಂದು ಪ್ರಭಾಕರನ್ ಹೇಳಿದ್ದಾರೆ. ಇದಲ್ಲದೆ, ಈ ಎಲ್ಲಾ ತಾಣಗಳಲ್ಲಿ ಚಾರಣಿಗರಿಗೆ ಮೂಲಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಯೋಜನೆಗಳನ್ನು ರೂಪುಗೊಳಿಸುತ್ತಿದೆ.
ಈ ೧೪ ತಾಣಗಳನ್ನು ಚಾರಣ ಪ್ರಿಯರಿಗೆ ಪರಿಚಯಿಸಿದ ನಂತರ, ‘ಇಕೊ ಟ್ರೇಲ್’-ಪರಿಸರ ಜಾಡು-ಮಾದರಿಯಲ್ಲಿ ಈ ತಾಣಗಳನ್ನು ಖ್ಯಾತಿಗೊಳಿಸುವ ನಿಟ್ಟಿನಲ್ಲಿ ಚಾರಣ ಪಾಸ್ಪೋರ್ಟ್ಗಳನ್ನೂ ಇಲಾಖೆ ಬಿಡುಗಡೆಗೊಳಿಸುತ್ತದೆ ಎಂದು ಪ್ರಭಾಕರನ್ ತಿಳಿಸಿದರು. ಈ ಚಾರಣ ಪಾಸ್ಪೋರ್ಟ್ನಲ್ಲಿ ಚಾರಣ ತಾಣಗಳ ಹೆಸರುಗಳು, ಶಿಖರಗಳ ಎತ್ತರ, ಕ್ರಮಿಸಬೇಕಾದ ದೂರ, ಬೇಕಾದ ಸಮಯದ ಎಲ್ಲ ಮಾಹಿತಿ ಇರಲಿದ್ದು, ಚಾರಣ ಪೂರ್ಣಗೊಂಡ ನಂತರ ಅರಣ್ಯ ಇಲಾಖೆ ಈ ಚಾರಣ ಪಾಸ್ ಪೋರ್ಟ್ ಗಳಿಗೆ ಅಧಿಕೃತ ಮೊಹರು ಒತ್ತುತ್ತದೆ. ಇದು ಚಾರಣಿಗರಿಗೆ ಇನ್ನಷ್ಟು ತಾಣಗಳನ್ನು ಅನ್ವೇಷಿಸಲು ಪ್ರೋತ್ಸಾಹ ನೀಡುತ್ತದೆ. ಅಲ್ಲದೆ, ಚಾರಣಗಳ ಪ್ರಮಾಣೀಕರಣವನ್ನೂ ಸೂಚಿಸುತ್ತದೆ.
ಇನ್ನು ಒಂದು ವಾರದಲ್ಲಿ ಎಲ್ಲಾ ಚಾರಣ ತಾಣಗಳ ಸಾಕ್ಷ್ಯ ಚಿತ್ರಗಳನ್ನು ಇಲಾಖೆ ಬಿಡುಗಡೆ ಮಾಡಲಿದೆ ಎಂದು ಪ್ರಭಾಕರನ್ ತಿಳಿಸಿದರು. ಅರಣ್ಯ ಇಲಾಖೆಯ ಈ ಕ್ರಮದಿಂದಾಗಿ ಇನ್ನಷ್ಟು ಪ್ರವಾಸಿಗರು ಚಾರಣಪ್ರಿಯರು ಜಿಲ್ಲೆಗೆ ಬರಲಿದ್ದು ಚಾರಣದ ಮಾಹಿತಿಯು ಅರಣ್ಯ ಇಲಾಖೆಯ ವೆಬ್ ಸೈಟ್ ನಲ್ಲೂ ಪ್ರಕಟಗೊಳ್ಳಲಿದೆ. ಇದರಿಂದ ಪ್ರವಾಸಿಗರು ಮೊದಲೇ ನೋಂದಾಯಿಸಿಕೊಂಡು ನಿಗದಿತ ಸಮಯಕ್ಕೆ ಆಗಮಿಸಿ ಚಾರಣವನ್ನು ಎಂಜಾಯ್ ಮಾಡಬಹುದಾಗಿದೆ. ಇದುವರೆಗೂ ಪ್ರವಾಸಿಗರಿಗೆ ಅಪರಿಚಿತವೇ ಆಗಿದ್ದ ಕೊಡಗಿನ ಬೆಟ್ಟ ಗುಡ್ಡಗಳು ಪ್ರವಾಸಿಗರಿಗೆ ತೆರೆದುಕೊಳ್ಳಲಿರುವುದು ಪ್ರವಾಸಿಗಳಿಗೂ ಜಿಲ್ಲೆಯ ಜನತೆಗೂ ಅನುಕೂಲಕರವೇ ಆಗಲಿದೆ.