ಸಮಾಜದ ಸ್ವಾಸ್ಥ್ಯ ಹಾಳುಗೆಡುವುದರಲ್ಲಿ ಕರೋನಾಕ್ಕಿಂತಾ ಸಾಮಾಜಿಕ ಜಾಲತಾಣಗಳೇ ಮುಂದಿವೆ. ಅದು ಎಷ್ಟರ ಮಟ್ಟಿಗೆ ಎಂದರೆ ಗಾಳಿಯಲ್ಲೂ ಕರೋನಾ ಹರಡುತ್ತಂತೆ. ಧರ್ಮಸ್ಥಳದ ದೀಪ ಆರಿಬಿಟ್ಟಿದೆಯಂತೆ, ಆಘಾತ, ಅಪಚಾರ..!!! ಇಂತಹ ವೈರಲ್ ಪೋಸ್ಟ್ ಗಳ ನಡುವೆ ಪತ್ರಿಕೋದ್ಯಮವನ್ನ ಜೀವಂತ ಇಟ್ಟಿದ್ದ ದಿನಪತ್ರಿಕೆಗಳಿಗೂ ಕುತ್ತು ಬಂದಿದೆ.
ಮನೆಯಲ್ಲೇ ಆರಾಮಾಗಿ ಪತ್ರಿಕೆಗಳನ್ನ ಓದುತ್ತಾ ಕುಳಿತುಕೊಳ್ಳಬೇಕಿದ್ದ ಜನರು ಅವುಗಳ ಗೋಜಿಗೇ ಹೋಗುತ್ತಿಲ್ಲ. ಪತ್ರಿಕೆಯಿಂದ ಕರೋನಾ ವೈರಸ್ ಹರಡುತ್ತೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ವೈರಲ್ ಮಾಡಿದ ಪೋಸ್ಟ್ ನಿಂದ ಸಾಕಷ್ಟು ಹೊಡೆತ ಬಿದ್ದಿದೆ. ಇಂಥಹ ಸಮಯದಲ್ಲಿ ಲಾಠಿ ಹಿಡಿದು ಜನರನ್ನ ಬೆದರಿಸುತ್ತಿರುವ ಪೊಲೀಸರು ಪೇಪರ್ ಹಾಕುವ ಹುಡುಗರನ್ನ, ವಿತರಕರನ್ನ ಬೆದರಿಸುತ್ತಿದ್ದಾರೆ. ಪೇಪರ್ ವಾಹನಗಳನ್ನ ತಡೆದು ತೊಂದರೆ ನೀಡಿದ್ದಾರೆ. ವಾರ್ತಾ ಇಲಾಖೆಯ ಸುತ್ತೋಲೆಯಲ್ಲೇ ಸ್ಪಷ್ಟವಾಗಿ ನಿಯಮಗಳನ್ನ ಪಾಲಿಸಲು ಕೋರಲಾಗಿದೆ. ದುರಂತ ಎಂದರೆ ಯಾವುದೇ ರಾಜ್ಯ ಸರ್ಕಾರ ಪತ್ರಿಕೆಗಳಿಗೆ ಬೆಂಬಲವಾಗಿ ನಿಂತಿಲ್ಲ.
ಕಿರಾಣಿ ಅಂಗಡಿಯಿಂದ ಪತ್ರಿಕೆ ಕೊಂಡು ಓದುತ್ತಿದ್ದ ಜನರಂತೂ ಬೀದಿಗೆ ಬರುತ್ತಿಲ್ಲ. ಕೆಲವರು ಪಟ್ಟಣ ತೊರೆದು ಹಳ್ಳಿಗಳತ್ತ ಮುಖ ಮಾಡಿದ್ದರಿಂದ ಒಂದು ತಿಂಗಳು ಪೇಪರ್ ಹಾಕಬೇಡಿ ಎಂದಿದ್ದಾರೆ. ಉಳಿದ ಓದುಗರಲ್ಲಿ ಅರ್ಧದಷ್ಟು ಜನರಿಗೆ ಕರೋನಾ ಭೀತಿ. ಇಂಥಹ ಪರಿಸ್ಥಿತಿಯಲ್ಲಿ ಪತ್ರಿಕೆ ಮುದ್ರಣ ಮಾಡುವುದನ್ನ ತಾತ್ಕಾಲಿಕವಾಗಿ ನಿಲ್ಲಿಸುವ ನಿಟ್ಟಿನಲ್ಲಿ ಹಲವು ಮೀಡಿಯಾ ಹೌಸ್ ಗಳು ಚಿಂತಿಸಿವೆ.
ನ್ಯೂಸ್ ಚಾನೆಲ್ ಗಳ ಭರಾಟೆ ಹಾಗೂ ಡಿಜಿಟಲ್ ಕ್ರಾಂತಿ ಯಲ್ಲೂ ಓದುಗರನ್ನ ಹಿಡಿದಿಟ್ಟುಕೊಂಡು ಪತ್ರಿಕೋದ್ಯಮ ಸತ್ವ ಉಳಿಸಿಕೊಂಡಿದ್ದ ಪತ್ರಿಕೆಗಳಿಗೆ ಈಗ ಸಂಕಷ್ಟದ ಕಾಲ. 1995ರಲ್ಲಿ ಆರಂಭವಾದ ಔಟ್ ಲುಕ್ ಇಂಗ್ಲೀಷ್ ಮ್ಯಾಗಜೀನ್ ತನ್ನ ಮುದ್ರಣವನ್ನ ಅಧಿಕೃತವಾಗಿ ನಿಲ್ಲಿಸಿದೆ. ಔಟ್ ಲುಕ್ ಮ್ಯಾಗಜೀನ್ ಸಂಪಾದಕ ಆರಿಂದಮ್ ಮುಖರ್ಜಿ ಈ ಕುರಿತು ಬರೆದುಕೊಂಡಿದ್ದಾರೆ. ಈಗ ಪತ್ರಿಕೋದ್ಯಮಕ್ಕೂ ಸಂಕಷ್ಟದ ಕಾಲ. ನಮಗೆಲ್ಲಾ ದಿಕ್ಕುತೋಚದಂತಾಗಿದೆ. ನಮ್ಮದು ಗುಹೆಯೊಳಗಿನ ಪಯಣ , ಗುಹೆಯಾಚೆ ತುದಿಯಲ್ಲಿನ ಆಶಾಕಿರಣಕ್ಕಾಗಿ ಹಂಬಲಿಸುತ್ತಿದ್ದೇವೆ ಎಂಬ ನಿರೀಕ್ಷೆಯಲ್ಲಿದ್ದೇವೆ. ನಮ್ಮ ಓದುಗರಿಗೆ ಯಾವುದೇ ತೊಂದರೆಯಾಗಬಾರದು. 21 ದಿನಗಳ ವನವಾಸದಲ್ಲಿ ಮುದ್ರಣದಿಂದ ಪ್ರಸರಣದವರೆಗೆ ಎಲ್ಲವೂ ಸಮಸ್ಯೆಯಾಗಿದೆ. ದೇಶಾದ್ಯಂತ ಹಲವು ಪತ್ರಿಕೆಗಳ ನಿಯತಕಾಲಿಕೆಗಳು ತಾತ್ಕಾಲಿಕವಾಗಿ ಮುದ್ರಣ ನಿಲ್ಲಿಸಿವೆ. ನಾವೂ ಸಹ ಔಟ್ ಲುಕ್ ಮುದ್ರಣವನ್ನ ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ. ಹಾಗೂ ನಿಯತಕಾಲಿಕೆಯ ಆನ್ ಲೈನ್ ಆವೃತ್ತಿ ಓದಬಹುದು ಎಂದು ತಮ್ಮ ಓದುಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಹಾಗಾದರೆ ಪತ್ರಕರ್ತರ ನೌಕರಿಗೆ ಕುತ್ತು ಬರುತ್ತಾ..? ಸದ್ಯಕ್ಕಿಲ್ಲ ಅಂತಾರೆ. ಕನ್ನಡದ ಕೆಲವು ಪತ್ರಿಕೆಗಳ ಪತ್ರಕರ್ತರು. ಆದರೆ ಸಮೂಹ ಸಂಸ್ಥೆಗಳ ಮಾಲೀಕರಿಗೆ ನಡುಕ ಉಂಟಾಗಿದೆ. ಒಂದು ಹಂತಕ್ಕೆ ಪತ್ರಿಕೆಗಳ ಮುದ್ರಣ ಮಾಡುವುದೇ ಬೇಡ ಎಂಬ ಲೆಕ್ಕಾಚಾರಕ್ಕೂ ಬಂದಿದ್ದಾರಂತೆ.

ಕೊಡಗು, ಮಂಗಳೂರು, ಶಿವಮೊಗ್ಗ , ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ, ಕಲಬುರಗಿ, ಮೈಸೂರು ಇಲ್ಲೆಲ್ಲಾ ಪತ್ರಿಕೆಗಳ ಪ್ರಸರಣವೇ ಕುಗ್ಗಿದೆ. ಸಾಕಷ್ಟು ಪತ್ರಿಕೆಗಳು ಬಸ್ ನಿಲ್ದಾಣದ ಗಡಿ ದಾಟಲು ಹರಸಾಹಸ ಪಡುತ್ತಿವೆ. ಪೊಲೀಸರೂ ಕೂಡ ಮುಖ ಮೂತಿ ನೋಡದೇ ಲಾಠಿ ಎತ್ತಿರುವುದು ಕೂಡ ಬಿಕ್ಕಟ್ಟಿಗೆ ಕಾರಣವಾಗಿದೆ.
ಪ್ರಧಾನಿ ಮೋದಿ ಕರೋನಾ ಜನತಾಕರ್ಫ್ಯೂ ವಿಧಿಸಿದ ದಿನದಂದೇ ಪತ್ರಿಕೆಗಳ ಮಾಲೀಕರ ಉಸಿರು ಲಬ್ ಡಬ್ ಎನ್ನತೊಡಗಿತ್ತು. ಪುನಃ ಪ್ರಧಾನಿಗಳು 21 ದಿನ ಲಾಕ್ ಡೌನ್ ಎಂದಾಗ ಸಮಸ್ಯೆ ಉಲ್ಭಣಿಸಿತು. ಒಳಗೇ ಮುಸಿ ಮುಸಿ ಮಾಡುತ್ತಿದ್ದ ಎಲ್ಲಾ ಕನ್ನಡ ಪತ್ರಿಕೆಗಳು ಒಂದೇ ಸಂಪಾದಕೀಯವನ್ನ ಬರೆಸಿ ಜನರಿಗೆ ಮನವರಿಕೆ ಮಾಡಲು ಪ್ರಯತ್ನಪಟ್ಟವು. ಆದರೆ ಪತ್ರಿಕೆ ಸಾಗಾಟಕ್ಕೂ ತೊಂದರೆಯಾಗಿತ್ತಲ್ಲ ಅದನ್ನ ಸರಿಪಡಿಸಲಾಗಲಿಲ್ಲ. ಕನ್ನಡ ಪತ್ರಿಕೆ ಹಾಗೂ ಅದರ ಆಂಗ್ಲ ಆವೃತ್ತಿಗಳು ಮುದ್ರಣ ಹಾಗೂ ಪ್ಯಾಕಿಂಗ್ ವಿಡಿಯೋ ಚಿತ್ರೀಕರಿಸಿ ನಾವು ಸುರಕ್ಷಿತ ಎಂದು ಸಾರಿದವು. ಆದರೂ ಪತ್ರಿಕೆಗಳ ಪ್ರಸರಣಕ್ಕೆ ಕರೋನಾ ಬಲವಾದ ಪೆಟ್ಟು ನೀಡಿದೆ.
ಬಾಂಬೆ ವೃತ್ತಪತ್ರಿಕೆ ವಿತರಕರ ಸಂಘ ಹಾಗೂ ಪತ್ರಿಕಾ ಸಂಸ್ಥೆಗಳು ಮುಂಬೈ ಎಡಿಷನ್ ಮುದ್ರಣ ಹಾಗೂ ಪ್ರಸರಣ ನಿಲ್ಲಿಸಿವೆ. ಟೈಂಸ್ ಆಫ್ ಇಂಡಿಯಾ ಮುಂಬೈ ಆವೃತ್ತಿ, ಮಿಡ್ ಡೇ ಮುದ್ರಣ ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ದೆಹಲಿಯಲ್ಲಿ ಪತ್ರಿಕೆಗಳು ಪ್ರತಿದಿನ ಪ್ರಸರಣವಾಗುತ್ತಿಲ್ಲ, ಗಾಜಿಯಾಬಾದ್ ಹಾಗೂ ನೋಯ್ಡಾದಲ್ಲಿ ಸಾಕಷ್ಟು ಪತ್ರಿಕೆಗಳ ಮುದ್ರಣಕ್ಕೆ ಬ್ರೇಕ್ ಬಿದ್ದಿದೆ. ಕೆಲವೆಡೆ ಮುದ್ರಣಗೊಂಡ ಪತ್ರಿಕೆಗಳ ಬಂಡಲ್ ಗಳನ್ನ ವಿತರಕರು ಪಿಕ್ ಅಪ್ ಪಾಯಿಂಟ್ ನಿಂದ ಎತ್ತಿಕೊಳ್ಳುತ್ತಿಲ್ಲ. ಲುಧಿಯಾನದಲ್ಲಿ ಒಂದೂ ಪತ್ರಿಕೆ ಸಿಗುತ್ತಿಲ್ಲ. ಉತ್ತರ ಪ್ರದೇಶದಲ್ಲಿ ಮಾತ್ರ ಪತ್ರಿಕೆಗಳು ಕೊಂಚ ನಿಟ್ಟುಸಿರು ಬಿಟ್ಟಿವೆ.
ಕನ್ನಡ ಪತ್ರಿಕೆಗಳು ಕೂಡ ಒಂದು ವಾರದಲ್ಲಿ ತಮ್ಮ ನಿರ್ಧಾರಗಳನ್ನ ಪ್ರಕಟಿಸಲಿವೆ. ಕೆಲವು ದಿನಗಳ ಕಾಲ ಪಿಡಿಎಫ್ ಹಾಗೂ ಡಿಜಿಟಲ್ ಕಾಪಿಗಳ ಮೂಲಕ ಸುದ್ದಿಗಳನ್ನ ಓದಬೇಕಿದೆ. ಶಿವಮೊಗ್ಗದಲ್ಲಿ ಕನಿಷ್ಟ ನಲವತ್ತು ಲೋಕಲ್ ಪತ್ರಿಕೆಗಳಿದ್ದವು, ಅವುಗಳಲ್ಲಿ ಸಾಲಷ್ಟು ಕೇವಲ ಹತ್ತಿಪ್ಪತ್ತು ಪತ್ರಿಕೆ ಮುದ್ರಿಸುತ್ತಾ ಸರ್ಕಾರಿ ಜಾಹೀರಾತು ನಂಬಿಕೊಂಡಿದ್ದವು ಅವೆಲ್ಲಾ ಈಗ ಸ್ಥಗಿತ ಮಾಡಲೇಬೇಕು. ಮೈಸೂರಿನ ಪ್ರಾದೇಶಿಕ ಪತ್ರಿಕೆಗಳಾದ ಮೈಸೂರು ಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರು ವಿತರಣೆ ಸ್ಥಗಿತಗೊಂಡಿದೆ. ಈ ವೀಕೆಂಡ್ ನಂತರ ಸಾಕಷ್ಟು ಪತ್ರಿಕೆಗಳು ಅಧಿಕೃತವಾಗಿಯೇ ಘೋಷಿಸಲಿವೆ.
ಪತ್ರಿಕೆಗಳ ಕಥೆ ಇಷ್ಟಾದರೆ ಆಸೆಗಣ್ಣಿನಿಂದ ನೋಡಿದ್ದ ಟಿವಿ ಚಾನೆಲ್ ಗಳೂ ಸಹ ನಿರೀಕ್ಷಿತ TRP ಸಿಗದೇ ಚಿಂತಿಸತೊಡಗಿವೆ. ಜನರೆಲ್ಲಾ ಮನೆ ಸೇರಿ ಟಿವಿಯನ್ನೇ ನೋಡುತ್ತಿದ್ದಾರೆ ಎಂಬುದು ಸದ್ಯಕ್ಕೆ ಹುಸಿಯಾಗಿದೆ. ಮುಂದಿನ ಎರಡು ವಾರ ಪತ್ರಿಕಗೆಳ ಅನುಪಸ್ಥಿತಿಯಲ್ಲಿ ಪ್ರಾಬಲ್ಯ ಸಾಧಿಸಿಕೊಳ್ಳಬಹುದು. ಆದರೆ ಅವುಗಳಿಗಿರುವ ದೊಡ್ಡ ಸಮಸ್ಯೆ ಸಾಮಾಜಿಕ ಜಾಲತಾಣಗಳು. ಏನೇ ಆಗಲಿ ಆದಷ್ಟು ಬೇಗ ಕರೋನಾ ಗುಮ್ಮ ಮರೆಯಾಗಿ ಮೌಲ್ಯಾಧಾರಿತ ಪತ್ರಿಕೋದ್ಯಮ ಉಳಿಸಿಕೊಂಡಿರುವ ಪತ್ರಿಕೆಗಳು ಚಿಗುರಿಕೊಳ್ಳಲಿ ಎಂಬುದೇ ನಮ್ಮ ಆಶಯ.