ಕಳೆದ ಸುಮಾರು ಹತ್ತು ದಿನಗಳಿಂದ ರಾಜ್ಯವನ್ನು ಇನ್ನಿಲ್ಲದ ಆತಂಕಕ್ಕೆ ತಳ್ಳಿರುವ ಮಾರಕ ಕರೋನಾ ವೈರಸ್ (ಕೋವಿಡ್-19) ಇದೀಗ ರಾಜ್ಯದಲ್ಲಿ ಸರ್ಕಾರಿ ಘೋಷಿತ ಬಂದ್ ವಾತಾವರಣಕ್ಕೂ ಕಾರಣವಾಗಿದೆ. ಕರೋನಾ ವೈರಸ್ ಸೋಂಕು ತಗುಲಿ ಕಲಬುರ್ಗಿಯಲ್ಲಿ 76 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಕರೋನಾ ವೈರಸ್ ಹರಡದಂತೆ ತಡೆಯುವ ಉದ್ದೇಶದಿಂದ ಮುಂದಿನ ಒಂದು ವಾರ ಕಾಲ ಶಾಪಿಂಗ್ ಮಾಲ್, ಥಿಯೇಟರ್ ಗಳನ್ನು ಬಂದ್ ಮಾಡುವಂತೆ ಸೂಚಿಸಿದೆ. ಪರೀಕ್ಷೆ ಹೊರತುಪಡಿಸಿ ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳಿಗೆ ರಜೆ ಘೋಷಿಸಿದೆ. ಸಮ್ಮರ್ ಕ್ಯಾಂಪ್, ನೈಟ್ ಕ್ಲಬ್, ಸ್ಪೋರ್ಟ್ಸ್ ಕ್ಲಬ್, ಜಿಮ್, ಸ್ವಿಮ್ಮಿಂಗ್ ಫೂಲ್ ಗಳನ್ನು ಮುಚ್ಚುವಂತೆ ಸೂಚಿಸಿವೆ. ಮದುವೆ ಮತ್ತಿತರ ಕಾರ್ಯಕ್ರಮಗಳನ್ನು ಸರಳವಾಗಿ ಆಚರಿಸುವ ಮೂಲಕ ಜನಸಂದಣಿ ಹೆಚ್ಚಾಗದಂತೆ ನೋಡಿಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಜಾತ್ರೆಗಳನ್ನು ನಿಷೇಧಿಸಲಾಗಿದೆ. ಸಂಭ್ರಮಾಚರಣೆಗಳ ಮೇಲೆ ನಿರ್ಬಂಧ ಹೇರಿದೆ. ಪರಸ್ಪರ ಭೇಟಿಯಾದಾಗ ಹಸ್ತಲಾಘವದ ಬದಲು ಭಾರತೀಯ ಸಂಸ್ಕೃತಿಯಾದ ನಮಸ್ತೆ ಹೇಳುವಂತೆ ಮುಖ್ಯಮಂತ್ರಿಗಳೇ ಸಲಹೆ ಮಾಡಿದ್ದಾರೆ.
ಹಾಗೆಂದು ಸರ್ಕಾರ ಈ ಕ್ರಮ ಕೈಗೊಂಡಿರುವುದು ಜನರಲ್ಲಿ ಕರೋನಾ ಬಗ್ಗೆ ಆತಂಕ ಹೆಚ್ಚಿಸುವುದಕ್ಕಲ್ಲ. ಜನ ಜಾಗೃತರಾಗಿ ತಾವೇ ಮುನ್ನೆಚ್ಚರಿಕೆ ವಹಿಸಿಕೊಳ್ಳುವಂತೆ ಮಾಡುವ ಉದ್ದೇಶದಿಂದ ಈ ಕೆಲಸ ಮಾಡಿದೆ. ಏಕೆಂದರೆ, ಕರೋನಾ ಸೋಂಕಿನ ಭೀತಿ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದು, ಜನ ಆತಂಕದಿಂದ ಕಾಲ ಕಳೆಯುವಂತಾಗಿದೆ. ಈ ಆತಂಕವನ್ನು ನಿವಾರಿಸಬೇಕಾದರೆ ಜನ ಹೆಚ್ಚಾಗಿ ಸೇರುವ ಶಾಪಿಂಗ್ ಮಾಲ್, ಬಾರ್ ಅಂಡ್ ರೆಸ್ಟೋರೆಂಟ್. ಸಿನಿಮಾ ಥಿಯೇಟರ್, ವಿಶ್ವ ವಿದ್ಯಾಲಯಗಳು, ಐಟಿ-ಬಿಟಿ ಪಾರ್ಕ್ ಮತ್ತಿತರ ಪ್ರದೇಶಗಳನ್ನು ನಿಯಂತ್ರಿಸಬೇಕಾಗುತ್ತದೆ. ಅಲ್ಲಿ ಜನರ ಓಡಾಟ ಕಡಿಮೆಯಾದರೆ ಕ್ರಮೇಣ ಜನರ ಆತಂಕವೂ ಕಡಿಮೆಯಾಗುತ್ತದೆ ಎಂಬ ಉದ್ದೇಶದಿಂದ ಸರ್ಕಾರ ಈ ರೀತಿಯ ಕಡಕ್ ನಿರ್ದೇಶನಗಳನ್ನು ನೀಡಿದೆ.
ಏಕೆಂದರೆ, ಕರೋನಾ ವೈರಸ್ ಇನ್ನೂ ರಾಜ್ಯದಲ್ಲಿ ಹರಡಿಲ್ಲ. ಅದು ಸಾಂಕ್ರಾಮಿಕ ಕಾಯಿಲೆಯಾದರೂ ರೋಗ ಲಕ್ಷಣ ಕಾಣಿಸಿಕೊಂಡವರನ್ನು ಪ್ರತ್ಯೇಕವಾಗಿ ಇಡುವ ಮೂಲಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಿದೇಶ ಸೇರಿದಂತೆ ವಿವಿಧೆಡೆಗಳಿಂದ ವಿಮಾನದ ಮೂಲಕ ಬರುವವರನ್ನು ಪರೀಕ್ಷಿಸಿ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದರೆ ಮಾತ್ರ ಜನರೊಂದಿಗೆ ಬೆರೆಯಲು ಬಿಡಲಾಗುತ್ತಿದೆ. ಆ ಮೂಲಕ ಕರೋನಾ ವೈರಸ್ ಸಾಂಕ್ರಾಮಿಕವಾಗದಂತೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ಸರ್ಕಾರ ತೆಗೆದುಕೊಂಡಿದೆ. ಆದರೂ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಂದು ವಾರಗಳ ಕಾಲ ಕೆಲವು ನಿರ್ಬಂಧಗಳನ್ನು ಹೇರಲಾಗಿದೆ. ಪರಿಸ್ಥಿತಿ ಸುಧಾರಣೆಯಾದರೆ ಒಂದು ವಾರದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ.

ಚೀನಾ ದೇಶದ ವುಹಾನ್ ಪ್ರಾಂತ್ಯದಲ್ಲಿ ಮೊಟ್ಟಮೊದಲ ಬಾರಿಗೆ ಕಾಣಿಸಿಕೊಂಡ ಕರೋನಾ ವೈರಸ್ ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಹಬ್ಬಿ ನೂರಾರು ಜೀವಗಳನ್ನು ಬಲಿತೆಗೆದುಕೊಂಡಿದೆ. ಲಕ್ಷಾಂತರ ಮಂದಿಯನ್ನು ಅಸ್ವಸ್ಥರನ್ನಾಗಿಸಿದೆ. ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕರೋನಾ ವೈರಸ್ ಸೋಂಕಿನ ಪ್ರಮಾಣ ತೀರಾ ಕಡಿಮೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳು ಕಾರಣ. ದೇಶದಲ್ಲಿ ಒಟ್ಟು 79 ಮಂದಿಗೆ ಸೋಂಕು ತಗುಲಿದ್ದರೆ, ರಾಜ್ಯದಲ್ಲಿ ಕಲಬುರ್ಗಿಯ ಮೃತ ವ್ಯಕ್ತಿ ಸೇರಿದಂತೆ ಆರು ಮಂದಿಯಲ್ಲಿ ಕರೋನಾ ವೈರಸ್ ಕಾಣಿಸಿಕೊಂಡಿದೆ. ವಿಶೇಷ ಎಂದರೆ ಒಂದು ಪ್ರಕರಣದಲ್ಲಿ ವಿದೇಶದಿಂದ ಬರುವಾಗ ಕರೋನಾ ವೈರಸ್ ಹೊತ್ತುಕೊಂಡು ಬಂದ ವ್ಯಕ್ತಿಯ ಕುಟುಂಬ ಸದಸ್ಯರನ್ನು ಹೊರತುಪಡಿಸಿ ಉಳಿದೆಲ್ಲಾ ಪ್ರಕರಣಗಳು ವಿದೇಶದಿಂದ ಬಂದವರಲ್ಲಿ ಮಾತ್ರ ಪತ್ತೆಯಾಗಿದೆ. ಅಂದರೆ, ಪ್ರಸ್ತುತ ಕರೋನಾ ಸೋಂಕು ನಿಯಂತ್ರಣದಲ್ಲಿದೆ ಎಂಬುದು ಅರ್ಥ.
ಮುಖ್ಯಮಂತ್ರಿಗಳೇ ಮಧ್ಯಪ್ರವೇಶಿಸಿದ್ದೇಕೆ?
ವಿಶ್ವಕ್ಕೆ ಕರೋನಾ ಸೋಂಕು ಹಬ್ಬಲು ಕಾರಣವಾದ ಚೀನಾದಲ್ಲಿ ಅದು ಸಾವಿರಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಬಾಧಿಸಿತ್ತು. ಇದೀಗ ಅಲ್ಲಿ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದು, ಹೊಸದಾಗಿ ಎಂಟು ಮಂದಿಯಲ್ಲಿ ಮಾತ್ರ ಕಾಣಿಸಿಕೊಂಡಿದೆ. ಹೀಗಿರುವಾಗ ರಾಜ್ಯದಲ್ಲಿ ಜನ ಮುನ್ನೆಚ್ಚರಿಕೆ ವಹಿಸಿ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿದರೆ ಅದನ್ನು ನಿಯಂತ್ರಿಸುವುದು ಕಷ್ಟದ ಕೆಲಸವೇನೂ ಅಲ್ಲ. ಈ ವಿಚಾರದಲ್ಲಿ ರಾಜ್ಯದ ಆರೋಗ್ಯ ಇಲಾಖೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಆರೋಗ್ಯ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ಒಟ್ಟಾಗಿ ಇಲಾಖೆ ಅಧಿಕಾರಿಗಳ ಜತೆ ಸತತ ಸಭೆಗಳನ್ನು ನಡೆಸುವ ಮೂಲಕ ಸೂಕ್ತ ನಿರ್ದೇಶನಗಳನ್ನು ನೀಡುತ್ತಿದ್ದಾರೆ. ಹೀಗಿದ್ದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಧ್ಯಪ್ರವೇಶಿಸಿದ್ದಾರೆ. ಏಕೆಂದರೆ, ಆರೋಗ್ಯ ಇಲಾಖೆ ಸಾಕಷ್ಚು ಕ್ರಮಗಳನ್ನು ಕೈಗೊಂಡಿದ್ದರೂ ಸಂವಹನದಲ್ಲಿ ಆಗಿರುವ ಸಮಸ್ಯೆ ಕರೋನಾ ಕುರಿತ ಭೀತಿಯನ್ನು ಹೆಚ್ಚುವಂತೆ ಮಾಡಿದ್ದು.
ಯಾವುದೇ ರೋಗ, ಸಾಂಕ್ರಾಮಿಕ ಕಾಯಿಲೆಗಳಿಗಲಿ, ಜನರಲ್ಲಿ ಭೀತಿ ದೂರ ಮಾಡಿ ಧೈರ್ಯ ತುಂಬಿದರೆ ಅರ್ಧ ಕಾಯಿಲೆ ವಾಸಿಯಾದಂತೆ. ಮುಖ್ಯಮಂತ್ರಿಗಳೇ ಮುಂದೆ ನಿಂತು ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ ಎಂದರೆ ಜನರಿಗೂ ಧೈರ್ಯ ಬರುತ್ತದೆ. ಮೇಲಾಗಿ ಸಂವಹನಕ್ಕೂ ಯಾವುದೇ ಸಮಸ್ಯೆ ಆಗುವುದಿಲ್ಲ. ಇದು ಕೂಡ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಲು ಕಾರಣ. ಸದನದಲ್ಲೂ ಕರೋನಾ ವಿಚಾರ ಬಂದಾಗ ಮುಖ್ಯಮಂತ್ರಿಗಳೇ ಅಂತಿಮವಾಗಿ ಉತ್ತರ ನೀಡುವ ಮೂಲಕ ಪ್ರತಿಪಕ್ಷ ಸದಸ್ಯರನ್ನೂ ಸಮಾಧಾನಪಡಿಸಿದರು. ಅದೇ ರೀತಿ ಆತಂಕದಲ್ಲಿರುವ ರಾಜ್ಯದ ಜನರನ್ನೂ ಸಮಾಧಾನಪಡಿಸಲು ಅವರು ಮುಂದಾಗಿದ್ದಾರೆ.

ಕರೋನಾ ಬಗ್ಗೆ ಆತಂಕ ಬೇಡ, ಮುನ್ನೆಚ್ಚರಿಕೆ ಸಾಕು
ಕರೋನಾ ವೈರಸ್ ಸೋಂಕು ತಗುಲಿದ ಕಲಬುರಗಿಯ ವ್ಯಕ್ತಿ ಮೃತಪಟ್ಟಿದ್ದಾರಾದರೂ ಅವರು ದುಬೈನಿಂದ ಹಿಂತಿರುಗಿದ ಮೇಲೆ ರಾಜ್ಯದ ಬದಲು ನೆರೆಯ ಹೈದರಾಬಾದ್ ನಲ್ಲಿ ಚಿಕಿತ್ಸೆ ಪಡೆದಿದ್ದರು. ಅಲ್ಲಿ ಕರೋನಾ ಬದಲು ಸಾಮಾನ್ಯ ರೋಗಿಯಂತೆ ಚಿಕಿತ್ಸೆಗೊಳಗಾಗಿದ್ದರು. ಈ ಕಾರಣದಿಂದಲೇ ಅವರು ಜೀವ ಕಳೆದುಕೊಳ್ಳುವಂತಾಯಿತು. ಇನ್ನುಳಿದಂತೆ ಕರೋನಾ ಸೋಂಕು ತಗುಲಿರುವ ಇತರೆ ಐವರು ಚೇತರಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಕರೋನಾ ಸೋಂಕು ತಗುಲಿದ್ದ ವ್ಯಕ್ತಿಯ ಜತೆಗೆ ನಿಕಟ ಸಂಪರ್ಕದಲ್ಲಿದ್ದ ಅವರ ಕುಟುಂಬದವರಿಗೆ ಮಾತ್ರ ಸೋಂಕು ತಗುಲಿದ್ದು, ಉಳಿದ ರೋಗಿಗಳಿಂದ ಯಾರಿಗೂ ಸೋಂಕು ತಗುಲಿಲ್ಲ. ಹೀಗಾಗಿ ಮುನ್ನೆಚ್ಚರಿಕೆ ವಹಿಸಿದರೆ ಕರೋನಾದಿಂದ ಜೀವ ಕಳೆದುಕೊಳ್ಳಬೇಕಾಗಿಲ್ಲ. ಅಷ್ಟೇ ಅಲ್ಲ, ಸೋಂಕು ಹರಡದಂತೆಯೂ ನೋಡಿಕೊಳ್ಳಬಹುದು.
ಹೀಗಾಗಿ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಆರೋಗ್ಯ ಇಲಾಖೆ ಹಲವು ಸೂಚನೆಗಳನ್ನು ನೀಡಿದೆ. ಸೋಂಕಿತರ ನೇರ ಸಂಪರ್ಕದಿಂದ ಮಾತ್ರ ಅದು ಹರಡುತ್ತದೆ. ಹೀಗಾಗಿ ಸೋಂಕಿತರಿಂದ ಸಾಧ್ಯವಾದಷ್ಟು ದೂರವಿರಬೇಕು. ಆಗಾಗ್ಯೆ ಸಾಬೂನಿನಿಂದ ಕೈ ತೊಳೆದುಕೊಳ್ಳಬೇಕು. ಸಾಧ್ಯವಾದಷ್ಟು ಸ್ಯಾನಿಟೈಸರ್ ಬಳಸಬೇಕು. ಕೈ ತೊಳೆಯದೆ ಕಣ್ಣು, ಬಾಯಿ ಮತ್ತು ಮೂಗು ಮುಟ್ಟಬಾರದು. ಜನರು ಹೆಚ್ಚಾಗಿ ಓಡಾಡುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸಬೇಕು. ಶೀತ, ನೆಗಡು, ಕೆಮ್ಮು ಮತ್ತಿತರೆ ಸಮಸ್ಯೆ ಬಂದರೆ ಹೊರಗೆ ಓಡಾಡದೆ ಮನೆಯಲ್ಲೇ ವಿಶ್ರಾಂತಿ ಪಡೆಯಬೇಕು. ಜತೆಗೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಆರೋಗ್ಯ ಇಲಾಖೆ ಹೇಳಿದೆ. ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಕರೋನಾ ಸೋಂಕಿನಿಂದ ಪಾರಾಗಬಹುದು. ಆದ್ದರಿಂದ ಈ ಬಗ್ಗೆ ಆತಂಕಗೊಳ್ಳುವ ಬದಲು ಮುನ್ನೆಚ್ಚರಿಕೆ ವಹಿಸಬೇಕು.