ಮಂಗಳೂರು ತೈಲಾಗಾರ ( MRPL- ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್) ಎರಡು ಕಾರಣಗಳಿಗಾಗಿ ಸುದ್ದಿಯಲ್ಲಿದೆ. ಒಂದನೇಯದಾಗಿ ಸರಕಾರಿ ಸ್ವಾಮ್ಯದ ತೈಲ ಸಂಸ್ಕರಣ ಕಂಪೆನಿ MRPL ಬಹುದೊಡ್ಡ ಮಟ್ಟದ ಸಾಲದ ಸುಳಿಯಲ್ಲಿ ಸಿಲುಕಿದೆ. ಎರಡನೇಯದಾಗಿ ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರಿಗೆ ಅವಕಾಶ ನೀಡುತ್ತಿಲ್ಲ ಎಂಬ ವಿವಾದ ಇದೀಗ ಕರಾವಳಿಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
MRPL 233 ಹುದ್ದೆಗಳ ನೇಮಕಾತಿ ನಡೆಸುವುದಾಗಿ ರಾಷ್ಟ್ರಮಟ್ಟದಲ್ಲಿ ಸಾರ್ವಜನಿಕವಾಗಿ ಪ್ರಕಟನೆ ಹೊರಡಿಸಿದೆ. ಅದಕ್ಕಾಗಿ ಅಕ್ಟೋಬರ್ 11 2019 ರಿಂದ ನವಂಬರ್ 10 ರವರಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆದರೆ ಹುದ್ದೆಗಳ ನೇಮಕಾತಿಯಲ್ಲಿ ಸ್ಥಳೀಯ ದಕ್ಷಿಣ ಕನ್ನಡ ಜಿಲ್ಲೆಯ ಯುವಜನರಿಗೆ ಯಾವುದೇ ಆದ್ಯತೆ, ಮೀಸಲಾತಿಗಳನ್ನು ನೀಡಲಾಗಿಲ್ಲ. ಇತ್ತೀಚಿಗಿನ ವರ್ಷಗಳಲ್ಲಿ ಸ್ಥಳೀಯರಿಗೆ ಕಂಪೆನಿಯಲ್ಲಿ ಉದ್ಯೋಗವಕಾಶ ದೊರೆಯುತ್ತಿಲ್ಲ. ಇದು ನಿರುದ್ಯೋಗದಿಂದ ಕಂಗೆಟ್ಟಿರುವ ಜಿಲ್ಲೆಯ ಯುವಜನರ ಪಾಲಿಗೆ ಆಘಾತಕಾರಿಯಾಗಿದೆ ಎಂಬುದು ಸ್ಥಳೀಯರ ವಾದ.
ಎಮ್ ಆರ್ ಪಿ ಎಲ್ ತಕ್ಷಣವೇ ಈಗಿನ ಪ್ರಕಟನೆಯನ್ನು ಹಿಂಪಡೆದು ಸ್ಥಳೀಯ ಅರ್ಹ ಉದ್ಯೋಗಾಕಾಂಕ್ಷಿಗಳಿಗೆ 80 ಶೇಕಡಾ ಸ್ಥಾನಗಳನ್ನು ಮೀಸಲಿಟ್ಟು ಹೊಸದಾಗಿ ಪ್ರಕಟನೆ ಹೊರಡಿಸಬೇಕು ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಈಗಾಗಲೇ ಮನವಿ ಮಾಡಿದೆ.
ಇದೀಗ ರಂಗ ಪ್ರವೇಶ ಮಾಡಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸ್ಥಳೀಯ ಕನ್ನಡಿಗರಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದೆ. ಎಮ್ ಆರ್ ಪಿ ಎಲ್ ಆಡಳಿತ ನಿರ್ದೇಶಕ ಎಂ. ವೆಂಕಟೇಶ್ ಅವರಿಗೆ ಪತ್ರ ಬರೆದಿರುವ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರು ಕಂಪೆನಿ ಉದ್ಯೋಗ ನೇಮಕಾಗಿ ಹೊರಡಿಸಿರುವ ಪ್ರಕಟಣೆಯನ್ನು ಕೂಡಲೇ ಹಿಂದಕ್ಕೆ ಪಡೆದು ಸ್ಥಳೀಯ ಕನ್ನಡಿಗರಿಗೆ ಆದ್ಯತೆ ನೀಡುವ ತಿದ್ದುಪಡಿ ಆದೇಶ ನೀಡಿ ಪ್ರಾಧಿಕಾರಕ್ಕೆ ಉತ್ತರ ಬರೆಯಬೇಕೆಂದು ಸೂಚಿಸಿದ್ದಾರೆ.
ತ್ರಿಭಾಷಾ ಸೂತ್ರದಡಿ ಎಲ್ಲ ಸಾರ್ವಜನಿಕ ಉದ್ದಿಮೆಗಳು ಸರೋಜಿನಿ ಮಹಿಷಿ ಶಿಫಾರಸು ಆಧಾರದಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡಬೇಕಾಗುತ್ತದೆ. ಭೂಮಿ, ನೀರು, ವಿದ್ಯುತ್ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಪಡೆದುಕೊಂಡು ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕಾಗುತ್ತದೆ ಎಂದು ನಾಗಾಭರಣ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯದ ಪ್ರಾಧಿಕಾರವೊಂದಕ್ಕೆ ಕೇಂದ್ರ ಸರಕಾರದ ಉದ್ದಿಮೆಯೊಂದಕ್ಕೆ ಇಂತಹ ಸೂಚನೆ ನೀಡುವ ಅಧಿಕಾರ ವ್ಯಾಪ್ತಿ ಇದೆಯೇ ಎಂಬ ಚರ್ಚೆಯ ನಡುವೇ ಪ್ರಾಧಿಕಾರದ ಅಧ್ಯಕ್ಷರು ಕನಿಷ್ಟ ಸ್ಥಳೀಯ ಉದ್ಯೋಗಾಕಾಂಕ್ಷಿಗಳ ಪರವಾಗಿ ಧ್ವನಿ ಎತ್ತಿರುವುದಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ಭಾರತೀಯ ಜನತಾ ಪಾರ್ಟಿ ಕೇಂದ್ರ ಮತ್ತು ರಾಜ್ಯಗಳಲ್ಲಿ ಆಡಳಿತರೂಢವಾಗಿದ್ದು, ಸ್ಥಳೀಯ ಸಂಸದರು ಬಿಜೆಪಿ ರಾಜ್ಯ ಅಧ್ಯಕ್ಷರೂ ಆಗಿರುವುದರಿಂದ ಏನಾದರು ಬದಲಾವಣೆ ಆಗಬಹುದು ಎಂಬ ನಿರೀಕ್ಷೆಯಲ್ಲಿ ಕರಾವಳಿಯ ಯುವಕ ಯುವತಿಯರಲ್ಲಿದೆ.
ಮೂರು ದಶಕಗಳ ಹಿಂದೆ ಮಂಗಳೂರು ತೈಲಾಗಾರ (ಎಮ್ ಆರ್ ಪಿ ಎಲ್ ) ಸ್ಥಾಪನೆಯನ್ನು ಪ್ರಕಟಿಸಿದಾಗ ಕರಾವಳಿಯ ಯುವಜನರಿಗೆ ಸಹಸ್ರಾರು ಸಂಖ್ಯೆಯಲ್ಲಿ ತಾಯ್ನೆಲದಲ್ಲೆ ಉದ್ಯೋಗ ಸೃಷ್ಟಿಸುವ, ಆ ಮೂಲಕ ಮುಂಬೈ, ಕೊಲ್ಲಿ ದೇಶಗಳಿಗೆ ವಲಸೆ ತಪ್ಪಿಸುವ ಬಣ್ಣ ಬಣ್ಣದ ಕನಸುಗಳನ್ನು ಜನತೆಯ ಮುಂದಿಡಲಾಗಿತ್ತು. ನಿರುದ್ಯೋಗ ನಿವಾರಣೆ, ಆರ್ಥಿಕ ಅಭಿವೃದ್ದಿಯ ಕನಸನ್ನು ಬಿತ್ತಿ ಜನರನ್ನು ಸುಮ್ಮನಾಗಿಸಿ ಆ ಮೂಲಕ ಅಂದು ಫಲವತ್ತಾದ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಲಾಗಿತ್ತು. ಪರಿಸರ ಮಾಲಿನ್ಯ, ಅಮೂಲ್ಯವಾದ ಭೂಮಿ, ಜಲಮೂಲಗಳ ನಷ್ಟದ ಹೊರತಾಗಿಯೂ ನಿರುದ್ಯೋಗದಿಂದ ಬಳಲುತ್ತಿರುವ ಜಿಲ್ಲೆಯ ಯುವಜನರ ಭವಿಷ್ಯ, ಉದ್ಯೋಗ ಸೃಷ್ಟಿ, ಆರ್ಥಿಕ ಅಭಿವೃದ್ಧಿಯ ದೃಷ್ಟಿಯಲ್ಲಿ ನಿರೀಕ್ಷಿತ ಫಲಿತಾಂಶಗಳೇನು ದೊರೆತಿಲ್ಲ.
ಕಂಪೆನಿಯು ಆರಂಭದಲ್ಲೇ ಮಾತುತಪ್ಪಿತ್ತು. ಭರವಸೆ ನೀಡಿದಂತೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗಗಳು ಸೃಷ್ಟಿಯಾಗಲಿಲ್ಲ, ಹಾಗೆಯೆ ನೇಮಕಾತಿಯಲ್ಲೂ ‘ಸ್ಥಳೀಯರಲ್ಲಿ ಕಂಪೆನಿಗೆ ಬೇಕಾದ ನುರಿತ ಅಭ್ಯರ್ಥಿಗಳಿಲ್ಲ’ ಎಂಬ ನೆಪವನ್ನು ಸೃಷ್ಟಿಸಿ ಬಹುತೇಕ ಹೊರ ರಾಜ್ಯದವರಿಗೆ ಉದ್ಯೋಗಗಳನ್ನು ನೀಡಲಾಯಿತು. ಭೂಮಿ ಕಳೆದು ಕೊಂಡ ಕುಟುಂಬಕ್ಕೆ ಒಂದು ಉದ್ಯೋಗ ಕಡ್ಡಾಯವಾಗಿ ನೀಡಬೇಕು ಎಂಬ ಭೂಸ್ವಾಧೀನ ಕಾಯ್ದೆಯ ನಿಯಮದ ಕಾರಣಕ್ಕೆ ಕೆಲವೇ ಕೆಲವು ಉದ್ಯೋಗಗಳು ಸ್ಥಳೀಯರಿಗೆ ದೊರಕಿದವು. ಕಂಪೆನಿ ನೇಮಕಾತಿಯ ಪ್ರತೀ ಸಂದರ್ಭದಲ್ಲೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನಿರುದ್ಯೋಗಿ ಯುವಜನರನ್ನು ಕಡೆಗಣಿಸುತ್ತಲೇ ಬಂದಿದೆ. ನೇಮಕಾತಿಯ ಕೆಲವು ಸಂದರ್ಭದಲ್ಲಂತೂ ನೂರಕ್ಕೆ ನೂರರಷ್ಟು ಹೊರ ರಾಜ್ಯದವರೇ ಆಯ್ಕೆಯಾಗಿದ್ದಾರೆ.
ಇದು ಅತ್ಯಂತ ಖಂಡನೀಯ. ಕಂಪೆನಿ ಮಾತ್ರವಲ್ಲದೆ, ಭೂಸ್ವಾಧೀನ, ಕಂಪೆನಿ ಸ್ಥಾಪನೆಯ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ರಾಜಕೀಯ ನಾಯಕರುಗಳು ಅಪಾರ ಸಂಖ್ಯೆಯ ಉದ್ಯೋಗ ಸೃಷ್ಟಿ, ನಿರುದ್ಯೋಗ ನಿವಾರಣೆಯ ಸ್ಪಷ್ಟ ಭರವಸೆಗಳನ್ನು ನೀಡಿದ್ದರು. ಆದರೆ ಕಂಪೆನಿ ಸ್ಥಾಪನೆಯ ನಂತರ ಎಲ್ಲರೂ ಭರವಸೆಯನ್ನು ಮರೆತು ಬಿಟ್ಟಿದ್ದಾರೆ. ಬದಲಿಗೆ ಕಂಪೆನಿಯ ಪೆಟ್ರೋಕೆಮಿಕಲ್ ಉತ್ಪಾದನೆಗಳು, ತಪ್ಪಾದ ನಿರ್ವಹಣೆಗಳಿಂದಾಗಿ ಜಿಲ್ಲೆಯಲ್ಲಿ ವ್ಯಾಪಕವಾದ ಪರಿಸರ ಮಾಲಿನ್ಯಗಳು ಉಂಟಾಗಿವೆ, ಸುತ್ತಲ ಗ್ರಾಮದ ಜನತೆ ಹಲವು ರೀತಿಯ ಮಾಲಿನ್ಯ ಸಂಬಂಧಿ ರೋಗಗಳಿಗೆ ಗುರಿಯಾಗಿದ್ದಾರೆ. ನೇತ್ರಾವತಿ ನದಿಯ ನೀರನ್ನು ದೊಡ್ಡ ಪ್ರಮಾಣದಲ್ಲಿ ಕಂಪೆನಿ ಬಳಸುತ್ತಿರುವುದರಿಂದ ಜಿಲ್ಲೆಯ ಜನತೆಗೆ ಕೃಷಿ, ಕುಡಿಯುವ ನೀರಿಗೂ ತಾತ್ವಾರ ಉಂಟಾಗಿದೆ. ಕಂಪೆನಿಯ ಸಂಸ್ಕರಿತ ಮಲಿನ ನೀರನ್ನು ಸಮುದ್ರಕ್ಕೆ ಬಿಡುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಮತ್ಸ್ಯಕ್ಷಾಮವೂ ಎದುರಾಗಿದ್ದು ಮೀನುಗಾರಿಕೆ ಉದ್ಯಮವೂ ಸಮಸ್ಯೆಗೀಡಾಗಿದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಉದ್ಯಮ, ಕೈಗಾರಿಕೆಗಳೆಲ್ಲವೂ ಸ್ಥಳೀಯರಿಗೆ ಕನಿಷ್ಟ 80 ಶೇಕಡಾ ಉದ್ಯೋಗಗಳನ್ನು ಮೀಸಲಿಡುವುದು ಕಡ್ಡಾಯಗೊಳ್ಳಬೇಕು. ಎಮ್ ಆರ್ ಪಿ ಎಲ್ ಮಾತೃ ಸಂಸ್ಥೆಯಾದ ONGCಯ ತ್ರಿಪುರಾ, ಚೆನ್ನೈ, ಮಹಾರಾಷ್ಟ್ರ ಘಟಕಗಳು ನೇಮಕಾತಿ ಪ್ರಕಟನೆಯಲ್ಲಿ ಆಯಾಯ ರಾಜ್ಯಗಳ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶವನ್ನು ಕಡ್ಡಾಯಗೊಳಿಸಿದ್ದಾರೆ. ಆದರೆ ಎಮ್ ಆರ್ ಪಿ ಎಲ್ ಕುಂಟು ನೆಪಗಳನ್ನು ಮುಂದಿಟ್ಟು ಸ್ಥಳೀಯರಿಗೆ ಅವಕಾಶ ನಿರಾಕರಿಸುತ್ತಿದೆ ಎನ್ನುತ್ತಾರೆ ಎಮ್ ಆರ್ ಪಿ ಎಲ್ ವಿರುದ್ಧ ಹೋರಾಟಗಳಲ್ಲಿ ಸಕ್ರಿಯರಾಗಿರುವ ಮುನೀರ್ ಕಾಟಿಪಳ್ಳ.
ರಾಜ್ಯ ಸರಕಾರದ ಒತ್ತಡಕ್ಕೆ ಎಮ್ ಆರ್ ಪಿ ಎಲ್ ಮಣಿಯುತ್ತದೆಯೇ, ಸ್ಥಳೀಯರಿಗೆ ಉದ್ಯೋಗವಕಾಶ ದೊರೆಯುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.