ಅಂದು ಶನಿವಾರ ಸಂಜೆ, ಕಾರವಾರದ ಕಡಲ ಜೀವ ಶಾಸ್ತ್ರ ವಿಜ್ಞಾನದ ವಿದ್ಯಾರ್ಥಿಗಳಾದ ಶುಭಾಂಗಿ, ರೇಣುಕಾ ಮತ್ತು ಶ್ರುತಿಕಾ ವಾಯುವಿಹಾರಕ್ಕಾಗಿ ರವೀಂದ್ರ ಟ್ಯಾಗೋರ್ ಬೀಚ್ಗೆ ಹೋಗಿದ್ದರು. ತಮ್ಮ ಅಭ್ಯಾಸದ ಬಗ್ಗೆ ಹಾಗೂ ಭಾನುವಾರದ ಬಗ್ಗೆ ಮಾತನಾಡುತ್ತ ಕೊಂಚ ಮುಂದೆ ಸಾಗಿದಾಗ ಅವರಿಗೆ ಸಿಕ್ಕಿದ್ದು ಅಪರೂಪದ ಸೂಕ್ಷ್ಮ ಜೀವಿಗಳು. ಅವು ಏನೆಂದು ಮೊದಲು ಇವರಿಗೆ ತಿಳಿಯದೇ, ತಮ್ಮ ಪ್ರಾಧ್ಯಾಪಕರಾದ ಪ್ರೊ. ಶಿವಕುಮಾರ ಹರಗಿ ಅವರಿಗೆ ಫೋನಾಯಿಸಿ ಕರೆದರು. ತಕ್ಷಣ ಬಂದ ಹರಗಿ ಯವರು ಅವುಗಳ ಎಕನೋಡರ್ಮ್ ಪ್ರಭೇದಕ್ಕೆ ಸೇರಿದ ಸ್ಯಾಂಡ್ ಡಾಲರ್ ಎಂದು ತಿಳಿಸಿದರು.
ಇದನ್ನು ಹಾಗೆ ಬಿಡಬಾರದು, ಇಂತಹ ಅಪರೂಪದ ಜೀವಿಗಳ ಬಗ್ಗೆ ಎಲ್ಲರಿಗೂ ತಿಳಿಸಬೇಕೆಂದು ಅವುಗಳ ಫೋಟೊ ಕ್ಲಿಕ್ಕಿಸಿ, ಸೋಮವಾರ ತಮ್ಮ ಕಾಲೇಜಿನ ಹಾಗೂ ಕಾರವಾರದ ಆಸಕ್ತರಿಗೆ ಇವುಗಳ ಬಗ್ಗೆ ತಿಳಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಏನಿವು ಸ್ಯಾಂಡ್ ಡಾಲರ್?
ಇವು ಸಣ್ಣ ಜೀವಿಗಳಾಗಿದ್ದು ಹಳೆಯ ಕಾಳದ 20 ಪೈಸೆಯಂತಿರುತ್ತವೆ. ಈ ಜೀವಿಗಳು ಸಮುದ್ರದಾಳದಲ್ಲಿ ಜೀವಿಸುತ್ತವೆ. ಇವು ಎಕನೋಡರ್ಮ್ ಪ್ರಭೇದಕ್ಕೆ ಸೇರಿದ್ದು, ಸ್ಯಾಂಡ್ ಡಾಲರ್ ಎಂದು ಇವುಗಳನ್ನು ಕಡಲ ವಿಜ್ಞಾನಿಗಳು ಹೆಸರಿಸಿದ್ದಾರೆ. ಇವುಗಳ ಜೀವಿತಾವಧಿ 3 ವರ್ಷಗಳ ಕಾಲ. ಇವುಗಳ ಅಷ್ಟು ಸರಳವಾಗಿ ಕಡಲ ಅಂಚಿಗೆ ಬರುವುದಿಲ್ಲ. ಮೀನುಗಾರರ ಬಲೆಯಲ್ಲಿ ಸಿಕ್ಕು ಬಂದಿರಬಹುದು ಎಂದು ಅಂದಾಜಿಸಲಾಗಿದೆ. ಇವೆಲ್ಲ ಮೃತಪಟ್ಟಿವೆ. ಈ ರೀತಿಯ ಜೀವಿಗಳನ್ನು ಭಾರತದ ಪಶ್ಚಿಮ ಕರಾವಳಿಯಲ್ಲಿ ಅಧಿಕ ಪ್ರಮಾಣದಲ್ಲಿ ಕಾಣಸಿಗುತ್ತವೆ. ಈ ಸೂಕ್ಷ್ಮ ಜೀವಿಗಳು ಸಣ್ಣ ಸಣ್ಣ ಮೀನುಗಳು ಹಾಗೂ ಪಾಚಿಯನ್ನು ತಿಂದು ಬದುಕುತ್ತವೆ.
ಇದರ ವಾಸ ಸಮುದ್ರದಾಳದ ಮರಳುಗಳು. ಇವುಗಳ ಮೇಲ್ಮೈ ಸ್ಪಲ್ಪ ಗಟ್ಟಿಯಾಗಿದ್ದು ದೇಹದ ರಕ್ಷಣೆಗಾಗಿ ಸುತ್ತಲೂ ಚಿಕ್ಕ ಮುಳ್ಳುಗಳಿರುತ್ತವೆ. ಮರಳಿನ ಬಣ್ಣವನ್ನೇ ಇವುಗಳು ಹೊಂದಿರುವುದರಿಂದ ಸುಲಭವಾಗಿ ಗುರುತಿಸುವುದು ಕಷ್ಟ. ಎಲ್ಲಾ ಮೀನುಗಳು ಮತ್ತು ದೊಡ್ಡ ಜಾತಿಯ ಸಮುದ್ರ ಏಡಿಗಳು ಇವುಗಳನ್ನು ಭೇಟೆಯಾಡಿ ತಿನ್ನುತ್ತವೆ. ಸ್ಯಾಂಡ್ ಡಾಲರ್ ಗಳಿಗೆ ಲಾರ್ವ್, ಸೆಟ್ಟೆ ಮೀನುನ ಸಣ್ಣ ಮರಿಗಳು, ಆಲ್ಗೆ ಮುಂತಾದವೇ ಇವುಗಳ ಆಹಾರವಾಗಿದೆ.
ಪ್ರೊ. ಶಿವಕುಮಾರ ಹರಗಿ ಅವರ ಪ್ರಕಾರ, “ಈ ಜೀವಿಗಳು ಜಗತ್ತಿನಾದ್ಯಂತ ಕಡಲಾಳಗಳಲ್ಲಿ ಕಂಡು ಬರುತ್ತವೆ. ಇವು ತೀರಗಳಲ್ಲಿ ಕಂಡು ಬರುವುದು ತೀರಾ ವಿರಳ. ಈ ಜೀವಿಗಳು 15 ಮಿ ಮಿ ನಿಂದ 40 ಮಿ ಮಿ ಉದ್ದವಿರುತ್ತವೆ. ನಮ್ಮ ವಿದ್ಯಾರ್ಥಿಗಳು ಇವುಗಳ ಬಗ್ಗೆ ತಿಳಿಸಿದಾಗ ಅದೇನಿರಬಹುದೆಂದು ಕುತೂಹಲದಿಂದ ಹೋದೆ. ಇವುಗಳು ಸತ್ತಿದ್ದು ನೋಡಿ ಬೇಸರವೆನಿಸಿತು”.
ಜಯಪ್ರಕಾಶ ಬಳಗಾನೂರ, ಉತ್ತರ ಕರ್ನಾಟಕದ ವನ್ಯ ಜೀವಿ ಪ್ರೇಮಿ ಹೇಳಿದ್ದು ಹೀಗೆ, “ಮೊದಲೆಂದೂ ಕಾಣದ ಇಂತಹ ಜೀವಿಗಳು ಈಗ ಸಮುದ್ರ ತಟದಲ್ಲಿ ಬಂದು ಸಾಯುತ್ತಿವೆ ಅಥವಾ ಸತ್ತಿರುವ ಜೀವಿಗಳು ಕಾಣಸಿಗುತ್ತಿವೆ. ಮಾನವ ಸಮುದ್ರದೊಳಗೆ ಹೋಗಿ ಅಲ್ಲಿಯ ಜೀವ ವೈವಿಧ್ಯಕ್ಕೂ ಹಾನಿ ಮಾಡುತ್ತಿರುವುದು ವಿಷಾದದ ಸಂಗತಿ. ಯಾವುದಕ್ಕಾದರೂ ಮಿತಿ ಇರಬೇಕು. ಇವು ಹೇಗೆ ಬಂದವು, ಇವುಗಳ ಸಾವಿಗೆ ಕಾರಣ ಏನು ಇದರ ಬಗ್ಗೆ ಸಂಶೋಧನೆ ಮಾಡಿ ಇಂತಹ ಅಪರೂಪದ ಪ್ರಭೇದಗಳನ್ನು ಕಾಪಾಡುವ ಕರ್ತವ್ಯ ನಮ್ಮದಲ್ಲವೇ!”
ಶಿವಕುಮಾರ ಹರಗಿ ಅವರು ಇದರ ಬಗ್ಗೆ ಸವಿಸ್ತಾರವಾಗಿ ಹೀಗೆ ವಿವರಿಸಿದರು, “ಇವುಗಳ ಅಪ್ಪಿ ತಪ್ಪಿ ಮೀನುಗಾರರ ಬಲೆಗೆ ಬಿದ್ದಿರಬಹುದೆಂಬುದು ನಮ್ಮ ಶಂಕೆ. ಇಂತಹ ಜೀವಿಗಳ ಬಗ್ಗೆ ಹೆಚ್ಚು ಅಭ್ಯಸಿಸಿ ಎಲ್ಲರಿಗೂ ಇವುಗಳ ಸಂರಕ್ಷಣೆ ಬಗ್ಗೆ ತಿಳಿಹೇಳಲಾಗುವುದು. ಇಂತಹ ಜೀವಿಗಳು ಹೆಚ್ಚಾಗಿ ಸ್ಪೇನ್ ಹಾಗೂ ಜಪಾನ್ ನಂತಹ ಶೀತ ಪ್ರದೇಶದ ಕಡಲಗಳಲ್ಲಿ ಕಂಡುಬರುವವು. ಹಿಂದೂ ಮಹಾಸಾಗರದಲ್ಲೂ ಇಂತಹ ಜೀವಿಗಳನ್ನು ಕಾಣಬಹುದು. ಈ ಜಗತ್ತಿನಲ್ಲಿ ಸ್ಯಾಂಡ್ ಡಾಲರ್ ನಂತಹ ಒಟ್ಟು 600 ಪ್ರಭೇದಗಳು ಕಾಣಸಿಗುತ್ತವೆ”.
ಕಾರವಾರದ ವಿದ್ಯಾರ್ಥಿಗಳು ಹೇಳುವ ಪ್ರಕಾರ, “ಈ ರೀತಿಯ ಜೀವಿಗಳು 2006 ರಲ್ಲಿ ಮಂಗಳೂರು ಮತ್ತು ಭಟ್ಕಳ ತೀರ ಪ್ರದೇಶದಲ್ಲಿ ಕಾಣಿಸಿಕೋಂಡಿದ್ದವು. ನಮ್ಮ ಕಾರವಾರ ನಗರದ ಕಡಲ ತೀರದ ಮರಳಿನಲ್ಲಿ ಹತ್ತಾರು ಸಂಖ್ಯೆಯಲ್ಲಿ ಈ ಅಪರೂಪದ ಫಿಶ್ ಕಂಡುಬಂದಿದೆ. ನಕ್ಷತ್ರದ ಮೀನಿನ ಪ್ರಬೇಧಕ್ಕೆ ಸೇರಿದ ಇವುಗಳಿಗೆ ವೈಜ್ಞಾನಿಕವಾಗಿ ಕ್ಲಾಯಪೇಸ್ಟರ್ ರಾರಿಸ್ಪಯನಸ್ ಎಂದು ಕರೆಯಲಾಗುತ್ತದೆ. ಆಭರಣದಲ್ಲಿ ಅಳವಡಿಸುವ ಡಾಲರ್ ಮಾದರಿಯಲ್ಲಿಯೇ ಇವುಗಳ ದೇಹ ರಚನೆಯಿದೆ. ಈ ಬಾರಿ ಸಿಕ್ಕ ಜೀವಿಗಳು ಅಪರೂಪ ಎಂದೇ ಹೇಳಬಹುದು”.