ದೇಶಾದ್ಯಂತ ಈಗ ಈರುಳ್ಳಿಯದ್ದೇ ದೊಡ್ಡ ಚರ್ಚಿತ ವಿಚಾರವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈರುಳ್ಳಿ ದುಬಾರಿಯಾಗಿರುವುದು ಇದೇ ಮೊದಲು. ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಈರುಳ್ಳಿ ಬೆಲೆ 200 ರೂಪಾಯಿಯ ಗಡಿ ತಲುಪಿ ಗ್ರಾಹಕನಿಗೆ ಕಣ್ಣೀರು ತರಿಸುತ್ತಿದೆ.
ಈರುಳ್ಳಿಗೆ ಇಷ್ಟೊಂದು ದುಬಾರಿಯ ಬೆಲೆ ಬರಲು ಕಾರಣವೇನು? ಇದನ್ನು ತಡೆಗಟ್ಟುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿರುವುದೆಲ್ಲಿ? ಈ ಬೆಲೆ ಹೆಚ್ಚಳದ ಲಾಭ ನಿಜವಾಗಿಯೂ ಈರುಳ್ಳಿ ಬೆಳೆದ ರೈತನಿಗೆ ತಲುಪುತ್ತಿದೆಯೇ? ಹೀಗೆ ಹತ್ತು ಹಲವಾರು ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟರೆ ಕೇಂದ್ರ ಸರ್ಕಾರದ ವೈಫಲ್ಯ ಎದ್ದು ಕಾಣುತ್ತದೆ.
ನಮ್ಮ ದೇಶದಲ್ಲಿ ಈರುಳ್ಳಿ ಬೆಳೆಯ ಕತೆ ಹೇಗಿದೆಯೆಂದರೆ ಈರುಳ್ಳಿ ಸಾಕಷ್ಟಿದ್ದರೂ ಅದನ್ನು ದಾಸ್ತಾನಿಡಲು ಸೂಕ್ತವಾದ ವ್ಯವಸ್ಥೆಯೇ ಇಲ್ಲದಂತಿರುವುದು ಮತ್ತು ಅದನ್ನು ವಿತರಣೆ ಮಾಡುವ ವ್ಯವಸ್ಥೆ ಇಲ್ಲದಿರುವುದು ವಿಪರ್ಯಾಸದ ಸಂಗತಿ. ಈರುಳ್ಳಿಯನ್ನು ಸಾಕಷ್ಟು ದಿನಗಳವರೆಗೆ ದಾಸ್ತಾನಿಡಬಹುದಾಗಿದೆ. ಆದರೆ, ಸೂಕ್ತವಾದ ದಾಸ್ತಾನು ಮೂಲಸೌಕರ್ಯವೇ ಇಲ್ಲ. ಈ ವಿಚಾರದಲ್ಲಿ ಬೆಕ್ಕಿನ ಕುತ್ತಿಗೆಗೆ ಗಂಟೆ ಕಟ್ಟುವವರು ಯಾರು ಎಂಬ ಸ್ಥಿತಿ ಇದೆ.
ದೇಶದಲ್ಲಿ ಹೆಚ್ಚು ಈರುಳ್ಳಿ ಬೆಳೆಯುವ ಮಹಾರಾಷ್ಟ್ರ, ಕರ್ನಾಟಕ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಈ ಬಾರಿ ಭಾರೀ ಮಳೆ ಬಂದ ಪರಿಣಾಮ ಬೆಳೆದು ನಿಂತಿದ್ದ ಈರುಳ್ಳಿ ನೀರು ಪಾಲಾಗಿದೆ. ಮತ್ತೊಂದು ವಿಚಿತ್ರದ ಸಂಗತಿಯೆಂದರೆ ಸರ್ಕಾರದ ಸಂಸ್ಥೆಯಾದ ನಾಫೆಡ್ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಟನ್ ನಷ್ಟು ಈರುಳ್ಳಿಯೂ ಸಹ ಮಳೆಯ ಹೊಡೆತಕ್ಕೆ ಸಿಲುಕಿ ಕೊಳೆತು ಹೋಗಿದೆ. ಇದು ಸರ್ಕಾರದ ಕಾರ್ಯಕ್ಷಮತೆಗೆ ಕನ್ನಡಿಯಂತಿದೆ ಮತ್ತು ಭವಿಷ್ಯದಲ್ಲಿ ಈರುಳ್ಳಿಯನ್ನು ಜತನವಾಗಿ ಕಾಪಿಟ್ಟುಕೊಳ್ಳಬೇಕೆಂಬ ಪಾಠವನ್ನು ಹೇಳಿಕೊಟ್ಟಿದೆ.
ದೇಶಾದ್ಯಂತ ಇಂದಿನ ಮಾರುಕಟ್ಟೆ ಪರಿಸ್ಥಿತಿ ಹೇಗಿದೆಯೆಂದರೆ ಅರೆಬರೆ ಕೊಳೆದ ಈರುಳ್ಳಿಯನ್ನೇ ತರಲಾಗುತ್ತಿದೆ. ಇದಕ್ಕೇ ದುಬಾರಿ ಬೆಲೆಯಾಗುವಂತೆ ದಲ್ಲಾಳಿಗಳು ನೋಡಿಕೊಳ್ಳುತ್ತಿದ್ದಾರೆ. ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂತಹ ಈರುಳ್ಳಿ ಬೆಲೆಯೇ ಪ್ರತಿ ಕ್ವಿಂಟಾಲ್ ಗೆ 10 ಸಾವಿರ ರೂಪಾಯಿವರೆಗೆ ಇದೆ. ಇನ್ನು ಸ್ವಲ್ಪ ಒಣಗಿದ ಮತ್ತು ದೊಡ್ಡದಾಗಿರುವ ಈರುಳ್ಳಿ ಬೆಲೆ ಸಗಟಿನಲ್ಲಿ ಪ್ರತಿ ಕ್ವಿಂಟಾಲ್ ಗೆ 15,000 ದಿಂದ 17,000 ರೂಪಾಯಿ ಇದೆ. ಆದರೆ, ಈ ಬೆಲೆ ನಿಜಕ್ಕೂ ಈರುಳ್ಳಿ ಬೆಳೆದ ರೈತನಿಗೆ ಸಿಗುತ್ತಿದೆಯೇ ಎಂದು ನೋಡಿದರೆ ಇಲ್ಲ ಎಂಬ ಉತ್ತರ ಸಿದ್ಧವಾಗಿರುತ್ತದೆ. ಏಕೆಂದರೆ, ರೈತರಿಗೆ ಸಿಗುತ್ತಿರುವ ಪ್ರತಿ ಕ್ವಿಂಟಾಲ್ ಗೆ ಕೇವಲ 5 ರಿಂದ 8 ಸಾವಿರ ರೂಪಾಯಿ. ಉಳಿದ ಹಣ ದಲ್ಲಾಳಿಗಳ ಕಿಸೆ ಸೇರುತ್ತಿದೆ.

ಪರಿಸ್ಥಿತಿಯ ಲಾಭ ಪಡೆದುಕೊಳ್ಳುತ್ತಿರುವ ಇಂತಹ ದಲ್ಲಾಳಿಗಳನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರವಾಗಲೀ ಅಥವಾ ರಾಜ್ಯ ಸರ್ಕಾರವಾಗಲೀ ತಲೆ ಕೆಡಿಸಿಕೊಂಡಂತಿಲ್ಲ. ಇದರ ಪರಿಣಾಮ ಒಂದು ಕಡೆ ರೈತ ದಲ್ಲಾಳಿಗಳಿಂದ ಶೋಷಣೆಗೆ ಒಳಗಾಗುತ್ತಿದ್ದರೆ, ಮತ್ತೊಂದೆಡೆ ಈರುಳ್ಳಿ ಬಳಸುವ ಗ್ರಾಹಕ ಬೆಲೆ ಏರಿಕೆ ಹೊಡೆತಕ್ಕೆ ನಲುಗುವಂತಾಗಿದೆ.
ಕೇಂದ್ರ ಸರ್ಕಾರದ ಕೃಷಿ ಇಲಾಖೆಯ ಅಂದಾಜಿನ ಪ್ರಕಾರ ಈ ವರ್ಷ 23.26 ದಶಲಕ್ಷ ಟನ್ ನಷ್ಟು ಈರುಳ್ಳಿ ಉತ್ಪಾದನೆಯಾಗುವ ಸಾಧ್ಯತೆ ಇತ್ತು. ಇದರಲ್ಲಿ ಶೇ.65 ರಷ್ಟನ್ನು ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ ಗ್ರಾಹಕ ಬಳಕೆಗೆಂದು ದಾಸ್ತಾನಿಡಲು ನಿರ್ಧರಿಸಲಾಗಿತ್ತು. ಆದರೆ, ಈ ಬಾರಿ ಅಕಾಲಿಕವಾಗಿ ಸುರಿದ ಭಾರೀ ಮಳೆಯಿಂದಾಗಿ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಬೆಳೆದು ನಿಂತಿದ್ದ ಈರುಳ್ಳಿ ಹಾನಿಗೊಳಗಾಯಿತು. ಇಷ್ಟೇ ಅಲ್ಲ, ವ್ಯಾಪಾರಿಗಳು ಮತ್ತು ರೈತರು ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಟನ್ ನಷ್ಟು ಈರುಳ್ಳಿಯೂ ನಾಶವಾಯಿತು.
ದೇಶದ ಒಟ್ಟಾರೆ ಈರುಳ್ಳಿ ಉತ್ಪಾದನೆಯನ್ನು ಗಮನಿಸಿದರೆ 2012-13 ರಲ್ಲಿ 16.81 ದಶಲಕ್ಷ ಟನ್ ನಷ್ಟು ಇದ್ದ ಉತ್ಪಾದನೆ 2018-19 ರಲ್ಲಿ 23.48 ದಶಲಕ್ಷ ಟನ್ ಗೆ ಹೆಚ್ಚಳವಾಯಿತು. ಉತ್ಪಾದನೆ ಹೆಚ್ಚಾದಂತೆ ಬೆಲೆ ಇಳಿಕೆಯಾಗಿ ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೇ ತೀವ್ರ ನಷ್ಟವನ್ನು ಅನುಭವಿಸಬೇಕಾಯಿತು.
ಈ ವರ್ಷದ ಮಾರ್ಚ್-ಏಪ್ರಿಲ್ ಸಂದರ್ಭದಲ್ಲಿ ಈರುಳ್ಳಿ ಹಾಳಾಗುತ್ತದೆ ಅಥವಾ ನಷ್ಟವಾಗುತ್ತದೆ ಎಂದು ಯಾರೂ ಅಂದಾಜಿಸಿರಲಿಲ್ಲ. ಏಕೆಂದರೆ, ಬೆಳೆ ಉತ್ತಮವಾಗಿತ್ತು ಮತ್ತು ಅಸ್ವಾಭಾವಿಕವಾದ ರೀತಿಯಲ್ಲಿ ಬೆಲೆ ಹೆಚ್ಚಳವಾಗುತ್ತದೆ ಎಂಬ ನಿರೀಕ್ಷೆ ಯಾರಿಗೂ ಇರಲಿಲ್ಲ. ಆಗ ಸರ್ಕಾರ ಬೆಲೆ ಸ್ಥಿರೀಕರಣಕ್ಕೆ ಪ್ರತಿವರ್ಷದಂತೆ ಕೇವಲ 57,372 ಟನ್ ನಷ್ಟು ಈರುಳ್ಳಿಯನ್ನು ಖರೀದಿಸಿತು. ಸಾಮಾನ್ಯವಾಗಿ ಇಷ್ಟು ಈರುಳ್ಳಿಯನ್ನು ದಾಸ್ತಾನಿಟ್ಟುಕೊಂಡು ಮಾರುಕಟ್ಟೆಗೆ ಬಿಡುಗಡೆ ಮಾಡಿದರೆ ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳವರೆಗೆ ಬೆಲೆ ಸ್ಥಿರವಾಗಿರುತ್ತದೆ. ದುರಾದೃಷ್ಠವಶಾತ್, ಈ ವರ್ಷ ಬಿದ್ದ ಭಾರೀ ಮಳೆಯಿಂದಾಗಿ ಸರ್ಕಾರ ಸಂಗ್ರಹಿಸಿಟ್ಟಿದ್ದು ಸೇರಿದಂತೆ ರೈತರು, ವ್ಯಾಪಾರಿಗಳೂ ಸಂಗ್ರಹಿಸಿಟ್ಟಿದ್ದ ಈರುಳ್ಳಿ ಹಾನಿಗೊಳಗಾಯಿತು. ಸರ್ಕಾರದ ಸಂಸ್ಥೆಯಾದ ನಾಫೆಡ್ ಸಂಗ್ರಹಿಸಿಟ್ಟಿದ್ದ ಈರುಳ್ಳಿ ಪೈಕಿ 30,672 ಟನ್ ವ್ಯರ್ಥವಾಯಿತು. ಇದಕ್ಕೆ ಪ್ರಮುಖ ಕಾರಣ ಸಮರ್ಪಕವಾದ ದಾಸ್ತಾನು ವ್ಯವಸ್ಥೆ ಇಲ್ಲದಿರುವುದು.

ಒಂದು ಅಂದಾಜಿನ ಪ್ರಕಾರ ದೇಶದಲ್ಲಿ ಒಂದು ತಿಂಗಳಿಗೆ ಕನಿಷ್ಠ 15-16 ಲಕ್ಷ ಟನ್ ನಷ್ಟು ಈರುಳ್ಳಿಯ ಅಗತ್ಯವಿದೆ. ಆದರೆ, ಬಫರ್ ಸ್ಟಾಕ್ ಎಂದು ಮಾಡಿಕೊಳ್ಳುವ 10 ಲಕ್ಷ ಟನ್ ಈರುಳ್ಳಿ ಈ ಅಗತ್ಯವನ್ನು ಪೂರೈಸಲಾಗುವುದಿಲ್ಲ. ನಮ್ಮ ದೇಶದಲ್ಲಿ ಪ್ರಸ್ತುತ ಈರುಳ್ಳಿಯನ್ನು ಹೆಚ್ಚಾಗಿ ದಾಸ್ತಾನಿಟ್ಟುಕೊಳ್ಳುವಂತಹ ಮೂಲಸೌಕರ್ಯವೇ ಇಲ್ಲದಂತಾಗಿದೆ. ಅದಲ್ಲದೇ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಈರುಳ್ಳಿಯನ್ನು ಸಾರ್ವಜನಿಕರಿಗೆ ತಲುಪಿಸುವ ವ್ಯವಸ್ಥೆಯೂ ಇಲ್ಲ. ಹಾಗೊಂದು ವೇಳೆ ಪಿಡಿಎಸ್ ಮೂಲಕ ವಿತರಣೆಯನ್ನು ಆರಂಭ ಮಾಡಿದರೆ ಅದನ್ನು ಮಧ್ಯದಲ್ಲಿ ಸ್ಥಗಿತಗೊಳಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ, ಪಿಡಿಎಸ್ ನಲ್ಲಿ ಇದು ನಿರಂತರವಾಗಿ ಸಾಗಬೇಕು. ಆದರೆ, ಈ ದುಸ್ಸಾಹಸಕ್ಕೆ ಸರ್ಕಾರ ಕೈಹಾಕುವುದಿಲ್ಲ. ಇನ್ನುಳಿದಂತೆ ದೆಹಲಿಯಲ್ಲಿರುವಂತೆ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಸಹಕಾರಿ ಸ್ವಾಮ್ಯದ ಹಾಲು ವಿತರಣಾ ಸಂಸ್ಥೆಗಳಿವೆ. ಅವುಗಳ ಮೂಲಕವೂ ಇಂತಹ ಪರಿಸ್ಥಿತಿಯಲ್ಲಿ ಈರುಳ್ಳಿಯನ್ನು ವಿತರಣೆ ಮಾಡುವ ಬಗ್ಗೆ ಆಲೋಚನೆ ಮಾಡಬಹುದು. ಆದರೆ, ಈ ಗೊಡವೆಯೇ ನಮಗೆ ಬೇಡ ಎಂಬಂತೆ ಸರ್ಕಾರಗಳು ವರ್ತಿಸುತ್ತಿವೆ.
ಈ ಎಲ್ಲಾ ಸಮಸ್ಯೆಗಳು ಮತ್ತು ಬೆಲೆ ಏರಿಕೆಯಿಂದ ಸಾಮಾನ್ಯ ಗ್ರಾಹಕರನ್ನು ಪಾರು ಮಾಡಬೇಕಾದರೆ ಸರ್ಕಾರ ಜರೂರಾಗಿ ಆಧುನಿಕ ದಾಸ್ತಾನು ಮೂಲಸೌಕರ್ಯಗಳನ್ನು ಒದಗಿಸಬೇಕಾಗಿದೆ.
ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಗ್ಗೆ ಸಂಶೋಧನೆಗಳನ್ನು ನಡೆಸುವ 25 ಕ್ಕೂ ಹೆಚ್ಚು ಕೇಂದ್ರಗಳಿವೆ. ಆದರೆ, ಇವುಗಳಾವುವೂ ಈರುಳ್ಳಿಯನ್ನು ದಾಸ್ತಾನು ಮಾಡುವಂತಹ ಯಾವುದೇ ವೈಜ್ಞಾನಿಕ ವ್ಯವಸ್ಥೆಗಳನ್ನು ಆವಿಷ್ಕರಿಸಲು ಸಾಧ್ಯವಾಗಿಲ್ಲದಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಆಧಾರ: ದಿ ವೈರ್