ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಭಾನುವಾರ ರಾತ್ರಿ ಎಬಿವಿಪಿ ಸಂಘಟನೆ ಮುಖಂಡರು ವಿದ್ಯಾರ್ಥಿಗಳ ಮೇಲೆ ನಡೆಸಿದ ಹಲ್ಲೆ ಕುರಿತು ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಕುರಿತಾಗಿ ಬೆಂಗಳೂರಿನಲ್ಲಿ ಸೋಮವಾರ ಹಲ್ಲೆ ನಡೆಸಿದವರ ವಿರುದ್ಧ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಎನ್ ಎಸ್ ಯು ಐ ಸಂಘಟನೆಯ 300 ಹೆಚ್ಚು ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. “ ಆರ್‌ಎಸ್‌ಎಸ್‌ನಿಂದ ತರಬೇತಿ ಪಡೆದ ಎಬಿವಿಪಿ ಗೂಂಡಾಗಳು ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ, ಈ ರೀತಿಯಲ್ಲಿ ಹಲ್ಲೆ ಮಾಡಲು ಮುಂದಾದರೆ, ನೀವು ಮಾಡಿದ ರೀತಿಯಲ್ಲೇ, ನಿಮ್ಮ ಕಚೇರಿಗಳಿಗೆ ಬಂದು ನಾವು ಪ್ರತಿಭಟನೆ ಮಾಡಿ ನಿಮಗೆ ಪಾಠ ಕಲಿಸುತ್ತೇವೆ” ಎಂದು ಎನ್ಎಸ್‌ಯುಐ ಅಧ್ಯಕ್ಷ ಮಂಜುನಾಥ್ ಎಚ್ ಎಸ್ ತೀವ್ರವಾಗಿ ಖಂಡಿಸಿದ್ದಾರೆ.
ಎಬಿವಿಪಿ ಮುಖಂಡರು ಕಬ್ಬಿಣದ ಸಲಾಕೆ ಹಿಡಿದುಕೊಂಡು, ವಿದ್ಯಾರ್ಥಿ ವೇಷಗಳನ್ನು ಧರಿಸಿ, ಯೂನಿವರ್ಸಿಟಿಯಲ್ಲಿ ನುಗ್ಗಿ ಹಲ್ಲೆ ಮಾಡಿದರೂ ಪೋಲಿಸರು ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಳ್ಳದ ಕಾರಣ, ದೆಹಲಿ ಪೋಲಿಸರ ಮೇಲೆ ವಿದ್ಯಾರ್ಥಿಗಳು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಜೆಎನ್‌ಯು ಹಾಸ್ಟೆಲ್ ನಲ್ಲಿ ತಂಗಿದ್ದ ವಿದ್ಯಾರ್ಥಿಗಳನ್ನು ಎಳೆದಾಡಿ ಹಲ್ಲೆ ಮಾಡಿರುವುದು ನೋಡಿದರೆ, ಕಾನೂನು ಸುವ್ಯವಸ್ಥೆ ಎತ್ತ ಸಾಗುತ್ತಿದೆ ಎಂದು ಎಲ್ಲರೂ ಯೋಚಿಸಬೇಕಾಗಿದೆ.
ಪ್ರತಿಭಟನೆಯಲ್ಲಿ ಕೈ ಜೋಡಿಸಿದ ತಾಜ್ ಎಂಬ ವಿದ್ಯಾರ್ಥಿನಿ “ನಮ್ಮ ದೇಶವು ಜಗತ್ತಿನಲ್ಲಿ ಉತ್ತಮ ಹೆಸರು ಪಡೆಯಬೇಕೆಂದು ವಿದ್ಯಾರ್ಥಿಗಳು ಸಾಕಷ್ಟು ಶ್ರಮವಹಿಸಿ ಶಿಕ್ಷಣ ಪಡೆಯುತ್ತಿದ್ದಾರೆ, ಬೇರೆ ಬೇರೆ ರಾಜ್ಯಗಳಿಂದ ಬಂದು ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆಸಿದ ಹಲ್ಲೆಯನ್ನು ನೋಡುತ್ತಿದ್ದರೆ, ನಮಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಮೋದಿ ಮತ್ತು ಅಮಿತ್ ಶಾ ಅವರೇ ದಯವಿಟ್ಟು ಸಾರ್ವಜನಿಕರ ಮಧ್ಯೆ ಬಂದು ನಿಂತು ಮಾತನಾಡಿ, ನಮ್ಮ ಪೋಷಕರು ನಮ್ಮನ್ನು ಕಾಲೇಜಿಗೆ ಕಳಿಹಿಸುವುದಕ್ಕೂ ಹೆದರುತ್ತಿದ್ದಾರೆ. ದಯವಿಟ್ಟು ಕಾನೂನು ಸುವ್ಯವಸ್ಥೆ ಕಾಪಾಡಿ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಿ” ಎಂದು ಮನವಿ ಮಾಡಿದರು.
ಜೆಎನ್‌ಯು ಹಲ್ಲೆಯನ್ನು ಖಂಡಿಸಿ ಬೆಂಗಳೂರಿನ ಟೌನ್ ಹಾಲ್ ಬಳಿ ಎಐಡಿಎಸ್‌ಒ ಹಾಗೂ ಎಸ್‌ಎಫ್‌ಐ ಸಂಘಟನೆಯಿಂದ ಪ್ರತಿಭಟನೆ ಜರುಗಿತು. ʼಇಂತಹ ಹಲ್ಲೆ ನಡೆಸುವವರು ಎಂದಿಗೂ ಹಗಲಿನಲ್ಲಿ ಬಂದು ನಿಲ್ಲುವುದಿಲ್ಲ. ಹೇಡಿಗಳಂತೆ ರಾತ್ರಿಯ ವೇಳೆಯಲ್ಲೇ ಬಂದು ನೀಚ ಕೆಲಸವನ್ನು ಎಸಗುತ್ತಾರೆ ಏಕೆ?” ಎಂಬುದು ಪ್ರತಿಭಟನಕಾರರೊಬ್ಬರ ಪ್ರಶ್ನೆಯಾಗಿತ್ತು.
ಕಾಲೇಜಿನ ಶುಲ್ಕ ಕಡಿಮೆ ಮಾಡಿ ಎಂದು ಪ್ರತಿಭನಟನೆ ಮಾಡಿದ್ದೇ ಸರ್ಕಾರಕ್ಕೆ ಸಮಸ್ಯೆ ಉಂಟಾಯಿತೇ? ಜೆಎನ್‌ಯು ಎಂದರೇ ಆಡಳಿತ ಸರ್ಕಾರಕ್ಕೆ ಏಕೆ ಭಯ? ಪ್ರಶ್ನೆ ಮಾಡುವವರು ಕಂಡರೆ ಇವರಿಗೆ ಭಯ, ವಿಚಾರವೆಂದರೆ ಹೆದರುತ್ತಾರೆ. ಹೀಗಾಗಿ ಭಯವನ್ನು ಅಡಗಿಸುವುದಕ್ಕೆ ಈ ರೀತಿಯ ತಂತ್ರವನ್ನು ಉಪಯೋಗಿಸುತ್ತಿದ್ದಾರೆ. ಏಕೆಂದರೆ ಜೆಎನ್‌ಯುನಲ್ಲಿ ಎಂದೆದಿಗೂ ಹೋರಾಟ ಮಾಡುವವರು ಇದ್ದೇ ಇರುತ್ತಾರೆ ಎಂಬುದು ಮೋದಿ ಮತ್ತ ಅಮಿತ್ ಶಾ ತಿಳಿದಿದೆ ಎಂದು.
“ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ದೇಶಾದ್ಯಂತ ಹೋರಾಟ ನಡೆಯುತ್ತಿದೆ. ಈ ವಿಷಯವನ್ನು ಮರೆಮಾಚುವುದಕ್ಕೆ ಇಂತಹ ಕೃತ್ಯವನ್ನು ಮಾಡುತ್ತಿದ್ದಾರೆ. ಜನರು ಬೀದಿ ಬೀದಿಗೆ ಬಂದು ಪ್ರತಿಭಟನೆ ಮಾಡುತ್ತಿದ್ದಾರೆ ನಮಗೆ ಎನ್‌ಆರ್‌ಸಿ ಬೇಡ ಎಂದು. ಸರ್ಕಾರ ಇಂತಹ ವಿವಾದಿತ ವಿಷಯವನ್ನು ಮರೆಮಾಚುವುದಕ್ಕೆ ಎಷ್ಟೇ ಪ್ರಯತ್ನಿಸಿದರೂ, ಜನರಿಗೆ ತಿಳಿಯುತ್ತಿದೆ. ಯಾರು ಸರ್ಕಾರವನ್ನು ಹಾಗೂ ಸರ್ಕಾರದ ನೀತಿಗಳನ್ನು ಪ್ರಶ್ನೆ ಮಾಡುತ್ತಿದ್ದಾರೆ ಅವರ ಮೇಲೆ ಹಲ್ಲೆ ನಡೆಯುತ್ತಿದೆ. ಸರ್ಕಾರ ತಿಳಿದುಕೊಳ್ಳಬೇಕಾಗಿರುವುದು ಏನೆಂದರೆ ವ್ಯಕ್ತಿಗಳನ್ನು ನಾಶ ಮಾಡಬಹುದು ಆದರೆ ವಿಚಾರಗಳನ್ನು ನಾಶ ಮಾಡುವುದಕ್ಕೆ ಸಾಧ್ಯವಿಲ್ಲ” ಎಂದು ಅಭಯ ಎಂಬ ವಿದ್ಯಾರ್ಥಿನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಕಾರ್ಯವೈಖರಿಯನ್ನು ಗಮನಿಸುತ್ತಿದ್ದರೆ, ಮುಂದಿನ ದಿನಗಳಲ್ಲಿ ನಾಗರಿಕ ದಂಗೆ ಏಳುವುದಕ್ಕೆ ಎಲ್ಲಾ ರೀತಿಯ ಅವಕಾಶಗಳನ್ನು ಇವರು ಮಾಡಿಕೊಡುತ್ತಿದ್ದಾರೆ. ಯಾವುದೇ ಸರ್ಕಾರವಾಗಲಿ ನ್ಯಾಯಕ್ಕೆ, ಜನಹಿತಕ್ಕೆ ಬದ್ಧವಾಗಿ ಇರಬೇಕಾಗಿರುವ ಸರ್ಕಾರ ಸಮಾಜ ಘಾತುಕ ಶಕ್ತಿಗಳನ್ನು ಪೋಷಿಸುತ್ತಿದೆ. ಸಮಾಜದಲ್ಲಿ ಭಿನ್ನ ವಿಚಾರಗಳನ್ನು ಒಪ್ಪಿಕೊಳ್ಳುವಂತಹ ವಾತವರಣ ಸೃಷ್ಟಿಯಾಗಬೇಕು. ಇತ್ತೀಚಿನ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ ಜಾಗತಿಕ ಮಟ್ಟದಲ್ಲಿ ನಮ್ಮ ದೇಶವನ್ನು ಕ್ಷುಲ್ಲಕವಾಗಿ ಕಾಣುವಂತಹ ವ್ಯವಸ್ಥೆಯನ್ನು ಸರ್ಕಾರ ಸೃಷ್ಟಿಮಾಡುತ್ತಿದೆ.